NES ಬಡಾವಣೆ ಉದ್ಯಾನವನ ಅಭಿವೃದ್ಧಿಗೆ 25 ಲಕ್ಷ ₹- ಸೂಡಾ ಅಧ್ಯಕ್ಷ ಹೆಚ್.ಎಸ್.ಸುಂದರೇಶ್ ಸೂಡಾದಿಂದ ಉದ್ಯಾನವನ ಅಭಿವೃದ್ದಿ ಕಾಮಗಾರಿಗಳಿಗೆ ಗುದ್ದಲಿಪೂಜೆ ಮನೆ ಸುತ್ತಮುತ್ತ ಗಿಡಗಳನ್ನು ಬೆಳೆಸಿ-ಉದ್ಯಾನವನ ಸಂರಕ್ಷಿಸಿ : ಎಸ್ ಎನ್ ಚನ್ನಬಸಪ್ಪ
NES ಬಡಾವಣೆ ಉದ್ಯಾನವನ ಅಭಿವೃದ್ಧಿಗೆ 25 ಲಕ್ಷ ₹- ಸೂಡಾ ಅಧ್ಯಕ್ಷ ಹೆಚ್.ಎಸ್.ಸುಂದರೇಶ್
ಸೂಡಾದಿಂದ ಉದ್ಯಾನವನ ಅಭಿವೃದ್ದಿ ಕಾಮಗಾರಿಗಳಿಗೆ ಗುದ್ದಲಿಪೂಜೆ
ಮನೆ ಸುತ್ತಮುತ್ತ ಗಿಡಗಳನ್ನು ಬೆಳೆಸಿ-ಉದ್ಯಾನವನ ಸಂರಕ್ಷಿಸಿ : ಎಸ್ ಎನ್ ಚನ್ನಬಸಪ್ಪ
ಶಿವಮೊಗ್ಗ
ನಿವಾಸಿಗಳು ತಮ್ಮ ಮನೆ ಸುತ್ತಮುತ್ತ ಉತ್ತಮ ಗಿಡಗಳನ್ನು ಹಾಕಿ ಬೆಳೆಸಬೇಕು. ಹಾಗೂ ಬಡಾವಣೆಗಳಲ್ಲಿ ನಿರ್ಮಿಸಿರುವ ಉದ್ಯಾನವನಗಳನ್ನು ಸಂರಕ್ಷಿಸಿಕೊAಡು ಹೋಗಬೇಕು ಎಂದು ಶಾಸಕರಾದ ಎಸ್ ಎನ್ ಚನ್ನಬಸಪ್ಪ ತಿಳಿಸಿದರು.
ಗುರುವಾರ ಕುವೆಂಪುನಗರದ ಎನ್‌ಇಎಸ್ ಬಡಾವಣೆಯ ಉದ್ಯಾನವನ ಅಭಿವೃದ್ದಿ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿ ಅವರು ಮಾತನಾಡಿದರು.
ಎನ್‌ಇಎಸ್ ಬಡಾವಣೆಯ ಉದ್ಯಾನವನಕ್ಕೆ ಯಾವೆಲ್ಲ ರೀತಿಯ ಗಿಡ-ಮರಗಳನ್ನು ಹಾಕಬೇಕು, ಎಲ್ಲಿ ಜಿಮ್ ಅಳವಡಿಸಬೇಕು, ಮಕ್ಕಳ ಆಟಿಕೆಗಳ ಅಳವಡಿಕೆ ಹೀಗೆ ಉದ್ಯಾನವನದ ಕುರಿತು ಸಮರ್ಪಕವಾದ ಯೋಜನೆ ತಯಾರಿಸಿ, ವ್ಯವಸ್ಥಿತವಾಗಿ ಉದ್ಯಾನವನ ನಿರ್ಮಿಸಿಕೊಳ್ಳಬೇಕೆಂದು ಕಿವಿಮಾತು ಹೇಳಿದ ಅವರು, ಉದ್ಯಾನವನಗಳನ್ನು ಉಳಿಸಿಕೊಂಡು ಹೋಗುವಲ್ಲಿ ನಿವಾಸಿಗಳ ಸಹಕಾರ ಅತ್ಯಗತ್ಯವಾಗಿದೆ. ಎಲ್ಲ ನಿವಾಸಿಗಳು ಗಿಡ ಮರಗಳನ್ನು ನೆಡಬೇಕು ಹಾಗೂ ಉದ್ಯಾನವನದ ಸದುಪಯೋಗ ಪಡೆಯಬೇಕೆಂದು ತಿಳಿಸಿದರು.
ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಾದ ಹೆಚ್ ಎಸ್ ಸುಂದರೇಶ್ ಮಾತನಾಡಿ, ನಗರವನ್ನು ಹಸಿರೀಕರಣ ಮಾಡಲು ಸೂಡಾ ವತಿಯಿಂದ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. 05 ಕೆರೆಗಳನ್ನು ಅಭಿವೃದ್ದಿ ಪಡಿಸಲು ಸಹ ಶೀಘ್ರದಲ್ಲೇ ಟೆಂಡರ್ ಕರೆಯಲಾಗುವುದು. ಪ್ರಸ್ತುತ ಕುವೆಂಪು ನಗರದ ಹತ್ತಿರದ ಎನ್‌ಇಎಸ್ ಬಡಾವಣೆಯಲ್ಲಿ ಉದ್ಯಾನವನ ಅಭಿವೃದ್ದಿ ಕಾಮಗಾರಿಯನ್ನು ರೂ.25 ಲಕ್ಷ ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗುತ್ತಿದೆ. ಫೆನ್ಸಿಂಗ್, ಹೊರಾಂಗಣ ವ್ಯಾಮಾಯ ಸಾಮಗ್ರಿ, ಪಾಥ್‌ವೇ ನಿರ್ಮಾಣ, ಕಲ್ಲಿನ ಬೆಂಚುಗಳನ್ನು ಅಳವಡಿಸಲಾಗುವುದು. ಉತ್ತಮ ಮರಗಳಾಗುವಂತಹ ಗಿಡಗಳನ್ನು ನೆಡಲಾಗುವುದು ಎಂದ ಅವರು ಬಡಾವಣೆಗಳಲ್ಲಿನ ಎಲ್ಲ ನಿವಾಸಿಗಳು ತಮ್ಮ ಮನೆ ಮುಂದೆ ಗಿಡಗಳನ್ನು ಹಾಕಿ ಬೆಳೆಸಬೇಕು ಎಂದರು.
ಹಾಗೆಯೇ ಕೃಷಿನಗರದ ಡಾರ‍್ಸ್ ಕಾಲೋನಿಯಲ್ಲಿರುವ ಉದ್ಯಾನವನ ಅಭಿವೃದ್ದಿ ಕಾಮಗಾರಿಯನ್ನು ರೂ.20 ಲಕ್ಷ ಹಾಗೂ ಬಸವನಗುಡಿ 100 ಅಡಿ ರಸ್ತೆಯಲ್ಲಿರುವ ರೋಟರಿ ರಕ್ತನಿಧಿ ಹತ್ತಿರದ ಉದ್ಯಾನವನ ಅಭಿವೃದ್ದಿ ಕಾಮಗಾರಿಯನ್ನು ಅಂದಾಜು ಮೊತ್ತ ರೂ.20 ಲಕ್ಷದಲ್ಲಿ ಕೈಗೊಳ್ಳಲಾಗುವುದು ಎಂದು ತಿಳಿಸಿದ ಅವರು ಸಂಪರ್ಕ ರಸ್ತೆ ಸೇರಿದಂತೆ ಬಡಾವಣೆಗಳಲ್ಲಿನ ಸಮಸ್ಯೆಗಳ ಕುರಿತು ಪ್ರಾಧಿಕಾರದ ಗಮನಕ್ಕೆ ತಂದಲ್ಲಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಪಾಲಿಕೆ ಮಾಜಿ ಸದಸ್ಯರಾದ ಧೀರರಾಜ್ ಹೊನ್ನವಿಲೆ ಮಾತನಾಡಿ, ಎನ್‌ಇಎಎಸ್ ಬಡಾವಣೆಯ ಭಾಗದಲ್ಲಿ ರೆವೆನ್ಯು ನಿವೇಶನಗಳು ಮಧ್ಯೆ ಮಧ್ಯೆ ಇದ್ದು ಇದರಿಂದ ಮುಖ್ಯ ರಸ್ತೆಗೆ ಸಂಪರ್ಕ ರಸ್ತೆ ಸಾಧ್ಯವಾಗುತ್ತಿಲ್ಲ. ಕನ್ವರ್ಷನ್‌ಗೆ ಬಂದ ವೇಳೆ ಸಂಪರ್ಕ ರಸ್ತೆಗೆ ಅನುವು ಮಾಡಿಕೊಡಬೇಕು. ಹಾಗೂ ಈ ಭಾಗದಲ್ಲಿರುವ 6 ಕೆರಗಳನ್ನು ಅಭಿವೃದ್ದಿಪಡಿಸಿಕೊಡಬೇಕೆಂದು ಮನವಿ ಮಾಡಿದರು.
ಎನ್‌ಇಎಸ್ ಬಡಾವಣೆ ನಿವಾಸಿಗಳ ಸಂಘದ ಅಧ್ಯಕ್ಷರಾದ ಪ್ರಸನ್ನ ಮಾತನಾಡಿ, ಬಡಾವಣೆ ಅಭಿವೃದ್ದಿ ಹೊಂದುತ್ತಿದೆ. ಆದರೆ ಇಲ್ಲಿ ಸಂಪರ್ಕ ರಸ್ತೆಗೆ ಸ್ವಲ್ಪ ತೊಂದರೆ ಇದ್ದು, ಸಂಪರ್ಕ ರಸ್ತೆ ನಿರ್ಮಿಸಿಕೊಡಬೇಕು ಹಾಗೂ ಸಿಟಿ ಬಸ್ ವ್ಯವಸ್ಥೆ ಮಾಡಿಕೊಡಬೇಕೆಂದು ಕೋರಿದರು.
ಕಾರ್ಯಕ್ರಮದಲ್ಲಿ ಪಾಲಿಕೆ ಮಾಜಿ ಸದಸ್ಯರಾದ ಜ್ಞಾನೇಶ್ವರ್, ಮಾಜಿ ಸೂಡಾ ಅಧ್ಯಕ್ಷ ನಾಗರಾಜ್, ಸೂಡಾ ಆಯುಕ್ತರಾದ ವಿಶ್ವನಾಥ ಮುದಜ್ಜಿ, ಸೂಡಾ ಅಭಿಯಂತರರಾದ ಬಸವರಾಜಪ್ಪ, ಗಂಗಾಧರ ಸ್ವಾಮಿ, ಅಧಿಕಾರಿಗಳು, ನಿವಾಸಿಗಳು ಪಾಲ್ಗೊಂಡಿದ್ದರು.