ಶೋಭಾ ಮಳವಳ್ಳಿ ಟಿಪ್ಪಣಿ; ಶನಿ ಮಹಾತ್ಮ ಮತ್ತು WAIT FOR ಸಾಡೇಸಾತ್!
ಶೋಭಾ ಮಳವಳ್ಳಿ ಟಿಪ್ಪಣಿ;
ಶನಿ ಮಹಾತ್ಮ ಮತ್ತು WAIT FOR ಸಾಡೇಸಾತ್!
ನಾವೆಲ್ಲ ಶನಿ ಮಹಾತ್ಮೆ ಕಥೆ ಕೇಳುತ್ತಾ ಬೆಳೆದವರು. ಶನಿ ಯಾರು, ಅವನ ಶಕ್ತಿ ಏನು ? ನಳಮಹಾರಾಜನ ಕಿರೀಟ ಕಳಚಿ ಅಡುಗೆ ಮನೆಗೆ ಅಟ್ಟಿದ, ಸತ್ಯವಂತ ಮಹಾರಾಜ ಹರಿಶ್ಚಂದ್ರನನ್ನು ಸ್ಮಶಾನ ಕಾಯುವಂತೆ ಮಾಡಿದ. ಶನಿ ಕಥೆ ಕೇಳಿ ಕಣ್ಣೀರು ಹಾಕಿದವರು, ಗಾಬರಿ ಬಿದ್ದವರು.
ನಮ್ಮನ್ನೂ ಹೀಗೆಯೇ ಕಾಡಿಬಿಟ್ಟಾನು ಎಂದು ಹೆದರಿದವರು ಯಾರಿಲ್ಲ ?
ಈಗಲೂ ಬಹುತೇಕರು ವರ್ಷಕ್ಕೊಮ್ಮೆಯಾದರೂ ಶನಿ ಮಹಾತ್ಮೆ ಕಥೆ ಓದಿಸುತ್ತಾರೆ. ಹಾಗೇ ಕಥೆ ಕೇಳುತ್ತಾ ಶನಿಯ ಧರ್ಮ ಕರ್ಮ, ಶಿಕ್ಷೆಗೆ ಭಯಭೀತರಾಗುತ್ತಾರೆ. ಪ್ರತಿ ಶನಿವಾರ ಎಳ್ಳೆಣ್ಣೆ ದೀಪ ಹಚ್ಚಿ, ನಮ್ಮನ್ನು ಕಾಡಬೇಡಪ್ಪ ಎಂದು ಬೇಡುತ್ತಾರೆ. ಗ್ರಹಗಳಲ್ಲೇ ಅತ್ಯಂತ ಪ್ರಭಾವ ಶಾಲಿಯೂ, ನಿಧಾನಗತಿಯ, ಸತತ ಏಳೂವರೆ ವರ್ಷ ಬೆಂಬಿಡದೇ ಕಾಡುವ ಶನೈಶ್ಚರನು ಇಂದಿನಿಂದ ಮೀನ ರಾಶಿ ಪ್ರವೇಶಿಸುತ್ತಿದ್ದಾರೆ.
ಪ್ರತಿಯೊಬ್ಬರ ಜೀವನದಲ್ಲಿ ಶನಿ 30 ವರ್ಷಕ್ಕೊಮ್ಮೆ ಪ್ರವೇಶಿಸುತ್ತಾನೆ. ಮನುಷ್ಯ ಸರಾಸರಿ 90 ವರ್ಷ ಬದುಕಿದರೆ, ಮೂರು ಬಾರಿ ಸಾಡೇಸಾತ್ ಪ್ರಭಾವ ಅನುಭವಿಸುತ್ತಾರೆ.
ಅಲ್ಪಸ್ವಲ್ಪ ಜ್ಯೋತಿಷ ಗೊತ್ತಿದ್ದವರಿಗೆ, ಶನಿ ಪ್ರಭಾವ ಗೊತ್ತೇ ಇದೆ. ಮಕರಕ್ಕೆ ಸಾಡೇಸಾತ್ ಮುಗಿದರೆ, ಕುಂಭಕ್ಕೆ ಕೊನೆಯ ಭಾಗ. ಈಗ ಮೀನಕ್ಕೆ ಪ್ರವೇಶ, ಮೇಷಕ್ಕೆ ಕಾಟ ಶುರು.
ಸಾಡೇಸಾತ್ ಅಂದ್ರೆ ಬರೀ ಶನಿ ಕಾಟ ಅಷೇ ಅಲ್ಲ. ನಮ್ಮನ್ನು ಹಲವು ಅಗ್ನಿಪರೀಕ್ಷೆಗಳಿಗೆ ಒಡ್ಡುತ್ತಾನೆ, ಜೀವನ ಪಾಠ ಕಲಿಸುತ್ತಾನೆ. ಕರ್ಮಫಲ ಉಣ್ಣುವಂತೆ ಮಾಡುತ್ತಾನೆ.
ನಮ್ಮವರು ಯಾರು, ನಮ್ಮಕಷ್ಟಕ್ಕೆ ಮಿಡಿಯುವವರು ಯಾರು?
ಸಮಯಸಾಧಕರು, ಸ್ವಾರ್ಥಿಗಳು, ಸ್ನೇಹಿತ, ಬಂಧುಗಳ ಮುಖವಾಡ ಕಳಚಿಬಿಡುತ್ತಾನೆ. ಸಂಬಂಧಗಳ ನಿಜ ಬಣ್ಣ ಬಯಲು ಮಾಡುತ್ತಾನೆ. ನಂಬಿಕಸ್ಥರು ಯಾರೆಂಬುದರ ಅರಿವು ಮೂಡಿಸುತ್ತಾನೆ.
ಇಷ್ಟು ಮಾತ್ರವಲ್ಲ, ನಿಮ್ಮ ಜಾತಕದಲ್ಲಿ ಶನಿ ಗಟ್ಟಿ ಇದ್ದನೋ ಬಚಾವ್, ಇಲ್ಲದಿದ್ರೆ ಕಷ್ಟಗಳ ಸರಮಾಲೆ, ಮೈತುಂಬಾ ಕಾಯಿಲೆ, ಜೇಬುಖಾಲಿ, ಸಾಲದ ಹೊರೆ, ಆಸ್ಪತ್ರೆ ವಾಸ, ಮೂಳೆ ಮುರಿತ, ಆಪರೇಷನ್ , ಕೆಲಸದಲ್ಲಿ ಕಿರಿಕಿರಿ, ನೀವು ಯಾರಿಗಾಗಿ ದುಡಿದಿರೋ ಅವರೇ ನಿಮ್ಮನ್ನು ಮೂಲೆಗುಂಪು ಮಾಡುತ್ತಾರೆ, ಪ್ರಮೋಷನ್ ಇಲ್ಲ, ಸಂಬಳ ಹೆಚ್ಚಲ್ಲ, ಊರೂರು ಅಲೆದಾಟ, ಕೋರ್ಟ್ ಮೆಟ್ಟಿಲೇರಿಸುತ್ತಾನೆ, ಅವಮಾನ, ನಿಂದನೆ, ಸಂಕಟಕ್ಕೆ ತಳ್ಳಿಬಿಡುತ್ತಾನೆ..
ಒಂದು ಕಷ್ಟ ಕಳೆಯಿತ್ತಪ್ಪಾ ಅನ್ನುವಷ್ಟರಲ್ಲಿ ಹೊಸತೊಂದು ಸಮಸ್ಯೆ ಧುತ್ತನೆ ತಂದು ನಿಲ್ಲಿಸುತ್ತಾನೆ. ಮನಸ್ಸು ಅಲ್ಲೋಲ ಕಲ್ಲೋಲ, ಕಲ್ಲವಿಲ್ಲಗೊಳಿಸಿ, ತಲೆಚಿಟ್ಟು ಹಿಡಿಸುತ್ತಾನೆ.
ಅಷ್ಟಕ್ಕೂ, ಶನಿ ಇಷ್ಟೆಲ್ಲ ಕಾಟ ಕೊಡುತ್ತಲೇ ನಿಮ್ಮನ್ನು ಮಾನಸಿಕವಾಗಿ ಗಟ್ಟಿ ಮಾಡುತ್ತಾನೆ. ಕಷ್ಟ ಎದುರಿಸುವ ಮನೋಬಲ ಕೊಡುತ್ತಾನೆ. ಯಾರನ್ನು ದೂರ ಇಡಬೇಕು, ಯಾರನ್ನು ಹತ್ತಿರ ಸೇರಿಸಿಕೊಳ್ಳಬೇಕೆಂಬ ಸ್ಪಷ್ಟತೆ ಕೊಡುತ್ತಾನೆ.
ಹೊಸ ಸ್ನೇಹಿತರು, ಬಂಧುಗಳ ಮೂಲಕ ನಿಮ್ಮನ್ನು ಹೊಸ ಬಾಂಧವ್ಯಕ್ಕೆ ತಳ್ಳುತ್ತಾನೆ.
ಶನಿಯಿಂದ ಪಾಠ ಕಲಿತವರು, ಬದುಕಿನಲ್ಲಿ ತಾಳ್ಮೆ, ಸಹನೆ , ಎಚ್ಚರಿಕೆ ಹೆಜ್ಜೆ ಇಡುವುದ ಕಲಿಯುತ್ತಾರೆ.
ಅದೇ ಶನಿಯ ಏಳರಾಟ, ಸಾಡೇಸಾತ್.
ಅಷ್ಟೇ ಅಲ್ಲ, ಬರುವಾಗ ಸುಖ ಕೊಟ್ಟರೆ, ಹೋಗುವಾಗ ಕಷ್ಟವನ್ನೂ, ಸಾಡೇಸಾತ್ ಆರಂಭದಲ್ಲಿ ಕಷ್ಟಪಟ್ಟವರಿಗೆ, ಕೊನೆ ಹಂತದಲ್ಲಿ ಸುಖ, ಸ್ಥಾನ ಮಾನ ಕೊಟ್ಟು ಹೋಗುತ್ತಾನೆ ಶನಿ.
“ಹೆಂಗ್ ಮೆರೆಯುತ್ತಿದ್ದ, ಈಗ ನೋಡಿ ಹೇಗಾಗಿದೆ ಸ್ಥಿತಿ” ಎಂದು ಒಳಗೊಳಗೆ ನಕ್ಕವರಿಗೆ, ಅಣಕಿಸಿದವರಿಗೂ ಇಂದಿನಿಂದ ಕಾದೈತೆ ಶನಿಹಬ್ಬ.
ಜ್ಯೋತಿಷ ಸುಳ್ಳು, ಅಂಬಾನಿಗೆ, ಅದಾನಿಗೆ ಶನಿ ಕಾಡಲ್ವಾ? ಅವರೆಲ್ಲ ಸುಖವಾಗಿಲ್ವಾ ಅಂತೆಲ್ಲ ಇಲ್ಲದ ಲಾಜಿಕ್ ಮಾತಾಡೋರಿಗೆ ಶನಿ ಹೆಗಲೇರಿದ ಮೇಲೆ ಗೊತ್ತಾಗೋದು.
Wait for ಸಾಡೇಸಾತ್..
#ಶೋಭಾಮಳವಳ್ಳಿ