ಈದ್ಗಾ ಮೈದಾನ ಪಾಲಿಕೆ ಆಸ್ತಿ ತರಾತುರಿಯಲ್ಲಿ ಖಾತೆ ಮಾಡಲಾಗಿದೆ ಏಪ್ರಿಲ್ 8 ರೊಳಗೆ ಬ್ಯಾರಿಕೇಡ್ ತೆಗೆಯದಿದ್ದರೆ ಏ.9 ರಿಂದ ಬಿಜೆಪಿ ಹೋರಾಟ ಸುದ್ದಿಗೋಷ್ಠಿಯಲ್ಲಿ ಶಾಸಕ ಚನ್ನಿ…
ಈದ್ಗಾ ಮೈದಾನ ಪಾಲಿಕೆ ಆಸ್ತಿ
ತರಾತುರಿಯಲ್ಲಿ ಖಾತೆ ಮಾಡಲಾಗಿದೆ
ಏಪ್ರಿಲ್ 8 ರೊಳಗೆ ಬ್ಯಾರಿಕೇಡ್ ತೆಗೆಯದಿದ್ದರೆ ಏ.9 ರಿಂದ ಬಿಜೆಪಿ ಹೋರಾಟ
ಸುದ್ದಿಗೋಷ್ಠಿಯಲ್ಲಿ ಶಾಸಕ ಚನ್ನಿ…
ಶಿವಮೊಗ್ಗ: ನಗರ ಮಧ್ಯದಲ್ಲಿರುವ ಆಟದ ಮೈದಾನವನ್ನು ಅದು ವಕ್ಫ್ ಆಸ್ತಿ ಎಂದು ಹೇಳಿ ಲಪಟಾಯಿಸುವ ಹುನ್ನಾರ ನಡೆಯುತ್ತಿದ್ದು, ಕೆಲವು ದುಷ್ಟ ಮುಸ್ಲಿಂರು ಲ್ಯಾಂಡ್ ಮಾಫಿಯಾ ಮೂಲಕ ಭೂ ಕಬಳಿಕೆ ಹುನ್ನಾರ ನಡೆಸುತ್ತಿದ್ದಾರೆ ಎಂದು ಶಾಸಕ ಎಸ್.ಎನ್.ಚನ್ನಬಸಪ್ಪ ಹೇಳಿದ್ದಾರೆ.
ಜಿಲ್ಲಾ ಬಿಜೆಪಿ ಕಛೇರಿಯಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ವಕ್ಫ್ ಸಮಿತಿಯ ಹೆಸರಿನಲ್ಲಿ ನಗರದ ಸಾರ್ವಜನಿಕ, ರೈತರ, ಪಾಲಿಕೆಯ ಹಾಗೂ ಹಿಂದೂ ದೇವಾಲಯಗಳ ಆಸ್ತಿಯನ್ನು ಕಬಳಿಸುವ ಹುನ್ನಾರ ಮಾಡುತ್ತಿದ್ದು, ಇದರ ಹಿಂದೆ ಮುಸ್ಲಿಂ ಲ್ಯಾಂಡ್ ಮಾಫಿಯಾ ಕೆಲಸ ಮಾಡುತ್ತಿದೆ. ಇದಕ್ಕೆ ತಾಜಾ ಉದಾಹರಣೆ ಡಿಸಿ ಕಚೇರಿ ಮುಂಭಾಗದ ತೆರೆದ ಮೈದಾನ ಮತ್ತು ಪಾರ್ಕ್ ಜಾಗವನ್ನು ನಮ್ಮದು ಎಂದು ಸುಳ್ಳು ದಾಖಲೆ ಸೃಷ್ಟಿಸಿ ಇದೇ ಸತ್ಯ ಎಂದು ನಂಬಿಸುವ ಪ್ರಯತ್ನ ನಡೆಯುತ್ತಿದೆ ಎಂದರು.
ಹಿರಿಯರು ಹಿಂದೆ ವರ್ಷಕ್ಕೆ ಎರಡು ಬಾರಿ ನಮಾಜ್‌ಗೆ ಅವಕಾಶ ಕೊಟ್ಟಿದ್ದರು. ಅಂದಿನ ಜಿಲ್ಲಾಧಿಕಾರಿ ದಯಾನಂದ್ ಅವರು ಕೆಲವೊಂದು ಶರತ್ ವಿಧಿಸಿ ನಗರದ ೩-೪ ಕಡೆ ಅವರಿಗೆ ಪ್ರಾರ್ಥನೆಗೆ ಅವಕಾಶ ಮಾಡಿಕೊಟ್ಟಿದ್ದರು. ಆ ಮಾತ್ರಕ್ಕೆ ಅದು ಅವರದ್ದಾಗುವುದಿಲ್ಲ. ನಮ್ಮ ಸ್ವತ್ತು ಎಂದು ಏಕಾಏಕಿ ಬೇಲಿ ಹಾಕುವ ಮನಸ್ಥಿತಿ ಯಾಕೆ ಬಂತು ಗೊತ್ತಿಲ್ಲ? ಕೇಂದ್ರದಲ್ಲಿ ವಕ್ಫ್ ಕಾಯ್ದೆ ತಿದ್ದುಪಡಿ ಸಂದರ್ಭದಲ್ಲೇ ಈ ಹುನ್ನಾರ ನಡೆದಿದೆ. ಪಾಲಿಕೆಯಲ್ಲಿ ೨೦೧೮ರಲ್ಲಿ ಅಕ್ರಮ ಖಾತೆಆಗಿದೆ. ೧೯೪೪-೪೫ರಿಂದ ಕೂಡ ಇದಕ್ಕೆ ಸಂಬಂಧಪಟ್ಟ ಸಂಪೂರ್ಣ ದಾಖಲೆಗಳು ನಮ್ಮ ಬಳಿಇದ್ದು, ಇದು ೧೦೦ಕ್ಕೆ ೧೦೦ ಪಾಲಿಕೆ ಆಸ್ತಿ ಎಂದು ಗೊತ್ತಾಗುತ್ತದೆ. ವಕ್ಫ್ ಸಮಿತಿಯವರು ಜಿಲ್ಲಾಧಿಕಾರಿಗಳಿಗೆ ಈ ಜಾಗ ನಮಗೆ ನೀಡಬೇಕು ಎಂದು ಮನವಿ ನೀಡಿದಾಗಲೂ ಮತ್ತು ಗಜೆಟ್ ನೋಟೀಫೀಕೇಷನ್‌ನಲ್ಲಿ ಇದು ನಮೂದಾಗಿದೆ ಎಂದು ಹೇಳಿ ಸುಳ್ಳು ದಾಖಲೆ ನೀಡಿದಾಗಲೂ ಅಂದಿನ ಜಿಲ್ಲಾಧಿಕಾರಿಗಳು ಪಾಲಿಕೆ ಆಯುಕ್ತರಿಗೆ ಈ ಬಗ್ಗೆ ಪತ್ರ ಬರೆದಾಗ ಅಂದಿನ ಆಯುಕ್ತರು ಪರಿಶೀಲನೆ ನಡೆಸಿ ರಾಜ್ಯ ಪತ್ರದಲ್ಲಿ ಸೂಚಿಸಿ ಜಾಗ ಇದಲ್ಲ. ತಿಲಕ್ ನಗರದ ಈ ಮೈದಾನಕ್ಕೂ ರಾಜ್ಯ ಪತ್ರದಲ್ಲಿ ಸೂಚಿಸಿದ ಜಾಗಕ್ಕೂ ಸಂಬಂಧವೇ ಇಲ್ಲ. ಸರ್ವೆ ನಂ., ವಿಳಾಸ ಹಾಗೂ ಅಳತೆ ವ್ಯತ್ಯಾಸವಿದ್ದು, ಯಾವುದೇ ಕಾರಣಕ್ಕೂ ಇದು ವಕ್ಫ್ ಆಸ್ತಿ ಎಂದು ನಮೂದಿಸಲು ಬರುವುದಿಲ್ಲ ಎಂದು ಜಿಲ್ಲಾಧಿಕಾರಿಗಳಿಗೆ ಪತ್ರದ ಮುಖೇನ ತಿಳಿಸಿದ್ದಾರೆ.
ಪಾಲಿಕೆಯ ಲೀಗಲ್ ಅಡ್ವೈಸರ್ ಸರಿಯಾಗಿ ನೋಡದೇ ಸಿಡಿಪಿ ಪ್ಲ್ಯಾನ್‌ನಲ್ಲಿ ಆ ಜಾಗ ಆಟದ ಮೈದಾನ ಮತ್ತು ಖಾಲಿ ಜಾಗ ಎಂದು ನಮೂದಾಗಿದ್ದರೂ ಯಾಕೆ ಖಾತೆ ಮಾಡಲು ಸಲಹೆ ನೀಡಿದರು ಎಂಬುವುದು ಗೊತ್ತಿಲ್ಲ. ಈ ಅಕ್ರಮ ಖಾತೆ ಮಾಡಿದ ಎಲ್ಲಾ ಅಧಿಕಾರಿಗಳು ಮತ್ತು ಒತ್ತಡದ ಮೇರೆಗೆ ತುರ್ತಾಗಿ ಇದನ್ನು ವಕ್ಫ್ ಆಸ್ತಿಯೆಂದು ಖಾತೆ ಮಾಡುವಂತೆ ಸೂಚನೆ ನೀಡಿದ ಜಿಲ್ಲಾಧಿಕಾರಿಗಳು ಸೇರಿದಂತೆ ಎಲ್ಲರ ಮೇಲೂ ಕಾನೂನು ಕ್ರಮವಾಗಬೇಕು. ಈ ರೀತಿ ಅನೇಕ ಪಾಲಿಕೆ ಆಸ್ತಿಗಳನ್ನು ಕಬಳಿಸುವ ಹುನ್ನಾರ ನಡೆದಾಗ ನಾವು ಅದನ್ನು ತಡೆದಿದ್ದೇವೆ. ವಿನೋಬನಗರದಲ್ಲಿ ಸುಮಾರು ೪೭ ಪಾಲಿಕೆ ಆಸ್ತಿಗಳನ್ನು ಗುರುತಿಸಿ ಬೇಲಿ ಹಾಕಿದ್ದೇವೆ. ವಿನಾಯಕ ಚಿತ್ರಮಂದಿರ ಪಕ್ಕದ ಆಸ್ತಿಯನ್ನು ಕೂಡ ಪಾಲಿಕೆ ಆಸ್ತಿಯನ್ನಾಗಿ ಉಳಿಸಿಕೊಂಡಿದ್ದೇವೆ. ಈ ರೀತಿಯ ಸುಮಾರು ೯ ಆಸ್ತಿಗಳನ್ನು ನಕಲಿ ದಾಖಲೆ ನೀಡಿ ವಶಪಡಿಸಿಕೊಳ್ಳುವ ಹುನ್ನಾರಕ್ಕೆ ಬ್ರೇಕ್ ಹಾಕಿದ್ದೇವೆ. ಜಿಲ್ಲಾಧಿಕಾರಿಗಳು ಇದನ್ನೆಲ್ಲಾ ಗಮನಿಸಿ ನಮ್ಮಲ್ಲಿರುವ ಎಲ್ಲಾ ದಾಖಲೆಗಳನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಬೇಕು. ೮ನೇ ತಾರೀಖಿನವರೆಗೆ ಜಿಲ್ಲಾಡಳಿತಕ್ಕೆ ಬ್ಯಾರಿಕೇಡ್ ತೆರವುಗೊಳಿಸಿ ಹಿಂದಿನಂತೆ ವಾಹನ ನಿಲುಗಡೆಗೆ ಅವಕಾಶ ಕಲ್ಪಿಸಲು ಗಡುವು ನೀಡಿದ್ದೇವೆ. ಅಷ್ಟರೋಳಗೆ ಅವರು ಸೂಕ್ತವಾಗಿ ಸ್ಪಂಧಿಸದಿದ್ದರೆ ಮುಂದಿನ ಯಾವುದೇ ಅನಾಹುತಗಳಿಗೆ ಅವರೇ ಹೊಣೆಯಾಗುತ್ತಾರೆ ಎಂದರು.
ಪೊಲೀಸರಿಗೆ ಬೇಕಾದ ವ್ಯಕ್ತಿಗಳಿಗೆ ರಕ್ಷಣೆ ಕೊಡುವ ಸ್ಥಿತಿಯಲ್ಲಿ ಆಡಳಿತವಿದೆ. ಮೈದಾನದಲ್ಲಿ ಅನೈತಿಕ ಚಟುವಟಿಕೆ ನಡೆಯುತ್ತಿರುವುದಾದರೆ ಸಿಸಿ ಕ್ಯಾಮರಾ ಅಳವಡಿಸಿ ಸೂಕ್ತ ಕ್ರಮ ಕೈಗೊಳ್ಳಿ. ಇದು ನಾಗರೀಕರ ಆಸ್ತಿ ಉಳಿಸಿಕೊಳ್ಳಬೇಕು ಎಂಬುವುದು ನಮ್ಮ ಆಗ್ರಹವಾಗಿದೆ. ಏ.೯ರಿಂದ ಈ ಬಗ್ಗೆ ಬಿಜೆಪಿ ಹೋರಾಟ ಆರಂಭಿಸಲಿದೆ ಎಂದರು.
ಈಜಾಗದ ಅಕ್ರಮ ಖಾತೆಯ ವಿಚಾರ ನಾನು ಪಾಲಿಕೆ ಸದಸ್ಯನಾಗಿದ್ದಾಗ ನನ್ನ ಗಮನಕ್ಕೆ ಬಂದ ಕೂಡಲೇ ನಾನು ಜಿಲ್ಲಾಧಿಕಾರಿಗಳಿಗೆ ಮತ್ತು ಪಾಲಿಕೆಯ ಆಯುಕ್ತರಿಗೆ ಪತ್ರ ಬರೆದು ಖಂಡನೇ ವ್ಯಕ್ತಪಡಿಸಿ ದಾಖಲೆ ಕೂಡ ನೀಡಿದ್ದೇ. ಈ ಬಗ್ಗೆ ಆಯುಕ್ತರಾದ ಚಿದಾನಂದ ವಟಾರೆ ಒಂದೇ ಒಂದು ಬಾರಿ ನನ್ನನ್ನು ಸಂಪರ್ಕಿಸಿ ಮಾತನಾಡಿದ್ದರು. ಬಳಿಕ ಅದು ಸದ್ದಿಲ್ಲದೆ ಒತ್ತಡಕ್ಕೆ ಮಣಿದು ಅಕ್ರಮ ಖಾತೆ ೨೦೧೮ರಲ್ಲಿ ಆಗಿದ್ದು ಕಂಡುಬರುತ್ತಿದ್ದು, ಜನಪ್ರತಿನಿಧಿಗಳು ಇಲ್ಲದ ಸಮಯದಲ್ಲಿ ಇದು ನಡೆದಿದೆ. ಈ ಬಗ್ಗೆ ನಾವು ಹೈಕೋರ್ಟ್‌ನಲ್ಲೂ ಪ್ರರ್ಶ್ನಿಸುತ್ತೇವೆ. ಕೂಡಲೇ ಜಿಲ್ಲಾಡಳಿತ ಕಾನೂನು ಬಾಹಿರ ದಾಖಲೆಗಳನ್ನು ಪರಿಶೀಲಿಸಿ ಸಾರ್ವಜನಿಕರ ಆಸಕ್ತಿಯನ್ನು ಉಳಿಸಿಕೊಡಬೇಕು ಎಂದು ಆಗ್ರಹಿಸುತ್ತೇವೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾಧ್ಯಕ್ಷ ಜಗದೀಶ್, ಶಾಸಕರಾದ ಡಿ.ಎಸ್.ಅರುಣ್, ಡಾ.ಧನಂಜಯ ಸರ್ಜಿ, ಮಾಜಿ ಶಾಸಕರಾದ ಎಸ್.ರುದ್ರೇಗೌಡ, ಪ್ರಮುಖರಾದ ಮೋಹನ್ ರೆಡ್ಡಿ, ಮಾಲತೇಶ್, ನಾಗರಾಜ್, ಮಂಜುನಾಥ್, ದೀನದಯಾಳ್, ಚಂದ್ರಶೇಖರ್, ಅಣ್ಣಪ್ಪ, ಶ್ರೀನಾಗ್ ಮತ್ತಿತರರು ಇದ್ದರು.