ಶೋಭಾ ಮಳವಳ್ಳಿ ಟಿಪ್ಪಣಿ; ಪಲ್ಲವಿ ಎಂಬ ಬೆಂಕಿಯಲ್ಲಿ ಅರಳಿದ ಹೂವು*

*ಪಲ್ಲವಿ ಎಂಬ ಬೆಂಕಿಯಲ್ಲಿ ಅರಳಿದ ಹೂವು*

ಪಲ್ಲವಿ, ಓದಿನಲ್ಲಿ, ಕೆಲಸದಲ್ಲಿ, ಕುಟುಂಬದಲ್ಲಿಯೂ ಜಾಣೆ. ಕಾಶ್ಮೀರದಲ್ಲಿ ಉಗ್ರರ ದಾಳಿಯಲ್ಲಿ ಗಂಡನನ್ನು ಕಳೆದುಕೊಂಡರೂ, ಧೈರ್ಯಗೆಡದೆ ಮಗನನ್ನು ರಕ್ಷಿಸಿ, ಮನೋಬಲದಿಂದ ಎದುರಿಸಿದ್ದಾರೆ.

ಆಕೆ ಓದಿನಲ್ಲಿ ಸದಾ ಮುಂದು, ಜಾಣೆ, ಬುದ್ಧಿವಂತೆ, ಧೈರ್ಯವಂತೆ. ಡಿಗ್ರಿ ಮುಗಿಸಿ, 2006ರಲ್ಲಿ ಮಂಜುನಾಥ್​ ಜತೆ ಮದುವೆ. ಆಮೇಲೆಲ್ಲ ಗಂಡ, ಮಗ, ಮನೆ, ಕುಟುಂಬದ ಪಾಲನೆ. ಮಗ ಬೆಳೆಯುತ್ತಿದ್ದಂತೆ ಮತ್ತೆ ದುಡಿಯುವ ಹಂಬಲ. ಕಳೆದ 7-8 ವರ್ಷಗಳಿಂದ ಮಲೆನಾಡು ಅಡಿಕೆ ಮಾರಾಟದ ಸಹಕಾರ ಸಂಘದಲ್ಲಿ ಉದ್ಯೋಗ. ಸದ್ಯ ಬಿರೂರಿನ ಸಹಕಾರ ಸಂಘದ ಬ್ರಾಂಚ್ ಮ್ಯಾನೇಜರ್​.

8 ತಿಂಗಳ ಹಿಂದಷ್ಟೇ ಮೊದಲ Rank​​ನೊಂದಿಗೆ Msc ಮೈಕ್ರೋಬಯಾಲಜಿ ಮುಗಿಸಿ, ಉನ್ನತ ಶಿಕ್ಷಣ ತನ್ನದಾಗಿಸಿಕೊಂಡಿದ್ದರು. ಪ್ರತಿದಿನ ಶಿವಮೊಗ್ಗದಿಂದ ಬಿರೂರಿಗೆ ಪ್ರಯಾಣ. ಪಿಯುಸಿ ಓದುತ್ತಿದ್ದ ಮಗ, ಉದ್ಯಮಿ ಪತಿ, ಕುಟುಂಬದ ಹೊಣೆ ಹೊತ್ತು, ದಿನವೂ ಅಡುಗೆ ಕೆಲಸ, ಮನೆಗೆಲಸ ಮುಗಿಸಿ ಬಿರೂರಿಗೆ ಓಟ. ಮತ್ತೆ ಸಂಜೆ ಶಿವಮೊಗ್ಗ ತಲುಪಿ, ಮಗನ ಓದಿನತ್ತ ಗಮನ, ಜತೆಗೆ ರಾತ್ರಿಯಡುಗೆ, ಮನೆಗೆಲಸ. ಬಿಡುವಿಲ್ಲದ ಕೆಲಸದ ಮಧ್ಯೆಯೂ, ಶಾಂತ ಸ್ವಭಾವ. ಮಗ ಪಿಯುಸಿ ಮುಗಿಸುವವರೆಗೂ ಪುಟ್ಟ ಪ್ರವಾಸಕ್ಕೂ ತೆರಳದ ಆಕೆ, ಕೊನೆಗೂ ಮಗ ಅತಿಹೆಚ್ಚು ಅಂಕಗಳೊಂದಿಗೆ ಪಿಯುಸಿ ಪಾಸಾಗುತ್ತಿದ್ದಂತೆ, ತನ್ನ ಕನಸಿನ ಕಾಶ್ಮೀರಕ್ಕೆ ಪತಿ, ಮಗನೊಂದಿಗೆ ಹೊರಟೇ ಬಿಟ್ಟಳು.

ಅಷ್ಟು ವರ್ಷಗಳ ಶ್ರಮ, ದುಡಿಮೆ, ದೈನಂದಿನ ಕೆಲಸಗಳ ಒತ್ತಡದಿಂದ ದಣಿದಿದ್ದ ಮನಸ್ಸು ಪ್ರೇಮಕಾಶ್ಮೀರದಲ್ಲಿ ತೇಲಾಡುತ್ತಿತ್ತು. ಆದರೆ, ವಿಧಿಗೂ ಆಕೆಯ ಸಂತೋಷವಾಗಿರುವುದು ಸಹ್ಯವಾಗಲಿಲ್ಲವೇನೋ ? ಭಯೋತ್ಪಾದಕರ ಗುಂಡೇಟು, ಆಕೆಯ ಪತಿಯನ್ನು ನೆಲಕ್ಕುರುಳಿಸಿತ್ತು. ಅಚಾನಕ್ಕಾಗಿ ನಡೆದ ಘಟನೆಯಿಂದ ಭಯಭೀತಳಾಗಿದ್ದಷ್ಟೇ ಅಲ್ಲ, ‘ನನ್ನನ್ನೂ ಕೊಂದು ಬಿಡು’ ಎಂದು ಆ ಉಗ್ರನ ಬಂದೂಕಿಗೆ ಎದೆಯೊಡ್ಡಿದ್ದಾಳೆಂದರೆ, ಆಕೆಯ ಗುಂಡಿಗೆ ಅದೆಷ್ಟು ಗಟ್ಟಿ ಇರಬೇಕು? ಅಂಥ ಪಲ್ಲವಿ, ದುಃಖ ಮರೆತಂತೆ ನಟಿಸಿ, ಕ್ಯಾಮೆರಾಗಳ ಎದುರು ಉಗ್ರರ ಕ್ರೌರ್ಯ ವಿವರಿಸಿದ್ದು ತಪ್ಪಾ? ಅದು ಪಲ್ಲವಿ ತಪ್ಪಲ್ಲ. ಆಕೆಯನ್ನು, ಆಕೆಯ ವ್ಯಕ್ತಿತ್ವವನ್ನು ಕೆಳಮಟ್ಟದಲ್ಲಿ ಅಂದಾಜಿಸಿದ ಸಂಕುಚಿತ ಮನಸ್ಸಿನ ಜನರ ತಪ್ಪು. ಗಂಡನನ್ನು ಕಳೆದುಕೊಂಡ ಪಲ್ಲವಿ ಅವರನ್ನು ಮಾತಿನಲ್ಲೇ ಹಿಂಸಿಸಿಬಿಟ್ಟರಲ್ಲ ಈ ಜನ ?

ಪಲ್ಲವಿ ಮಾನಸಿಕ ಗಟ್ಟಿತನವನ್ನು ಅರಿಯದ ಕೀಳುಮನಸ್ಸಿನವರ ಮಾತುಗಳು, ವ್ಯಂಗ್ಯ, ಲೇವಡಿ. ಒಬ್ಬೊಬ್ಬರದ್ದೂ ಒಂದೊಂದು ರೀತಿಯ ವ್ಯಾಖ್ಯಾನ. ಟೀಕೆ-ಟಿಪ್ಪಣಿ. ಒಬ್ಬರಂತೂ, ‘ಪಲ್ಲವಿಯವರು ಏನೂ ಆಗೇ ಇಲ್ವೋನೋ ಅನ್ನುವಂತಿರುವುದು ನೋಡಿ ಶಾಕ್​ ಆಗೋಯ್ತು’ ಅಂದ್ರೆ, ‘ಈಯಮ್ಮನಿಗೆ ಗಂಡನನ್ನು ಕಳೆದುಕೊಂಡ ನೋವೇ ಇಲ್ವಾ?’ ಎಂಬ ಸಂಶಯ. ಮತ್ತೊಬ್ಬರು, ಸಾವಿನ ಮನೆಯಲ್ಲಿ ಏನೆಲ್ಲ ಕಾರ್ಯ ನಡೆಯುತ್ತೆ ಅಂತ ಈವಮ್ಮ ಕಥೆ ಹೇಳ್ಕಂಡ್ ಕೂತೈತೆ’ ಎಂಬ ಟೀಕಾಪ್ರಹಾರ.

ಒಬ್ಬ ಮಹಿಳೆಯಂತೂ, ಈಕೆ ಯಾವುದೋ ಶೋ ಗೆದ್ದು ಬಂದಂತೆ ಆಡ್ತಿದ್ದಳು’ ಎಂದು ಉರಿಗಣ್ಣು ಬಿಟ್ಟರು. ಇವರದ್ದೆಲ್ಲ ಪಲ್ಲವಿ ಮೇಲಷ್ಟೇ ಮುಗಿಬೀಳಲಿಲ್ಲ, ಪಲ್ಲವಿಯವರನ್ನು ಮಾತನಾಡಿಸಿದ ಮೀಡಿಯಾಗಳ ಮೇಲೂ ಮುರ್ಕೊಂಡ್​ ಬಿದ್ದರು. ‘ಟಿವಿಯವರು ಮಂಜುನಾಥ್ ಮಗ, ಹೆಂಡತಿಯನ್ನು ಇನ್ನಿಲ್ಲದಂತೆ ಪ್ರಶ್ನೆ ಕೇಳಿ ಕಾಡ್ತಿದ್ದಾರೆ’ ಅಂತ ಭುಸುಗುಟ್ಟಿದವರು ಒಬ್ಬಿಬ್ಬರಲ್ಲ ಬಿಡಿ.

ಇವರೆಲ್ಲ ಒಂಥರ ಅತೃಪ್ತ ಮನಸ್ಸಿನವರು. ಅವರ ಮೂಗಿನ ನೇರಕ್ಕೆ ಎಲ್ಲರೂ ಇರಬೇಕೆಂದು ಬಯಸುವ ಸ್ಯಾಡಿಸ್ಟ್ ಮನಸ್ಥಿತಿಯವರು. ಪಲ್ಲವಿಯವರ ವಿಷಯದಲ್ಲೂ, ಅವರ ನಡವಳಿಕೆ ಬಗ್ಗೆ ಅಸಹನೆ, ಅಸಮಾಧಾನ. ಗಂಡನನ್ನು ಕಳೆದುಕೊಂಡ ಹೆಂಡ್ತಿ ಹೀಗೂ ಇರಬಹುದಾ ? ಇರ್ತಾರಾ ? ಎಂಬ ಅಪನಂಬಿಕೆಯ ಮನಸ್ಸು. ಅಷ್ಟಕ್ಕೂ ಪಲ್ಲವಿ ಸೂಕ್ಷ್ಮ ಮನಸ್ಸಿನವರೇ ಆಗಿರಬಹುದು. 19 ವರ್ಷಗಳ ಕಾಲ ದಾಂಪತ್ಯ ಬದುಕು ಸವಿದ ಯಾವುದೇ ಹೆಣ್ಣಿಗಾದರೂ, ಪತಿಯ ಅಗಲುವಿಕೆ ಹೃದಯ ಛಿದ್ರಗೊಳಿಸುವ ವಿಷಯ. ಪಲ್ಲವಿ ವಿಷಯದಲ್ಲೂ ಅದೇ ಆಗಿದೆ. ಆದರೆ, ಅದನ್ನು ಹೃದಯದೊಳಗೆ ಬಚ್ಚಿಟ್ಟು, ಎಲ್ಲ ಕಾರ್ಯ ಮುಗಿಸುವಷ್ಟು ಗಟ್ಟಿ ಮನಸ್ಸು ಆಕೆಯದ್ದು. ಯಾಕಂದ್ರೆ, ಆಕೆ ಬೆಳೆದು ಬಂದು, ಸಾಗಿದ ಹಾದಿ, ಬದುಕು ಕಟ್ಟಿಕೊಂಡ ಪರಿ ಹಾಗಿದೆ. ಆಕೆಯೊಬ್ಬ ಹೋರಾಟಗಾರ್ತಿ.

ಮನೆಯೊಳಗೂ, ಹೊರಗೂ. ಹಾಗಾಗಿಯೇ ಆಕೆ ಕಾಶ್ಮೀರದಲ್ಲಿ ತನ್ನ ಗಂಡ ಉಗ್ರರ ಗುಂಡಿಗೆ ಬಲಿಯಾದ ಸನ್ನಿವೇಶವನ್ನು ದೇಶದ ಮುಂದೆ ಬಿಚ್ಚಿಟ್ಟರು. ‘ನಮಗೇನೂ ಕೇಳಬೇಡಿ’ ಎಂದುಬಿಟ್ಟಿದ್ದರೆ ಯಾವ ಕ್ಯಾಮೆರಾ ಮೈಕ್ ಆಕೆ ಎದುರು ನಿಲ್ಲುತ್ತಿರಲಿಲ್ಲ. ಆದರೆ, ಹೌದು, ಹೀಗೆಲ್ಲ ಆಯ್ತು, ಎಂಥ ಪರಿಸ್ಥಿತಿ ಎದುರಿಸಿದೆ ಎಂಬ ಅಸಹಾಯಕತೆಯನ್ನೂ ವಿವರಿಸಿದರು. ಅದು ಆಕೆಯ ಮನೋಬಲಕ್ಕೆ ಸಾಕ್ಷಿ.

ತನ್ನ ಕಣ್ಣೆದುರೇ ತನ್ನ ಗಂಡ ಕ್ಷಣಾರ್ಧದಲ್ಲಿ ಜೀವ ಕಳೆದುಕೊಂಡು ರಕ್ತದ ಮಡುವಿನಲ್ಲಿ ಬಿದ್ದಿರುವಾಗ, ಆಕೆಯೂ ನೆಲಕ್ಕೊರಗಿರುತ್ತಾಳೆ. ಆದರೆ, ಜತೆಗಿದ್ದ ಮಗನ ರಕ್ಷಣೆಯ ಪಲ್ಲವಿಯ ಆದ್ಯತೆಯೂ ಆಗಿದ್ದರಿಂದ, ಮಗ ಇನ್ನಷ್ಟು ಹೆದರಿಬಿಟ್ಟಾನು ಎಂಬ ಭಯದಿಂದ, ಅಳುವ ಮನಸ್ಸಿಗೆ ಕಡಿವಾಣ ಹಾಕಿ, ಮಗನನ್ನು ಹೊರತರುವ ದಾರಿ ಯೋಚಿಸಿದ್ದಾಳೆ. ಗಂಡನಿಗಾಗಿ ಅಳುತ್ತಾ ಕೂರುವುದಕ್ಕಿಂತ, ಕರುಳ ಕುಡಿ ಉಳಿಸಲು ಹೋರಾಡಿದ್ದಾಳೆ. ಕಣ್ಣೀರಿಡುತ್ತಾ ಕೂರುವ ಪರಿಸ್ಥಿತಿಯಾದರೂ ಪೆಹಲ್ಗಾಮ್​ನಲ್ಲಿತ್ತಾ ? ಗಂಡನ ಮೃತದೇಹವನ್ನೂ, ಮಗನನ್ನೂ ಸುರಕ್ಷಿತವಾಗಿ ತನ್ನ ಮನೆಗೆ ತರುವ ಸವಾಲು ಪಲ್ಲವಿಯನ್ನು ಇನ್ನಷ್ಟು ಗಟ್ಟಿಗೊಳಿಸಿದೆ. ತಾನು ಬಾಳಿ ಬದುಕುತ್ತಿದ್ದ ಮನೆಯಲ್ಲಿ ಗಂಡನ ಶವ ಇರಿಸಿದಾಗ, ಪಲ್ಲವಿಯ ಆಕ್ರಂದನ, ರೋದನ ಕಲ್ಲು ಹೃದಯವನ್ನೂ ಕರಗಿಸದೇ ಇದ್ದೀತೆ? ಅದನ್ನು ಕಾಣದ ಕಣ್ಣುಗಳಷ್ಟೇ ಅಲ್ಲ, ಅಂಥವರ ಹೃದಯವೂ ಕುರುಡೇ.

ತಮ್ಮ ಪ್ರೀತಿ ಪಾತ್ರರನ್ನು ಕಳೆದುಕೊಂಡಾಗ ಅತ್ತು ಗೋಳಾಡಿಬಿಟ್ಟರೆ ಮನಸ್ಸು ಹಗುರಾಗಿ ಬಿಡುತ್ತದೆ. ಅದು ಆರೋಗ್ಯಕ್ಕೂ ಒಳ್ಳೆಯದು. ಆದರೆ, ಅಳುವನ್ನು ತಡೆದುಕೊಂಡು, ಧೈರ್ಯವಾಗಿರುವಂತೆ ನಟಿಸುವುದು ಮಿದುಳಿನ ಮೇಲೆ ಬೀರುವ ಪರಿಣಾಮ ದೊಡ್ಡದು. ಎಲ್ಲ ಮುಗಿದ ಮೇಲೆ ದುಃಖ ಕಟ್ಟೆಯೊಡೆದರೆ ಅದು ನಿಜಕ್ಕೂ ಅಪಾಯ ಅಂತಾರೆ ವೈದ್ಯರು. ಪಲ್ಲವಿಯಂಥ ಗಟ್ಟಿಗಿಟ್ಟಿ ಹೆಣ್ಮಕ್ಕಳು, ದುಃಖದ ಕಟ್ಟೆಯನ್ನು ಒಡೆದುಕೊಂಡು, ಮತ್ತೆ ಕಟ್ಟಿಕೊಂಡು ಮಕ್ಕಳಿಗಾಗಿ ಬದುಕು ಸಾಗಿಸುತ್ತಾರೆ. ಪಲ್ಲವಿ ಏನೂ ಆಗಿಯೇ ಇಲ್ಲದಂತೆ ನಟಿಸಿರಬಹುದು, ಮಾಧ್ಯಮಗಳ ಜತೆ ಮಾತನಾಡಿರಬಹುದು. ಅದು ಮಗನಿಗಾಗಿ, ಕುಟುಂಬದ ಹಿರಿಯ ಜೀವಗಳಿಗಾಗಿ. ದುಃಖ ಸಹಿಸಿಕೊಳ್ಳುವ ಶಕ್ತಿ ಇದೆ ಎಂದು ತೋರಿಸಿಕೊಳ್ಳುವುದಕ್ಕಾಗಿ.

ಆದರೆ, ಆಕೆಯ ಅಂತರಂಗದಲ್ಲಿ ಅಸಹನೀಯ ನೋವು, ದುಃಖ, ಬದುಕಿನ ಮಧ್ಯಭಾಗದಲ್ಲಿ ಕಳೆದುಕೊಂಡ ದಾಂಪತ್ಯದ ಸವಿ, ಜೀವನವಿಡೀ ಕಾಡುವ ಒಂಟಿತನ ಅಡಗಿದೆ. ಈಗ ಪಲ್ಲವಿ ಬೆಂಕಿಯಲ್ಲಿ ಅರಳಿದ ಹೂವು, ಆಕೆಯ ಅಂತರಂಗ ಬಲ್ಲವರಾರು ಇಲ್ಲಿಲ್ಲಮ್ಮ..!

– ಶೋಭಾ ಮಳವಳ್ಳಿ