ರಾಜ್ಯ ಸರ್ಕಾರಿ ನೌಕರರ ದಿನಾಚರಣೆ ಹಾಗೂ ಜಿಲ್ಲಾ ಮಟ್ಟದ ಸರ್ವೋತ್ತಮ ಸೇವಾ ಪ್ರಶಸ್ತಿ ಪ್ರದಾನ ಸಮಾರಂಭ ನೌಕರರ ಪ್ರಾಮಾಣಿಕ ಕಾರ್ಯಗಳಿಂದ ಆಡಳಿತಾರೂಢ ಸರ್ಕಾರಕ್ಕೆ ಗೌರವ : ಬಿ.ವೈ.ರಾಘವೇಂದ್ರ 2023 ನೇ ಸಾಲಿನ ರಾಜ್ಯ ಮಟ್ಟದ ಸರ್ವೋತ್ತಮ ಸೇವಾ ಪ್ರಶಸ್ತಿಗೆ ಬಾಜನರಾದ ವಾಣಿಜ್ಯ ತೆರಿಗೆ ಇಲಾಖೆಯ ಜಂಟಿ ಆಯುಕ್ತ ವಿಜಯಕುಮಾರ್‌ ಎಂ.ಭತ್ತದ್‌, ಖಜಾನೆ ಇಲಾಖೆಯ ಉಪನಿರ್ದೇಶಕಿ ಶ್ರೀಮತಿ ಹೆಚ್.ಎಸ್.ಸಾವಿತ್ರಿ ಮತ್ತು ಆರೋಗ್ಯ ಇಲಾಖೆಯ ಶುಶ್ರೂ಼ಷಾಧಿಕಾರಿ ಶ್ರೀಮತಿ ಶೈಲಜ ಎಂ.ಟಿ. ಅವರಿಗೆ ಇದೇ ವೇದಿಕೆಯಲ್ಲಿ ಜಿಲ್ಲಾಡಳಿತ ಮತ್ತು ರಾಜ್ಯ ಸರ್ಕಾರಿ ನೌಕರರ ಸಂಘದ ವತಿಯಿಂದ ಗೌರವ…

ರಾಜ್ಯ ಸರ್ಕಾರಿ ನೌಕರರ ದಿನಾಚರಣೆ ಹಾಗೂ ಜಿಲ್ಲಾ ಮಟ್ಟದ ಸರ್ವೋತ್ತಮ ಸೇವಾ ಪ್ರಶಸ್ತಿ ಪ್ರದಾನ ಸಮಾರಂಭ

ನೌಕರರ ಪ್ರಾಮಾಣಿಕ ಕಾರ್ಯಗಳಿಂದ ಆಡಳಿತಾರೂಢ ಸರ್ಕಾರಕ್ಕೆ ಗೌರವ : ಬಿ.ವೈ.ರಾಘವೇಂದ್ರ

2023 ನೇ ಸಾಲಿನ ರಾಜ್ಯ ಮಟ್ಟದ ಸರ್ವೋತ್ತಮ ಸೇವಾ ಪ್ರಶಸ್ತಿಗೆ ಬಾಜನರಾದ ವಾಣಿಜ್ಯ ತೆರಿಗೆ ಇಲಾಖೆಯ ಜಂಟಿ ಆಯುಕ್ತ ವಿಜಯಕುಮಾರ್‌ ಎಂ.ಭತ್ತದ್‌, ಖಜಾನೆ ಇಲಾಖೆಯ ಉಪನಿರ್ದೇಶಕಿ ಶ್ರೀಮತಿ ಹೆಚ್.ಎಸ್.ಸಾವಿತ್ರಿ ಮತ್ತು ಆರೋಗ್ಯ ಇಲಾಖೆಯ ಶುಶ್ರೂ಼ಷಾಧಿಕಾರಿ ಶ್ರೀಮತಿ ಶೈಲಜ ಎಂ.ಟಿ. ಅವರಿಗೆ ಇದೇ ವೇದಿಕೆಯಲ್ಲಿ ಜಿಲ್ಲಾಡಳಿತ ಮತ್ತು ರಾಜ್ಯ ಸರ್ಕಾರಿ ನೌಕರರ ಸಂಘದ ವತಿಯಿಂದ ಗೌರವ…

ಶಿವಮೊಗ್ಗ :

ನೌಕರರ ಪ್ರಾಮಾಣಿಕ ಕಾರ್ಯಗಳಿಂದ ಆಡಳಿತಾರೂಢ ಸರ್ಕಾರದ ಗೌರವ ಹೆಚ್ಚಾಗಲಿದೆ. ತಮ್ಮ ಕಾರ್ಯಕ್ಷೇತ್ರದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ ನೌಕರರನ್ನು ಗುರುತಿಸಿ, ಗೌರವಿಸಿ, ಪ್ರಶಂಸಿಸುವುದು ಅಂತೆಯೇ ತಪ್ಪು ನಡೆ ಇದ್ದಲ್ಲಿ ಕಿವಿಮಾತು ಹೇಳುವುದು ಕೂಡ ಉತ್ತಮ ಆಡಳಿತದ ಭಾಗವಾಗಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಅವರು ಹೇಳಿದರು.

ಅವರು ಇಂದು ಜಿಲ್ಲಾಡಳಿತ, ರಾಜ್ಯ ಸರ್ಕಾರಿ ನೌಕರರ ಸಂಘ ಇವರುಗಳ ಸಂಯುಕ್ತಾಶ್ರಯದಲ್ಲಿ ನಗರದ ನೌಕರರ ಸಂಘದ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ರಾಜ್ಯ ಸರ್ಕಾರಿ ನೌಕರರ ದಿನಾಚರಣೆ ಹಾಗೂ 2023ನೇ ಸಾಲಿನ ಜಿಲ್ಲಾ ಮಟ್ಟದ ಸರ್ವೋತ್ತಮ ಸೇವಾ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.

ನೌಕರರು ಸರ್ಕಾರಕ್ಕೆ ಗೌರವ ತರುವ ನಿಟ್ಟಿನಲ್ಲಿ ಯಾವುದೇ ಲೋಪಗಳಾಗದಂತೆ ಹಾಘೂ ಕೇಂದ್ರ ಮತ್ತು ರಾಜ್ಯ ಸರ್ಕಾರದ ಸೌಲಭ್ಯಗಳನ್ನು ಜನಸಾಮಾನ್ಯರಿಗೆ ತಲುಪಿಸುವಲ್ಲಿ ಎಚ್ಚರಿಕೆಯಿಂದ ಕಾರ್ಯನಿರ್ವಹಿಸಬೇಕು. ಮಾಡುವ ಕಾರ್ಯ ರಚನಾತ್ಮಕವೂ, ಮಾದರಿಯೂ ಆಗಿರಬೇಕು ಎಂದವರು ನುಡಿದರು.

ಸರ್ಕಾರದ ಸೌಲಭ್ಯವನ್ನರಸಿ, ಇಲಾಖೆಗಳಿಗೆ ಬರುವ ಸಾರ್ವಜನಿಕರೊಂದಿಗೆ ಅಧಿಕಾರಿ-ಸಿಬ್ಬಂಧಿಗಳು ಸ್ನೇಹಪೂರ್ವಕವಾಗಿ ವರ್ತಿಸಿ, ಕಾಲಮಿತಿಯೊಳಗಾಗಿ ಅವರಿಗೆ ಸೇವೆ ಒದಗಿಸುವ ಮನೋಭಾವ ಹೊಂದಿರಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಎಸ್.ಎನ್.ಚನ್ನಬಸಪ್ಪ ಅವರು ಮಾತನಾಡಿ, ರಾಜ್ಯ ಸರ್ಕಾರಿ ನೌಕರರ ಸಂಘವು ಕೈಗೊಂಡಿರುವ ಹಲವು ಮಹತ್ವದ ನಿರ್ಧಾರಗಳು ರಾಜ್ಯ ಸರ್ಕಾರದ ಚುನಾಯಿತ ಜನಪ್ರತಿನಿಧಿಗಳ ಗಮನಸೆಳೆದಿದೆ ಮಾತ್ರವಲ್ಲ ಅರ್ಹ ನೌಕರರಿಗೆ ಸೌಲಭ್ಯವನ್ನು ತಲುಪಿಸುವಲ್ಲಿ ಸಿ.ಎಸ್.ಷಡಾಕ್ಷರಿ ಅವರ ನೇತೃತ್ವದ ಸಂಘಟನೆ ತುಂಬಾ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಿ, ಯಶಸ್ಸು ಪಡೆದಿದೆ ಎಂದ ಅವರು, ಈಗಾಗಲೇ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಹಲವು ಹುದ್ದೆಗಳಲ್ಲಿ ಸೇವೆ ಸಲ್ಲಿಸಿ, ನಿವೃತ್ತಿಹೊಂದಿ ಸಾಮಾನ್ಯ ಜೀವನ ನಿರ್ವಹಿಸುತ್ತಿರುವ ನೌಕರರ ಹಿತಕಾಯುವ ನಿಟ್ಟಿನಲ್ಲಿಯೂ ಸಂಘಟನೆ ಹಲವು ಮಹತ್ವದ ನಿರ್ಣಯಗಳನ್ನು ಕೈಗೊಳ್ಳಬೇಕು. ಅಗತ್ಯವೆನಿಸಿದಲ್ಲಿ ಅವರೊಂದಿಗೆ ಆತ್ಮೀಯ ಸಮಾಲೋಚನೆ ನಡೆಸಿ, ಅವರ ಸಮಸ್ಯೆಗಳಿಗೆ ಕಿವಿಯಾಗುವಂತೆ ಅವರು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ನೌಕರರು ತಮ್ಮ ಇಲಾಖೆಯಲ್ಲಿ ತಮ್ಮ ಕಾರ್ಯಕ್ಷೇತ್ರದ ವ್ಯಾಪ್ತಿಯಲ್ಲಿ ದಕ್ಷತೆ ಮತ್ತು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಿ, ಜನಸಾಮಾನ್ಯರಿಗೆ ಸರ್ಕಾರದ ಸೌಲಭ್ಯಗಳನ್ನು ದೊರೆಕಿಸುವಲ್ಲಿ ಶ್ರಮಿಸಿದ, ಯಾವುದೇ ಲಾಭದ ನಿರೀಕ್ಷೆಯಿಲ್ಲದೇ ಪಾರದರ್ಶಕವಾಗಿ ಗುಣಮಟ್ಟದ ಸೇವೆ ನೀಡಿದ ನೌಕರರನ್ನು ಗುರುತಿಸಿ ಗೌರವಿಸುವುದಲ್ಲಿ ಇತರೆ ನೌಕರರಿಗೆ ಸೇವೆ ಸಲ್ಲಿಸಲು ಪ್ರೇರಣೆಯಾಗಲಿದೆ. ಮಾತ್ರವಲ್ಲ ನೌಕರರಲ್ಲೂ ಸೇವೆ ಮಾಡಿದ ಸಾರ್ಥಕ ಭಾವ ಮೂಡಲಿದೆ. ಹೆಮ್ಮೆ ಎನಿಸಲಿದೆ ಎಂದರು.

ಪ್ರಶಸ್ತಿ ಪುರಸ್ಕಾರಗಳಿಗೆ ರಾಜಕೀಯ ಮತ್ತಿತರ ಲಾಭಿ ಮಾಡುವ ಜನರ ಮಧ್ಯದಲ್ಲಿ ಅರ್ಜಿ ಸಲ್ಲಿಸದೇ ಇರುವ ಹಾಗೂ ತೆರೆಯ ಮರೆಯಲ್ಲಿ ತಮ್ಮ ದೈನಂದಿನ ಕಾರ್ಯದಲ್ಲಿ ಮಗ್ನರಾಗಿದ್ದ ಅರ್ಹ ನೌಕರರನ್ನು ಗುರುತಿಸಿ, ಗೌರವಿಸುತ್ತಿರುವುದು ಪ್ರಶಸ್ತಿಯ ಮೌಲ್ಯವನ್ನು ಹೆಚ್ಚಿಸಿದೆ ಎಂದ ಅವರು, ಜಿಲ್ಲಾ ಮಟ್ಟದಲ್ಲಿ ಪ್ರಶಸ್ತಿಗೆ ಆಯ್ಕೆಯಾದ ಹತ್ತು ಮಂದಿಗೆ ತಲಾ 25,000 ರೂ.ಗಳ ನಗದು ಪುರಸ್ಕಾರ ಹಾಗೂ ರಾಜ್ಯ ಮಟ್ಟದಲ್ಲಿ ಆಯ್ಕೆಯಾದ ನೌಕರರಿಗೆ ರೂ.50,000/-ಗಳ ನಗದು ಪುರಸ್ಕಾರ ನೀಡಿ ಗೌರವಿಸಲಾಗುತ್ತಿದೆ ಎಂದರು.

ಮುಂದಿನ ಎರಡು ವರ್ಷಗಳ ಅವಧಿಯಲ್ಲಿ ರಾಜ್ಯ ಸರ್ಕಾರಿ ನೌಕರರ ಹೊಸ ಪಿಂಚಣಿ ವ್ಯವಸ್ಥೆಯನ್ನು ರದ್ದುಗೊಳಿಸಿ, ಹಳೆ ಪಿಂಚಣಿ ವ್ಯವಸ್ಥೆಯನ್ನು ಜಾರಿಗೊಳಿಸುವಲ್ಲಿ ನಿಶ್ಚಿತವಾಗಿ ಯಶಸ್ಸು ಕಾಣುತ್ತೇವೆ. ನೌಕರರು ವದಂತಿಗಳಿಂದ ಆತಂಕಿತರಾಗುವ ಅಗತ್ಯವಿಲ್ಲ ಎಂದರು.

2023 ನೇ ಸಾಲಿನ ರಾಜ್ಯ ಮಟ್ಟದ ಸರ್ವೋತ್ತಮ ಸೇವಾ ಪ್ರಶಸ್ತಿಗೆ ಬಾಜನರಾದ ವಾಣಿಜ್ಯ ತೆರಿಗೆ ಇಲಾಖೆಯ ಜಂಟಿ ಆಯುಕ್ತ ವಿಜಯಕುಮಾರ್‌ ಎಂ.ಭತ್ತದ್‌, ಖಜಾನೆ ಇಲಾಖೆಯ ಉಪನಿರ್ದೇಶಕಿ ಶ್ರೀಮತಿ ಹೆಚ್.ಎಸ್.ಸಾವಿತ್ರಿ ಮತ್ತು ಆರೋಗ್ಯ ಇಲಾಖೆಯ ಶುಶ್ರೂ಼ಷಾಧಿಕಾರಿ ಶ್ರೀಮತಿ ಶೈಲಜ ಎಂ.ಟಿ. ಅವರಿಗೆ ಇದೇ ವೇದಿಕೆಯಲ್ಲಿ ಜಿಲ್ಲಾಡಳಿತ ಮತ್ತು ರಾಜ್ಯ ಸರ್ಕಾರಿ ನೌಕರರ ಸಂಘದ ವತಿಯಿಂದ ಗೌರವಿಸಲಾಯಿತು.

2023ನೇ ಸಾಲಿನ ಜಿಲ್ಲಾ ಮಟ್ಟದ ಸರ್ವೋತ್ತಮ ಸೇವಾ ಪ್ರಶಸ್ತಿಗೆ ಆಯ್ಕೆಯಾಗಿದ್ದ ನೌಕರರಾದ ಡಾ|| ಶಾಂತರಾಜ್‌, ಆರೋಗ್ಯ ಇಲಾಖೆ, ಷಣ್ಮುಖ ಕೃಷಿ ಇಲಾಖೆ, ಶ್ರೀಮತಿ ಸುನಿತಾ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆ, ವಿನಯ್‌ ಎಸ್.ಬಿ. ಕಂದಾಯ ಇಲಾಖೆ, ಕೆ.ಆರ್.ರಾಮಪ್ಪ ಪಶು ಸಂಗೋಪನಾ ಇಲಾಖೆ, ಜಿ.ಮುನಿಯಲ್ಲಪ್ಪ ತಾಂತ್ರಿಕ ಶಿಕ್ಷಣ ಇಲಾಖೆ, ಶ್ರೀಮತಿ ನೀಲಮ್ಮ, ಆರೋಗ್ಯ ಇಲಾಖೆ, ರಾಜ್‌ಕುಮಾರ್‌ ಗ್ರಂಥಾಲಯ ಇಲಾಖೆ, ಪಿ.ಜೆ.ಜಾನ್‌ ಆರೋಗ್ಯ ಇಲಾಖೆ ಹಾಗೂ ಎಸ್.ಆರ್.ಶಂಕರ್‌ ಕಂದಾಯ ಇಲಾಖೆ ಇವರನ್ನು ಗಣ್ಯರ ಉಪಸ್ಥಿತಿಯಲ್ಲಿ ಅಭಿನಂದಿಸಲಾಯಿತು.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್‌ ಸದಸ್ಯೆ ಶ್ರೀಮತಿ ಬಲ್ಕಿಶ್‌ಬಾನು, ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಹೆಚ್.ಎಸ್.ಸುಂದರೇಶ್‌, ಕರ್ನಾಟಕ ರಾಜ್ಯ ಬೋವಿ ಅಭಿವೃದ್ಧಿ ನಿಗಮದ ರಾಜ್ಯಾಧ್ಯಕ್ಷ ಎಸ್.ರವಿಕುಮಾರ್, ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಸಿ.ಎಸ್.ಚಂದ್ರಭೂಪಾಲ, ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎನ್.ಹೇಮಂತ್‌, ಅಪರ ಜಿಲ್ಲಾಧಿಕಾರಿ ಸಿದ್ಧಲಿಂಗರೆಡ್ಡಿ, ನೌಕರರ ಸಂಘದ ಜಿಲ್ಲಾಧ್ಯಕ್ಷ ಆರ್.ಮೋಹನ್‌ಕುಮಾ̧ರ್‌ ರಂಗನಾಥ್‌, ಆರ್.ಪಾಪಣ್ಣ, ಸೇರಿದಂತೆ ಜಿಲ್ಲಾ ನೌಕರರ ಸಂಘದ ಪದಾಧಿಕಾರಿಗಳು, ತಾಲೂಕು ಘಟಕಗಳ ಅಧ್ಯಕ್ಷರು ಉಪಸ್ಥಿತರಿದ್ದರು.

• 2023ನೇ ಸಾಲಿನಲ್ಲಿ ಜಿಲ್ಲೆಯಲ್ಲಿ ಸರ್ವೋತ್ತಮ ಸೇವಾ ಪ್ರಶಸ್ತಿಗೆ ಬಾಜನರಾದ 10ಜನರನ್ನು ಗುರುತಿಸಿ 25,000/-ರೂ.ಗಳ ನಗದು ಪುರಸ್ಕಾರ ಮತ್ತು ಸ್ಮರಣಿಕೆ ನೀಡಿ ಗೌರವಿಸಲಾಗುತ್ತಿದೆ. ಅತಿಶೀಘ್ರದಲ್ಲಿ 2024ನೇ ಸಾಲಿನಲ್ಲಿ ಸರ್ವೋತ್ತಮ ಸೇವಾ ಪ್ರಶಸ್ತಿಗೆ ಬಾಜನರಾದವರನ್ನು ಗುರುತಿಸಿ ಮತ್ತೊಂದು ವೇದಿಕೆಯಲ್ಲಿ ಗೌರವಿಸಲಾಗುವುದು. ರಾಜ್ಯ ಸರ್ಕಾರಿ ನೌಕರರ ಸಂಘ ಜಿಲ್ಲಾ ಘಟಕದ ಪ್ರತಿ ಕಾರ್ಯ ಚಟುವಟಿಕೆಗಳು ರಾಜ್ಯಕ್ಕೆ ಮಾದರಿಯಾಗಿವೆ. ಇದರಲ್ಲಿ ಯಾವುದೇ ಅತಿಶಯೋಕ್ತಿ ಇಲ್ಲ. ಸಂಘವು ಆಯೋಜಿಸುವ ಪ್ರತಿ ಕಾರ್ಯಕ್ರಮಗಳಲ್ಲಿ ನೌಕರರ ಕುಟುಂಬದ ಎಲ್ಲಾ ಸದಸ್ಯರು ಸಕ್ರಿಯವಾಗಿ ಪಾಲ್ಗೊಳ್ಳುತ್ತಿರುವುದು, ಕೆಲಕಾಲ ಕಾರ್ಯದ ಒತ್ತಡದಿಂದ ಮುಕ್ತರಾಗಿ ಸಂತಸದ ದಿನ ಕಳೆಯಲು ಸೂಕ್ತ ವಾತಾವರಣ ನಿರ್ಮಿಸುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ. ಗುರುದತ್ತ ಹೆಗಡೆ, ಜಿಲ್ಲಾಧಿಕಾರಿಗಳು.

• ಗ್ಯಾರಂಟಿ ಯೋಜನೆಗಳಲ್ಲಿ ಅದರಲ್ಲೂ ವಿಶೇಷವಾಗಿ ಗೃಹಲಕ್ಷ್ಮೀ ಯೋಜನೆಯ ಅನುಷ್ಠಾನದಲ್ಲಿ ಶಿವಮೊಗ್ಗ ಜಿಲ್ಲೆ ರಾಜ್ಯದಲ್ಲಿಯೇ ಉಚ್ಚ ಸ್ಥಾನದಲ್ಲಿದೆ. ಈ ಪ್ರಶಂಸೆಗೆ ಬಾಜನರಾದ ಎಲ್ಲಾ ನೌಕರರು ಅಭಿನಂದನಾರ್ಹರು. – ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಸಿ.ಎಸ್.ಚಂದ್ರಭೂಪಾಲ,