ಕುಡಿದ ನಶೆಯಲ್ಲಿ ಸಿಗರೇಟ್ ಹಚ್ಚಿ ನಿದ್ರೆಗೆ ಜಾರಿದ;* *ಧಗಧಗಿಸಿದ ಮನೆ, ಯುವಕ ಸಜೀವ ದಹನ*
*ಕುಡಿದ ನಶೆಯಲ್ಲಿ ಸಿಗರೇಟ್ ಹಚ್ಚಿ ನಿದ್ರೆಗೆ ಜಾರಿದ;*
*ಧಗಧಗಿಸಿದ ಮನೆ, ಯುವಕ ಸಜೀವ ದಹನ*
ಬೆಂಗಳೂರು ಗ್ರಾಮಾಂತರ (Bengaluru Rural) ಜಿಲ್ಲೆ ದೊಡ್ಡಬಳ್ಳಾಪುರ (Doddaballapur) ತಾಲೂಕಿನ ಕನ್ನಮಂಗಲ ಕಾಲೋನಿಯಲ್ಲಿನ ಮನೆಯೊಂದು ಶುಕ್ರವಾರ (ಜು.18) ಸಂಜೆ ಧಗಧಗಿಸಿ ಉರಿದು, ಸುಟ್ಟು ಕರಕಲಾಗಿದೆ. ಮನೆಯಲ್ಲಿ ಮಲಗಿದ್ದ ಯುವಕ ಸಜೀವ ದಹನವಾಗಿದ್ದಾನೆ. ಉದಯ್ ಮೃತ ದುರ್ದೈವಿ. ಕನ್ನಮಂಗಲ ಕಾಲೋನಿಯಲ್ಲಿ ನರಸಮ್ಮ ಮತ್ತು ಮೃತ ಉದಯ್ ತಾಯಿ-ಮಗ ವಾಸ ಮಾಡುತ್ತಿದ್ದರು. ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು.
ಶುಕ್ರವಾರ (ಜು.18) ಸಂಜೆ ಉದಯ್ ಕೆಲಸ ಮುಗಿಸಿಕೊಂಡು, ಕುಡಿದು ಮನೆಗೆ ಬಂದಿದ್ದಾನೆ. ಮನೆಯಲ್ಲಿ ತಾಯಿ ನರಸಮ್ಮ ಇರಲಿಲ್ಲ. ಎಣ್ಣೆ ನಶೆಯಲ್ಲಿ ಕೋಣೆಯೊಳಗೆ ಮಲಗಿದವನಿಗೆ ಧೂಮಪಾನ ಮಾಡಬೇಕು ಅಂತ ಬಯಕೆ ಆಗಿದೆ. ಸಿಗರೇಟ್ ಹಚ್ಚಿ ಸೇದಿದ್ದಾನೆ. ಕೊನೆಗೆ ಕಿಡಿಯನ್ನು ಆರಿಸದೆ ನಶೆಯಲ್ಲಿ ಹಾಗೆ ನಿದ್ದೆಗೆ ಜಾರಿದ್ದಾನೆ. ಸಿಗರೇಟ್ ಕಿಡಿ ಕೋಣೆಯಲ್ಲಿನ ಬಟ್ಟೆಗಳಿಗೆ ತಗುಲಿದ್ದು, ಬೆಂಕಿ ಹೊತ್ತಿಕೊಂಡಿದೆ. ಕ್ಷಣ ಮಾತ್ರದಲ್ಲಿ ಮನೆಯ ತುಂಬ ಬೆಂಕಿ ಆವರಿಸಿದೆ. ಬೆಂಕಿ ಹೊತ್ತಿಕೊಂಡರೂ ನಶೆಯಲ್ಲಿದ್ದ ಉದಯ್ಗೆ ಎಚ್ಚರವಾಗಿಲ್ಲ. ಕುಡಿದು ನಶೆಯಲ್ಲಿ ಮಲಗಿದ್ದ ಉದಯ್ ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಚಿರನಿದ್ರೆಗೆ ಜಾರಿದ್ದಾನೆ.
ದಟ್ಟ ಹೊಗೆ ಹಾಗೂ ಬೆಂಕಿಯ ಕಿಡಿ ಕಂಡ ಅಕ್ಕ ಪಕ್ಕದವರು ಮನೆ ಬಳಿ ಬಂದು ನೋಡಿದಾಗ ಮನೆ ಹೊತ್ತಿ ಉರಿಯುತ್ತಿತ್ತು. ಕೂಡಲೇ ಸ್ಥಳಿಯರು ನೀರು ಹಾಕಿ ಬೆಂಕಿ ನಂದಿಸಿದ್ದಾರೆ. ಆದರೆ, ಅಷ್ಟೊತ್ತಿಗಾಗಲೆ ನಶೆಯಲ್ಲಿ ನಿದ್ದೆಗೆ ಜಾರಿದ್ದ ಉದಯ್ ಸುಟ್ಟು ಕರಕಲಾಗಿದ್ದನು. ಮಗನ ಸಾವು ಕಂಡು ತಾಯಿಯ ಆಕ್ರಂದನ ಮುಗಿಲು ಮುಟ್ಟಿದೆ. ಮಗನ ಸಾವು ಮತ್ತು ಮನೆಯ ದುಸ್ಥಿತಿ ಕಂಡು ವೃದ್ದ ತಾಯಿಗೆ ಬರಸಿಡಿಲು ಬಡಿದಂತಾಗಿದೆ. ಪ್ರಕರಣ ಸಂಬಂಧ ದೊಡ್ಡಬೆಳವಂಗಲ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ತನಿಖೆ ಮುಂದುವರೆಸಿದ್ದಾರೆ.