ಅತ್ಯಾಚಾರಿ ಮಾಜಿ ಸಂಸದ ಪ್ರಜ್ವಲ್ ರೇವಣ್ಣನಿಗೆ* *ಜೈಲಿನೊಳಗೆ 8 ಗಂಟೆ ಕೆಲಸ, ಕೂಲಿ ಎಷ್ಟು?*

*ಅತ್ಯಾಚಾರಿ ಮಾಜಿ ಸಂಸದ ಪ್ರಜ್ವಲ್ ರೇವಣ್ಣನಿಗೆ*
*ಜೈಲಿನೊಳಗೆ 8 ಗಂಟೆ ಕೆಲಸ, ಕೂಲಿ ಎಷ್ಟು?*

ಕೆ.ಆರ್.ನಗರ ಮಹಿಳೆ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಜೀವನ ಪರ್ಯಂತ ಶಿಕ್ಷೆಗೆ ಗುರಿಯಾಗಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣನ (Prajwal Revanna) ಜೀವನ ಶೈಲಿ ಇಂದಿನಿಂದ ಬದಲಾಗಲಿದೆ. ಕಳೆದ 14 ತಿಂಗಳು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಪ್ರಜ್ವಲ್ ರೇವಣ್ಣಗೆ ಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿದ್ದು, ನಿನ್ನೆಯಿಂದಲೇ ಅಧಿಕೃತವಾಗಿ ಸಜಾಬಂಧಿ ಖೈದಿಯಾಗಿದ್ದಾರೆ. ಸದ್ಯ ಪ್ರಜ್ವಲ್ ರೇವಣ್ಣಗೆ 15528 ನಂಬರ್ ನೀಡಲಾಗಿದ್ದು, ಇಂದು (ಆಗಸ್ಟ್ 02) ಪ್ರಜ್ವಲ್ ರೇವಣ್ಣಗೆ ಜೈಲು ಸಿಬ್ಬಂದಿ ಬಿಳಿ ವಸ್ತ್ರ ನೀಡಲಿದ್ದು, ಜೈಲು ನಿಯಮಾವಳಿ ಅನುಸಾರ ಜೈಲು ಆಧೀಕ್ಷಕರು ನೀಡುವ ಕೆಲಸ ಮಾಡಿಕೊಂಡಿರಬೇಕು.

ಸಜಾಬಂಧಿ ಖೈದಿಗಳ ಬ್ಯಾರಕ್ ಗೆ ಪ್ರಜ್ವಲ್ ಅವರನ್ನ ಶಿಫ್ಟ್ ಮಾಡಲಾಗಿದೆ. ಸಜಾಬಂಧಿಯಾಗಿ ತಡರಾತ್ರಿವರೆಗೂ ನಿದ್ದೆ ಮಾಡದ ಪ್ರಜ್ವಲ್ ರೇವಣ್ಣ, ಇಂದು ಬೆಳಗ್ಗೆ ಎದ್ದು ನಿತ್ಯಕರ್ಮ ಮುಗಿಸಿ ಸುಮ್ಮನೆ ಕುಳಿತುಕೊಂಡಿದ್ದಾರೆ. ಇನ್ನು ಜೈಲು ಸಿಬ್ಬಂದಿ, ಪ್ರಜ್ವಲ್ ರೇವಣ್ಣನಿಗೆ ಅವಲಕ್ಕಿ ಉಪ್ಪಿಟ್ಟು ತಿಂಡಿ ನೀಡಿದ್ದಾರೆ. ಕಡ್ಡಾಯ ಜೈಲಿನೊಳಗೆ 8 ಗಂಟೆ ಕೆಲಸ ಮಾಡಬೇಕು. ಜೊತೆಗೆ ಪರಪ್ಪನ ಅಗ್ರಹಾರ ಜೈಲಿನ ಸಜಾಬಂಧಿ ಖೈದಿಗಳ ನಿಯಮಗಳನ್ನ ಚಾಚು ತಪ್ಪದೆ ಪಾಲಿಸಬೇಕು. ಬೇಕರಿ, ಗಾರ್ಡನ್, ಹೈನುಗಾರಿಕೆ, ತರಕಾರಿ ಬೆಳೆಯುವುದು, ಕರಕುಶಲ ವಸ್ತು, ಮರಗೆಲಸ ಸೇರಿ ಯಾವುದರೂ ಒಂದು ಕೆಲಸ ಆಯ್ಕೆ ಮಾಡಿಕೊಳ್ಳಬೇಕು.

ಪ್ರಜ್ವಲ್ ಆಯ್ಕೆ ಮಾಡಿಕೊಂಡ ಕೆಲಸಕ್ಕೆ ತಕ್ಕಂತೆ ಸಂಬಳ ಕೂಡ ಪಾವತಿ ಮಾಡಲಾಗುತ್ತೆ. ಮೊದಲು ಒಂದು ವರ್ಷ ಕೌಶಲ್ಯ ರಹಿತ ಅಂತ 524 ರೂಪಾಯಿ ಸಂಬಳ ನೀಡಲಾಗುತ್ತೆ. ಆಮೇಲೆ ಅರೆ ಕೌಶಲ್ಯ ಮಟ್ಟಕ್ಕೆ ಏರಿಕೆ ಮಾಡಲಾಗುತ್ತೆ. ಬಳಿಕ ಅನುಭವದ ನಂತರ ನುರಿತ ವರ್ಗಕ್ಕೆ ಬಡ್ತಿ ನೀಡಲಾಗುತ್ತೆ. ಹೀಗೆ ಸಜಾಬಂಧಿ ಖೈದಿಯಾದ ಕಾರಣ ಪ್ರಜ್ವಲ್ ಜೀವನ ಶೈಲಿ ಸಂಪೂರ್ಣ ಬದಲಾಗಲಿದೆ.

ಜೀವಾವಧಿಗಿಂತ ಜೀವನಪರ್ಯಂತ ಶಿಕ್ಷೆ ದೊಡ್ಡದು
ಇತ್ತೀಚಿನ ವರ್ಷದಲ್ಲಿ ರಾಜಕಾರಣಿಯೊಬ್ಬನಿಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಗರಿಷ್ಠ ಶಿಕ್ಷೆ ನೀಡಿ ಮಹತ್ವದ ತೀರ್ಪು ನೀಡಿದೆ. ಮನೆಗೆಲಸದ ಮಹಿಳೆ ಮೇಲೆ ಅತ್ಯಾಚಾರ ಎಸಗಿದ್ದ ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣಗೆ, ಜೀವನಪರ್ಯಂತ ಸೆರೆವಾಸದ ಶಿಕ್ಷೆ ನೀಡಿ ಕೋರ್ಟ್ ತೀರ್ಪು ನೀಡಿದೆ. ಪ್ರಜ್ವಲ್ ರೇವಣ್ಣಗೆ 11ಲಕ್ಷದ 60ಸಾವಿರ ರೂಪಾಯಿ ದಂಡ ವಿಧಿಸಿದೆ. ಈ ದಂಡದಲ್ಲಿ 11 ಲಕ್ಷದ 25 ಸಾವಿರ ರೂಪಾಯಿಯನ್ನ ಸಂತ್ರಸ್ತೆಗೆ ನೀಡುವಂತೆ ಆದೇಶ ಹೊರಡಿಸಿದೆ. ಐಪಿಸಿ ಸೆಕ್ಷನ್ 376(2)(K) ಅಡಿಯಲ್ಲಿ ಪ್ರಜ್ವಲ್‌ಗೆ ಜೀವಾವಧಿ ಶಿಕ್ಷೆ ವಿಧಿಸಿ 5ಲಕ್ಷ ದಂಡ ವಿಧಿಸಲಾಗಿದೆ. ಹಾಗೆಯೇ ಮತ್ತೊಂದು ಐಪಿಸಿ ಸೆಕ್ಷನ್ 376(2)(N)ರ ಅಡಿಯಲ್ಲಿ ಪದೇ ಪದೇ ಅತ್ಯಾಚಾರ ಎಸಗಿದ ಆರೋಪದಡಿ ಜೀವನಪರ್ಯಂತ ಜೈಲು ವಾಸ ಶಿಕ್ಷೆ ವಿಧಿಸಿ, 5ಲಕ್ಷ ದಂಡ ಹಾಕಲಾಗಿದೆ. ಅಲ್ಲದೇ, ಐಪಿಸಿ ಸೆಕ್ಷನ್ 354(B)ಅಡಿಯಲ್ಲಿ 7ವರ್ಷ ಸೆರೆವಾಸ ಮತ್ತು 50 ಸಾವಿರ ದಂಡ ಹಾಕಿದೆ. ಇನ್ನೂ IPC 354(A), IPC 354(c), IPC 201, ಐಟಿ ಕಾಯ್ದೆ ಸೆ.66(E) ರ ಅಡಿ 3ವರ್ಷ ಸೆರೆವಾಸ ಮತ್ತು 25 ಸಾವಿರ ದಂಡ ಹಾಕಲಾಗಿದೆ. IPC 506ರಡಿ 2 ವರ್ಷ ಸೆರೆವಾಸ ಮತ್ತು 10 ಸಾವಿರ ದಂಡ ವಿಧಿಸಿದೆ.

ಪ್ರಜ್ವಲ್ ರೇವಣ್ಣ ಜೀವನ ಪರ್ಯಂತ ಸೆರೆವಾಸದ ಶಿಕ್ಷೆ ಅನುಭವಿಸಬೇಕಾಗಿದೆ. ಜೀವಾವಧಿಗಿಂತ ಜೀವನಪರ್ಯಂತ ಶಿಕ್ಷೆ ದೊಡ್ಡದು. ಐಪಿಸಿ ಸೆಕ್ಷನ್‌ 376(2) (n)ರಡಿ, ಓರ್ವ ಮಹಿಳೆ ಮೇಲಿನ ಪದೇ ಪದೇ ಅತ್ಯಾಚಾರ ಗಂಭೀರ ಅಪರಾಧವೆಂದು ಪರಿಗಣಿಸಲಾಗಿದ್ದು, ಕೋರ್ಟ್ ಜೀವನ ಪರ್ಯಂತ ಸೆರೆವಾಸದ ಶಿಕ್ಷೆ ವಿಧಿಸಿದೆ. ಜೀವಾವಧಿ ಶಿಕ್ಷೆ ಅಂದ್ರೆ, 14 ವರ್ಷದ ಬಳಿಕ ಕ್ಷಮಾದಾನ ಕೊಡಬಹುದು. ಕ್ಷಮಾದಾನ ಕೊಡುವಂತಹ ಅಧಿಕಾರ ಸರ್ಕಾರ ಮತ್ತು ರಾಜ್ಯಪಾಲರಿಗಿದೆ. ಆದ್ರೆ, ಕೋರ್ಟ್ ಜೀವನಪರ್ಯಂತವೆಂದು ಆದೇಶದಲ್ಲಿ ಉಲ್ಲೇಖವಿರೋದ್ರಿಂದ ಪ್ರಜ್ವಲ್ ಜೀವನಪೂರ್ತಿ ಸೆರೆವಾಸದಲ್ಲೇ ಇರಬೇಕು. ಅಪರಾಧಿ ಪ್ರಜ್ವಲ್‌ಗೆ ಜೀವಾವಧಿ ಶಿಕ್ಷೆ ಇಂದಿನಿಂದ ಆರಂಭವಾಗಲಿದೆ. ಇಲ್ಲಿವರೆಗೆ ಅನುಭವಿಸಿದ 14 ತಿಂಗಳ ಜೈಲುವಾಸ ಅನ್ವಯಿಸಲ್ಲ.

ಕೆ.ಆರ್ ನಗರ ರೇಪ್ ಕೇಸ್‌ನಲ್ಲಿ ಪ್ರಜ್ವಲ್ ಬಂಧನವಾಗಿಲ್ಲ. ಕೇವಲ ಬಾಡಿ ವಾರಂಟ್ ಮೇಲೆ ಪ್ರಜ್ವಲ್ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ. ಹೀಗಾಗಿ ಜೀವ ಇರೋವರೆಗೂ, ಬದುಕಿರೋವರೆಗೂ ಪ್ರಜ್ವಲ್ ಜೈಲಿನಲ್ಲೇ ಇರಬೇಕಾಗಿದೆ.