ಧ್ವಜಾರೋಹಣದ ನಂತರ ಸುದ್ದಿಗೋಷ್ಠಿ* ಶರಾವತಿ ಮುಳುಗಡೆ ಸಂತ್ರಸ್ಥರನ್ನು ಒಕ್ಕಲೆಬ್ಬಿಸದಂತೆ ಕ್ರಮ : ಎಸ್.ಮಧು ಬಂಗಾರಪ್ಪ
*ಧ್ವಜಾರೋಹಣದ ನಂತರ ಸುದ್ದಿಗೋಷ್ಠಿ*
ಶರಾವತಿ ಮುಳುಗಡೆ ಸಂತ್ರಸ್ಥರನ್ನು ಒಕ್ಕಲೆಬ್ಬಿಸದಂತೆ ಕ್ರಮ : ಎಸ್.ಮಧು ಬಂಗಾರಪ್ಪ
ಶರಾವತಿ ಮುಳುಗಡೆ ಸಂತ್ರಸ್ಥರು, ಜಿಲ್ಲೆಯಲ್ಲಿನ ಬಗರ್‌ಹುಕುಂ ಸಾಗುವಳಿದಾರರು ಹಾಗೂ ವನವಾಸಿಗಳ ಹಿತಕಾಯಲು ಸರ್ಕಾರ ಬದ್ದವಾಗಿದ್ದು, ಅವರನ್ನು ಒಕ್ಕಲೆಬ್ಬಿಸದಂತೆ ಸರ್ಕಾರ ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ ಎಂದು ರಾಜ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಮಧು ಬಂಗಾರಪ್ಪ ಅವರು ಹೇಳಿದರು.
ಅವರು ಇಂದು ಜಿಲ್ಲಾಡಳಿತವು ನಗರದ ನೆಹರೂ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ 79ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಿದ್ದರು. ಕಾನೂನಾತ್ಮಕ ವಿಷಯಗಳನ್ನು ಹೊರತುಪಡಿಸಿದ ಉಳಿದ ವಿಷಯಗಳಲ್ಲಿ ವಿನಾಯಿತಿ ನೀಡಲಾಗದು ಎಂದ ಅವರು ಈ ವಿಷಯದ ತಾರ್ಕಿಕ ಅಂತ್ಯ ತಲುಪಿಸುವ ಉದ್ದೇಶದಿಂದ ಕೇಂದ್ರ ಸರ್ಕಾರವನ್ನು ವಿಶ್ವಾಸಕ್ಕೆ ಪಡೆದು ಕಾರ್ಯ ಯೋಜನೆ ರೂಪಿಸಲಾಗುತ್ತಿದೆ.ಅಲ್ಲದೇ ದೇಶದ ಸರ್ವೋಚ್ಛ ನ್ಯಾಯಾಲಯದಲ್ಲಿ ಈ ಪ್ರಕರಣದ ವಿಚಾರಣಗೆ ಸಂಬಂಧಿಸಿದಂತೆ ಸಮರ್ಥವಾಗಿ ವಾದ ಮಂಡಿಸಲು ಹಿರಿಯ ವಕೀಲರೊಬ್ಬರನ್ನು ನೇಮಿಸಲಾಗಿದೆ ಎಂದ ಅವರು ಮುಂದುವರೆದ ಭಾಗವಾಗಿ ಜಿಲ್ಲೆಯಲ್ಲಿ ಸಂತ್ರಸ್ಥರ ಸಮೀಕ್ಷೆ ಕಾರ್ಯವೂ ಮುಕ್ತಾಯ ಹಂತದಲ್ಲಿದೆ. ಸಂತ್ರಸ್ಥರ ಸಮಸ್ಯೆ ಹಲವು ದಶಕಗಳದ್ದು. ಅದರೊಂದಿಗೆ ಸೇರಿಕೊಂಡು ಭೂ ಸಾಗುವಳಿ ಮಾಡಿಕೊಂಡು ಬರುತ್ತಿರುವ ಹಲವು ಕುಟುಂಬಗಳ ಹಿತ ಕಾಯುವುದನ್ನು ಕೂಡ ಪರಿಗಣಿಸಲಾಗಿದೆ ಎಂದವರು ನುಡಿದರು.
ಸಾಗುವಳಿದಾರರಿಗೆ ಹಕ್ಕುಪತ್ರ ಕೊಡಿಸುವ ಬಗ್ಗೆಯೂ ಕೂಡ ಈಗಾಗಲೇ ಮಾನ್ಯ ಮುಖ್ಯಮಂತ್ರಿಗಳೊಂದಿಗೆ ಸಮಾಲೋಚನೆ ನಡೆಸಲಾಗಿದೆ. ರಾಜ್ಯ ಸರ್ಕಾರವು ಅನುಷ್ಠಾನಗೊಳಿಸಿರುವ ಮಹತ್ವಾಕಾಂಕ್ಷಿ ಗ್ಯಾರಂಟಿ ಯೋಜನೆಗಳೊಂದಿಗೆ ಎಲ್ಲಾ ಅಭಿವೃದ್ಧಿ ಕಾರ್ಯಗಳಿಗೆ ಅಗತ್ಯವಿರುವ ಅನುದಾನವನ್ನು ಕಾಯ್ದಿರಿಸಲಾಗಿದೆ. ಗ್ಯಾರಂಟಿ ಯೋಜನೆಗಳ ಲಾಭ ಪಡೆದ ರಾಜ್ಯದ ನಿವಾಸಿಗಳಲ್ಲಿ ಸರ್ಕಾರದ ಪರವಾಗಿ ಸಕಾರಾತ್ಮಕ ಭಾವನೆ ಇದೆ ಎಂದವರು ನುಡಿದರು.
ಸಂವಿಧಾನದ ಆಶಯದಂತೆ ರಾಜ್ಯದಲ್ಲಿ ಸಮಾನತೆ ತರುವ ನಿಟ್ಟಿನಲ್ಲಿ ದಶಕಗಳ ಹಿಂದೆ ರಾಜ್ಯದಲ್ಲಿ ನಡೆಸಲಾಗಿದ್ದ ಆರ್ಥಿಕ, ಶೈಕ್ಷಣಿಕ ಗಣತಿ ಕಾರ್ಯದ ಬಗ್ಗೆ ಜನರಲ್ಲಿ ಅಭಿಪ್ರಾಯಬೇಧಗಳಿದ್ದು, ಪುನರ್‌ಸಮೀಕ್ಷೆ ನಡೆಸುವ ಬಗ್ಗೆಯೂ ಶೀಘ್ರದಲ್ಲಿ ನಡೆಯಲಿರುವ ಕ್ಯಾಬಿನೆಟ್‌ನಲ್ಲಿ ಒಳಮೀಸಲಾತಿ ವಿಷಯದ ಬಗ್ಗೆಯೂ ಚರ್ಚಿಸಲಾಗುವುದು ಎಂದವರು ನುಡಿದರು.
ಜಿಲ್ಲೆಯಲ್ಲಿರುವ ಮೆಗ್ಗಾನ್‌ಆಸ್ಪತ್ರೆಗೆ ಚಿಕಿತ್ಸೆಗಾಗಿ ಹೊರಜಿಲ್ಲೆಗಳ 26ತಾಲೂಕುಗಳಿಂದ ಬರುತ್ತಿದ್ದು, ನಿರೀಕ್ಷೆಗೆ ಮೀರಿದ ಜನಸಂಖ್ಯೆ ಬರುತ್ತಿದೆ. ಸಹಜವಾಗಿ ಇದರ ಮೇಲಿನ ಒತ್ತಡವೂ ಹೆಚ್ಚಾಗಿದೆ. ಆದ್ದರಿಂದ ಇರುವ ಆಸ್ಪತ್ರೆಯನ್ನು ಇನ್ನಷ್ಟು ಸುಸಜ್ಜಿತವಾಗಿ ರೂಪಿಸಲು 75-80ಕೋಟಿ ರೂ.ಗಳ ಅನುದಾನದ ಅಗತ್ಯವಿದ್ದು, ಬಿಡುಗಡೆಗೊಳಿಸುವಂತೆ ಉನ್ನತ ಶಿಕ್ಷಣ ಸಚಿವರಲ್ಲಿ ಈಗಾಗಲೆ ಮನವಿ ಮಾಡಿಕೊಳ್ಳಲಾಗಿದೆ. ಇಲ್ಲಿನ ಆಸ್ಪತ್ರೆಯಲ್ಲಿನ ಎಂ.ಆರ್.ಐ. ಯಂತ್ರ ಬಳಕೆಗೆ ಹೆಚ್ಚಿನ ಒತ್ತಡವಿದೆ. ಎಂ.ಸಿ.ಹೆಚ್.ಯೋಜನೆಯ ಮೂಲಕ ಟ್ರಾಮಾ, ಎಂ.ಆರ್.ಐ. ಘಟಕಗಳನ್ನು ಪ್ರತ್ಯೇಕವಾಗಿ ಸ್ಥಾಪಿಸಲು ಉದ್ದೇಶಿಸಲಾಗಿದೆ ಎಂದ ಅವರು, ಜಿಲ್ಲಾಸ್ಪತ್ರೆಯ ಅಭಿವೃದ್ದಿ ಮತ್ತಿತರ ವಿಷಯಗಳ ಕುರಿತು ವೈದ್ಯಕೀಯ ಶಿಕ್ಷಣ ಸಚಿವರು ಹಾಗೂ ಆರೋಗ್ಯ ಸಚಿವರೊಂದಿಗೆ ಸಮಾಲೋಚನೆ ನಡೆಸಲಾಗಿದ್ದು, ಹೊಸ ಜಿಲ್ಲಾಸ್ಪತ್ರೆ ನಿರ್ಮಾಣಕ್ಕೆ ಅಂದಾಜು 75ಕೋಟಿ ರೂ.ಗಳ ಅಗತ್ಯವಿದೆ. ಅಥವಾ ಈಗಿರುವ ಆಸ್ಪತ್ರೆಯ ಅಭಿವೃದ್ಧಿಗೆ 80ಕೋಟಿ ರೂ.ಗಳ ಅಂದಾಜು ಪ್ರಸ್ತಾವನೆಯನ್ನು ಸರ್ಕಾರದ ಮುಂದಿಡಲಾಗಿದೆ ಎಂದರು.
ನಗರದ ವಿಶಾಲವಾದ 12ಎಕರೆ ಭೂಪ್ರದೇಶದಲ್ಲಿ ಸುಸಜ್ಜಿತವಾಗಿ ಜಿಲ್ಲಾಧಿಕಾರಿಗಳ ಕಚೇರಿ, ಜಿಲ್ಲಾ ಪಂಚಾಯತ್‌ಕಚೇರಿ, ಜಿಲ್ಲಾ ಪೊಲೀಸ್‌ವರಿಷ್ಟಾಧಿಕಾರಿಗಳ ಕಚೇರಿಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದ್ದು, ಅಗತ್ಯವಿರುವ ಅನುದಾನವನ್ನು ಬಿಡುಗಡೆಗೊಳಿಸುವಂತೆ ಮಾನ್ಯ ಮುಖ್ಯಮಂತ್ರಿಗಳನ್ನು ಕೋರಲಾಗಿದೆ. ಅಂತೆಯೇ ಜಿಲ್ಲೆಯ ಪ್ರವಾಸೋದ್ಯಮದ ವಿಕಾಸಕ್ಕೆ ಅಗತ್ಯವಿರುವ ಅನುದಾನವನ್ನು ಕೋರಲಾಗಿದೆ
ಸೊರಬ ತಾಲೂಕಿನ ನೀರಾವರಿ ಯೋಜನೆಗಳಿಗೆ 300ಕೋಟಿ ರೂ. ಕುಡಿಯುವ ನೀರಿನ ಯೋಜನೆಗಳಿಗೆ 2000ಕೋ. ರೂ.ಗಳನ್ನು ಬಿಡುಗಡೆಗೊಳಿಸಲಾಗಿದ್ದು, ಈ ಕಾರ್ಯಕ್ರಮಗಳೊಂದಿಗೆ ಇನ್ನಷ್ಟು ಕಾರ್ಯಕ್ರಮಗಳನ್ನು ಉದ್ಘಾಟಿಸಲು ಅಕ್ಟೋಬರ್‌ಗೆ ಬರುವಂತೆ ಆಹ್ವಾನಿಸಲಾಗಿದೆ. ಪಂಚಾಯತ್‌ರಾಜ್‌ಇಲಾಖೆಯ ಪ್ರಗತಿಪಥ ಯೋಜನೆಯಡಿ ಜಿಲ್ಲೆಯಲ್ಲಿನ 162ಕಿ.ಮೀ. ಗ್ರಾಮೀಣ ರಸ್ತೆಗಳ ದುರಸ್ತಿ ಮತ್ತು ನೂತನ ರಸ್ತೆಗಳ ಗುಣಮಟ್ಟದ ನಿರ್ಮಾಣಕ್ಕೆ ಕ್ರಮವಹಿಸಲಾಗಿದೆ ಎಂದರು.
ರಾಜ್ಯದಲ್ಲಿ ಶಿಕ್ಷಣ ಇಲಾಖೆಯಡಿ ನಿರ್ವಹಿಸಲಾಗುತ್ತಿರುವ ಡಯಟ್‌ಕೇಂದ್ರಗಳನ್ನು ಅತ್ಯಾಧುನಿಕ ರೀತಿಯ ವ್ಯವಸ್ಥಿತ ಸ್ಟುಡಿಯೋವನ್ನಾಗಿ ಪರಿವರ್ತಿಸುವ ಕಾರ್ಯ ಪ್ರಗತಿಯಲ್ಲಿದೆ. ಅಲ್ಲದೇ ಡಯಟ್ ಉಪನ್ಯಾಸಕರಿಗೆ ಜಿಲ್ಲೆಯಲ್ಲಿನ ಹಿಂದುಳಿದ ಶಾಲೆಗಳ ಫಲಿತಾಂಶ ಸುಧಾರಣೆಯ ಜವಾಭ್ಧಾರಿಯನ್ನು ವಹಿಸಿಕೊಡಲಾಗುವುದು ಎಂದರು.
ಎಸ್.ಎಸ್.ಎಲ್.ಸಿ ನಂತರದ ರಾಜ್ಯದ 60000ವಿದ್ಯಾರ್ಥಿಗಳು ಐ.ಐ.ಟಿ. ನೀಟ್.ಜೆಇಇ. ಮುಂತಾದ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಭಾಗವಹಿಸಲು ಅನುಕೂಲವಾಗುವಂತೆ ರಾಜ್ಯದ ಎಲ್ಲಾ ಸರಕಾರಿ ಶಾಲೆಗಳಲ್ಲಿ ತರಬೇತಿ ತರಗತಿಗಳನ್ನು ನಡೆಸಲು ಕ್ರಮವಹಿಸಲಾಗಿದೆ. ಅದಕ್ಕಾಗಿ ಅಗತ್ಯವಿರುವ ಅನುದಾನವನ್ನು ಸರ್ಕಾರದಿಂದಲೇ ಭರಿಸಲಾಗುವುದು ಎಂದವರು ನುಡಿದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎನ್.ಹೇಮಂತ್, ಜಿಲ್ಲಾ ಪೊಲೀಸ್‌ವರಿಷ್ಠಾಧಿಕಾರಿ ಜಿ.ಕೆ.ಮಿಥುನಕುಮಾರ್, ವಿಧಾನ ಪರಿಷತ್‌ಸದಸ್ಯೆ ಶ್ರೀಮತಿ ಬಲ್ಕೀಸ್‌ಬಾನು, ಬೋವಿ ನಿಗಮದ ರಾಜ್ಯ ಅಧ್ಯಕ್ಷ ರವಿಕುಮಾರ್, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿಯ ಜಿಲ್ಲಾ ಅಧ್ಯಕ್ಷ ಚಂದ್ರಭೂಪಾಲ ಮತ್ತಿತರರು ಉಪಸ್ಥಿತರಿದ್ದರು.