ವಿದ್ಯಾರ್ಥಿಗಳು ಪುಸಕ್ತ ಓದುವ ಜೊತೆಗೆ ಸಾಮಾನ್ಯ ಜ್ಞಾನವನ್ನು ವೃದ್ಧಿಸಿಕೊಳ್ಳಬೇಕು – ಡಾ.ಧನಂಜಯ ಸರ್ಜಿ*

*ವಿದ್ಯಾರ್ಥಿಗಳು ಪುಸಕ್ತ ಓದುವ ಜೊತೆಗೆ ಸಾಮಾನ್ಯ ಜ್ಞಾನವನ್ನು ವೃದ್ಧಿಸಿಕೊಳ್ಳಬೇಕು – ಡಾ.ಧನಂಜಯ ಸರ್ಜಿ*

ಶಿವಮೊಗ್ಗ : ಊಟ ಹಾಳಾದರೆ ಒಂದು ದಿನದ ನಷ್ಟ, ಬೆಳೆ ಹಾಳಾದರೆ ಒಂದು ವರ್ಷದ ನಷ್ಟ, ವಿದ್ಯೆ ಹಾಳಾದರೆ ಇಡೀ ಜೀವನವೇ ನಷ್ಟ ಈ ನಿಟ್ಟಿನಲ್ಲಿ ವಿದ್ಯಾರ್ಥಿ ಜೀವನದಲ್ಲಿ ವಿದ್ಯಾರ್ಥಿಗಳು ಶ್ರದ್ಧೆಯಿಂದ ಜ್ಞಾನ ಸಂಪಾದಿಸಬೇಕು. ವಿದ್ಯಾರ್ಥಿಗಳು ಚೀಲದಲ್ಲಿ ತುಂಬಿರುವ ಭತ್ತದಂತಾಗದೇ, ಭತ್ತದ ಗದ್ದೆಗಳಾಗಿ ಬೆಳೆಯಬೇಕು ವಿದ್ಯಾರ್ಥಿಗಳು ಪುಸ್ತಕದಿಂದ ಮಸ್ತಕದತ್ತ ಸಾಗಬೇಕು. ಪುಸಕ್ತ ಓದುವ ಜೊತೆಗೆ ಸಮಾನ್ಯ ಜ್ಞಾನವನ್ನು ವೃದ್ಧಿಸಿಕೊಳ್ಳಬೇಕು ಎಂದು ವಿಧಾನ ಪರಿಷತ್ ಶಾಸಕ ಡಾ.ಧನಂಜಯ ಸರ್ಜಿ ಹೇಳಿದರು.

ಶಿವಮೊಗ್ಗ ನಗರದ ದುರ್ಗಿಗುಡಿ ಸರ್ಕಾರಿ ಪ್ರೌಢಶಾಲೆಯಲ್ಲಿ ಕನ್ನಡಪ್ರಭ ಪತ್ರಿಕೆ ವತಿಯಿಂದ ಮಂಗಳವಾರ ಆಯೋಜಿಸಲಾಗಿದ್ದ ಕನ್ನಡಪ್ರಭ ವಿದ್ಯಾರ್ಥಿ ಸಂಚಿಕೆ ಬಿಡುಗಡೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಜಗತ್ತಿನಲ್ಲಿ ಅನ್ನದಾನ ಶ್ರೇಷ್ಠ ದಾನ, ಅದಕ್ಕಿಂತಲೂ ದೊಡ್ಡ ದಾನ ಎಂದರೆ ವಿದ್ಯಾದಾನ, ಮುಂದಿನ ಭವಿಷ್ಯ ಉಜ್ವಲವಾಗಬೇಕಾದರೆ ಇಂದೇ ದೊಡ್ಡ ಗುರಿಯ ಕನಸು ಕಾಣಬೇಕು. ನಮ್ಮ ಕನಸು ಮುಂಜಾನೆಯ ನಿದ್ದೆಗಡಿಸುವಂತಿರಬೇಕು. ಆ ಕನಸಿಗೆ ನಿತ್ಯವೂ ಪ್ರಯತ್ನ ಎಂಬ ನೀರೆದರೆ ಯಶಸ್ಸಿನ ಹಾದಿ ಸುಲಭವಾಗುತ್ತದೆ. ವಿದ್ಯಾರ್ಥಿಗಳು ಓದಿನ ಶೈಲಿಯನ್ನು ಸ್ವಲ್ಪ ಬದಲಾವಣೆ ಮಾಡಿಕೊಂಡು ಸರಿಯಾದ ಓದಿನ ಮಾರ್ಗವನ್ನು ಅನುಸರಿಸಿದರೆ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಲು ಸುಲಭವಾಗುತ್ತದೆ. ಮುಖ್ಯವಾಗಿ ವಿದ್ಯಾರ್ಥಿಗಳು ಪ್ರಶ್ನೆಗಳನ್ನು ಹಾಕಿಕೊಳ್ಳಬೇಕು. ಆ ಪ್ರಶ್ನೆಗಳಿಗೆ ಉತ್ತರವನ್ನು ಕಂಡುಕೊಳ್ಳುತ್ತಾ ಸಾಗಿದರೆ ಯಶಸ್ಸು ನಮ್ಮದಾಗುತ್ತದೆ ಎಂದು ಸಲಹೆ ನೀಡಿದರು. ತಂತ್ರಜ್ಞಾನ ಇಂದು ಬಹಳ ಮುಂದುವರೆದಿದೆ ವಿದ್ಯೆಯ ಜೊತೆ ಬುದ್ದಿಯನ್ನು ಕೂಡ ಉಪಯೋಗಿಸಬೇಕು ಓದು ಒಕ್ಕಾಲು, ಬುದ್ದಿ ಮುಕ್ಕಾಲು, ಓದು ಕೆಲಸ ಮಾಡಿತು ಬುದ್ದಿ ದೇಶ ಆಳಿತು ಎಂಬಂತೆ ನಮ್ಮಲ್ಲಿ ವಿದ್ಯೆ 25% ಇದ್ರೆ ಬುದ್ದಿ 75% ಇದೆ. ದಿನ ನಿತ್ಯ ಪತ್ರಿಕೆಗಳನ್ನು ಓದುವದನ್ನು ರೂಢಿಮಾಡಿಕೊಳ್ಳಬೇಕು ಇದರಿಂದ ನೀವು ಜಾಗತಿಕ ಮಾಹಿತಿ, ಪ್ರಚಲಿತ ಘಟನೆಗಳು ತಿಳಿಯುತ್ತದೆ ಎಂದರು.

ಕನ್ನಡಪ್ರಭ ಶಿವಮೊಗ್ಗ ಜಿಲ್ಲಾ ವಿಶೇಷ ವರದಿಗಾರರಾದ ಗೋಪಾಲ್ ಯಡೆಗೆರೆ ಅವರು ಮಾತನಾಡಿ, ನಮ್ಮ ಸುತ್ತಮುತ್ತಲಿನಲ್ಲೇ ಅನೇಕ ಸಾಧಕರು ಇದ್ದಾರೆ. ಅವರೊಂದಿಗೆ ಸ್ನೇಹ ಸಾಧ್ಯವಾಗದಿದ್ದರೂ ಅವರ ಸಂಪರ್ಕದಲ್ಲಿದ್ದರೆ ತಮಗೆ ಗೊತ್ತಿಲ್ಲದ ವಿಷಯಗಳನ್ನು ತಿಳಿದುಕೊಳ್ಳಬಹುದು. ವಿದ್ಯಾರ್ಥಿಗಳಲ್ಲಿ ಓದಿನ ಉತ್ಸಾಹದ ಜೊತೆಗೆ ಜ್ಞಾನ ಸಂಪಾದನೆಯ ಹಂಬಲವೂ ಇರಬೇಕು. ನಾವು ಪಡೆದ ಶಿಕ್ಷಣದಿಂದ ಉದ್ಯೋಗ ಪಡೆದುಕೊಂಡು ಒಂದು ಕುಟುಂಬ ನಿರ್ವಹಣೆಗಷ್ಟೇ ಸೀಮಿತವಾಗಬಾರದು. ಸಮಾಜದ ಕೊಡುಗೆ ನೀಡುವ ಮೂಲಕ ಸಮಾಜ ಆಸ್ತಿಗಳಾಗಿ ಬೆಳೆಯಬೇಕು ಈ ನಿಟ್ಟಿನಲ್ಲಿ ಕನ್ನಡ ಪ್ರಭ ಪತ್ರಿಕೆ ವಿದ್ಯಾರ್ಥಿಗಳಿಗೆ ಉಪಯೋಗವಾಗಲು ಮುಖ್ಯವಾಗಿ ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ಮಕ್ಕಳಿಗೆ ದಿನ ನಿತ್ಯ ಪ್ರಶ್ನೆಪತ್ರಿಕೆಗಳು, ಸಾಧಕರ ಯಶೋಗಾತೆ, ಸ್ಪೂರ್ತಿದಾಯಕ ಕಥೆಗಳು ಪ್ರಕಟಗೊಳ್ಳುವುದರಿಂದ ನಾಡಿನ ವಿದ್ಯಾರ್ಥಿಗಳಿಗೆ ಕೇವಲ 1 ರೂಪಾಯಿಯಲ್ಲಿ ಕನ್ನಡ ಪ್ರಭ ವಿದ್ಯಾರ್ಥಿ ಸಂಚಿಕೆ ದೊರೆಯುತ್ತಿದೆ, ಡಾ.ಧನಂಜಯ ಸರ್ಜಿ ಅವರು ವಿದ್ಯಾರ್ಥಿಗಳಿಗೆ ಉಚಿತವಾಗಿ ಈ ಪತ್ರಿಕೆ ಸಿಗಲಿ ಎನ್ನುವ ಕಾರಣದಿಂದಾಗಿ ನಗರದ ಮೂರೂ ಶಾಲೆಯ ವಿದ್ಯಾರ್ಥಿಗಳಿಗೆ ಉಚಿತವಾಗಿ ಸಿಗುವಂತೆ ಮಾಡಿದ್ದಾರೆ. ಇದನ್ನು ವಿದ್ಯಾರ್ಥಿಗಳು ಒಳ್ಳೆಯ ರೀತಿಯಲ್ಲಿ ಉಪಯೋಗ ಮಾಡಿಕೊಳ್ಳಬೇಕು ಎಂದು ಹೇಳಿದರು.

ಈ ವೇಳೆ ಕಾರ್ಯಕ್ರಮದಲ್ಲಿ ಸರ್ಕಾರಿ ಪ್ರೌಢಶಾಲೆಯ ಮುಖ್ಯಶಿಕ್ಷಕರಾದ ಮೋಹನ್ , ಸರ್ಜಿ ಸಮೂಹ ಸಂಸ್ಥೆಯ ನಿರ್ದೇಶಕರಾದ ಶ್ರೀಮತಿ ನಮಿತಾ ಧನಂಜಯ ಸರ್ಜಿ , ಈಶ್ವರ್ ಸರ್ಜಿ, ಸರ್ಜಿ ಸಮೂಹ ಸಂಸ್ಥೆ ಆಡಳಿತಾಧಿಕಾರಿಗಳಾದ ಮುರುಳೀಧರ್ ರಾವ್ ಕುಲಕರ್ಣಿ, ಕನ್ನಡಪ್ರಭ ಜಾಹಿರಾತು ವಿಭಾಗದ ಸಿ.ಕಾರ್ತಿಕ್‌, ಪ್ರಸರಣ ವಿಭಾಗದ ಎಸ್‌.ಕೆ.ಸಂಚಿತ್‌ ಮತ್ತಿತರರು ಉಪಸ್ಥಿತರಿದ್ದರು.