ಪತ್ರಿಕಾಗೋಷ್ಠಿಯಲ್ಲಿ ಮ್ಯಾಕ್ಸ್ ಆಸ್ಪತ್ರೆ ತಂಡ* *ಅತ್ಯಂತ ಕ್ಲಿಷ್ಟಕರ ಸರ್ಜರಿಯಲ್ಲಿ ಮಾಕ್ಸ್ ಆಸ್ಪತ್ರೆ ವೈದ್ಯರ ಯಶಸ್ಸು* *ಉಳಿಯಿತು ಸಾವಿನಂಚಿನಲ್ಲಿದ್ದ ಮಹಿಳೆ ಪ್ರಾಣ*
*ಪತ್ರಿಕಾಗೋಷ್ಠಿಯಲ್ಲಿ ಮ್ಯಾಕ್ಸ್ ಆಸ್ಪತ್ರೆ ತಂಡ*
*ಅತ್ಯಂತ ಕ್ಲಿಷ್ಟಕರ ಸರ್ಜರಿಯಲ್ಲಿ ಮಾಕ್ಸ್ ಆಸ್ಪತ್ರೆ ವೈದ್ಯರ ಯಶಸ್ಸು*
*ಉಳಿಯಿತು ಸಾವಿನಂಚಿನಲ್ಲಿದ್ದ ಮಹಿಳೆ ಪ್ರಾಣ*

ಶಿವಮೊಗ್ಗ: ಗಂಭೀರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಾ ಸಾವಿನ ಅಂಚಿನಲ್ಲಿದ್ದ ಮಹಿಳೆಗಾಗಿ ನಗರದ ದುರ್ಗಿಗುಡಿ ಮ್ಯಾಕ್ಸ್ ಆಸ್ಪತ್ರೆ ವೈದ್ಯರು ಸಮಯದ ಜೊತೆ ಸ್ಪರ್ಧೆ ಮಾಡಿ ಆಕೆಯನ್ನು ಸಾವಿನ ದವಡೆಯಿಂದ ಕಾಪಾಡಿದ್ದಾರೆ.
ಸುಮಾರು 35 ವಯಸ್ಸಿನ ಮಹಿಳೆಗೆ ಅಪರೂಪ ಮತ್ತು ಗಂಭೀರವಾದ ಮಹಾಪಧಮನಿ ತುರ್ತು ಶಸ್ತ್ರಚಿಕಿತ್ಸೆಯನ್ನು ಡಾ.ಸುಧೀರ್ ಭಟ್ ಮತ್ತು ತಂಡ ನಡೆಸಿದ್ದು, ಇದರಲ್ಲಿ ಯಶಸ್ವಿಯಾಗುವ ಮೂಲಕ ಅಪ್ರತಿಮ ಸಾಧನೆ ಮಾಡಿದ್ದಾರೆ.
*ಏನಿದು ಪ್ರಕರಣ?*
ಸುಮಾರು 35 ವರ್ಷದ ಮಹಿಳೆ ತೀವ್ರವಾದ ಹೊಟ್ಟೆ ನೋವಿನಿಂದ ಇದ್ದಕ್ಕಿದ್ದಂತೆ ಬಳಲ ತೊಡಗಿದ್ದರು. ಇದರಿಂದ ಆಕೆಗೆ ಸಹಿಸಲು ಅಸಾಧ್ಯವಾದ ನೋವು ಕಾಣಿಸಿಕೊಂಡಿದ್ದು, ಅವರನ್ನು ನಗರದ ದುರ್ಗಿಗುಡಿಯಲ್ಲಿರುವ ಮ್ಯಾಕ್ಸ್ ಆಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗಕ್ಕೆ ಕರೆ ತಂದರು.
ಉದರ ಶಸ್ತ್ರಚಿಕಿತ್ಸಾ ತಜ್ಞರು ಅವರನ್ನು ತಪಾಸಣೆ ಮಾಡಿದಾಗ ಆಘಾತಕಾರಿ ಸುದ್ದಿ ಕಾದಿತ್ತು. ಅವರ ದೇಹದ ಅತ್ಯಂತ ಪ್ರಮುಖ ರಕ್ತನಾಳ (aorta), ಊದಿಕೊಂಡು ಒಡೆದು ಹೋಗಿತ್ತು. ಅದರ ಪರಿಣಾಮವಾಗಿ ತೀವ್ರ ಸ್ವರೂಪದ ರಕ್ತಸ್ರಾವ ಅವರನ್ನು ಅವರನ್ನು ಜೀವಾಪಾಯಕ್ಕೆ ದೂಡಿತ್ತು. ಪ್ರತಿಕ್ಷಣವೂ ಸಹ ಅಮೂಲ್ಯವಾಗಿತ್ತು. ನೋಡ ನೋಡುತ್ತಿದ್ದಂತೆಯೇ ರೋಗಿಯ ರಕ್ತದೊತ್ತಡ ಕಡಿಮೆಯಾಗುತ್ತಿತ್ತು.
ಆಗ ಮ್ಯಾಕ್ಸ್ ಆಸ್ಪತ್ರೆಯ ಹಿರಿಯ ಅನುಭವಿ ಹೃದ್ರೋಗ ಶಸ್ತ್ರಚಿಕಿತ್ಸಕರಾದ ಡಾ.ಸುಧೀರ್ ಭಟ್ ರವರ ನೇತೃತ್ವದ ವೈದ್ಯರ ತಂಡ ತುರ್ತು ಶಸ್ತ್ರಚಿಕಿತ್ಸೆಯ ನಿರ್ಧಾರವನ್ನು ಕೈಗೊಂಡಿತು. ಪರಿಸ್ಥಿತಿಯ ಗಂಭೀರತೆಯನ್ನು ರೋಗಿಯ ಸಂಬಂಧಿಗಳಿಗೆ ವಿವರಿಸಿದಾಗ ಅವರೂ ಸಹ ತುರ್ತು ಶಸ್ತ್ರಚಿಕಿತ್ಸೆಗೆ ಸಮ್ಮತಿಸಿದರು.
ಕ್ಷಣಕ್ಷಣಕ್ಕೂ ರಕ್ತದೊತ್ತಡ ಕಡಿಮೆಯಾಗುತ್ತಿತ್ತು. ರಕ್ತಸ್ರಾವದ ಹಿಮೋಗ್ಲೋಬಿನ್ ಕಡಿಮೆಯಾಗಿತ್ತು. ತಕ್ಷಣವೇ ರಕ್ತಟ್ರಾನ್ಸೂಷನ್ ಮಾಡಿ ರಕ್ತದ ಒತ್ತಡವನ್ನು ಮೇಲೆ ತರುವ ಹಾಗೂ ಶಸ್ತ್ರಚಿಕಿತ್ಸೆಯವರೆಗೆ ಜೀವ ಉಳಿಸುವ ಹೊಣೆ ಅರಿವಳಿಕೆ ತಜ್ಞರಾದ ಡಾ. ಶ್ರೀನಿವಾಸ್ ಮತ್ತು ಡಾ.ಶಿವಕುಮಾರ್ ಹೊತ್ತುಕೊಂಡರು.
ತದನಂತರ ಕ್ಲಿಷ್ಟಕರವಾದ ಸುಧೀರ್ಘ ಶಸ್ತ್ರಚಿಕಿತ್ಸೆಯನ್ನು ಡಾ. ಸುಧೀರ್ ಭಟ್, ಡಾ.ರಾಕೇಶ್ ಮತ್ತು ತಂಡ ನಡೆಸಿತು. ಉದರ ಶಸ್ತ್ರಚಿಕಿತ್ಸಕರಾದ ಡಾ.ಪ್ರಸನ್ನ ಬಸವರಾಜ್ ಮತ್ತು ಯುರಾಲಜಿಸ್ಟ್ ಡಾ. ರಾಕೇಶ್ ಬಿಸಿಲೆಹಳ್ಳಿ ಸಹ ಈ ಸಂಕೀರ್ಣ ಚಿಕಿತ್ಸೆಯ ಭಾಗವಾಗಿದ್ದರು.
ಸುಮಾರು 5 ಗಂಟೆಯ ಶಸ್ತ್ರಚಿಕಿತ್ಸೆಯ ನಂತರ ರೋಗಿ ಅಪಾಯದಿಂದ ಪಾರಾಗಿ ಗುಣ ಮುಖರಾಗುವತ್ತ ಹೊರಳಿದರು. ಇಲ್ಲಿಯವರೆಗೆ ಹೋರಾಟದ ಮೊದಲ ಹಾಗೂ ಅತಿಮುಖ್ಯ ಮಜಲು ದಾಟಿಯಾಗಿತ್ತು. ಅನಂತರ ರೋಗಿಗೆ ಶಸ್ತ್ರಚಿಕಿತ್ಸೆಯ ನಂತರದ ತೀವ್ರ ನಿಗಾ ಅವಶ್ಯಕವಿತ್ತು. ಇನ್ಟೆನ್ಸಿವ್ ಕೇರ್ ತಜ್ಞರ ಉಸ್ತುವಾರಿಯಲ್ಲಿ ಅಂತಿಮವಾಗಿ ಈ ಘಟ್ಟವನ್ನೂ ಸಹ ದಾಟಿ ರೋಗಿ ನಿಶ್ಚಿತ ಮೃತ್ಯುನಿಂದ ಪಾರಾಗಿ ಗುಣಮುಖರಾದರು.
ಡಾ. ನಾಗೇಂದ್ರ ಅವರ ನೇತೃತ್ವದ ಮ್ಯಾಕ್ಸ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಎಲ್ಲಾ ರೀತಿಯ ಟ್ರೆರ್ಷಿಯರಿ ಚಿಕಿತ್ಸೆಗಳಲ್ಲಿ ಕಳೆದ ಹತ್ತು ವರ್ಷಗಳಿಂದ ತೊಡಗಿಕೊಂಡಿದ್ದಾರೆ.
*ಏನಿದು ಗಂಭೀರ ಆರೋಗ್ಯ ಸಮಸ್ಯೆ?*
ಅಯೋರ್ಟ ಅಥವಾ ಮಹಾ ಅಪಧಮನಿಯು ಹೃದಯದಿಂದ ರಕ್ತವನ್ನು ದೇಹದ ಎಲ್ಲಾ ಭಾಗಗಳಿಗೂ ಸರಬರಾಜು ಮಾಡುವ ರಕ್ತನಾಳ. ದೇಹದ ಎಲ್ಲಾ ನಾಳಗಳಲ್ಲಿ ಇದು ಅತ್ಯಂತ ಪ್ರಮುಖವಾದದ್ದು. ಕೆಲವು ಸಂದರ್ಭಗಳಲ್ಲಿ ಈ ರಕ್ತನಾಳದ ಗೋಡೆ ದುರ್ಬಲವಾಗುತ್ತದೆ. ಅಂತಹ ಸಂದರ್ಭಗಳಲ್ಲಿ ಸಹಜವಾದ ರಕ್ತದ ಒತ್ತಡದಲ್ಲಿ ಕೂಡ ಅಯೋರ್ಟ ರಕ್ತನಾಳದ ಒಂದು ಭಾಗ ಊದಿಕೊಳ್ಳುತ್ತದೆ.
ಹೀಗೆ ರಕ್ತನಾಳದ ಗೋಡೆ ಬಲೂನಿನಂತೆ ಹಿಗ್ಗುತ್ತ ಹೋಗಿ ಕೊನೆಯಲ್ಲಿ ಒಡೆದು ಹೋಗ ಬಹುದು.
ಸಾಧಾರಣವಾಗಿ ಅಂತಹ ಘಟ್ಟವನ್ನು ಮುಟ್ಟುವ ಮೊದಲು ರೋಗ ಪತ್ತೆಯಾದರೆ ಅದನ್ನು ಶಸ್ತ್ರಚಿಕಿತ್ಸೆಯಿಂದ ಗುಣಮಾಡಬಹುದು. ಈ ಸಂದರ್ಭದಲ್ಲಿ ರೋಗಿಗೆ ಯಾವುದೇ ಕಾಯಿಲೆಯ ಲಕ್ಷಣ ಗಮನಕ್ಕೆ ಬಾರದ ಕಾರಣ ಕೊನೆಯ ಹಂತದಲ್ಲಿ ತುರ್ತು ಶಸ್ತ್ರಚಿಕಿತ್ಸೆ ಅವಶ್ಯವಾಗಿರುತ್ತದೆ.
ಪತ್ರಿಕಾಕೋಷ್ಠಿಯಲ್ಲಿ ಮ್ಯಾಕ್ಸ್ ಆಸ್ಪತ್ರೆಯ ಮುಖ್ಯ ಕಾರ್ಯ ನಿರ್ವಾಹಕ ನಿರ್ದೇಶಕರಾದ ಲತಾ ನಾಗೇಂದ್ರ, ಸುಬ್ಬಯ್ಯ ದಂತವೈದ್ಯಕೀಯ ವಿದ್ಯಾಲಯದ ಕಾರ್ಯ ನಿರ್ವಾಹಕ ನಿರ್ದೇಶಕರಾದ ಡಾ. ವಿನಯಾ ಶ್ರೀನಿವಾಸ್, ಮ್ಯಾಕ್ಸ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಹೃದ್ರೋಗ ವಿಭಾಗದ ಡಾ. ಸುಧೀರ್ ಭಟ್, ಮ್ಯಾಕ್ಸ್ ವೈದ್ಯಕೀಯ ಅಧೀಕ್ಷಕರಾದ ಡಾ. ನಾರಾಯಣ ಪಂಜಿ. ಮುಖ್ಯ ಆಡಳಿತ ವೈದ್ಯಾಧಿಕಾರಿ ಡಾ. ಕೌಶಿಕ್, ಅರವಳಿಕೆ ತಜ್ಞ ಡಾ. ಶ್ರೀನಿವಾಸ್, ಹೃದ್ರೋಗ ಶಸ್ತ್ರಚಿಕಿತ್ಸಾ ತಜ್ಞ ಡಾ. ರಾಕೇಶ್ ಮೊದಲಾದವರು ಉಪಸ್ಥಿತರಿದ್ದರು.