ಸೂಡಾ ಅಧ್ಯಕ್ಷರಾದ ಹೆಚ್.ಎಸ್.ಸುಂದರೇಶ್ ಪತ್ರಿಕಾಗೋಷ್ಠಿ ಗೋಪಶೆಟ್ಟಿಕೊಪ್ಪದಲ್ಲಿ ಬಡಾವಣೆ ಅಭಿವೃದ್ಧಿಪಡಿಸುವ ಕಾರ್ಯ ಶೀಘ್ರ ಕಾರ್ಯಾರಂಭ ಏನೆಲ್ಲ ಹೇಳಿದರು ಅಧ್ಯಕ್ಷರು?
ಸೂಡಾ ಅಧ್ಯಕ್ಷರಾದ ಹೆಚ್.ಎಸ್.ಸುಂದರೇಶ್ ಪತ್ರಿಕಾಗೋಷ್ಠಿ
ಗೋಪಶೆಟ್ಟಿಕೊಪ್ಪದಲ್ಲಿ ಬಡಾವಣೆ ಅಭಿವೃದ್ಧಿಪಡಿಸುವ ಕಾರ್ಯ ಶೀಘ್ರ ಕಾರ್ಯಾರಂಭ
ಏನೆಲ್ಲ ಹೇಳಿದರು ಅಧ್ಯಕ್ಷರು?
ಶಿವಮೊಗ್ಗ ನಗರದ ಹೊರವಲಯದಲ್ಲಿರುವ ಗೋಪಶೆಟ್ಟಿಕೊಪ್ಪ ಗ್ರಾಮದ ವಿವಿಧ ಸ.ನಂ.ಗಳ 104 ಎಕರೆ ಭೂಪ್ರದೇಶದ ಪೈಕಿ ಶೇ.50:50ರ ಅನುಪಾತದಲ್ಲಿ ಒಪ್ಪಿಗೆ ಸೂಚಿಸಿರುವ 30 ಎಕರೆ ಜಮೀನನ್ನು ಮೊದಲ ಹಂತದಲ್ಲಿ ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದ್ದು, ಸರ್ಕಾರದ ಪೂರ್ವಾನುಮೋದನೆಗಾಗಿ ಸಲ್ಲಿಸಲಾಗಿದೆ ಎಂದು ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಹೆಚ್.ಎಸ್.ಸುಂದರೇಶ್‌ಅವರು ಹೇಳಿದರು.
ಅವರು ಇಂದು ತಮ್ಮ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾಧ್ಯಮ ಪ್ರತಿನಿಧಿಗಳಿಗೆ ವಿವರ ನೀಡಿ ಮಾತನಾಡುತ್ತಿದ್ದರು.
ಸದರಿ ಪ್ರದೇಶದಲ್ಲಿನ ಉಳಿದ ಭೂಪ್ರದೇಶವನ್ನು ಪರಿವರ್ತಿಸಲೂ ಸಹ ಸರ್ಕಾರದಿಂದ ಒತ್ತಡವಿದ್ದು, ಪ್ರಕ್ರಿಯೇ ಶೀಘ್ರದಲ್ಲಿ ಪೂರ್ಣಗೊಳಿಸಲಾಗುವುದು ಎಂದ ಅವರು, ಕೆಲವು ದಶಕಗಳ ಹಿಂದೆ ಸೂಡಾ ವ್ಯಾಪ್ತಿಯ ಭದ್ರಾವತಿ ಪಟ್ಟಣದಲ್ಲಿ ಸ್ವಾದೀನಪಡಿಸಿಕೊಂಡಿರುವ 34ಎಕರೆ ಜಮೀನನ್ನು ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದ್ದು, ಶೀಘ್ರದಲ್ಲಿ ಕಾರ್ಯಾರಂಭಿಸಲಾಗುವುದು ಎಂದವರು ನುಡಿದರು.
ಪ್ರಾಧಿಕಾರದ ವ್ಯಾಪ್ತಿಯಲ್ಲಿ ಮಹಾಯೋಜನೆ-11ರ ಕಾರ್ಯ ಪ್ರಗತಿಯಲ್ಲಿದ್ದು, ಹಾಲಿ ಭೂಉಪಯೋಗ ನಕ್ಷೆಗಳನ್ನು ತಯಾರಿಸಿ ಪ್ರಾಧಿಕಾರದಿಂದ ಅನುಮೋದಿಸಲಾಗಿರುತ್ತದೆ. ಪ್ರಸ್ತಾವಿತ ಭೂ ಉಪಯೋಗ ನಕ್ಷೆ. ರಸ್ತೆ ಪರಿಚಲನ ನಕ್ಷೆಗಳನ್ನು ಸಿದ್ದಪಡಿಸಿ ತಾತ್ಕಾಲಿಕ ಅನುಮೋದನೆ ಪಡೆಯಲು ಸರ್ಕಾರಕ್ಕೆ ಸಲ್ಲಿಸಲು ಪ್ರಸ್ತಾವನೆಯನ್ನು ಸಿದ್ದಪಡಿಸಲಾಗಿದೆ ಎಂದವರು ನುಡಿದರು.
ಊರಗಡೂರಿನ ವಸತಿ ಬಡಾವಣೆಯಲ್ಲಿ 04 ಎಕರೆ ಪ್ರದೇಶದಲ್ಲಿ ಮತ್ತು ಸೋಮಿನಕೊಪ್ಪದಲ್ಲಿ ಜನಸಾಮಾನ್ಯರಿಗೆ ಕೈಗೆಟುಕುವ ದರದಲ್ಲಿ ಅತ್ಯಾಧುನಿಕ ಸೌಲಭ್ಯಗಳನ್ನೊಳಗೊಂಡ ಅಪಾರ್ಟ್‌ಮೆಂಟ್‌ಗಳನ್ನು ರೂ. 10000.00 ಲಕ್ಷಗಳ ಅಂದಾಜುಮೊತ್ತದಲ್ಲಿ ನಿರ್ಮಿಸಲು ಉದ್ದೇಶಿಸಲಾಗಿದೆ. ಸ್ವಾಮಿ ವಿವೇಕಾನಂದ ಬಡಾವಣೆಯ ಮಹಿಳಾ ಪಾಲಿಟೆಕ್ನಿಕ್ ಕಾಲೇಜು ಪಕ್ಕದಲ್ಲಿ ರೂ. 1000.00 ಲಕ್ಷಗಳ ಅಂದಾಜು ಮೊತ್ತದಲ್ಲಿ ಮಾಲ್ ನಿರ್ಮಿಸಲು ಉದ್ದೇಶಿಸಲಾಗಿದೆ. ಜೆ.ಹೆಚ್ ಪಟೇಲ್ ಬಡಾವಣೆಯ ಸೋಮಿನಕೊಪ್ಪ ಮುಖ್ಯರಸ್ತೆಯಲ್ಲಿಯೂ ವಾಣಿಜ್ಯ ಸಂಕೀರ್ಣ ನಿರ್ಮಿಸಲು ಉದ್ದೇಶಿಸಲಾಗಿದೆ ಎಂದರು.
ಶಿವಮೊಗ್ಗ ನಗರದ ಯೋಜನಾ ಪ್ರದೇಶದ 320.00 ಲಕ್ಷಗಳ ವೆಚ್ಚದಲ್ಲಿ ವ್ಯಾಪ್ತಿಯಲ್ಲಿ 4 ಕೆರೆಗಳನ್ನು ಅಭಿವೃದ್ಧಿಪಡಿಸುವ ಕಾರ್ಯ ಪ್ರಗತಿಯಲ್ಲಿದೆ ಶಿವಮೊಗ್ಗ ಮತ್ತು ಭದ್ರಾವತಿ ನಗರದಲ್ಲಿ 5000.00 ಲಕ್ಷಗಳ ವೆಚ್ಚದಲ್ಲಿ 22 ಕೆರೆಗಳನ್ನು ಅಭಿವೃದ್ಧಿಪಡಿಸಲು ಡಿ.ಪಿ.ಆರ್. ತಯಾರಿಸಲಾಗುತ್ತಿದೆ. ಶಿವಮೊಗ್ಗ ನಗರದ ಹೊರ ವರ್ತುಲ ರಸ್ತೆ ಅಭಿವೃದ್ಧಿಪಡಿಸಲು ಮತ್ತು ಶಿವಮೊಗ್ಗ ನಗರದ 3 ಮತ್ತು ಭದ್ರಾವತಿ ನಗರದ 3 ವೃತ್ತಗಳನ್ನು 4000.00 ಲಕ್ಷಗಳ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುವುದು ಎಂದರು.
ಪ್ರಾಧಿಕಾರದ ಅಟಲ್ ಬಿಹಾರಿ ವಾಜಪೇಯಿ ಬಡಾವಣೆಯಲ್ಲಿ 60 ಮೀ. ಅಗಲದ ಹೊರವರ್ತುಲ ರಸ್ತೆಯನ್ನು ರೂ.500.00 ಲಕ್ಷಗಳ ವೆಚ್ಚದಲ್ಲಿ ಅಭಿವೃದ್ಧಿಪಡಿಸಲು ಹಾಗೂ ಜೆ.ಹೆಚ್.ಪಟೇಲ್ ಬಡಾವಣೆ ಅಟಲ್ ಬಿಹಾರಿ ವಾಜಪೇಯಿ ಬಡಾವಣೆ ಮತ್ತು ನಿಧಿಗೆ-ಮಾಚೇನಹಳ್ಳಿ ಬಡಾವಣೆಯಲ್ಲಿ ಒಟ್ಟು 3 ಉದ್ಯಾನವನಗಳ ಅಭಿವೃದ್ಧಿಪಡಿಸಲು ಒಟ್ಟು ರೂ. 295.00 ಲಕ್ಷಗಳ ಅಂದಾಜು ಮೊತ್ತದಲ್ಲಿ ಈಗಾಗಲೇ ಟೆಂಡರ್ ಕರೆಯಲಾಗಿದೆ. ಪ್ರಾಧಿಕಾರದ ಸ್ಥಳೀಯ ಯೋಜನಾ ಪ್ರದೇಶದ ವ್ಯಾಪ್ತಿಯಲ್ಲಿ ಶಿವಮೊಗ್ಗ ಮತ್ತು ಭದ್ರಾವತಿ ನಗರದಲ್ಲಿ ಒಟ್ಟು 57 ಉದ್ಯಾನವನಗಳು ಹಾಗೂ 25 ಆಟೋ ಶೆಲ್ಡರ್‌ಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ. ಅಲ್ಲದೇ ಪ್ರಾಧಿಕಾರಕ್ಕೆ ಅಟಲ್ ಬಿಹಾರಿ ವಾಜಪೇಯಿ (ಮಲ್ಲಿಗೇನಹಳ್ಳಿ) ವಸತಿ ಬಡಾವಣೆಯಲ್ಲಿ ಹೊಸ ಕಛೇರಿ ಕಟ್ಟಡವನ್ನು ರೂ. 1000.00 ಲಕ್ಷಗಳ ಅಂದಾಜು ಮೊತ್ತದಲ್ಲಿ ನಿರ್ಮಿಸಲು ಉದ್ದೇಶಿಸಲಾಗಿದೆ. ಪ್ರಾಧಿಕಾರದ ಸ್ಥಳೀಯ ಯೋಜನಾ ಪ್ರದೇಶದ ವ್ಯಾಪ್ತಿಯಲ್ಲಿ ರೂ. 50.00 ಲಕ್ಷಗಳ ಅಂದಾಜುಮೊತ್ತದಲ್ಲಿ ಸ್ವಾಗತ ಕಮಾನು ನಿರ್ಮಿಸಲು ಉದ್ದೇಶಿಸಲಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಸೂಡಾ ಆಯುಕ್ತ ವಿಶ್ವನಾಥ ಮುದ್ದಜ್ಜಿ, ಸದಸ್ಯರಾದ ರವಿಕುಮಾರ್‌ಹೆಚ್.ಚನ್ನಪ್ಪ ಮತ್ತಿತರರು ಉಪಸ್ಥಿತರಿದ್ದರು.