ಧರ್ಮಸ್ಥಳ ಕೇಸ್: ಬಂಧಿತ ಮಾಸ್ಕ್‌ಮ್ಯಾನ್ ಸಿಎನ್ ಚಿನ್ನಯ್ಯ ಯಾರು?*
*ಧರ್ಮಸ್ಥಳ ಕೇಸ್: ಬಂಧಿತ ಮಾಸ್ಕ್‌ಮ್ಯಾನ್ ಸಿಎನ್ ಚಿನ್ನಯ್ಯ ಯಾರು?*
ಧರ್ಮಸ್ಥಳದಲ್ಲಿ (Dharmasthala case) ಶವಗಳನ್ನ ಹೂತಿಟ್ಟ ಆರೋಪ ರಾಜಕೀಯ ತಿರುವು ಪಡೆದುಕೊಂಡಿದೆ. ಇತ್ತ ಬಿಜೆಪಿ ಧರ್ಮದ ಉಳಿವಿಗಾಗಿ ಧರ್ಮಯುದ್ಧ ಎಂಬ ಚಳವಳಿ ಶುರುಮಾಡಿದೆ. ಈ ಮಧ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವ ಬೆಳವಣಿಗೆಯೊಂದು ನಡೆದಿದೆ. ಸಾಕ್ಷಿದಾರನಾಗಿ ಬಂದಿದ್ದ ಅನಾಮಿಕ ಮಾಸ್ಕ್‌ಮ್ಯಾನ್ (Masked man) ನನ್ನು ಇದೀಗ ಎಸ್ಐಟಿ ಅಧಿಕಾರಿಗಳು ಬಂಧಿಸಿದ್ದಾರೆ. ಸಿಎನ್ ಚಿನ್ನಯ್ಯ ಅಲಿಯಾಸ್ ಚೆನ್ನ ಬಂಧಿತ ಆರೋಪಿ. ಈ ಮಾಸ್ಕ್‌ಮ್ಯಾನ್ ಯಾರು, ಎಲ್ಲಿಯವನು ಎಂದು ಸಾಕಷ್ಟು ಚರ್ಚೆಗಳು ನಡೆದಿದ್ದವು. ಸ್ವತಃ ಎಸ್ಐಟಿ ಅಧಿಕಾರಿಗಳು ದಾಖಲೆ ಸಮೇತ ಈತ ಮಂಡ್ಯದ ಚಿಕ್ಕಬಳ್ಳಿ ಗ್ರಾಮದವನು ಎಂದು ಬಯಲು ಮಾಡಿದ್ದಾರೆ.
ಧರ್ಮಸ್ಥಳದ ಸುತ್ತ ಎದ್ದಿರುವ ಇಷ್ಟು ದೊಡ್ಡ ವಿವಾದದ ಕೇಂದ್ರ ಬಿಂದುವೇ ಮಾಸ್ಕ್‌ಮ್ಯಾನ್ ಆಗಿದ್ದ. ಅಕ್ರಮವಾಗಿ ನೂರಾರು ಹೆಣಗಳನ್ನ ಹೂತಿದ್ದೇನೆ ಅಂತಾ ಮಾಡಿದ್ದ ಆರೋಪ ದೇಶದಲ್ಲೇ ಸಂಚಲನ ಎಬ್ಬಿಸಿತ್ತು. ತನಿಖೆಗೆ ಸರ್ಕಾರ ಎಸ್ಐಟಿ ಕೂಡ ರಚಿಸಿತ್ತು. ಈತ ತೋರಿಸಿದ 17 ಪಾಯಿಂಟ್‌ಗಳಲ್ಲೂ ಶೋಧ ಮಾಡಲಾಗಿತ್ತು. ಆದರೆ ಈತ ಹೇಳಿದಂತೆ ಅಸ್ಥಿಪಂಜರಗಳು ಸಿಕ್ಕಿಲ್ಲ. ಹೀಗಾಗಿ, ಈ ಮಾಸ್ಕ್‌ಮ್ಯಾನ್ ಯಾರು? ಈತನ ಬ್ಯಾಕ್‌ಗ್ರೌಂಡ್ ಏನು? ಅವನ ಉದ್ದೇಶ ಏನು? ಅಂತಾ ಮುಖವಾಡ ಕಳಚಲಾಗಿದೆ.
ಇನ್ನು ಮಾಸ್ಕ್‌ಮ್ಯಾನ್ ಹುಟ್ಟಿ ಬೆಳೆದಿದ್ದು ನಮ್ಮ ಗ್ರಾಮದಲ್ಲೇ, ಆತ ಹುಟ್ಟು ಸೋಮಾರಿ ಎಂದು ಮಂಡ್ಯ ಜಿಲ್ಲೆಯ ಚಿಕ್ಕಬಳ್ಳಿ ಗ್ರಾಮದ ನಿಂಗರಾಜು ಮತ್ತು ಶಂಕರೇಗೌಡ ಎಂಬುವವರು ಹೇಳಿಕೆ ನೀಡಿದ್ದರು. ದೂರುದಾರ ಮಂಡ್ಯ ಮೂಲದವನು. ಹುಟ್ಟಿ ಬೆಳೆದಿದ್ದು ನಮ್ಮ ಗ್ರಾಮದಲ್ಲೇ. ಆತ ಧರ್ಮಾಧಿಕಾರಿ ಬಗ್ಗೆ ಹೇಳುತ್ತಿರುವುದು ಸುಳ್ಳು ಎಂದಿದ್ದರು.
ಮುಸುಕುಧಾರಿಯ ಮೊದಲ ಪತ್ನಿ ಇತ್ತೀಚೆಗೆ ಮಾಧ್ಯಮದ ಎದುರು ಬಂದು ಧರ್ಮಸ್ಥಳದಲ್ಲಿದ್ದಾಗ ಆತ ಹೇಳಿದಂತೆ ಯಾವುದೇ ಘಟನೆಗಳು ನಡೆದಿಲ್ಲ ಅಂತಾ ಸ್ಫೋಟಕ ಹೇಳಿಕೆ ನೀಡಿದ್ದರು. ಮಂಡ್ಯದವರೇ ಆದ ಇವರನ್ನ ಮದುವೆಯಾಗಿ 7 ವರ್ಷ ಸಂಸಾರ ಮಾಡಿದ್ದ. ಮದುವೆ ಬಳಿಕ ಧರ್ಮಸ್ಥಳದ ನೇತ್ರಾವತಿಯಲ್ಲಿ 7 ವರ್ಷ ಇದ್ದೆವು ಎಂದಿದ್ದರು.
ಧರ್ಮಸ್ಥಳದಲ್ಲೇ ಈತನಿಗೆ ತಮಿಳುನಾಡು ಮೂಲದ ಮತ್ತೊಬ್ಬಳ ಜೊತೆಗೆ ಅಫೇರ್ ಶುರುವಾಗಿತ್ತಂತೆ ಆಕೆಯನ್ನ 2ನೇ ಮದುವೆ ಆಗಲು ಪತ್ನಿಗೆ ಚಿತ್ರಹಿಂಸೆ ಕೊಟ್ಟು ಮನೆಯಿಂದ ಓಡಿಸಿದ್ದಂತೆ. ಹಣಕ್ಕಾಗಿಯೇ ಈ ರೀತಿ ಮಾಡುತ್ತಿರಬಹುದು ಅಂತಾ ಮಾಸ್ಕ್‌ಮ್ಯಾನ್ ಮೊದಲ ಪತ್ನಿ ಆರೋಪಿಸಿದ್ದರು.
ಸದ್ಯ ಎಸ್ಐಟಿಯಿಂದ ಮಾಸ್ಕ್‌ಮ್ಯಾನ್ ಚಿನ್ನಯ್ಯನನ್ನು ಬಂಧಿಸಿ ವಿಚಾರಣೆ ಮಾಡಿದ್ದು, ಈ ವೇಳೆ ಎರಡು ವರ್ಷ ತಮಿಳುನಾಡಿನ ಈರೋಡ್ನ ಚಿಕ್ಕರಸಿನಪಾಳ್ಯದಲ್ಲಿ ಇದಿದ್ದಾಗಿ ಹೇಳಿಕೆ ನೀಡಿದ್ದಾನೆ. ಬಳಿಕ ಮತ್ತೆ ಉಜಿರೆಗೆ ಬಂದು ಪಂಚಾಯತ್ನ ಸಫಾಯಿ ಕರ್ಮಚಾರಿ ಕೆಲಸಕ್ಕೆ ಸೇರಿದ್ದ. ಅಲ್ಲಿ ಜಯಂತ್ ಟಿ ಪರಿಚಯ ಆದ ಬಗ್ಗೆ ಮಾಹಿತಿ ನೀಡಿದ್ದಾನೆ ಎನ್ನಲಾಗಿದೆ.
ಪ್ರಕರಣದಲ್ಲಿ ಅನಾಮಿಕ ದೂರುದಾರನನ್ನು ಸಾಕ್ಷಿದಾರನನ್ನಾಗಿ ಪರಿಗಣಿಸಲಾಗಿತ್ತು. ಹೀಗಾಗಿ, ಸಾಕ್ಷ್ಯ ಸಂರಕ್ಷಣಾ ಕಾಯ್ದೆಯಡಿ ಆತನನ್ನು ರಕ್ಷಣೆ ಮಾಡಲಾಗುತ್ತಿತ್ತು. ಆದರೆ ಎಸ್ಐಟಿ ಅಧಿಕಾರಿಗಳ ಸತತ ವಿಚಾರಣೆ ಈತನ ಬಂಡವಾಳ ಬಯಲು ಮಾಡಿದೆ. ಬಳಿಕ ಆತನನ್ನು ಬಂಧಿಸಲಾಗಿದೆ.