ಕಾಂಗ್ರೆಸ್ ನಿಂದ ಧರ್ಮ ಒಡೆಯುವ ಕೆಲಸ; ಕೆ ಎಸ್ ಈಶ್ವರಪ್ಪ ಟೀಕೆ

*ಕಾಂಗ್ರೆಸ್ ನಿಂದ ಧರ್ಮ ಒಡೆಯುವ ಕೆಲಸ; ಕೆ ಎಸ್ ಈಶ್ವರಪ್ಪ ಟೀಕೆ*

ರಾಜ್ಯದಲ್ಲಿ ಮತ್ತೆ ಜಾತಿ ಗಣತಿಯ ಪ್ರಕ್ರಿಯೆ ಪ್ರಾರಂಭವಾಗಿದೆ. ಶೈಕ್ಷಣಿಕ, ಆರ್ಥಿಕ, ಸಾಮಾಜಿಕ ಗಣತಿಯನ್ನು ಕಾಂಗ್ರೇಸ್ ನೇತೃತ್ವದ ರಾಜ್ಯ ಸರ್ಕಾರ ಜಾತಿ ಗಣತಿ ಯನ್ನಾಗಿ ಪರಿವರ್ತಿಸಿ ಧರ್ಮ ಒಡೆಯುವ ಕೆಲಸಕ್ಕೆ ಮತ್ತೊಮ್ಮೆ ಕೈ ಹಾಕಿದೆ ಎಂದು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಟೀಕಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತಾಡಿದ ಅವರು, ಈ ಹಿಂದೆ ನಡೆಸಿದ ಗಣತಿಯನ್ನೇ ಯಥಾವತ್ತಾಗಿ ಜಾರಿಗೆ ತರುತ್ತೇನೆ ಎಂದು ಹೇಳುತ್ತಿದ್ದ ಸಿದ್ದರಾಮಯ್ಯನವರು ನಂತರ ಹೈಕಮಾಂಡ್ ಒತ್ತಡಕ್ಕೆ ಮಣಿದು ಮತ್ತೆ ಜಾತಿಗಣತಿ ಮಾಡುವುದಾಗಿ ಹೇಳಿದ್ದರು. 150 ಕೋಟಿಗೂ ಅಧಿಕ ಹಣವನ್ನು ವ್ಯಯಿಸಿ ಮಾಡಿದ ಗಣತಿಯನ್ನು ಕಸದ ಬುಟ್ಟಿಗೆಸೆದಿದ್ದಾರೆ ಎಂದರು.

ಈಗ ಮತ್ತೆ ಸುಮಾರು 420 ಕೋಟಿ ವೆಚ್ಚದಲ್ಲಿ ಗಣತಿ ಮಾಡಲು ಹೊರಟಿದ್ದಾರೆ. ಜಾತಿ ಗಣತಿ ಹೆಸರಿನಲ್ಲಿ ಹಿಂದೂಗಳನ್ನು ಒಡೆದು ತನ್ನ ವೋಟ್ ಬ್ಯಾಂಕ್‌ ಗಳನ್ನು ಭದ್ರಪಡಿಸಿಕೊಳ್ಳುವ ನಿಟ್ಟಿನಲ್ಲಿ ಕಾಂಗ್ರೇಸ್ ಪಕ್ಷದ ಹಿಡನ್ ಅಜೆಂಡಾ ಸ್ಪಷ್ಟವಾಗಿ ಕಾರ್ಯಾನಿರ್ವಹಿಸುತ್ತಿದೆ. ಈ ಹಿಂದಿನ ಹಿಂದುಳಿದ ವರ್ಗಗಳ ಆಯೋಗ ಪ್ರಕಟಿಸಿರುವ ಜಾತಿ ಪಟ್ಟಿಯಲ್ಲಿ ಮತಾಂತರಗೊಂಡ ಹಿಂದೂಗಳಿಗಾಗಿಯೇ ಹೆಚ್ಚುವರಿ ಜಾತಿಗಳನ್ನು ಸೃಷ್ಟಿಸಿ ಕುರುಬ ಕ್ರಿಶ್ಚಿಯನ್, ಲಿಂಗಾಯತ ಕ್ರಿಶ್ಚಿಯನ್, ಬ್ರಾಹ್ಮಣ ಕ್ರಿಶ್ಚಿಯನ್, ಮಡಿವಾಳ ಕ್ರಿಶ್ಚಿಯನ್ – ಈ ರೀತಿ ಸುಮಾರು 50 ಕ್ಕೂ ಹೆಚ್ಚು ಜಾತಿಗಳನ್ನು ಕ್ರಿಶ್ಚಿಯನ್ ಧರ್ಮದ ಹೆಸರಿನಲ್ಲಿ ಸೇರಿಸಿ ಹಿಂದೂಯೇತರ ಧರ್ಮೀಯರ ಜನಸಂಖ್ಯೆಯನ್ನು ವ್ಯವಸ್ಥಿತವಾಗಿ ಹೆಚ್ಚು ತೋರಿಸುವ ಕೆಲಸವನ್ನು ಕಾಂಗ್ರೇಸ್ ಸರ್ಕಾರ ಮಾಡುತ್ತಿದೆ. ಮತಾಂತರಗೊಂಡವರು ಕಬಳಿಸುವ ಪ್ರಯತ್ನಕ್ಕೆ ಸರ್ಕಾರವೇ ಕುಮ್ಮಕ್ಕು ನೀಡುತ್ತಿದೆ ಎಂದು ಹೇಳಿದರು.

ನಮ್ಮ ಸಂವಿಧಾನದಲ್ಲಿರುವ ಆರು ಧರ್ಮಗಳ ಹೊರತಾಗಿ ಬೇರೆ ಯಾವುದೇ ಧರ್ಮಗಳ ಸೇರ್ಪಡೆ ಸಂವಿಧಾನ ವಿರೋಧಿಯಾಗಿದ್ದರೂ ಮತಾಂತರಗೊಂಡ ಕ್ರೈಸ್ತರು ಎಂವ ಹೊಸ ಧರ್ಮವನ್ನು ಕಾಂಗ್ರೆಸ್ ಹುಟ್ಟು ಹಾಕಿದ್ದರ ಬಗ್ಗೆ ಈಶ್ವರಪ್ಪ ಟೀಕಿಸಿದರು.

ರಾಜ್ಯ ಸರ್ಕಾರ ಹಿಂದುಳಿದ ಆಯೋಗದ ಮುಖಾಂತರ ಪ್ರಕಟಿಸಿರುವ ಈ ಸಂವಿಧಾನ ಬಾಹಿರ ಹಿಂದೂ ಜಾತಿಗಳ ಹೆಸರಿನ ಪಟ್ಟಿಯನ್ನು ಈ ಕೂಡಲೇ ಹಿಂಪಡೆದು ಆಗಿರುವ ಪ್ರಮಾದಕ್ಕೆ ಹಿಂದೂಗಳ ಕ್ಷಮೆ ಕೊರಬೇಕು ಹಾಗೂ ಈ ತಿಂಗಳ 22 ರಂದು ಆರಂಭವಾಗುವ ಸಮೀಕ್ಷೆಯಲ್ಲಿ ಮತ್ತೆ ಇಂತಹ ತಪ್ಪುಗಳು ನಡೆಯದಂತೆ ಸೂಕ್ತ ಕ್ರಮವಹಿಸಬೇಕೆಂದರು.

ಕಾಂಗ್ರೇಸ್ ಪಕ್ಷದ ಈ ಹಿಂದೂ ವಿರೋಧಿ ನೀತಿಯನ್ನು ಗಮನದಲ್ಲಿಟ್ಟುಕೊಂಡು ಮುಂಬರುವ ಸಮೀಕ್ಷೆಯ ಸಮಯದಲ್ಲಿ ಸಮಸ್ತ ಹಿಂದೂಗಳು ನಿಮ್ಮ ನಿಮ್ಮ ಜಾತಿ, ಉಪ ಜಾತಿ ಯಾವುದೇ ಇರಲಿ ಧರ್ಮದ ಕಾಲಂನಲ್ಲಿ ಹಿಂದೂ ಎಂದೇ ನಮೂದಿಸಬೇಕು ಹಾಗೂ ಯಾವುದೇ ಗೊಂದಲಗಳಿಗೆ ಎಡೆಮಾಡಿಕೊಡದೆ ಹಿಂದೂ ಸನಾತನ ಧರ್ಮವನ್ನು ಒಗ್ಗೂಡಿಸಿಕೊಂಡು ಸಮಾಜದ ಹಿತ ಕಾಪಾಡಬೇಕು ಎಂದು ವಿನಂತಿಸಿದರು.

ಸುದ್ದಿಗೋಷ್ಠಿಯಲ್ಲಿ ವಿಶ್ವಾಸ್ ಉಪಸ್ಥಿತರಿದ್ದರು.