ಸಮಾಜ ಕಲ್ಯಾಣ ಇಲಾಖೆಯಲ್ಲಿ ಮಲ್ಲೇಶಪ್ಪಂದ್ ಏನ್ ಕಥೆ? ಅಂತೂ ತೊಲಗಿದ ಗೋಪಿನಾಥ!
ಸಮಾಜ ಕಲ್ಯಾಣ ಇಲಾಖೆಯಲ್ಲಿ ಮಲ್ಲೇಶಪ್ಪಂದ್ ಏನ್ ಕಥೆ?
ಅಂತೂ ತೊಲಗಿದ ಗೋಪಿನಾಥ!
ಸಮಾಜ ಕಲ್ಯಾಣ ಇಲಾಖೆ ಗಬ್ಬೆದ್ದು ಹೋಗಿದೆ. ಇಲ್ಲಿ ನಡೆಯುತ್ತಿರುವುದೆಲ್ಲ ಸರ್ಕಾರವನ್ನೇ ದೋಚುವ ಕೆಲಸ ಎಂಬಂತೆ ವಾತಾವರಣ ಸೃಷ್ಟಿಯಾಗುತ್ತಿದೆ. ಭ್ರಷ್ಟರನ್ನು ಕಪಾಳಮೋಕ್ಷಕ್ಕೊಳಪಡಿಸಿ ಓಡಿಸಬೇಕಾದ ಅಧಿಕಾರಿಗಳೇ ಅವರ ಭ್ರಷ್ಟತೆಯ ಮೇಲೆ ಪರದೆ ಹಾಕಿ ಸುಳ್ಳು ಸುಳ್ಳೇ ವರದಿಗಳನ್ನು ನೀಡುತ್ತಿರುವ ಭಯಾನಕ ಸತ್ಯವೊಂದು ಮತ್ತೆ ಹೊರ ಬಿದ್ದಿದೆ. ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ಜಾತಿ ವಿಭಾಗದ ಅಧ್ಯಕ್ಷ ಆರ್.ಶಿವಣ್ಣ ಈ ಸತ್ಯದ ಹಿಂದೆ ಬಿದ್ದಿದ್ದಾರೆ.
ಕಳೆದ ವಾರ ಶಿವಮೊಗ್ಗ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಗೋಪಿನಾಥನ ಅಷ್ಟೂ ಭ್ರಷ್ಟಾಚಾರವನ್ನು ಎಳೆ ಎಳೆಯಾಗಿ ಮಲೆನಾಡು ಎಕ್ಸ್‌ಪ್ರೆಸ್ ಪತ್ರಿಕೆಯಲ್ಲಿ ಬಿಚ್ಚಿಡಲಾಗಿತ್ತು. ಸುದ್ದಿಯಾದ ನಾಲ್ಕೇ ದಿನದಲ್ಲಿ ಸರ್ಕಾರ ಗೋಪಿನಾಥ್‌ಗೆ ಸಸ್ಪೆಂಡ್ ಮಾಡಿದ್ದಲ್ಲದೇ, ರಾಯಚೂರಿಗೆ ಅರ್ಧ ಸಂಬಳದ ಆಧಾರದ ಮೇಲೆ ರವಾನಿಸಿದೆ. ಆದರೂ ಸಮಾಜ ಕಲ್ಯಾಣ ಇಲಾಖೆಯ ಒಳಗಿರುವ ಭ್ರಷ್ಟಾಚಾರ ಕಡಿಮೆಯಾಗುತ್ತಿಲ್ಲ.
ಶಿವಣ್ಣ ನೀಡಿದ ದೂರನ್ನು ಆಧರಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಮಾಜ ಕಲ್ಯಾಣ ಇಲಾಖೆ ಸಚಿವ ಹೆಚ್.ಸಿ.ಮಹದೇವಪ್ಪ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಆಯುಕ್ತ ಗೋಪಿನಾಥನನ್ನು ಅಮಾನತು ಮಾಡಿ ತನಿಖೆಗೆ ಆದೇಶಿಸಿರುವುದು ಸಣ್ಣ ಮಾತಲ್ಲ.
ಶಿವಮೊಗ್ಗ ಜಿಲ್ಲೆಯ ಸಮಾಜ ಕಲ್ಯಾಣ ಇಲಾಖೆಯಲ್ಲಿ ಆಹಾರ ಮತ್ತು ಇತರೆ ಸಾಮಾಗ್ರಿ ಪೂರೈಕೆಗೆ ಸಂಬಂಧಿಸಿದ ಟೆಂಡರ್‌ಗಳಲ್ಲಿ ಕೋಟ್ಯಾಂತರ ರೂ.ಗಳನ್ನು ಲಪಟಾಯಿಸಿರುವುದು ಸುದ್ದಿಯಾಗಿದೆ. ಇಲ್ಲಿ ಭ್ರಷ್ಟಾಚಾರ ನಡೆದಿರುವ ಬಗ್ಗೆ ಉಪ ವಿಭಾಗಾಧಿಕಾರಿಗಳ ಮಟ್ಟದ ಅಟ್ರಾಸಿಟಿ ಕಮಿಟಿ ಸಭೆಯಲ್ಲಿ ಶಿವಣ್ಣರವರೇ ಪ್ರಸ್ತಾಪಿಸಿ ಕ್ರಮ ಕೈಗೊಳ್ಳಲು ಕೋರಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಉಪ ವಿಭಾಗಾಧಿಕಾರಿಗಳು ತನಿಖೆಗೆ ಆದೇಶಿಸಿದ್ದರು.
ಸದ್ಯಕ್ಕೆ ಗೋಪಿನಾಥ್ ಅಮಾನತ್ತಲ್ಲಿ ಇದ್ದು, ಈ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ತೆಗೆದುಕೊಳ್ಳಬೇಕು. ಆದರೆ, ಗೋಪಿನಾಥ್‌ನನ್ನು ರಕ್ಷಿಸಲು ಇಲಾಖೆಯ ಉಪ ನಿರ್ದೇಶಕ ಮಲ್ಲೇಶಪ್ಪ ನಿಂತಂತೆ ಕಾಣುತ್ತಿದೆ. ತನಿಖೆಯ ಸಂದರ್ಭದಲ್ಲಿ ತನಿಖಾಧಿಕಾರಿಯಾಗಿರುವ ಡಿ.ಎಸ್.-೧ರವರಿಗೆ ನೀಡಿರುವ ಪರಿಶೀಲನಾ ವರದಿಯಲ್ಲಿ ಸುಳ್ಳು ಮಾಹಿತಿ ನೀಡುವ ಮೂಲಕ ಗೋಪಿನಾಥನ ಭ್ರಷ್ಟಾಚಾರಕ್ಕೆ ಡಿ.ಮಲ್ಲೇಶಪ್ಪ ಬೆನ್ನಾಗಿ ನಿಂತಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ. ಬಿಜೆಪಿ ಸರ್ಕಾರವಿದ್ದ ಸಂದರ್ಭದಲ್ಲಿ ಈ ಭ್ರಷ್ಟಾಚಾರ ನಡೆದಿದ್ದು, ಗೋಪಿನಾಥನನ್ನು ಕಾಪಾಡಿದ್ದು ಬಿಜೆಪಿಯೇ ಆಗಿತ್ತು. ಕಾಂಗ್ರೆಸ್ ಸರ್ಕಾರ ಬಂದ ನಂತರ ಉಪ ನಿರ್ದೇಶಕರಾಗಿ ಮಲ್ಲೇಶಪ್ಪ ಬಂದರು. ಆದರೂ ಗೋಪಿನಾಥನ ರಕ್ಷಣೆಗೆ ನಿಂತಿರುವುದು ಸಾಕಷ್ಟು ಆಶ್ಚರ್‍ಯ ಮೂಡಿಸುತ್ತದೆ. ಇವರು ನೀಡಿದ ವರದಿ ಸಂಪೂರ್ಣ ಸುಳ್ಳಿನಿಂದ ತುಂಬಿದೆ.
ಉಪನಿರ್ದೇಶಕರ ಕಚೇರಿಗೆ ಕಂಪ್ಯೂಟರ್ ಆಪರೇಟರ್ ಆಗಿರುವ ಉಷಾ ಮೂಲತಃ ಕುಂಸಿ ಮೆಟ್ರಿಕ್‌ಪೂರ್ವ ವಿದ್ಯಾರ್ಥಿನಿಲಯದಲ್ಲಿ ಸರ್ಕಾರದ ಖಾಯಂ ಅಡುಗೆ ಕೆಲಸದವರು. ಆದರೆ, ಮಲ್ಲೇಶಪ್ಪ ನೀಡಿರುವ ವರದಿಯಲ್ಲಿ, ಉಷಾ ಹೊರ ಸಂಪನ್ಮೂಲದ ಅಡುಗೆ ನೌಕರರಾಗಿ ಕಂಪ್ಯೂಟರ್ ಜ್ಞಾನ ಹೊಂದಿರುವುದರಿಂದ ಆಡಳಿತಾತ್ಮಕ ಹಿತದೃಷ್ಟಿಯಿಂದ ಉಪ ನಿರ್ದೇಶಕರ ಕಚೇರಿಯಲ್ಲಿ ಕಂಪ್ಯೂಟರ್ ಆಪರೇಟರ್ ಆಗಿ ಸೇವೆಗೆ ತೆಗೆದುಕೊಳ್ಳಲಾಗಿದೆ ಎಂದು ಹೇಳುತ್ತಾರೆ. ಇದು ಸಂಪೂರ್ಣ ಸುಳ್ಳು ವರದಿ. ಉಷಾ ಹೊರ ಸಂಪನ್ಮೂಲದ ಅಡುಗೆಯವರಾಗಿದ್ದರೆ ಸರ್ಕಾರಿ ನೌಕರರ ಎಸ್‌ಆರ್ ಫಾರಂ ನಂ. ೧೮ರಲ್ಲಿ ಉಷಾರ ಮಾಹಿತಿಗಳು ಹೇಗೆ ದಾಖಲಾಗಲು ಸಾಧ್ಯ? ಉಪನಿರ್ದೇಶಕ ಮಲ್ಲೇಶಪ್ಪ ಹೊರ ಸಂಪನ್ಮೂಲದಿಂದ ಸೇವೆ ಸಲ್ಲಿಸುತ್ತಿರುವ ನೌಕರರಿಗೂ ಸರ್ಕಾರಿ ನೌಕರರ ಎಸ್‌ಆರ್ ದಾಖಲೆ ನೀಡುತ್ತಾರೆಯೇ?
ಇದೇ ರೀತಿ ಎಸ್‌ಜೆ ಎಂಟರ್ ಪ್ರೈಸಸ್ ಉಷಾರವರ ತಾಯಿ ಗಿರಿಜಮ್ಮರವರ ಹೆಸರಲ್ಲಿ ನೋಂದಣಿಯಾಗಿದೆ. ಪ್ರಕೃತಿ ಎಂಟರ್‌ಪ್ರೈಸಸ್ ಗೋಪಿನಾಥ್‌ರವರ ಸ್ವಂತ ಅಕ್ಕ ಸೆಲ್ವರಾಜ್ ಶರ್ಮಿಳಾ ಹೆಸರಲ್ಲಿ ನೋಂದಣಿಯಾಗಿದೆ. ಇದೆಲ್ಲ ಗೊತ್ತಿದ್ದರೂ ಮಲ್ಲೇಶಪ್ಪ `ಇವರ ಬಗ್ಗೆ ನಮ್ಮ ಇಲಾಖೆಗೆ ಯಾವುದೇ ಮಾಹಿತಿ ಇರುವುದಿಲ್ಲ ಎಂದು ಸುಳ್ಳು ವರದಿ ನೀಡುತ್ತಾರೆ.
ಇದೇ ವರದಿಯಲ್ಲಿ ಮಲ್ಲೇಶಪ್ಪ, ಉಷಾ ಮತ್ತು ಅವರ ತಾಯಿ ಗಿರಿಜಮ್ಮರವರಿಬ್ಬರನ್ನೂ ಹೊರ ಸಂಪನ್ಮೂಲದ ಸಿಬ್ಬಂದಿ ಎಂದು ಪದೇ ಪದೇ ಉಲ್ಲೇಖಿಸಿದ್ದಾರೆ. ಉಷಾ ಮತ್ತು ಗಿರಿಜಮ್ಮ ಒಟ್ಟಿಗೆ ವಾಸವಿಲ್ಲ. ಗಿರಿಜಮ್ಮ ಅವರ ಹೆಸರಿನಲ್ಲಿ ಸಂಸ್ಥೆಯ ನೋಂದಣಿಯಾಗಿರುವುದಾಗಲೀ, ಗೋಪಿನಾಥ್‌ರವರ ಸಹೋದರಿ ಸೆಲ್ವರಾಜ್ ಶರ್ಮಿಳಾ ಹೆಸರಿನಲ್ಲಿ ಸಂಸ್ಥೆ ಇರುವ ಬಗ್ಗೆ ಮಾಹಿತಿ ಇರುವುದಿಲ್ಲ ಎಂದು ತಾವು ನೀಡಿದ ವರದಿಯಲ್ಲಿ ಷರಾ ಬರೆದಿದ್ದಾರೆ.
ಇದೇ ರೀತಿ ಆಡಳಿತಾತ್ಮಕ ಹಿತದೃಷ್ಟಿಯಿಂದ ಉಷಾರವರನ್ನು ಕಂಪ್ಯೂಟರ್ ಆಪರೇಟರ್ ಹುದ್ದೆಯಲ್ಲಿ ನಿಯೋಜಿಸಲಾಗಿದೆ. ಉಷಾ ಮತ್ತು ಗಿರಿಜಮ್ಮ ೨೦೨೩ರ ನವೆಂಬರ್ ೨೯ರವರೆಗೆ ಗೋಂದಿ ಚಟ್ನಹಳ್ಳಿಯ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಸತಿಗೃಹದಲ್ಲಿ ಒಟ್ಟಿಗೆ ವಾಸವಿದ್ದು, ೨೦೨೩ ನವೆಂಬರ್ ೩೦ರಂದು ವಸತಿ ನಿಲಯವನ್ನು ತೆರವುಗೊಳಿಸಿರುತ್ತಾರೆ ಎಂದು ಇದೇ ಮಲ್ಲೇಶಪ್ಪ ಹೇಳುತ್ತಾರೆ. ಗಿರಿಜಮ್ಮ ಗ್ಲೋಬಲ್ ಏಜೆನ್ಸಿಯ ಮೂಲಕ ಹೊರ ಸಂಪನ್ಮೂಲದ ನೌಕರರಾಗಿದ್ದು ೨೦೦೫ರಿಂದ ಅದೇ ವಸತಿ ನಿಲಯದಲ್ಲಿ ವಾಸವಿದ್ದರು. ಸರ್ಕಾರದ ನಿಯಮಾವಳಿಗಳಲ್ಲಿ ಹೊರ ಸಂಪನ್ಮೂಲದ ನೌಕರರಿಗೆ ಈ ರೀತಿ ಸರ್ಕಾರಿ ವಸತಿ ನಿಲಯ ನೀಡಲು ಅವಕಾಶವಿದೆಯೇ?
ಮಲ್ಲೇಶಪ್ಪ ಹೀಗೇಕೆ ಈ ಎಲ್ಲಾ ಅಂಶಗಳನ್ನು ಮರೆಮಾಚಿ ವರದಿಯನ್ನು ನೀಡುತ್ತಿದ್ದಾರೆ? ತಮ್ಮ ವರದಿಯಲ್ಲಿ ಉಷಾ ಹೊರ ಸಂಪನ್ಮೂಲದ ನೌಕರರು ಎಂದು ವಸತಿ ನಿಲಯದಲ್ಲಿ ವಾಸವಾಗಿರುವ ಬಗ್ಗೆ ಅಸ್ಪಷ್ಟ ಮಾಹಿತಿ ನೀಡುತ್ತಾರೆ. ಗಿರಜಮ್ಮ, ಸೆಲ್ವರಾಜ್ ಶರ್ಮಿಳಾರವರ ಸಂಸ್ಥೆಗಳಿಗೂ ಉಷಾ ಮತ್ತು ಗೋಪಿನಾಥ್‌ರವರಿಗೂ ಸಂಬಂಧವಿಲ್ಲ ಎಂಬಂತೆ ಸುಳ್ಳು ವರದಿಯನ್ನು ನೀಡಿ ನೌಕರರನ್ನು ಮಲ್ಲೇಶಪ್ಪ ಯಾವ ಕಾರಣಕ್ಕಾಗಿ ರಕ್ಷಿಸುತ್ತಿದ್ದಾರೆ? ಎಪಿಎಂಸಿ ದರಪಟ್ಟಿಯನ್ನು ಟೆಂಡರ್‌ದಾರರು ಬಿಡ್ ಮಾಡಿರುವ ಮೊತ್ತ ಯಾರಿಗೂ ಗತ್ತಾಗುವುದಿಲ್ಲ ಎಂದು ಸುಳ್ಳು ಮಾಹಿತಿಯನ್ನು ಮೇಲಾಧಿಕಾರಿಗಳಿಗೆ ತಿಳಿಸಿದ್ದಾರೆ ಎಂದು ಶಿವಣ್ಣ ವಿವರಿಸುತ್ತಾರೆ.
ಭ್ರಷ್ಟಾಚಾರದಲ್ಲಿ ಭಾಗಿಯಾಗಿರುವ ಉಷಾ, ಈ ಭ್ರಷ್ಟಾಚಾರವನ್ನು ಮುಚ್ಚಿಹಾಕಲು ಪ್ರಯತ್ನಿಸುತ್ತಿರುವ ಮಲ್ಲೇಶಪ್ಪರವರನ್ನು ಸಸ್ಪೆಂಡ್ ಮಾಡಬೇಕು. ಇಡೀ ಪ್ರಕರಣವನ್ನು ಉನ್ನತ ಮಟ್ಟದ ತನಿಖೆಗೆ ಒಳಪಡಿಸಬೇಕು. ಟೆಂಡರ್ ಪಡೆದು ಆಹಾರ ಮತ್ತು ಇತರೆ ಸಾಮಾಗ್ರಿಯನ್ನು ಪೂರೈಸದೇ ಬಿಲ್ ಮಾಡಿಕೊಂಡಿರುವ ಎಸ್‌ಜೆ ಎಂಟರ್‌ಪ್ರೈಸಸ್, ಪ್ರಕೃತಿ ಟ್ರೇಡರ್‍ಸ್, ರಜತಾದ್ರಿ ಎಂಟರ್‌ಪ್ರೈಸಸ್ ಹಾಗೂ ಜೆಕೆ ಟ್ರೇಡರ್‍ಸ್ – ಈ ನಾಲ್ಕೂ ಸಂಸ್ಥೆಗಳನ್ನು ಕಪ್ಪುಪಟ್ಟಿಗೆ ಸೇರ್ಪಡೆಗೊಳಿಸಬೇಕು. ಸುಳ್ಳು ಲೆಕ್ಕ ಕೊಟ್ಟು ಸರ್ಕಾರಕ್ಕೆ ಮೋಸ ಮಾಡಿ ಸಾಮಾಗ್ರಿಗಳನ್ನು ಸರಬರಾಜು ಮಾಡದೇ ಪಡೆದಿರುವ ಹಣವನ್ನು ಸರ್ಕಾರ ಮತ್ತೆ ವಾಪಸ್ ಪಡೆಯಬೇಕು. ಇದು ಶಿವಣ್ಣನ ಆಗ್ರಹ.