ಶಿವಮೊಗ್ಗ ಪಶ್ಚಿಮ ಸಂಚಾರಿ ಪೊಲೀಸ್ ಠಾಣೆಯಲ್ಲಿ ನಮೋ ತಿರುಮಲೇಶ!
ಶಿವಮೊಗ್ಗ ಪಶ್ಚಿಮ ಸಂಚಾರಿ ಪೊಲೀಸ್ ಠಾಣೆಯಲ್ಲಿ
ನಮೋ ತಿರುಮಲೇಶ!
ಶಿವಮೊಗ್ಗದ ಪಶ್ಚಿಮ ಸಂಚಾರಿ ಪೊಲೀಸ್ ಠಾಣೆಯಲ್ಲಿ ತಿರುಮಲೇಶ್ ಸದ್ದು ಮಾಡುತ್ತಿದ್ದಾರೆ. ಟ್ರಾಫಿಕ್ ಠಾಣೆಯ ಸಬ್‌ಇನ್ಸ್‌ಪೆಕ್ಟರ್ ಆಗಿರುವ ತಿರುಮಲೇಶ್ ಠಾಣೆಯ ವ್ಯಾಪ್ತಿಯಲ್ಲಿ ಬರುವ ಜನರಿಗೋಸ್ಕರ ಏನಾದರೂ ಒಳ್ಳೆಯದು ಮಾಡಬೇಕೆಂದು ಪ್ರತಿನಿತ್ಯ ಬೀದಿಗಿಳಿಯುತ್ತಾರೆ. ಬೀದಿ ಬೀದಿಯಲ್ಲೂ ಇರುವ ಸಂಚಾರಿ ಸಮಸ್ಯೆಗಳನ್ನು ಬಗೆಹರಿಸಲು ಮುಂದಾಗುತ್ತಾರೆ. ಈ ಮೂಲಕ ಜನರಿಗೂ ಹತ್ತಿರವಾಗುತ್ತಿದ್ದಾರೆ.
ಮೂಲತಃ ದಾವಣಗೆರೆ ಮೂಲದ ತಿರುಮಲೇಶ್ ಬಿಸಿರಕ್ತದ ಯುವಕರು. ಮೈಮೇಲೆ ಖಾಕಿ ಇದ್ದರೆ ಅದು ಜನರ ಸಮಸ್ಯೆಗಳನ್ನು ಬಗೆಹರಿಸಲು ಉಪಯೋಗವಾಗಬೇಕು ಎಂದು ಭಾವಿಸಿಕೊಂಡವರು. ಸಾಮಾನ್ಯವಾಗಿ ಖಾಕಿ ಕಂಡರೆ ಜನ ದೂರವೇ ಉಳಿಯುತ್ತಾರೆ. ಪೊಲೀಸ್ ಇಲಾಖೆ ಕೂಡ ಜನಸ್ನೇಹಿಯಾಗಲು ಒಂದಲ್ಲಾ ಒಂದು ಪ್ರಯತ್ನಗಳನ್ನು ಮಾಡುತ್ತಲೇ ಇದೆ. ಆದರೆ, ಬಹಳಷ್ಟು ಪ್ರಯತ್ನಗಳಲ್ಲಿ ಅದು ಸೋಲುತ್ತದೆ. ಕಾರಣ, ತಿರುಮಲೇಶ್‌ನಂತಹ ಅಧಿಕಾರಿಗಳ ಕೊರತೆ.
ಜಿಲ್ಲಾ ರಕ್ಷಣಾಧಿಕಾರಿಗಳಾದ ಮಿಥುನ್‌ಕುಮಾರ್‌ರವರ ಪ್ರಾಮಾಣಿಕತೆಯ ನೇತೃತ್ವದಲ್ಲಿಯೇ ತಿರುಮಲೇಶ್ ಕೂಡ ಸಾಗಿದ್ದಾರೆ. ಶಿವಮೊಗ್ಗಕ್ಕೆ ಸಂಚಾರವೇ ದೊಡ್ಡ ಸಮಸ್ಯೆ. ಶಿವಮೊಗ್ಗ ಎಷ್ಟೇ ದೊಡ್ಡ ಸ್ಮಾರ್ಟ್‌ಸಿಟಿ ಎಂದು ಕರೆಸಿಕೊಂಡರೂ ಎಡವುವುದು ಸಂಚಾರದ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳದಿದ್ದಾಗ. ಈ ಸೂಕ್ಷ್ಮವನ್ನು ಅರ್ಥಮಾಡಿಕೊಂಡಿರುವ ತಿರುಮಲೇಶ್ ಕಷ್ಟವೋ ನಷ್ಟವೋ ಸಂಚಾರದ ಸಮಸ್ಯೆಗಳನ್ನು ಬಗೆಹರಿಸುವ ಪ್ರಯತ್ನದಲ್ಲಿ ಗೆಲುವು ಸಾಧಿಸುತ್ತಿದ್ದಾರೆ. ಎಪಿಎಂಸಿ ಬಳಿಯ ಸಂಚಾರದ ಸಮಸ್ಯೆಯೇ ಇರಲಿ, ಗಾರ್ಡನ್ ಏರಿಯಾದ ಬಗೆಹರಿಸಲು ಸಾಧ್ಯವೇ ಇಲ್ಲದ ರಸ್ತೆ ಸಮಸ್ಯೆ ಇರಲಿ ಬಗೆಹರಿಸಿದ ಕ್ರೆಡಿಟ್ ಇದೇ ತಿರುಮಲೇಶ್‌ರವರಿಗೆ ಸಂದಾಯವಾಗಬೇಕು.
ಇತ್ತೀಚೆಗೆ ಶಿವಮೊಗ್ಗ ಪಶ್ಚಿಮ ಸಂಚಾರಿ ಪೊಲೀಸ್ ಠಾಣೆಯ ವತಿಯಿಂದ ರಕ್ತದಾನ ಶಿಬಿರ ನಡೆಯಿತು. ಪೊಲೀಸರು ಮತ್ತು ಆಟೋ ಚಾಲಕರ ಸಹಭಾಗಿತ್ವದಲ್ಲಿ ನಡೆದ ಈ ರಕ್ತದಾನ ಶಿಬಿರ ಪ್ರತಿನಿತ್ಯ ನಡೆಯುವ ರಕ್ತದಾನ ಶಿಬಿರಗಳಿಗಿಂತ ಭಿನ್ನವಾದ ಆಲೋಚನೆಯನ್ನು ಹೊಂದಿತ್ತು. ಇಲ್ಲಿ ಪೊಲೀಸರು, ಪೊಲೀಸರ ಕುಟುಂಬ, ಚಾಲಕರು ಮತ್ತವರ ಕುಟುಂಬ ಈ ರಕ್ತದಾನ ಶಿಬಿರದಲ್ಲಿ ಪಾಲ್ಗೊಂಡು ಸಮಾಜಕ್ಕೆ ಬೇರೆಯದೇ ಸಂದೇಶವನ್ನು ರವಾನಿಸಿತು. ಇದರ ಹಿಂದೆ ಕೆಲಸ ಮಾಡಿದ್ದು ಇದೇ ಸಬ್‌ಇನ್ಸ್‌ಪೆಕ್ಟರ್ ತಿರುಮಲೇಶ್.
ಆಟೋ ಚಾಲಕರು, ಸಿಟಿಬಸ್ ಚಾಲಕರು ಮತ್ತು ಸಾರ್ವಜನಿಕರ ಮಧ್ಯೆ ಸಂಬಂಧ ಅತ್ಯುತ್ತಮವಾಗಿದ್ದರೆ ಬಹಳಷ್ಟು ಅಪರಾಧಗಳು ಹಾಗೂ ಬಹಳಷ್ಟು ಸಂಚಾರದ ಸಮಸ್ಯೆಗಳು ಬಗೆಹರಿಯಲು ಸಾಧ್ಯ. ಸಾರ್ವಜನಿಕರು ಬಯಸುವುದು ಕೂಡ ಇಂಥದ್ದೇ ವಾತಾವರಣವನ್ನು. ಈ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಮಧ್ಯದಲ್ಲಿ ಸೇತುವೆಯಾದವರು ಇದೇ ತಿರುಮಲೇಶ್. ಸಾರ್ವಜನಿಕರಿಗೆ ಸಮಸ್ಯೆ ಆದರೆ ಕೂಡಲೇ ಅವರು ಸಾಮಾಜಿಕ ಜಾಲತಾಣದ ಮೂಲಕ ಪೊಲೀಸ್ ಇಲಾಖೆಯ ಗಮನ ಸೆಳೆಯಲು ಬೇಕಾದ ವ್ಯವಸ್ಥೆಯನ್ನು ಕೂಡ ತಿರುಮಲೇಶ್ ಮಾಡಿದ್ದಾರೆ. ಅದು ಸಾಕಷ್ಟು ಪ್ರಶಂಸೆಗೂ ಗುರಿಯಾಗಿದೆ. ಅಂತೆಯೇ, ಸಾರ್ವಜನಿಕರಿಗೆ ಹೆಚ್ಚು ನಷ್ಟ ಉಂಟುಮಾಡುವ ಸಂಗತಿಯೆಂದರೆ, ರಸ್ತೆ ಮಧ್ಯದ ಗುಂಡಿ-ಗೊಟರುಗಳು. ಈ ಗುಂಡಿ-ಗೊಟರುಗಳನ್ನು ಪತ್ತೆ ಹಚ್ಚಿ ಅಲ್ಲಿ ಸಂಭವಿಸುತ್ತಿರುವ ಅಪಘಾತಗಳಿಂದ ಮನನೊಂದು ಇದೇ ತಿರುಮಲೇಶ್ ಸಾಧ್ಯವಾದ ಕಡೆಗಳಲ್ಲೆಲ್ಲ ತಮ್ಮ ವೈಯಕ್ತಿಕ ಹಣವನ್ನು ಖರ್ಚುಮಾಡಿ ಗುಂಡಿ-ಗೊಟರುಗಳನ್ನು ಮುಚ್ಚಿಸುತ್ತಿರುತ್ತಾರೆ. ಇದು ಬಹಳಷ್ಟು ಜನಕ್ಕೆ ಗೊತ್ತಿಲ್ಲ.
ಇತ್ತೀಚೆಗೆ ಸಾಕಷ್ಟು ಸದ್ದುಮಾಡುತ್ತಿರುವ ಮತ್ತು ಸುದ್ದಿಯೂ ಮಾಡುತ್ತಿರುವ ಅಪ್ರಾಪ್ತರ ಪೋಷಕರಿಗೆ ಗಾಡಿ ಚಾಲನೆಗೆ ಹಾಕುತ್ತಿರುವ ದಂಡದ ಹಿಂದೆ ತಿರುಮಲೇಶ್‌ರವರ ಬಹುದೊಡ್ಡ ಸದುದ್ದೇಶವಿದೆ. ಕಾನೂನು ಇರುವುದು ಕಾಪಾಡಲು. ಹಾಗಾಗಿ, ಈ ಕಠಿಣತೆ ಕೆಲವೊಮ್ಮೆ ಅನಿವಾರ್ಯತೆ ಎಂಬಂತೆ ಕಂಡುಬರುತ್ತದೆ. ಅರ್ಧ ಹೆಲ್ಮೇಟ್, ವ್ಹೀಲಿಂಗ್, ಬುಲೆಟ್ ಸೈಲೆನ್ಸರ್, ತ್ರಿಬಲ್ ರೈಡ್ ಸೇರಿದಂತೆ ಬಹಳಷ್ಟು ಪುಟ್ಟ ಪುಟ್ಟ ಅಪರಾಧಗಳನ್ನು ಕೂಡ ತಿರುಮಲೇಶ್ ಗಂಭೀರವಾಗಿ ಪರಿಗಣಿಸಿದ್ದಾರೆ. ಇಂಥವರ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ಅಂಥ ವಾಹನಗಳನ್ನು ವೀಡಿಯೋ ತೆಗೆದು ಕಳಿಸಿದರೆ ಕೂಡಲೇ ಆ ವಾಹನಗಳು ಠಾಣೆಯ ಬಾಗಿಲಲ್ಲಿ ಕಂಡುಬರುತ್ತಿವೆ. ಇಂತಹ ಬದಲಾವಣೆ ಗಮನಕ್ಕೆ ಬಾರದಿದ್ದರೂ ಆಗುತ್ತಿದೆ. ಅಂತೆಯೇ, ಆಟೋ, ಬಸ್‌ಗಳಲ್ಲಿ ಪ್ರಯಾಣಿಕರು ಮೈಮರೆತು ಹಣ, ವಸ್ತುಗಳನ್ನು ಬಿಟ್ಟು ಹೋದಾಗ ಅದನ್ನು ಪ್ರಾಮಾಣಿಗಿ ಆಟೋ,ಬಸ್ ಚಾಲಕರು ಹೇಗೆ ಮರಳಿ ಕೊಡಬೇಕು ಎಂಬುದನ್ನು ವಿಶೇಷ ರೀತಿಯಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ.
ಈ ಹಿಂದೆ ತುಂಗಾನಗರ ಪೊಲೀಸ್ ಠಾಣೆ, ಕಾರ್ಗಲ್ ಪೊಲೀಸ್ ಠಾಣೆಗಳಲ್ಲಿ ಕಾರ್ಯನಿರ್ವಹಿಸಿರುವ ತಿರುಮಲೇಶ್ ಈಗ ಶಿವಮೊಗ್ಗದ ಪಶ್ಚಿಮ ಸಂಚಾರ ಪೊಲೀಸ್ ಠಾಣೆಯಲ್ಲಿ ಸಬ್‌ಇನ್ಸ್‌ಪೆಕ್ಟರ್ ಆಗಿ ದುಡಿಯುತ್ತಿದ್ದಾರೆ. ಅವರ ಬೆವರಿಗೆ ಬೆಲೆ ಸಿಗುತ್ತಿದೆ. ಜನರ ಸಮಸ್ಯೆಗೂ ಪರಿಹಾರ ದಕ್ಕುತ್ತಿದೆ. ಇಂತಹ ಪೊಲೀಸ್ ಅಧಿಕಾರಿಗಳ ಸಂಖ್ಯೆ ಹೆಚ್ಚಾಗಲಿ.