ಅಕ್ರಮ ನೀರು ಎತ್ತುವಳಿ : ಭದ್ರಾ ನಾಲೆ-ನದಿ ಪಾತ್ರ ಸುತ್ತಮುತ್ತ ನಿಷೇಧಾಜ್ಞೆ*

*ಅಕ್ರಮ ನೀರು ಎತ್ತುವಳಿ : ಭದ್ರಾ ನಾಲೆ-ನದಿ ಪಾತ್ರ ಸುತ್ತಮುತ್ತ ನಿಷೇಧಾಜ್ಞೆ*

ಭದ್ರಾ ನಾಲಾ, ನದಿ ಪಾತ್ರ ಪ್ರದೇಶದಲ್ಲಿ ಅನಧಿಕೃತ ಪಂಪ್‍ಸೆಟ್ ಮತ್ತು ತೂಬುಗಳ ಮೂಲಕ ನೀರನ್ನು ಎತ್ತುವಳಿ ಮಾಡುವುದನ್ನು ನಿಷೇಧಿಸಿ ಭದ್ರಾ ನಾಲಾ ಮತ್ತು ನದಿಯ ಪಾತ್ರಗಳ ಸುತ್ತಮುತ್ತ 100 ಮೀ ವ್ಯಾಪ್ತಿಯಲ್ಲಿ ನಿಬಂಧನೆಗಳನ್ನು ವಿಧಿಸಿ ಫೆ.19 ರಿಂದ 26 ರವರೆಗೆ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಆದೇಶಿಸಿರುತ್ತಾರೆ.
ಫೆ.5 ರ ರಾತ್ರಿಯಿಂದ ಕುಡಿಯುವ ನೀರಿನ ಉದ್ದೇಶಕ್ಕಾಗಿ ಹಾವೇರಿ ಮತ್ತು ಗದಗ ಜಿಲ್ಲೆಯ ಪಟ್ಟಣಗಳಿಗೆ ಇದುವರೆಗೂ ಒಟ್ಟು 1.00 ಟಿಎಂಸಿ ನೀರನ್ನು ಭದ್ರಾ ಜಲಾಶಯದಿಂದ ಹರಿಸಲಾಗಿರುತ್ತದೆ. ಆದರೆ ಸದರಿ ಜಿಲ್ಲೆಗಳ ನೀರು ಒದಗಿಸುವ ಜಾಕ್‍ವೆಲ್ ಸ್ಥಳವನ್ನು ನೀರು ತಲುಪಿರುವುದಿಲ್ಲವೆಂದು ತಿಳಿದುಬಂದಿದೆ.
ನದಿಯ ಪಾತ್ರದಲ್ಲಿ ಸುಮಾರು 20 ಸಾವಿರಕ್ಕೂ ಹೆಚ್ಚು ಪಂಪ್‍ಸೆಟ್‍ಗಳನ್ನು ಅಳವಡಿಸಿ ಅಕ್ರಮವಾಗಿ ನೀರನ್ನೆತ್ತಿ ಬಳಸಿಕೊಳ್ಳುತ್ತಿರುವುದರಿಂದ ಹಾಗೂ ನದಿ ಪಾತ್ರದಲ್ಲಿ ಕೆಲವು ಗ್ರಾಮಗಳಲ್ಲಿ ನದಿಗೆ ಅಡ್ಡಲಾಗಿ ಅನಧಿಕೃತ ಮಣ್ಣಿನ/ಮರಳಿನ ಏರಿಯನ್ನು ನಿರ್ಮಿಸಿ ನೀರನ್ನು ಎತ್ತುತ್ತಿರುವುದರಿಂದ ನಿಗದಿತ ಪ್ರದೇಶಕ್ಕೆ ಜಲಾಶಯದಿಂದ ನೀರು ತಲುಪಿರುವುದಿಲ್ಲ.
2023-24 ನೇ ಸಾಲಿಗೆ ಭದ್ರಾ ಕಾಲುವೆಯಲ್ಲಿ ಬೇಸಿಗೆ ಹಂಗಾಮಿಗೆ ನೀರನ್ನು ಹರಿಸುತ್ತಿದ್ದು, ಅಕ್ರಮ ಪಂಪ್‍ಸೆಟ್ ಅಳವಡಿಸಿ ನೀರನ್ನು ಎತ್ತಿ ಬಳಸುತ್ತಿರುವುದರಿಂದ ಅಚ್ಚುಕಟ್ಟು ಕೊನೆಯ ಭಾಗದವರಿಗೆ ನೀರು ಹರಿಸುವುದು ಕಷ್ಟಕರವಾಗಿದೆ. ಹಾಗೂ ಕುಡಿಯುವ ನೀರು ಪೂರೈಸುವುದೂ ಕಷ್ಟವಾಗಿದೆ.
ಆದ್ದರಿಂದ ಪಂಪ್‍ಸೆಟ್‍ಗಳನ್ನು ತೆರವುಗೊಳಿಸಿ ಅಚ್ಚುಕಟ್ಟು ಕೊನೆಯ ಭಾಗದವರಿಗೆ ಹಾಗೂ ಕುಡಿಯುವ ನೀರನ್ನು ಪೂರೈಸುವ ಸಲುವಾಗಿ ಭದ್ರಾ ನಾಲಾ ಮತ್ತು ನದಿ ಪಾತ್ರಗಳಲ್ಲಿ ಅಳವಡಿಸಿರುವ ಪಂಪ್‍ಸೆಟ್, ಡೀಸೆಲ್ ಜನ್‍ಸೆಟ್ ಮತ್ತು ಇತರೆ ಉಪಕರಣಗಳನ್ನು ತೆರವುಗೊಳಿಸಲು ಹಾಗೂ ಭದ್ರಾ ನಾಲಾ ಮತ್ತು ನದಿಯ ಪಾತ್ರಗಳ ಸುತ್ತಮುತ್ತ ಪ್ರದೇಶ ವ್ಯಾಪ್ತಿಯಲ್ಲಿ ಸಿಆರ್‍ಪಿಸಿ ಕಲಂ 144 ಅಡಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲು ಕೋರಲಾಗಿರುತ್ತದೆ.
ಪ್ರಸ್ತುತ ರಾಜ್ಯ, ಜಿಲ್ಲೆಯಲ್ಲಿ ಭೀಕರ ಬರಗಾಲವಿದ್ದು ಕುಡಿಯುವ ನೀರಿಗೆ ತುಂಬಾ ಬೇಡಿಕೆ ಇದೆ. ಭದ್ರಾ ನಾಲಾ ಕಾಲುವೆಳಲ್ಲಿ ನೀರು ಹರಿಸುತ್ತಿರುವುದರಿಂದ ಕಾಲುವೆಗಳ ಸುತ್ತ-ಮುತ್ತಲಿನ ಪ್ರದೇಶಗಳಲ್ಲಿ ಸೂಕ್ತ ಬಂದೋಬಸ್ತ್ ವ್ಯವಸ್ಥೇ ಒದಗಿಸುವುದಕ್ಕಾಗಿ ಹಾಗೂ ಕಾಲುವೆಗಳ ಪ್ರದೇಶದಲ್ಲಿ ಅನಧಿಕೃತವಾಗಿ ರೈತರರು ಹೊಲಗಳಿಗೆ ನೀರನ್ನು ಹರಿಸುವುದಾಗಲೀ ಅಥವಾ ಪಂಪ್‍ಸೆಟ್ ಮತ್ತು ತೂಬುಗಳ ಮೂಲನ್ನು ನೀರನ್ನು ಎತ್ತುವಳಿ ಮಾಡುವುದನ್ನು ಸಂಪೂರ್ಣವಾಗಿ ನಿಷೇಧಿಸಿ ಫೆ.19 ರಿಂದ 26 ರವರೆಗೆ ಭದ್ರಾ ನಾಲಾ ಮತ್ತು ನದಿ ಪಾತ್ರ ಪ್ರದೇಶದ ಸುತ್ತಮುತ್ತ 100 ಮೀ ವ್ಯಾಪ್ತಿಯಲ್ಲಿ ಸಿಆರ್‍ಪಿಸಿ ಕಲಂ 144 ರನ್ವಯ ನಿಷೇಧಾಜ್ಞೆ ಜಾರಿಗೊಳಿಸಿ ಆದೇಶಿಸಿದ್ದಾರೆ.