ಕೈದಿ ಬಾಂಬೆ ಸಲೀಂನಿಂದ ಪೊಲೀಸರ ಮೇಲೆ ಹಲ್ಲೆ*

*ಕೈದಿ ಬಾಂಬೆ ಸಲೀಂನಿಂದ ಪೊಲೀಸರ ಮೇಲೆ ಹಲ್ಲೆ*

ಕೊಪ್ಪಳ ಜಿಲ್ಲಾ ಆಸ್ಪತ್ರೆಯಲ್ಲಿ ಪೈಲ್ಸ್ ಚಿಕಿತ್ಸೆಗೆಂದು ಕರೆತರಲಾಗಿದ್ದ ವಿಚಾರಣಾಧೀನ ಕೈದಿ ಮಹಮ್ಮದ್ ಖಲೀಲ್ ಅಲಿಯಾಸ್ ಬಾಂಬೆ ಸಲೀಂ, ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿ ಹೈಡ್ರಾಮಾ ಸೃಷ್ಟಿಸಿದ ಘಟನೆ ನಡೆದಿದೆ.

ಕುಖ್ಯಾತ ಕಳ್ಳನಾಗಿರುವ ಬಾಂಬೆ ಸಲೀಂ, ಟಿನ್ನರ್ ಕುಡಿದು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಪೊಲೀಸರಿಗೆ ಬೆದರಿಕೆ ಹಾಕಿದ್ದಾನೆ. ಈ ಘಟನೆಯಲ್ಲಿ ಬಾಂಬೆ ಸಲೀಂ, ಪೊಲೀಸ್ ಸಿಬ್ಬಂದಿ ಸಂತೋಷ್ ಹಾಗೂ ಹುಲಗಪ್ಪ ಎಂಬುವರ ಮೇಲೆ ಹಲ್ಲೆಗೆ ಯತ್ನಿಸಿದ್ದಾನೆ. ಇದರ ಜೊತೆಗೆ, ‘ಸ್ಥಳಕ್ಕೆ ಎಸ್ಪಿಯವರನ್ನು ಕರೆಸಿ’ ಎಂದು ಗಲಾಟೆ ಮಾಡಿದ್ದಾನೆ.

ಇತ್ತೀಚೆಗೆ ಪೊಲೀಸ್ ಯೂನಿಫಾರಂ ಧರಿಸಿ ವೈರಲ್ ಆಗಿದ್ದ ಬಾಂಬೆ ಸಲೀಂ, ಆಡುಗೋಡಿ ಪೊಲೀಸ್ ವಸತಿಯ ಕಾನ್ಸ್‌ಟೇಬಲ್ ಮನೆಯಲ್ಲಿ ತಂಗಿದ್ದ ಆರೋಪವನ್ನೂ ಎದುರಿಸುತ್ತಿದ್ದಾನೆ. ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೆಪಲ್ಲಿ ಪೊಲೀಸ್ ಠಾಣೆಯಲ್ಲಿ ಕಳೆದ ವರ್ಷ ದಾಖಲಾದ ಪ್ರಕರಣದ ಆರೋಪಿಯಾಗಿರುವ ಬಾಂಬೆ ಸಲೀಂ, ಈ ಹಿಂದೆ ಬಳ್ಳಾರಿ ಜೈಲಿನಲ್ಲಿದ್ದು, ಇತ್ತೀಚೆಗೆ ಕೊಪ್ಪಳ ಜೈಲಿಗೆ ವರ್ಗಾವಣೆಯಾಗಿದ್ದ. ಜೈಲಿನಲ್ಲಿ ಅನಾರೋಗ್ಯದ ನೆಪವೊಡ್ಡಿದ್ದರಿಂದ, ಪೊಲೀಸರು ಆರೋಪಿಯನ್ನ ಕೊಪ್ಪಳ ಜಿಲ್ಲಾ ಆಸ್ಪತ್ರೆಗೆ ಕರೆತಂದಿದ್ದರು. ಆದರೆ, ಆಸ್ಪತ್ರೆಯಲ್ಲಿ ಈತ ಗಲಾಟೆ ಆರಂಭಿಸಿ, ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ್ದಾನೆ.

ಈ ಘಟನೆಗೆ ಸಂಬಂಧಿಸಿದಂತೆ ಕೊಪ್ಪಳ ನಗರ ಠಾಣೆಯಲ್ಲಿ ಪೊಲೀಸ್ ಹಾಗೂ ಜಿಲ್ಲಾಸ್ಪತ್ರೆಯ ಸಿಬ್ಬಂದಿಗೆ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಡಿ ಪ್ರಕರಣ ದಾಖಲಾಗಿದೆ. ಈ ಘಟನೆಯಿಂದ ಆಸ್ಪತ್ರೆಯಲ್ಲಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.