ದೆಹಲಿಯಲ್ಲಿ ಕಾಂಗ್ರೆಸ್‌- ಎಎಪಿ ಸೀಟು ಹಂಚಿಕೆ ಪ್ರಕ್ರಿಯೆ ಅಂತಿಮ

ದೆಹಲಿಯಲ್ಲಿ ಕಾಂಗ್ರೆಸ್‌- ಎಎಪಿ ಸೀಟು ಹಂಚಿಕೆ ಪ್ರಕ್ರಿಯೆ ಅಂತಿಮ

ಕೃಪೆ :ನಾನು ಗೌರಿ

ಲೋಕಸಭೆ ಚುನಾವಣೆ ಹಿನ್ನೆಲೆ ದೆಹಲಿಯಲ್ಲಿ ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಕ್ಷ (ಎಎಪಿ) ಸೀಟು ಹಂಚಿಕೆಯನ್ನು ಅಂತಿಮ ಮಾಡಿಕೊಂಡಿದೆ. ಹಲವು ಸುತ್ತಿನ ಚರ್ಚೆಗಳ ನಂತರ ದೆಹಲಿಯ ಏಳು ಲೋಕಸಭಾ ಸ್ಥಾನಗಳಿಗೆ ತಮ್ಮ ಸೀಟು ಹಂಚಿಕೆ ಮೈತ್ರಿಯನ್ನು ಅಂತಿಮಗೊಳಿಸಿವೆ ಎಂದು ಕಾಂಗ್ರೆಸ್‌ ಮತ್ತು ಎಎಪಿ ಮೂಲಗಳು ತಿಳಿಸಿದೆ.
ಎಎಪಿ ನಾಲ್ಕು ಮತ್ತು ಕಾಂಗ್ರೆಸ್ ಮೂರು ಕ್ಷೇತ್ರಗಳಲ್ಲಿ ಸ್ಪರ್ಧಿಸುವ ಮೂಲಕ ನಾಲ್ಕು-ಮೂರು ಸೀಟು ಹಂಚಿಕೆ ಸೂತ್ರಕ್ಕೆ ಎಎಪಿ ಮತ್ತು ಕಾಂಗ್ರೆಸ್‌ ಪಕ್ಷಗಳು ಒಪ್ಪಿಗೆಯನ್ನು ನೀಡಿದೆ ಎಂದು ವರದಿಗಳು ತಿಳಿಸಿದೆ. ಸುದೀರ್ಘವಾದ ಮಾತುಕತೆಯ ನಂತರ ಕಾಂಗ್ರೆಸ್‌ನ ಪ್ರಸ್ತಾವನೆಗೆ ಎಎಪಿ ಒಪ್ಪಿಗೆ ನೀಡಿದ ನಂತರ ಒಪ್ಪಂದವನ್ನು ಅಂತಿಮಗೊಳಿಸಲಾಗಿದೆ ಎಂದು ಹಿರಿಯ ಕಾಂಗ್ರೆಸ್ ನಾಯಕರೊಬ್ಬರು ತಿಳಿಸಿದ್ದಾರೆ.
ಕಾಂಗ್ರೆಸ್ ಮೂಲಗಳ ಪ್ರಕಾರ, ಕಾಂಗ್ರೆಸ್ ಪಕ್ಷವು ಪೂರ್ವ ಹಾಗೂ ವಾಯುವ್ಯ ದೆಹಲಿ ಲೋಕಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದೆ ಎಂದು ಹೇಳಲಾಗಿದೆ. ಉಭಯ ಪಕ್ಷಗಳ ನಡುವೆ ಸೀಟು ಹಂಚಿಕೆ ಮಾತುಕತೆ ಅಂತಿಮ ಹಂತಕ್ಕೆ ತಲುಪಿದೆ. ಇದರಿಂದ ಮೈತ್ರಿಗೆ ಎದುರಾಗಿರುವ ತೊಡಕು ನಿವಾರಣೆಯಾಗಿದೆ. ಸೀಟು ಹಂಚಿಕೆ ಸಂಬಂಧ ಎರಡೂ ಪಕ್ಷಗಳು ಒಮ್ಮತದ ನಿರ್ಧಾರಕ್ಕೆ ಬಂದಿವೆ ಎಂದು ಹೇಳಲಾಗಿದೆ.
ದಕ್ಷಿಣ ದೆಹಲಿ, ಪಶ್ಚಿಮ ದೆಹಲಿ, ವಾಯುವ್ಯ ದೆಹಲಿ ಮತ್ತು ನವದೆಹಲಿ ಕ್ಷೇತ್ರಗಳಲ್ಲಿ ಎಎಪಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆ. ಚಾಂದಿನಿ ಚೌಕ್, ಪೂರ್ವ ದೆಹಲಿ ಮತ್ತು ಈಶಾನ್ಯ ದೆಹಲಿ ಕ್ಷೇತ್ರಗಳಿಂದ ಕಾಂಗ್ರೆಸ್ ಸ್ಪರ್ಧಿಸಲಿದೆ ಎಂದು ಎಎಪಿ ಪಕ್ಷದ ಮೂಲಗಳು ತಿಳಿಸಿವೆ. ಈ ಕುರಿತು ಅಂತಿಮ ಪಟ್ಟಿ ಶುಕ್ರವಾರ ಘೋಷಿಸುವ ಸಾಧ್ಯತೆ ಇದೆ.
ಹಿರಿಯ ಕಾಂಗ್ರೆಸ್ ನಾಯಕರ ಪ್ರಕಾರ, ಪೂರ್ವ ಮತ್ತು ವಾಯವ್ಯ ದೆಹಲಿ ಲೋಕಸಭಾ ಕ್ಷೇತ್ರಗಳಿಂದ ಕಾಂಗ್ರೆಸ್ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದು ಬಹುತೇಕ ಖಚಿತವಾಗಿದೆ. ಈ ಮೊದಲು ದೆಹಲಿಯಲ್ಲಿ ಎಎಪಿ ಮತ್ತು ಕಾಂಗ್ರೆಸ್‌ ನಡುವೆ ಮೈತ್ರಿ ಬಗ್ಗೆ ಎರಡೂ ಪಕ್ಷಗಳು ಕೂಡ ಒಮ್ಮತವನ್ನು ವ್ಯಕ್ತಪಡಿಸಿತ್ತು, ಇದಾದ ಬಳಿಕ ದೆಹಲಿಯಲ್ಲಿ ಕಾಂಗ್ರೆಸ್‌ಗೆ ಎಎಪಿ ಒಂದು ಸ್ಥಾನವನ್ನು ಬಿಟ್ಟುಕೊಡುತ್ತೆ ಎಂದು ವರದಿಯಾಗಿತ್ತು. ಇದೀಗ ಎಎಪಿ ದೆಹಲಿಯಲ್ಲಿ ಕಾಂಗ್ರೆಸ್‌ಗೆ 3 ಸ್ಥಾನಗಳನ್ನು ಬಿಟ್ಟುಕೊಡುವುದಾಗಿ ಹೇಳಿದೆ. ಕಳೆದ ಲೋಕಸಭೆ ಚುನಾವಣೆಯಲ್ಲಿ ದೆಹಲಿಯ ಎಲ್ಲಾ 7 ಕ್ಷೇತ್ರಗಳು ಬಿಜೆಪಿ ಪಾಲಾಗಿದ್ದವು.