ಹೊಸ ರಸ್ತೆಗಳಿಂದ ಶಿವಮೊಗ್ಗದಲ್ಲಿ ಸಮಗ್ರ ಅಭಿವೃದ್ದಿ ಆಗಲಿದೆ : ಕೇಂದ್ರ ಸಚಿವ ನಿತಿನ್ ಗಡ್ಕರಿ*

*ಹೊಸ ರಸ್ತೆಗಳಿಂದ ಶಿವಮೊಗ್ಗದಲ್ಲಿ ಸಮಗ್ರ ಅಭಿವೃದ್ದಿ ಆಗಲಿದೆ : ಕೇಂದ್ರ ಸಚಿವ ನಿತಿನ್ ಗಡ್ಕರಿ*

ಶಿವಮೊಗ್ಗದಲ್ಲಿ ಹೊಸ ರಸ್ತೆಗಳಿಂದಾಗಿ ವ್ಯಾಪಾರ, ಕೈಗಾರಿಕೆ, ಶಿಕ್ಷಣ ಸೇರಿದಂತೆ ಸಮಗ್ರ ಕಲ್ಯಾಣ ಆಗಲಿದೆ ಎಂದು ಕೇಂದ್ರ ರಸ್ತೆ ಹಾಗೂ ಹೆದ್ದಾರಿ ಸಚಿವರಾದ ನಿತಿನ್ ಗಡ್ಕರಿ ಹೇಳಿದರು.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ರಸ್ತೆ ಸಾರಿಗೆ ಮತ್ತು ಹೆದ್ದಾರಿ, ಭಾರತ ಸರ್ಕಾರ ಹಾಗೂ ಪಿಡಬ್ಲ್ಯ ಡಿ ಇಲಾಖೆ ಶಿವಮೊಗ್ಗ ವತಿಯಿಂದ ಇಂದು ನೆಹರೂ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ವಿವಿಧ ಕಾಮಗಾರಿಗಳ ಚಾಲನೆ ಮತ್ತು ಶಂಕುಸ್ಥಾಪನೆಗೊಳಿಸುವ ಕಾರ್ಯಕ್ರಮದಲ್ಲಿ ಏಳು ಜಿಲ್ಲೆಗಳಿಗೆ ಸಂಬಂಧಿಸಿದ ರೂ.6200 ಕೋಟಿ ಮೊತ್ತದ ಒಟ್ಟು 300 ಕಿ.ಮೀ ಉದ್ದದ ಒಟ್ಟು 18 ರಾಷ್ಟ್ರೀಯ ಹೆದ್ದಾರಿಗಳ ಕಾಮಗಾರಿಗಳ ಉದ್ಘಾಟನೆ ಹಾಗೂ ರೂ.2,138.30 ಕೋಟಿ ಮೊತ್ತದ ಕಾಮಗಾರಿಗಳಿಗೆ ಶಂಕು ಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.
ಕರ್ನಾಟಕ ರಾಜ್ಯ ಪ್ರಗತಿಶೀಲ, ಸಮೃದ್ದ ರಾಜ್ಯವಾಗಿದ್ದು, ಸ್ವಾಭಾವಿಕ ಸಂಪತ್ತಿನಿಂದ ಹಿಡಿದು ಐಟಿ ವಲಯದವರೆಗೆ ವಿಕಾಸ ಹೊಂದುತ್ತಿದೆ. ಈ ವಿಕಾಸದ ವೇಗ ಹೆಚ್ಚಿದಷ್ಟು ದೇಶದ ಅಭಿವೃದ್ದಿಗೆ ಸಹಕಾರಿಯಾಗುತ್ತದೆ. ನಮ್ಮ ರಾಷ್ಟ್ರವು ಮೂರನೇ ಅತಿ ದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಬೇಕೆಂಬುದು ನಮ್ಮ ಪ್ರಧಾನಿಯವರ ಕನಸಾಗಿದ್ದು ಆತ್ಮ ನಿರ್ಭರ ಭಾರತ ನಮ್ಮೆಲ್ಲರ ಗುರಿಯಾಗಬೇಕು ಎಂದರು.
ಸಂಸದರಾದ ಬಿ.ವೈ.ರಾಘವೇಂದ್ರರವರು ಜಿಲ್ಲೆಗೆ ಅವಶ್ಯಕವಾದ ಕೆಲಸಗಳ ಕುರಿತು ನಿರಂತರವಾಗಿ ತಮ್ಮ ಸಂಪರ್ಕದಲ್ಲಿದ್ದು ಕಾಮಗಾರಿಗಳನ್ನು ತಂದಿದ್ದಾರೆ. ಶಿವಮೊಗ್ಗದಲ್ಲಿ ಹೊಸ ರಸ್ತೆಗಳಿಂದ ವ್ಯಾಪಾರ, ಕೈಗಾರಿಕೆ ಸೇರಿದಂತೆ ಸಮಗ್ರ ಅಭಿವೃದ್ದಿ ಆಗಲಿದೆ.
ರಸ್ತೆಗಳನ್ನು ರಾ.ಹೆದ್ದಾರಿಯಾಗಿ ಉನ್ನತೀಕರಿಸಲು ಹಾಗೂ ಹೊಸ ರಸ್ತೆ, ಕಾಮಗಾರಿಗಳಿಗೆ ಮಂಜೂರಾತಿ ನೀಡಲಾಗಿದ್ದು ಭೂ ಸ್ವಾಧೀನ ಮತ್ತು ಅರಣ್ಯ ಇಲಾಖೆ ಅನುಮತಿ ಪಡೆದು ವೇಗದಲ್ಲಿ ಕೆಲಸಗಳು ಆಗಬೇಕು. ಸಾಗರ-ಮರಕುಟುಕ ವೆರೆಗೆ ರಸ್ತೆ ಅಗಲೀಕರಣಕ್ಕೆ ಮಂಜೂರಾತಿ ನೀಡಲಾಗಿದೆ. ರಾ.ಹೆ 169 ಎ ರ ಆಗುಂಬೆಯಲ್ಲಿ ಟನಲ್ ನಿರ್ಮಾಣಕ್ಕೆ ಕೋರಿದ್ದು ಇದನ್ನು ಪರಿಶೀಲಿಸಿ ಮಂಜೂರಾತಿ ನೀಡಲಾಗುವುದು. 3 ಕಡೆ ಹೈಮಾಸ್ಟ್ ಲೈಟ್‍ಗಳನ್ನು ಕೇಳಿದ್ದು ಆದೇಶ ನೀಡಲಾಗುವುದು ಎಂದರು
ಬೆಂಗಳೂರು ರಿಂಗ್ ರಸ್ತೆ- ಜನವರಿ 2025 ರಲ್ಲಿ ಪೂರ್ಣ:
ಬೆಂಗಳೂರು ಸಂಚಾರ ದಟ್ಟಣೆ ಕಡಿಮೆಗೊಳಿಸಲು 17 ಸಾವಿರ ಕೋಟಿ ವೆಚ್ಚದ ರಿಂಗ್ ರಸ್ತೆ ನಿರ್ಮಾಣ ಮಾಡಲಾಗುತ್ತಿದೆ. ಇದರಿಂದ ಸಾರಿಗೆ ಸಮಸ್ಯೆ ನಿವಾರಣೆ ಜತೆಗೆ ರಾಜ್ಯದ ಜನರಿಗೆ ಅನುಕೂಲವಾಗಲಿದೆ. ಜನವರಿ 2025 ರ ವೇಳೆಗೆ ಆರು ಪ್ಯಾಕೆಜ್ ಗಳ ರಿಂಗ್ ರಸ್ತೆ ಕಾಮಗಾರಿಯನ್ನು ಪೂರ್ಣಗೊಳಿಸಲಾಗುವುದು.
ಕರ್ನಾಟಕದ ಬಂದರುಗಳು ಅಭಿವೃದ್ಧಿಗೊಂಡರೆ ರಾಜ್ಯದ ಅಭಿವೃದ್ಧಿಯ ವೇಗ ಇನ್ನಷ್ಟು ಹೆಚ್ಚಾಗಲಿದೆ ಎಂದು ಅಭಿಪ್ರಾಯಪಟ್ಟ ಅವರು, ರಾಜ್ಯದ ಒಟ್ಟಾರೆ ಪ್ರಗತಿಯಲ್ಲಿ ರಸ್ತೆಗಳ ಪಾತ್ರ ಪ್ರಮುಖವಾಗಲಿದೆ ಎಂದರು.
ಲೋಕೋಪಯೋಗಿ ಇಲಾಖೆ ಕಳಿಸಿದ 17 ಪ್ರಮುಖ ಯೋಜನೆಗಳ ಬಗ್ಗೆ ಪರಿಶೀಲಿಸಲಾಗುತ್ತಿದೆ. ಆದಷ್ಟು ಬೇಗನೇ ಇವುಗಳಿಗೆ ಅಗತ್ಯ ಮಂಜೂರಾತಿ ನೀಡಲಾಗುವುದು.
ಸಿ.ಆರ್.ಎಫ್. ಅಡಿ 2000 ಕೋಟಿ ವೆಚ್ಚದ ಕಾಮಗಾರಿಗಳನ್ನು ಕರ್ನಾಟಕ ರಾಜ್ಯಕ್ಕೆ ಮಂಜೂರು ಮಾಡಲಾಗಿದೆ ಎಂದು ತಿಳಿಸಿದ ಅವರು ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಹೆದ್ದಾರಿ ಜಾಲವನ್ನು ಜೋಡಿಸುವ ಮೂಲಕ ಒಟ್ಟಾರೆ ಪ್ರಯಾಣದ ಅವಧಿಯನ್ನು ಕಡಿಮೆಗೊಳಿಸುವುದರ ಜತೆಗೆ ಅಭಿವೃದ್ಧಿಗೆ ಪೂರಕವಾದ ವಾತಾವರಣ ಲಭಿಸಲಿದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಆಶಯ ವ್ಯಕ್ತಪಡಿಸಿದರು.
ಪೂರಕ ಇಂಧನವಾಗಿ ಎಥೆನಾಲ್ ಬಳಕೆಗೆ ಸಲಹೆ : ಪೆಟ್ರೋಲ್, ಡೀಸೆಲ್ ಬೆಲೆಗೆ ಹೋಲಿಸಿದರೆ ಎಥೆನಾಲ್ ಕಡಿಮೆ ದರದಲ್ಲಿ ದೊರಕುತ್ತದೆ. ಎಥೆನಾಲ್, ಗ್ರೀನ್ ಹೈಡ್ರೋಜನ್, ಎಲೆಕ್ಟ್ರಿಕಲ್ ವಾಹನಗಳು ಸೇರಿದಂತೆ ಜೈವಿಕ ಇಂಧನ ನಮ್ಮ ಮುಂದಿನ ಭವಿಷ್ಯವಾಗಿದೆ. ಜಿಲ್ಲೆಯಲ್ಲಿ ಎಥೆನಾಲ್ ಉತ್ಪಾದನೆ ಹಾಗೂ ಬಳಕೆಗೆ ಹೆಚ್ಚು ಅವಕಾಶಗಳಿವೆ. ಸಕ್ಕರೆ ಕಾರ್ಖಾನೆಗಳಿವೆ ಇದರಿಂದ ಸಹ ಉತ್ಪಾದಿಸಬಹುದು. ಎಥೆನಾಲ್ ನಿಂದ ವಿಮಾನ ಇಂಧನ ಸಹ ತಯಾರಾಗುತ್ತಿದ್ದು ರೈತರ ಅಭಿವೃದ್ಧಿ ಮತ್ತು ಪರಿಸರ ದೃಷ್ಟಿಯಿಂದ ಶಿವಮೊಗ್ಗ ಜಿಲ್ಲೆಯಾದ್ಯಂತ ಎಥೆನಾಲ್ ಬಳಕೆಗೆ ರಾಜ್ಯ ಸರಕಾರ ಪೆÇ್ರೀತ್ಸಾಹ ನೀಡಬೇಕು ಎಂದ ಅವರು ರಾಜ್ಯ ಜೈವಿಕ ಇಂಧನ ಉತ್ಪಾದಕ ಹಬ್ ಆಗಬಹುದು.
ಮುಂಬರುವ ದಿನಗಳಲ್ಲಿ ಜಗತ್ತಿಗೆ ಎಥೆನಾಲ್ ರಫ್ತುಗೊಳಿಸುವ ಗುರಿಯನ್ನು ಹೊಂದಲಾಗಿದೆ. ಭವಿಷ್ಯದಲ್ಲಿ ಎಥೆನಾಲ್ ಹಾಗೂ ಮಿಥೆನಾಲ್ ಆಧಾರಿತ ವಾಹನಗಳನ್ನು ರಸ್ತೆಗಿಳಿಸುವ ಮೂಲಕ ಪರಿಸರ ರಕ್ಷಣೆ ಜತೆಗೆ ರೈತರ ಆರ್ಥಿಕಾಭಿವೃದ್ಧಿಗೂ ಅವಕಾಶ ಕಲ್ಪಿಸಲಾಗುವುದು ಎಂದು ಸಚಿವ ಗಡ್ಕರಿ ಹೇಳಿದರು.
ಸಂಸದರಾದ ಬಿ.ವೈ.ರಾಘವೇಂದ್ರ ಮಾತನಾಡಿ, ಕಳೆದ 9 ವರ್ಷದಲ್ಲಿ ರಾಜ್ಯದಲ್ಲಿ 54,858 ಕಿ.ಮೀ ರಾಷ್ಟ್ರ್ರೀಯ ಹೆದ್ದಾರಿ ಅಭಿವೃದ್ದಿ ಆಗಿದೆ. ಪ್ರತಿ ದಿನ 371 ಕಿ.ಮೀ ರಸ್ತೆ ಅಭಿವೃದ್ದಿ ಆಗುತ್ತಿದ್ದು ಭಾರತ ದೇಶ ರಸ್ತೆ ಅಭಿವೃದ್ದಿಯಲ್ಲಿ ಮೊದಲನೇ ಸ್ಥಾನದಲ್ಲಿದೆ. ಮಾನ್ಯ ಕೇಂದ್ರ ಸಚಿವರು ರೂ.6.68 ಕೋಟಿ ದಕ್ಷಿಣ ವಲಯಕ್ಕೆ ನೀಡಿದ್ದಾರೆ. ಸಿಗಂದೂರು ಕೇಬಲ್ ಸೇತುವೆ, ರಾಷ್ಟ್ರೀಯ ಹೆದ್ದಾರಿ ಉನ್ನತೀಕರಣ, ರಿಂಗ್ ರಸ್ತೆ, ರಾಣೆಬೆನ್ನೂರು-ಬೈಂದೂರು ರಸ್ತೆ, ಮೇಲ್ಸೇತುವೆಗಳಿಗೆ ಕೇಂದ್ರ ಸಚಿವರು ಅನುದಾನ ಒದಗಿಸಿದ್ದು, ರ್ತೆ ಸಾರಿಗೆಯನ್ನು ಸುರಕ್ಷಿತ ಮತ್ತು ಕಡಿಮೆ ಸಮಯದಲ್ಲಿ ತಲುಪುವಂತೆ ಮಾಡಿದ್ದಾರೆ.
ಕೊಡಚಾದ್ರಿ ಕೇಬಲ್ ಕಾರ್ ಯೋಜನೆ ರೂ.380 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿದ್ದು ಟೆಂಡರ್ ಹಂತದಲ್ಲಿದ್ದು ಒಟ್ಟು ರೂ.2,250 ಕೋಟಿ ಕಾಮಗಾರಿ ಮಂಜೂರಾತಿ ಪ್ರಕ್ರಿಯೆಯಲ್ಲಿವೆ. ಸಚಿವರು ಶರಾವತಿ ಹಿನ್ನೀರು ಪ್ರದೇಶದಲ್ಲಿ ಗ್ರಾ.ಪಂ ರಸ್ತೆಯನ್ನು ರಾ.ಹೆದ್ದಾರಿಯಾಗಿ ಉನ್ನತೀಕರಣಕ್ಕೆ ಮಂಜೂರಾತಿ ನೀಡಲಾಗಿದೆ. 280 ಬಿಎಸ್‍ಎನ್‍ಎಲ್ ಟವರ್ ಗೆ ಮಂಜೂರಾತಿ ದೊರೆತಿದೆ. 2008 ರಿಂದ 22 ರವರೆಗೆ ಜಿಲ್ಲೆಯಲ್ಲಿ ರಸ್ತೆ, ಮೆಡಿಕಲ್ ಕಾಲೇಜು, ಕೃಷಿ, ತೋಟಗಾರಿಕೆ, ಪಶು ವೈದ್ಯಕೀಯ , ಕೇಂದ್ರೀಯ ವಿದ್ಯಾಲಯ, ರಾಷ್ಟ್ರೀಯ ರಕ್ಷಾ ವಿಶ್ವವಿದ್ಯಾಲಯ ಸೇರಿದಂತೆ ಸಮಗ್ರ ಅಭಿವೃದ್ದಿ ಕಂಡಿದೆ ಎಂದರು.
ಲೋಕೋಪಯೋಗಿ ಇಲಾಖೆ ಸಚಿವರಾದ ಸತೀಶ್ ಜಾರಕಿಹೊಳಿ ಮಾತನಾಡಿ, ರಸ್ತೆಗಳನ್ನು ಅಭಿವೃದ್ಧಿಪಡಿಸುವ ಮೂಲಕ ಸಮಗ್ರ ಅಭಿವೃದ್ಧಿಗೊಳಿಸುವುದು ಕೇಂದ್ರ ಹಾಗೂ ರಾಜ್ಯ ಸರಕಾರಗಳ ಕನಸಾಗಿದೆ. ಶಿವಮೊಗ್ಗ ಜಿಲ್ಲೆ ಸೇರಿದಂತೆ ದಕ್ಷಿಣ ವಲಯಕ್ಕೆ ರೂ.6200 ಕೋಟಿ ಕಾಮಗಾರಿಗಳು ಲೋಕಾರ್ಪಣೆಗೊಳ್ಳುತ್ತಿರುವುದು ಸಂತಸದ ವಿಷಯ. ಅಭಿವೃದ್ದಿಗೆ ರಸ್ತೆಗಳು ಬಹು ಮುಖ್ಯ. ಕಳೆದ 10 ವರ್ಷಗಳಲ್ಲಿ ನಿತಿನ್ ಗಡ್ಕರಿಯವರು ವಿಶೇಷ ಪ್ರಯತ್ನ ಮಾಡಿ ರಸ್ತೆಗಳನ್ನು ಅಭಿವೃದ್ದಿಪಡಿಸಿದ್ದಾರೆ. ರಾಜ್ಯದ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಲು 5 ಬಾರಿ ಸಚಿವರನ್ನು ಭೇಟಿ ಮಾಡಿದ್ದು 12 ವರ್ಷದಿಂದ ನೆನೆಗುದಿಗೆ ಬಿದ್ದಿದ್ದ ಸಮಸ್ಯೆಗಳಿಗೆ ಪರಿಹಾರ ನೀಡಿದ್ದಾರೆ. ಸ್ಥಳೀಯ ಶಾಸಕರು ಜಿಲ್ಲೆಯ 3 ರಸ್ತಗಳ ಉನ್ನತೀಕರಣಕ್ಕೆ ಮನವಿ ಮಾಡಿದ್ದು 1 ರಸ್ತೆಗೆ ಮಂಜೂರಾತಿ ನೀಡಿದ್ದು ಇನ್ನುಳಿದ 2 ನ್ನು ಹೊಸ ಬಜೆಟ್‍ಲ್ಲಿ ನೀಡಲಾಗುವುದು ಎಂದು ತಿಳಿಸಿದರು.
ಶಾಸಕರಾದ ಆರಗ ಜ್ಞಾನೇಂದ್ರ, ಎಸ್.ಎನ್.ಚನ್ನಬಸಪ್ಪ, ಗುರುರಾಜ ಶೆಟ್ಟಿ ಗಂಟಿಹೊಳೆ ಮಾತನಾತನಾಡಿದರು. ಬಳ್ಳಾರಿ ಸಂಸದರಾದ ದೇವೇಂದ್ರಪ್ಪ, ವಿಧಾನ ಪರಿಷತ್ ಶಾಸಕರಾದ ರುದ್ರೇಗೌಡ, ಇತರೆ ಜನಪ್ರತಿನಿಧಿಗಳು, ಪಿಡಬ್ಲ್ಯುಡಿ ಮುಖ್ಯ ಇಂಜಿನಿಯರ್ ರವೀಂದ್ರ, ಜಿಲ್ಲಾಧಿಕಾರಿ ಗುರುರಾಜ ಹೆಗಡೆ, ಜಿ.ಪಂ ಸಿಇಓ ಸ್ನೇಹಲ್ ಸುಧಾಕರ ಲೋಖಂಡೆ, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಮಿಥುನ್ ಕುಮಾರ್, ಇತರೆ ಅಧಿಕಾರಿಗಳು ಹಾಜರಿದ್ದರು.