ಕನ್ನಡ ರಾಜ್ಯೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ 1700 ಶಾಲಾ ಮಕ್ಕಳು ಪಾಲ್ಗೊಳ್ಳಲಿದ್ದಾರೆ: ಸಚಿವ ಮಧು ಬಂಗಾರಪ್ಪ

ಕನ್ನಡ ರಾಜ್ಯೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ 1700 ಶಾಲಾ ಮಕ್ಕಳು ಪಾಲ್ಗೊಳ್ಳಲಿದ್ದಾರೆ: ಸಚಿವ ಮಧು ಬಂಗಾರಪ್ಪ

ಬೆಂಗಳೂರು, ಅಕ್ಟೋಬರ್ 30:
ಕನ್ನಡ ರಾಜ್ಯೋತ್ಸವದ ಪೂರ್ವಭಾವಿ ಸಿದ್ಧತೆ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರಾದ ಶ್ರೀ ಮಧು ಬಂಗಾರಪ್ಪ ಅವರು, ಈ ಬಾರಿಯ ಕನ್ನಡ ರಾಜ್ಯೋತ್ಸವವು ವಿಶೇಷವಾಗಲಿರುವುದಾಗಿ ತಿಳಿಸಿದ್ದಾರೆ.

ಶ್ರೀ ಕಂಠೀರವ ಹೊರಾಂಗಣ ಕ್ರೀಡಾಂಗಣದಲ್ಲಿ ನಡೆಯಲಿರುವ ಕನ್ನಡ ರಾಜ್ಯೋತ್ಸವ ಸಮಾರಂಭದ ಸಿದ್ಧತೆಗಳನ್ನು ಸಚಿವರು ಪೊಲೀಸ್ ಹಾಗೂ ಶಿಕ್ಷಣ ಇಲಾಖೆಯ ಉನ್ನತ ಅಧಿಕಾರಿಗಳೊಂದಿಗೆ ಪರಿಶೀಲಿಸಿದರು.

“ಶಾಲಾ ಶಿಕ್ಷಣ ಸಚಿವನಾಗಿ ಇದು ನನ್ನ ಮೂರನೇ ಕನ್ನಡ ರಾಜ್ಯೋತ್ಸವ. ಈ ಬಾರಿ ಸಾಂಸ್ಕೃತಿಕ ಕಾರ್ಯಕ್ರಮವನ್ನು ವಿಭಿನ್ನವಾಗಿ ರೂಪಿಸಲಾಗಿದೆ. ಕಳೆದ ಬಾರಿ 1100 ಮಕ್ಕಳು ಭಾಗಿಯಾಗಿದ್ದು, ಅದರಲ್ಲಿ 300 ಮಂದಿ ಸರ್ಕಾರಿ ಶಾಲಾ ವಿದ್ಯಾರ್ಥಿಗಳಾಗಿದ್ದರು. ಈ ಬಾರಿ 1700 ಮಕ್ಕಳು ಭಾಗವಹಿಸಲಿದ್ದಾರೆ, ಅವರಲ್ಲಿ 700 ಮಂದಿ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು. ಭಾಗವಹಿಸುವ ಎಲ್ಲ ಮಕ್ಕಳಿಗೂ ಪ್ರಮಾಣಪತ್ರ ನೀಡಲಾಗುವುದು,” ಎಂದು ಸಚಿವ ಮಧು ಬಂಗಾರಪ್ಪ ಹೇಳಿದರು.

ಕನ್ನಡ ರಾಜ್ಯೋತ್ಸವ ಸಮಾರಂಭವನ್ನು ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ಅವರು ಉದ್ಘಾಟಿಸಲಿದ್ದು, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ವಿಧಾನ ಪರಿಷತ್ ಸಭಾಪತಿ ಶ್ರೀ ಬಸವರಾಜ ಹೊರಟ್ಟಿ ಮತ್ತು ವಿಧಾನಸಭಾಧ್ಯಕ್ಷ ಶ್ರೀ ಯು.ಟಿ. ಖಾದರ್ ಉಪಸ್ಥಿತರಿರಲಿದ್ದಾರೆ.

ಕನ್ನಡ ರಾಜ್ಯೋತ್ಸವದಂದು ಸನ್ಮಾನ್ಯ ಮುಖ್ಯಮಂತ್ರಿಗಳು ಶಾಲಾ ಶಿಕ್ಷಣ ಇಲಾಖೆಗೆ ಸಂಬಂಧಪಟ್ಟ ಹಲವು ವಿಶೇಷ ಕಾರ್ಯಕ್ರಮವನ್ನು ಘೋಷಣೆ ಮಾಡಲಿದ್ದಾರೆ ಎಂದರು.

ಸಚಿವರು ಮುಂದುವರಿದು, “ಸರ್ಕಾರಿ ಶಾಲೆಗಳಲ್ಲಿ ಉಚಿತ ವಿದ್ಯುತ್ ನೀಡಲಾಗುತ್ತಿದೆ. ಇದರಿಂದ ಶಿಕ್ಷಕರು ರೆಮಿಡಿಯಲ್ ತರಗತಿಗಳನ್ನು ಸುಲಭವಾಗಿ ನಡೆಸುತ್ತಿದ್ದಾರೆ. ಮಕ್ಕಳ ದಿನಾಚರಣೆಯ ಅಂಗವಾಗಿ ನವೆಂಬರ್ 14 ರಂದು ಮಕ್ಕಳು, ಪೋಷಕರು, ಶಿಕ್ಷಕರನ್ನು ಒಗ್ಗೂಡಿಸಿ ಮಕ್ಕಳ ದಿನಾಚರಣೆಯ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಅಲ್ಲದೇ, ಶಾಲೆಗಳ ಪ್ರವೇಶ ಪ್ರಚಾರ (Admission Drive) ಕ್ಕೆ ಚಾಲನೆ ನೀಡಲಾಗುತ್ತದೆ,” ಎಂದು ಹೇಳಿದರು.

ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಉತ್ತೀರ್ಣ ಅಂಕಗಳು 35ರಿಂದ 33ಕ್ಕೆ ನಿಗದಿ ಪಡಿಸಿರುವ ಬಗ್ಗೆ ಅವರು ಪ್ರತಿಕ್ರಿಯಿಸಿ, “ಇದು ನನ್ನ ವೈಯಕ್ತಿಕ ನಿರ್ಧಾರವಲ್ಲ. ಜನಾಭಿಪ್ರಾಯ ಪಡೆದು ಮಾಡಲಾಗಿದೆ. ಇದು ಗ್ರಾಮೀಣ ಹಾಗೂ ಹಿಂದುಳಿದ ವರ್ಗದ ಮಕ್ಕಳಿಗೆ ಹೆಚ್ಚು ಪ್ರಯೋಜನಕಾರಿಯಾಗಿದೆ,” ಎಂದರು.

ಸಚಿವರು ನೇಮಕಾತಿ ಕುರಿತು ಮಾತನಾಡುತ್ತಾ, “ಈಗಾಗಲೇ 13 ಸಾವಿರ ಶಿಕ್ಷಕರ ನೇಮಕಾತಿ ಪೂರ್ಣಗೊಂಡಿದೆ. ಮುಂದಿನ ಶೈಕ್ಷಣಿಕ ವರ್ಷದಲ್ಲಿ ಒಟ್ಟಾರೆಯಾಗಿ ಸುಮಾರು 32 ರಿಂದ 33 ಸಾವಿರ (ಈಗಾಗಲೇ 13 ಸಾವಿರ ಶಿಕ್ಷಕರ ನೇಮಕಾತಿ ಒಳಗೊಂಡಂತೆ) ಶಿಕ್ಷಕರನ್ನು (ಶಾಲಾ ಶಿಕ್ಷಣ, ಪಿಯುಸಿ, ಅನುದಾನಿತ ಶಾಲೆಗಳು ಸೇರಿದಂತೆ) ನೇಮಕ ಮಾಡಲಾಗುವುದು,” ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಶ್ಮಿ ಮಹೇಶ್, ಆಯುಕ್ತ ವಿಕಾಶ್ ಕಿಶೋರ್ ಸೂರಳ್ಕರ್, ಪಿಯುಸಿ ನಿರ್ದೇಶಕರಾದ ಭರತ್ ಎಸ್., ಶಾಲಾ ಶಿಕ್ಷಣ ಇಲಾಖೆಯ ಉನ್ನತ ಅಧಿಕಾರಿಗಳಾದ ಡಾ. ಕೆ. ವಿದ್ಯಾಕುಮಾರಿ, ಬಸವರಾಜೇಂದ್ರ, ಹೆಚ್.ಎನ್. ಗೋಪಾಲಕೃಷ್ಣ ಮತ್ತು ಕೃಷ್ಣಾಜಿ ಎಸ್. ಕರಿಚಣ್ಣವರ ಉಪಸ್ಥಿತರಿದ್ದರು.