ಮಣ್ಣು ಚೋರರ ಮಹಾಕಥೆಗಳು-೧* *ಪಳನಿ ಮತ್ತು ಮಣ್ಣು ಚೋರರ ವಿರುದ್ಧ ಅಧಿಕಾರಿಗಳೇಕೆ ಗಟ್ಟಿ ಕ್ರಮ ಕೈಗೊಳ್ತಿಲ್ಲ?!* *ಮಣ್ಣು ಕಳ್ಳರಿಂದ ಜಕಾತಿಕೊಪ್ಪದ ಅರಣ್ಯದ ಮಣ್ಣಿಗೇ ಕನ್ನ* *ಹಗಲು-ರಾತ್ರಿ ಸಾಗುತ್ತಿದೆ ನೂರಾರು ಲೋಡ್ ಮಣ್ಣು!*

*ಮಣ್ಣು ಚೋರರ ಮಹಾಕಥೆಗಳು-೧*

*ಪಳನಿ ಮತ್ತು ಮಣ್ಣು ಚೋರರ ವಿರುದ್ಧ ಅಧಿಕಾರಿಗಳೇಕೆ ಗಟ್ಟಿ ಕ್ರಮ ಕೈಗೊಳ್ತಿಲ್ಲ?!*

*ಮಣ್ಣು ಕಳ್ಳರಿಂದ ಜಕಾತಿಕೊಪ್ಪದ ಅರಣ್ಯದ ಮಣ್ಣಿಗೇ ಕನ್ನ*

*ಹಗಲು-ರಾತ್ರಿ ಸಾಗುತ್ತಿದೆ ನೂರಾರು ಲೋಡ್ ಮಣ್ಣು!*

ಶಿವಮೊಗ್ಗ ಸಮೀಪದ ಜಕಾತಿ ಕೊಪ್ಪದ ಅರಣ್ಯ ಜಮೀನನ್ನು ಪಳನಿ ಅ್ಯಂಡ್ ಗ್ಯಾಂಗ್ ಬಗೆದು ಮುಕ್ಕುತ್ತಿರುವ ವರದಿಗಳು ಬರುತ್ತಿದ್ದರೂ ಸಂಬಂಧಿಸಿದ ಅಧಿಕಾರಿಗಳು ಮಣ್ಣನ್ನಾಗಲೀ, ಆ ಮಣ್ಣನ್ನು ಅಕ್ರಮವಾಗಿ ಸಾಗಿಸುತ್ತಿರುವ ವಾಹನಗಳನ್ನಾಗಲೀ ವಶಕ್ಕೆ ಪಡೆಯದೇ ಇರುವುದು ಆಶ್ಚರ್ಯ ಉಂಟು ಮಾಡುತ್ತಿದೆ!

ಶಿವಮೊಗ್ಗದಲ್ಲಿರುವ ಗುಡ್ಡ ಬೆಟ್ಟಗಳು ಮಾತ್ರವಲ್ಲ ಸಂರಕ್ಷಿತ ಅರಣ್ಯ ಭೂಮಿ ಕೂಡ ಈಗ ಸೇಫಾಗಿಲ್ಲ. ಅರಣ್ಯ ಭೂಮಿಯ ಮಣ್ಣನ್ನು ಅಕ್ರಮವಾಗಿ ಲೂಟಿ ಮಾಡಲೆಂದೇ ಕೆಲ ಮಣ್ಣು ಚೋರರು ಹುಟ್ಟಿಕೊಂಡಿದ್ದಾರೆ. ಈ ಚೋರರನ್ನು ಬಗ್ಗು ಬಡಿಯುವ ಕೆಲಸ ಮಾತ್ರ ಅಧಿಕಾರಿಗಳಿಂದ ಯಾಕೆ ಸಾಧ್ಯವಾಗುತ್ತಿಲ್ಲವೋ ಗೊತ್ತಿಲ್ಲ.

ಶಿವಮೊಗ್ಗ ಮೂಲದ ಪಳನಿ ಮಾಲೀಕತ್ವದ ಕೆ.ಪಿ.ಅರ್ಥ್ ಮೂವರ್ಸ್ ಅ್ಯಂಡ್ ಸಪ್ಲೈಯರ್ಸ್ ಎಂಬ ಗುಪ್ತ ಹೆಸರಿನ ಲಾರಿಗಳು ಅಕ್ರಮ ಮಣ್ಣು ತೆಗೆದು ಸಾಗಿಸುವ ಕೆಲಸದಲ್ಲಿ ತಲ್ಲೀನವಾಗಿವೆ.

ಶಿವಮೊಗ್ಗದ ಜಕಾತಿಕೊಪ್ಪಸ ಸರ್ವೆ ನಂಬರ್ 45 ರಲ್ಲಿರುವ ಅರಣ್ಯ ಪ್ರದೇಶದ ಖಾಲಿ ಜಮೀನುಗಳಲ್ಲಿ ಅಕ್ರಮವಾಗಿ ಮಣ್ಣು ಬಗೆದು, ಲಾರಿಗಳಲ್ಲಿ ನೂರಾರು ಲೋಡ್ ಖಾಸಗಿ ಲೇಔಟ್ ಗಳಿಗೆ ಸಾಗಿಸುತ್ತಿರುವ ಮಾಹಿತಿ ಜಿಲ್ಲಾಧಿಕಾರಿಗಳಿಗೆ, ಭೂ ವಿಜ್ಞಾನ ಮತ್ತು ಗಣಿ ಇಲಾಖೆ, ಶಿವಮೊಗ್ಗ ಉಪ ವಿಭಾಗಾಧಿಕಾರಿಗಳಿಗೆ, ತಹಶೀಲ್ದಾರ್ ಕಚೇರಿಯ ಅಧಿಕಾರಿಗಳಿಗೆ ತಿಳಿಸಿದರೂ ಪಳನಿಯ ಮಣ್ಣು ಲೂಟಿ ನಿಂತಿಲ್ಲ. ಹಗಲು ರಾತ್ರಿ ಮಣ್ಣು ಲೂಟಿ ಮಾಡುತ್ತಿರುವ ಮಣ್ಣು ಕಳ್ಳರು ಕೆಲವೊಮ್ಮೆ ಹಗಲು ಕಾಣಿಸಿಕೊಳ್ಳದೇ ರಾತ್ರಿಯಿಡೀ ಎಡೆಬಿಡದೇ ಮಣ್ಣು ಲೂಟಿ ಹೊಡೆಯುತ್ತಿರುವುದು ಗುಪ್ತವಾಗೇನೂ ಉಳಿದಿಲ್ಲ.

ಜಕಾತಿಕೊಪ್ಪದ ಅರಣ್ಯದ ಅಕ್ರಮ ಮಣ್ಣಿನ ನೂರಾರು ಲೋಡುಗಳು ಸಾಗಿ ಅನ್ ಲೋಡ್ ಆಗುತ್ತಿರುವುದು ಕೋಟೆಗಂಗೂರಿನ ಖಾಸಗಿ ಲೇ ಔಟ್ ಗಳಿಗೆ. ಈ ವಿಚಾರವೂ ಅಧಿಕಾರಿಗಳಿಗೆ ಗೊತ್ತಿಲ್ಲವೆಂದೇನಿಲ್ಲ!

ಅರಣ್ಯ ಇಲಾಖೆಯ ಶಂಕರ ವಲಯ ವ್ಯಾಪ್ತಿಗೆ ಬರುವ ಶಂಕರ ವಲಯದ ಆರ್ ಎಫ್ ಓ ಈ ಅಕ್ರಮ ಮಣ್ಣು ಚೋರರನ್ನು ಹಿಡಿಯುವ ಪ್ರಯತ್ನದಲ್ಲಿದ್ದೇವೆ. ಆದರೂ ಎಫ್ ಐ ಆರ್ ಮಾಡಿಕೊಂಡಿದ್ದು, ಅಗತ್ಯ ಕ್ರಮ ಕೈಗೊಳ್ಳುವುದು ಖಚಿತ ಎಂದಿದ್ದಾರೆ.

ಈ ಅಕ್ರಮ ಮಣ್ಣು ಲೂಟಿಗೆ ಸಂಬಂಧಿಸಿದಂತೆ ತಹಶೀಲ್ದಾರರಿಗೂ ದೂರು ನೀಡಲಾಗಿತ್ತು. ಕೂಡಲೇ ಮಣ್ಣು ಲೂಟಿ ಪ್ರದೇಶಕ್ಕೆ ಭೇಟಿ ನೀಡಿದ ತಹಶೀಲ್ದಾರ ಕಚೇರಿಯ ಅಧಿಕಾರಿ ಮಲ್ಲೇಶ್ ನೇತೃತ್ವದ ತಂಡ, ತಾವು ಸಂಗ್ರಹಿಸಿದ ವೀಡಿಯೋ, ಚಿತ್ರಗಳು, ಮಾಹಿತಿಯನ್ನು ಅರಣ್ಯ ಇಲಾಖೆಯ ಶಂಕರ ವಲಯಕ್ಕೆ ದಾಟಿಸಿ ಕ್ರಮ ಕೈಗೊಳ್ಳಲು ಹೇಳಿದ್ದು ಕೂಡ ನಡೆದಿದೆ.

ಈಗಲಾದರೂ ಪಳನಿ ಮತ್ತು ಮಣ್ಣು ಕಳ್ಳರಿಂದ ಜಕಾತಿಕೊಪ್ಪ ಸೇರಿದಂತೆ ಸುತ್ತಮುತ್ತಲಿನ ಅರಣ್ಯ ಭೂಮಿ ಉಳಿಯುವುದೇ? ಕಾದು ನೋಡೋಣ…