*ಕೇರಳಕ್ಕೆ ಹೋಗುವ ಶಬರಿ ಮಲೈ ಯಾತ್ರಿಗಳೇ ಹುಷಾರ್…ಹುಷಾರ್…* *ಮಿದುಳು ತಿನ್ನುವ ಅಮೀಬಾ ಬಗ್ಗೆ ಹುಷಾರ್!!*

*ಕೇರಳಕ್ಕೆ ಹೋಗುವ ಶಬರಿ ಮಲೈ ಯಾತ್ರಿಗಳೇ ಹುಷಾರ್…ಹುಷಾರ್…*

*ಮಿದುಳು ತಿನ್ನುವ ಅಮೀಬಾ ಬಗ್ಗೆ ಹುಷಾರ್!!*

ಶಿವಮೊಗ್ಗ ಜಿಲ್ಲೆಯಿಂದ ಕೇರಳ ರಾಜ್ಯದ ಶಬರಿಮಲೈಗೆ ತೆರಳುವ ಯಾತ್ರಿಕರಿಗೆ ಮಿದುಳು ತಿನ್ನುವ ಅಮೀಬಾ(ನೇಗ್ಲೇರಿಯಾ ಫೌಲೇರಿ) ಕುರಿತು ಮುನ್ನೆಚ್ಚರಿಕೆ ವಹಿಸಲು ಹಾಗೂ ಸೋಂಕು ತಡೆಯಲು ರಾಜ್ಯ ಸರ್ಕಾರದ ಮಾರ್ಗಸೂಚಿಯನ್ವಯ ಈ ಕೆಳಕಂಡಂತೆ ಸುರಕ್ಷತೆ ಕ್ರಮಗಳನ್ನು ಪಾಲಿಸಲು ಸೂಚಿಸಲಾಗಿದೆ.
ನೇಗ್ಲೇರಿಯಾ ಫೌಲೇರಿ (Naegleria Fowleri) ಎಂಬುದು ಒಂದು ಸ್ವತಂತ್ರವಾಗಿ ಬದುಕುವ ಅಮೀಬಾ ಆಗಿದ್ದು, ಇದು ಮುಖ್ಯವಾಗಿ ಬೆಚ್ಚಗಿನ ಸಿಹಿನೀರು ಹಾಗೂ ಮಣ್ಣಿನಲ್ಲಿ ಕಂಡುಬರುತ್ತದೆ. ಉದಾಹರಣೆ:- ನಿಂತ ನೀರು, ಕೊಳ/ಈಜುಕೊಳಗಳು ಹಾಗೂ ಕೆರೆ.

ಈ ಸೋಂಕು ವ್ಯಕ್ತಿಯಿಂದ ವ್ಯಕ್ತಿಗೆ ಅಥವಾ ಕಲುಷಿತಗೊಂಡ ನೀರನ್ನು ಕುಡಿಯುವುದರಿಂದ ಹರಡುವುದಿಲ್ಲ.

ನೇಗ್ಲೇರಿಯಾ ಫೌಲೇರಿ (Naegleria Fowleri) ಅತ್ಯಂತ ವಿಷಕಾರಿ (Virulent) ಸೂಕ್ಷ್ಮಜೀವಿಯಾಗಿದ್ದು, ನೀರಿನಿಂದ ಮೂಗಿಗೆ ಪ್ರವೇಶಿಸಿದಾಗ ಅದು ಮೆದುಳನ್ನು ತಲುಪಿ, ಅಮೀಬಿಕ್ ಮೆನಿಂಗೊಎನ್ಸೆಫಲೈಟಿಸ್ (Amoebic Meningoencephalitis) ಎನ್ನುವ ಅಪರೂಪದ ಗಂಭೀರ/ಮಾರಣಾಂತಿಕ ಕಾಯಿಲೆಯನ್ನು ಉಂಟುಮಾಡುತ್ತದೆ. ಯಾತ್ರೆಯ ಸಂದರ್ಭದಲ್ಲಿ ನಿಂತ ನೀರಿನಲ್ಲಿ ಸ್ನಾನ ಮಾಡುವಾಗ ಮೂಗಿಗೆ ನೀರು ಪ್ರವೇಶಿಸದಂತೆ ಮೂಗಿನ ಕ್ಲಿಪ್ ಗಳನ್ನು ಬಳಸಿ ಅಥವಾ ನಿಮ್ಮ ಮೂಗನ್ನು ಬಿಗಿಯಾಗಿ ಮುಚ್ಚಿ ಹಿಡಿದು, ಮುನ್ನಚ್ಚರಿಕೆ ವಹಿಸುವುದು,

ನೀರಿನ ಸಂಪರ್ಕದ 7 ದಿನಗಳೊಳಗೆ ಜ್ವರ, ತೀವ್ರ ತಲೆನೋವು, ವಾಕರಿಕೆ/ವಾಂತಿ, ಕುತ್ತಿಗೆ ಬಿಗಿತ. ಗೊಂದಲ/ಮಾನಸಿಕ ಸ್ಥಿತಿಗಳಲ್ಲಿ ಬದಲಾವಣೆಗಳು ಹಾಗೂ ವ್ಯಕ್ತಿಯ ವರ್ತನೆಯಲ್ಲಿ ಅಸ್ವಸ್ಥತೆ (Behavioural disorders) ಲಕ್ಷಣಗಳು ಕಾಣಿಸಿಕೊಂಡರೆ ನಿರ್ಲಕ್ಷಿಸದೇ ತುರ್ತು ಆರೈಕೆಯನ್ನು ಪಡೆಯಲು ಹತ್ತಿರದ ಸರ್ಕಾರಿ ಆಸ್ಪತ್ರೆ/ವೈದ್ಯರನ್ನು ಸಂಪರ್ಕಿಸಬೇಕು ಎಂದು ಜಿಲ್ಲಾ ಸಾಂಕ್ರಾಮಿಕ ರೋಗಗಳ ಕಣ್ಗಾವಲು ಘಟಕದ ಜಿಲ್ಲಾ ಸರ್ವೇಕ್ಷಣಾಧಿಕಾರಿಗಳು ತಿಳಿಸಿದ್ದಾರೆ.