ಜ್ಞಾನಕ್ಕಿಂತ ಪ್ರಾಯೋಗಿಕ ಜ್ಞಾನ ಮುಖ್ಯ : ಎಸ್.ಎನ್.ಪಿ ಸ್ಟ್ಯಾನಿ
ಜ್ಞಾನಕ್ಕಿಂತ ಪ್ರಾಯೋಗಿಕ ಜ್ಞಾನ ಮುಖ್ಯ : ಎಸ್.ಎನ್.ಪಿ ಸ್ಟ್ಯಾನಿ
ಶಿವಮೊಗ್ಗ : ಮಾನಸ ಟ್ರಸ್ಟ್, ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜು ಹಾಗೂ ಪೂರಕ ಆರೋಗ್ಯ ವಿಜ್ಞಾನಗಳ ಸಂಸ್ಥೆಯ ಸಂಯುಕ್ತಾಶ್ರಯದಲ್ಲಿ ಎಂಎಸ್‌ಸಿ ಕ್ಲಿನಿಕಲ್ ಸೈಕಾಲಜಿ ಹಾಗೂ ಮನಶಾಸ್ತ್ರದ ವಿದ್ಯಾರ್ಥಿಗಳಿಗಾಗಿ ಸೈಕೋಥೆರಪಿ (ಮಾನಸಿಕ ಚಿಕಿತ್ಸೆ) ವಿಷಯದ ಕುರಿತು 5 ದಿನದ ಕಾರ್ಯಗಾರವನ್ನು ಉದ್ಘಾಟಿಸಲಾಯಿತು.
ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಮನೋಚಿಕಿತ್ಸಕಾರದ ಎಸ್.ಎನ್.ಪಿ ಸ್ಟ್ಯಾನಿರವರು ಮಾತನಾಡಿ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕದ ಜ್ಞಾನಕ್ಕಿಂತ ಪ್ರಾಯೋಗಿಕ ಜ್ಞಾನ ಮುಖ್ಯ ಎಂದು ತಿಳಿಸಿದರು. ತರಬೇತಿ ಕಾರ್ಯಾಗಾರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಸಮಾಲೋಚನೆಯ ಅನುಭೂತಿಯನ್ನು ಪಡೆದು ಕಲಿತಾಗ ಮಾತ್ರ ಅದರ ಸದುಪಯೋಗವನ್ನು ಯಶಸ್ವಿಯಾಗಿ ಪಡೆಯಬಹುದು ಎಂದು ಕಿವಿಮಾತು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷೀಯ ನುಡಿಗಳನ್ನಾಡಿದ ಮನಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ.ಅರ್ಚನಾ ಭಟ್ ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜು ನಿರಂತರವಾಗಿ ಪ್ರಾಯೋಗಿಕ ಕಲಿಕೆಗೆ ಹೆಚ್ಚು ಮಹತ್ವ ನೀಡುತ್ತಾ ಬಂದಿದೆ. ನುರಿತ ಪ್ರಾಧ್ಯಾಪಕರು ಮತ್ತು ಅನುಭವಿ ಸಂಪನ್ಮೂಲ ವ್ಯಕ್ತಿಗಳನ್ನು ಕರೆಸಿ ಇಂತಹ ಕಾರ್ಯಗಾರವನ್ನು ಏರ್ಪಡಿಸುವ ಕಾಲೇಜಿನ ಆಡಳಿತ ಮಂಡಳಿಯನ್ನು ಪ್ರಶಂಸಿಸಿದರು ಹಾಗೂ ಈ ತರಬೇತಿ ಕಾರ್ಯಗಾರದ ಸಂಪೂರ್ಣ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ವಿದ್ಯಾರ್ಥಿಗಳಿಗೆ ಉತ್ತೇಜನ ನೀಡಿದರು.
ಕಾರ್ಯಕ್ರಮದಲ್ಲಿ ಮತ್ತೊರ್ವ ಸಂಪನ್ಮೂಲ ವ್ಯಕ್ತಿಗಳಾದ ಬಿನ್ಸಿ ಜೋಸೆಫ್, ಮಾನಸ ಟ್ರಸ್ಟ್ ನ ನಿರ್ದೇಶಕರಾದ ಡಾ.ರಜನಿ ಪೈ, ಕ್ಲಿನಿಕಲ್ ಸೈಕಾಲಜಿ ವಿಭಾಗದ ಮುಖ್ಯಸ್ಥರಾದ ಡಾ.ಪುಷ್ಪಲತಾ ಜಿ, ಸ್ನಾತಕೋತ್ತರ ವಿಭಾಗದ ಸಂಯೋಜಕರಾದ ಸಿಸ್ಟರ್ ಮಾರಿ ಇವ್ಲಿನ್, ಉಪನ್ಯಾಸಕರಾದ ಅನನ್ಯ, ಶ್ರೀದೇವಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.