*ಗ್ರಂಥಪಾಲಕರ ಹಕ್ಕುಗಳಿಗೆ* *ವಿಧಾನಪರಿಷತ್ತಿನಲ್ಲಿ ಧ್ವನಿ ಎತ್ತಿದ ಶಾಸಕ ಡಿ.ಎಸ್.ಅರುಣ್*
*ಗ್ರಂಥಪಾಲಕರ ಹಕ್ಕುಗಳಿಗೆ*
*ವಿಧಾನಪರಿಷತ್ತಿನಲ್ಲಿ ಧ್ವನಿ ಎತ್ತಿದ ಶಾಸಕ ಡಿ.ಎಸ್.ಅರುಣ್*
ಬೆಳಗಾವಿ;
ಗ್ರಾಮ ಪಂಚಾಯಿತಿಗಳ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರಂಥಪಾಲಕರಿಗೆ ಸರ್ಕಾರ ನಿಗದಿಪಡಿಸಿರುವ ಕನಿಷ್ಠ ವೇತನವನ್ನು ಪಾವತಿಸದೆ ನಡೆಯುತ್ತಿರುವ ಗಂಭೀರ ಅಕ್ರಮವನ್ನು ಮಾನ್ಯ ವಿಧಾನ ಪರಿಷತ್ ಶಾಸಕರು ಹಾಗೂ ರಾಜ್ಯ ಬಿಜೆಪಿ ಕಾರ್ಯದರ್ಶಿಗಳು , ಸ್ಥಳೀಯ ಸಂಸ್ಥೆಗಳ ಕ್ಷೇತ್ರದ ಪ್ರತಿನಿಧಿಗಳಾದ ಡಿ.ಎಸ್.ಅರುಣ್ ಅವರು ಇಂದು ವಿಧಾನಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ವಿಷಯ ಪ್ರಸ್ತಾಪಿಸಿದರು.
ರಾಜ್ಯಾದ್ಯಂತ ಸಾವಿರಾರು ಗ್ರಂಥಪಾಲಕರು ತಿಂಗಳ ಕನಿಷ್ಠ ವೇತನಕ್ಕೂ ವಂಚಿತರಾಗುತ್ತಿರುವ ಬಗ್ಗೆ ಹಲವು ಜಿಲ್ಲೆಗಳಿಂದ ಬಂದಿರುವ ದೂರುಗಳು ಭಾರೀ ಆತಂಕಕ್ಕೆ ಕಾರಣವಾಗಿದ್ದು, ಕೆಲವು ಗ್ರಂಥಪಾಲಕರು ಆರ್ಥಿಕ ಬಿಕ್ಕಟ್ಟಿನಲ್ಲಿ ಪ್ರಾಣ ಕಳೆದುಕೊಂಡಿರುವ ಘಟನೆಗಳು ವರದಿಯಾದ ಹಿನ್ನೆಲೆ ವಿಷಯ ಮತ್ತಷ್ಟು ಗಂಭೀರವಾಗಿದೆ ಎಂದು ಶಾಸಕರು ಉಲ್ಲೇಖಿಸಿದರು.
ವೇತನ ಪಾವತಿ ಕಡಿಮೆ ಆಗಲು ಕಾರಣವಾಗಿರುವ ಆಡಳಿತಾತ್ಮಕ ಗೊಂದಲಗಳು, ಹಣ ಬಿಡುಗಡೆ ವಿಳಂಬ ಮತ್ತು ವರ್ಗೀಕರಣದ ದೋಷಗಳು ಕುರಿತು ಸರ್ಕಾರ ತಕ್ಷಣ ಸ್ಪಷ್ಟನೆ ನೀಡಬೇಕೆಂದು ಒತ್ತಾಯಿಸಿದರು. ಜೊತೆಗೆ, ಬಾಕಿ ಉಳಿದ ವೇತನ ಹಾಗೂ arrears ಪಾವತಿಗೆ ನಿಗದಿತ ಅವಧಿ ಪ್ರಕಟಿಸಬೇಕೆಂಬ ಬೇಡಿಕೆಯನ್ನು ಮಂಡಿಸಿದರು.
ಗ್ರಾಮೀಣ ಶಿಕ್ಷಣ ಮತ್ತು ಮಾಹಿತಿಗಾರಿಕೆಯ ಗುಣಮಟ್ಟ ಕಾಪಾಡಲು, ಗ್ರಂಥಪಾಲಕರಿಗೆ ಕನಿಷ್ಠ ವೇತನ ಹಕ್ಕನ್ನು ಪೂರ್ಣವಾಗಿ ಜಾರಿಗೊಳಿಸುವುದು ಸರ್ಕಾರದ ತುರ್ತು ಜವಾಬ್ದಾರಿ ಎಂದು ಡಿ. ಎಸ್ ಅರುಣ್ ರವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ, ಗ್ರಂಥಪಾಲಕರ ಹಿತವನ್ನು ಗಟ್ಟಿಯಾಗಿ ರಕ್ಷಿಸಲು ಅರುಣ್ ಅವರು ಇನ್ನೂ ಕೆಲವು ಮಹತ್ವದ ಬೇಡಿಕೆಗಳನ್ನು ಸರ್ಕಾರದ ಗಮನಕ್ಕೆ ತಂದರು . ESI ಮತ್ತು PF ಅಂತಹ ಸಾಮಾಜಿಕ ಭದ್ರತಾ ಸೌಲಭ್ಯಗಳನ್ನು ಗ್ರಂಥಪಾಲಕರಿಗೆ ತಕ್ಷಣ ಜಾರಿಗೊಳಿಸಬೇಕು, ಗ್ರಂಥಪಾಲಕರಿಗೆ ಪ್ರತ್ಯೇಕ ಸೇವಾ ನಿಯಮಾವಳಿ (Service Rules) ರೂಪಿಸಬೇಕು ಮತ್ತು ರಾಜ್ಯ ಬಜೆಟ್‌ನಲ್ಲಿ ಇವರಿಗಾಗಿ ಪ್ರತ್ಯೇಕ ವಿನಿಯೋಗ ಒದಗಿಸಬೇಕು ಎಂದು ಸ್ಪಷ್ಟವಾಗಿ ಹೇಳಿದರು. ಈ ಮೂರು ಕ್ರಮಗಳು ಈಗಿನ ಪರಿಸ್ಥಿತಿಯಲ್ಲಿ ಅತಿ ಅವಶ್ಯಕವಾಗಿವೆ ಎಂದು ಹೇಳಿದರು.
*ವೇತನ ಪಾವತಿಯಲ್ಲಿ ಪಾರದರ್ಶಕತೆ ಹಾಗೂ ವಿಳಂಬ ನಿವಾರಣೆಗಾಗಿ ನೇರ ಲಾಭ ವರ್ಗಾವಣೆ (DBT) ವ್ಯವಸ್ಥೆ ಜಾರಿಗೆ ತರಬೇಕೆಂದು ಕೂಡ ಅವರು ಸರ್ಕಾರಕ್ಕೆ ಸಲಹೆ ನೀಡಿದರು. ಲಕ್ಷಾಂತರ ಫಲಾನುಭವಿಗಳಿಗೆ ಕೇಂದ್ರ ಸರ್ಕಾರ ಯಶಸ್ವಿಯಾಗಿ ಜಾರಿಗೊಳಿಸಿರುವ DBT ಮಾದರಿಯನ್ನು, ರಾಜ್ಯವು ಕೇವಲ ಆರು ಸಾವಿರಕ್ಕೂ ಕಡಿಮೆಯಿರುವ ಗ್ರಂಥಪಾಲಕರಿಗೆ ಜಾರಿಗೊಳಿಸುವುದು ಬಹಳ ಸುಲಭ ಮತ್ತು ಪರಿಣಾಮಕಾರಿ ಎಂಬುದನ್ನು ಡಿ. ಎಸ್. ಅರುಣ್ ಉದಾಹರಣೆ ನೀಡಿದರು*.
RDPR ಸಚಿವರಾದ ಪ್ರಿಯಾಂಕ್ ಖರ್ಗೆ ಅವರು ಗೈರುಹಾಜರಾಗಿದ್ದ ಹಿನ್ನೆಲೆಯಲ್ಲಿ, ಅವರ ಪರವಾಗಿ ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರು ಉತ್ತರ ನೀಡುತ್ತಾ ವಿಷಯವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿ, ಡಿ.ಎಸ್.ಅರುಣ್ ಅವರ ಸೂಚನೆಗಳನ್ನು ಸಂಪೂರ್ಣವಾಗಿ ಸಮರ್ಥಿಸಿ, RDPR ಸಚಿವರು ಮತ್ತು ಇಲಾಖೆಯೊಂದಿಗೆ ಚರ್ಚಿಸಿ DBT ವ್ಯವಸ್ಥೆ ಸೇರಿದಂತೆ ಸಲ್ಲಿಸಿದ ಶಿಫಾರಸುಗಳ ಮೇಲೆ ಶೀಘ್ರವೇ ಕ್ರಮ ಕೈಗೊಳ್ಳುವಂತೆ ನೋಡಿಕೊಳ್ಳುವುದಾಗಿ ಭರವಸೆ ನೀಡಿದರು.


