*ರಾಷ್ಟ್ರಭಕ್ತರ ಬಳಗದ ಮುಖಂಡ ಕೆ.ಇ.ಕಾಂತೇಶ್ ಪತ್ರಿಕಾಗೋಷ್ಠಿ* *ಶಿವಮೊಗ್ಗ ಮಹಾನಗರ ಪಾಲಿಕೆ ಬಡವರ ಪಾಲಿನ ನರಕ* *ವಾಣಿಜ್ಯ ಕಟ್ಟಡಗಳ ವಿಚಾರದಲ್ಲಿ ಆಯುಕ್ತರ ನಿರ್ಲಕ್ಷ್ಯವೇಕೆ?*
*ರಾಷ್ಟ್ರಭಕ್ತರ ಬಳಗದ ಮುಖಂಡ ಕೆ.ಇ.ಕಾಂತೇಶ್ ಪತ್ರಿಕಾಗೋಷ್ಠಿ*
*ಶಿವಮೊಗ್ಗ ಮಹಾನಗರ ಪಾಲಿಕೆ ಬಡವರ ಪಾಲಿನ ನರಕ*
*ವಾಣಿಜ್ಯ ಕಟ್ಟಡಗಳ ವಿಚಾರದಲ್ಲಿ ಆಯುಕ್ತರ ನಿರ್ಲಕ್ಷ್ಯವೇಕೆ?*

ಶಿವಮೊಗ್ಗ ಮಹಾನಗರ ಪಾಲಿಕೆ ಬಡವರ ಪಾಲಿಗೆ ನರಕ ಆಗಿಬಿಟ್ಟಿದೆ ಎಂದು ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರೂ ರಾಷ್ಟ್ರಭಕ್ತರ ಬಳಗದ ಮುಖಂಡ ಕೆ.ಇ.ಕಾಂತೇಶ್ ಟೀಕಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಶಿವಮೊಗ್ಗ ನಗರ ಸ್ಥಳೀಯ ಆಡಳಿತದ ವೈಫಲ್ಯ ಮತ್ತು ರಾಜ್ಯ ಸರ್ಕಾರದ ನಿರ್ಲಕ್ಷ್ಯತನದಿಂದ ಶಿವಮೊಗ್ಗ ದಿನದಿಂದ ದಿನಕ್ಕೆ ಸಮಸ್ಯೆಗಳ ಆಗರವಾಗುತ್ತಿದೆ. ಜನ ಪ್ರತಿನಿಧಿಗಳಿಲ್ಲದ ಮಹಾನಗರ ಪಾಲಿಕೆ, ಅಧಿಕಾರಿಗಳ ದುರಾಡಳಿತದಿಂದ ನಗರಾಡಳಿತ ಸಂಪೂರ್ಣ ಸ್ಥಗಿತಗೊಂಡಿದೆ ಎಂದು ಆರೋಪಿಸಿದರು.
ಸಾರ್ವಜನಿಕ ಉಪಯೋಗಕ್ಕಾಗಿ ಸರ್ಕಾರಿ ಪೂಣದಿಂದ ಕಟ್ಟದ ಹಲವು ವಾಣಿಜ್ಯ ಸಂಕೀರ್ಣಗಳು ನಿರ್ಮಾಣಗೊಂಡು ಹಲವು ವರ್ಷಗಳೇ ಕಳೆದರೂ ಅವುಗಳನ್ನು ಫಲಾನುಭವಿಗಳಿಗೆ ವಿತರಿಸದೇ ಬಾಡಿಗೆ ರೂಪದಲ್ಲಿ ಪಾಲಿಕೆಗೆ ಬರಬುಹುದಾಗಿದ್ದ ಕೋಟ್ಯಾಂತರ ರೂಪಾಯಿ ಬಾಡಿಗೆ ಹಣ ವ್ಯರ್ಥವಾಗಿರುದಲ್ಲದೆ ಕಟ್ಟಡಗಳು ಶಿಥಿಲಾವಸ್ಥೆಗೆ ತಲುಪುತ್ತಿವೆ ಎಂದರು.
1) ಶಿವಪ್ಪ ನಾಯಕ ಹೂವಿನ ಮಾರುಕಟ್ಟೆ ವಾಣಿಜ್ಯ ಸಂಕಿರ್ಣ
118 ಮಳಿಗೆಗಳು ಪಾಲಿಕೆಗೆ ಹಸ್ತಾಂತರಗೊಂಡು 2 ವರ್ಷಗಳಾಗಿವೆ.
ತಿಂಗಳಿಗೆ ಬಾಡಿಗೆ ಅಂದಾಜು 5,000-00. 2 ವರ್ಷಗಳ ಬಾಡಿಗೆ ಮೊತ್ತ 1,41,60,000-00ರೂ.,ಗಳಾಗುತ್ತದೆ. 23 ತಿಂಗಳ ಬಾಡಿಗೆ ಮುಂಗಡ ಪಾವತಿ ಮೊತ್ತ 135,70,000-00
2) ಗಾರ್ಡನ್ ಏರಿಯಾ ವಾಣಿಜ್ಯ ಸಂಕಿರ್ಣ(ಗೌರವ್ ಲಾಡ್ಜ್ ಎದುರು),
98 ಮಳಿಗೆಗಳು ಪಾಲಿಕೆಗೆ ಹಸ್ತಾಂತರಗೊಂಡು 5 ವರ್ಷಗಳಾಗಿವೆ.ತಿಂಗಳಿಗೆ ಬಾಡಿಗೆ ಅಂದಾಜು 10,000-00, 5ವರ್ಷಗಳ ಬಾಡಿಗೆ ಮೊತ್ತ 5,88,00,000-00
23 ತಿಂಗಳ ಬಾಡಿಗೆ ಮುಂಗಡ ಪಾವತಿ ಮೊತ್ತ 2,25,40,000-00
3) ಗಾಂಧಿನಗರ ವಾಣಿಜ್ಯ ಸಂಕಿರ್ಣ, 13 ಮಳಿಗೆಗಳು ಪಾಲಿಕೆಗೆ ಹಸ್ತಾಂತರಗೊಂಡು 2 ವರ್ಷಗಳಾಗಿವೆ. ತಿಂಗಳಿಗೆ ಬಾಡಿಗೆ ಅಂದಾಜು 10,000-00. 2 ವರ್ಷಗಳ ಬಾಡಿಗೆ ಮೊತ್ತ 31,20,000-00, 23 ತಿಂಗಳ ಬಾಡಿಗೆ ಮುಂಗಡ ಪಾವತಿ ಮೊತ್ತ 29,90,000-00
ಬಾಡಿಗೆ ಮತ್ತು ಮುಂಗಡ ಪಾವತಿಯಿಂದ ಮಹಾನಗರ ಪಾಲಿಕೆಗೆ ಇದುವರೆಗೆ ಆದ ಅಂದಾಜು ನಷ್ಟ 11,51,80,000-00 (ಹನ್ನೊಂದು ಕೋಟಿ ಐವತ್ತೊಂದು ಲಕ್ಷದ ಎಂಬತ್ತು ಸಾವಿರ ರೂಪಾಯಿಗಳು)
ಅಲ್ಲದೇ, ಖಾಸಗಿ ಬಸ್ ನಿಲ್ದಾಣದ ಪಕ್ಕದಲ್ಲಿ ನಿರ್ಮಿಸಿರುವ ಕಟ್ಟಡವೂ ಸಹ ಪೂರ್ಣಗೊಂಡಿದ್ದು, ಅದನ್ನು ಇಲ್ಲಿಯವರೆಗೂ ನೊಂದಾಯಿತ ಬೀದಿ ಬದಿ ವ್ಯಾಪಾರಿಗಳಿಗೆ ಹಸ್ತಾಂತರಿಸಿಲ್ಲ. ಈ ಮೇಲಿನ ಎಲ್ಲಾ ಮಳಿಗೆಗಳು ಸಕಾಲಕ್ಕೆ ಹಸ್ತಾಂತರಿಸದೆ ಅಂದಾಜು 500 ಕುಟುಂಬಗಳ ದುಡಿಮೆಯನ್ನು ಮಹಾನಗರ ಪಾಲಿಕೆ ತನ್ನ ನಿರ್ಲಕ್ಷ್ಯತನದಿಂದ ಹಾಳು ಮಾಡಿದೆ ಎಂದು ಅಂಕಿ ಅಂಶಗಳ ಸಮೇತ ವಿವರಿಸಿದರು.
ನಗರದ ಜನತೆ ತಮ್ಮ ಆಸ್ತಿಗಳ ದಾಖಲೆಗಳನ್ನು ದೃಡೀಕರಿಸಲು ಜಾರಿಗೆ ಬಂದ ಇ-ಸ್ವತ್ತು ವ್ಯವಸ್ತೆಯ ನೊಂದಣಿಯಲ್ಲಿ ಭಾರೀ ಭ್ರಷ್ಟಚಾರ ನಡೆಯುತ್ತಿದ್ದು ಲಂಚ ಕೊಟ್ಟರೂ ಕೆಲಸವಾಗುತ್ತಿಲ್ಲವೆಂಬ ದೂರು ಸರ್ವೇ ಸಾಮಾನ್ಯವಾಗಿದೆ. ಪಾಲಿಕೆಯ ಆಯುಕ್ತರೇ ನೇರವಾಗಿ ಏಜೆಂಟರುಗಳನ್ನು ನೇಮಿಸಿಕೊಂಡು ಅವರ ಮುಖಾಂತರ ಹೋದವರಿಗೆ ಮಾತ್ರ ಇ-ಸ್ವತ್ತು ಯಾವುದೇ ತೊಂದರೆ ಇಲ್ಲದೆ ಆಗುತ್ತದೆ ಎಂಬ ಗಂಭೀರ ಆರೋಪ ಕೇಳಿಬರುತ್ತಿದೆ. ಆದ್ದರಿಂದ ಕೂಡಲೇ ಇ-ಸ್ವತ್ತು ನೊಂದಣಿಯಲ್ಲಿ ಆಗುತ್ತಿರುವ ಸಮಸ್ಯೆಯನ್ನು ಬಗೆಹರಿಸಬೇಕು, ಹಾಗೂ ಭ್ರಷ್ಟಾಚಾರದಲ್ಲಿ ತೊಡಗಿರುವ ಅಧಿಕಾರಿಗಳ ಮೇಲೆ ತಕ್ಷಣ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಜಿಲ್ಲಾಧಿಕಾರಿಗಳ ಕಛೇರಿಯ ಮುಂಭಾಗದ ಆಟದ ಮೈದಾನದ ವಿಷಯವಾಗಿ ನಕಲಿ ದಾಖಲೆ ಸೃಷ್ಟಿಸಿ ಕಾನೂನು ಬಾಹಿರವಾಗಿ ಖಾತೆ ಮಾಡಿಸಿಕೊಂಡಿರುವ ವಕ್ಫ್ ಬೋರ್ಡಿನ ವಿರುದ್ಧವಾಗಿ ರಾಷ್ಟ್ರಭಕ್ತರ ಬಳಗವು ಹಲವು ಹೋರಾಟಗಳನ್ನೇ ಮಾಡಿದೆ. ಈ ಸಂಬಂಧ ಪಾಲಿಕೆ ಆಯುಕ್ತರಿಗೆ ಹಲವು ಮೂಲ ದಾಖಲೆಗಳನ್ನು ಸಹಾ ಒದಗಿಸಿದೆ, ಅಲ್ಲದೇ ಸದರಿ ಸ್ವತ್ತಿಗೆ ಸಂಬಂಧಿಸಿದ ವ್ಯಾಜ್ಯವು ಕರ್ನಾಟಕ ಉಚ್ಚನ್ಯಾಯಾಲದಲ್ಲಿ ನಡೆಯುತ್ತಿದ್ದು, ನ್ಯಾಯಾಲಯವು ಶಿವಮೊಗ್ಗ ಮಹಾನಗರ ಪಾಲಿಕೆ ಆಯುಕ್ತರಿಗೆ ಸದರಿ ಜಾಗದ ವಿಷಯವಾಗಿ ಮೂಲ ದಾಖಲೆಗಳನ್ನು ಪರಿಶೀಲಿಸಿ ವಸ್ತುನಿಷ್ಟ ವರದಿ ಸಲ್ಲಿಸಲು ಸೂಚಿಸಿತ್ತು. ನ್ಯಾಯಾಲಯ ನೀಡಿದ್ದ ಗಡುವು ದಿನಾಂಕ 17-07-2025 ಕ್ಕೆ ಕೊನೆಗೊಂಡಿದ್ದರೂ ಸಹಾ ಪಾಲಿಕೆ ಆಯುಕ್ತರು ಇನ್ನೂ ವರದಿಯನ್ನು ನೀಡಿರುವುದಿಲ್ಲ. ಆದ್ದರಿಂದ ಕೂಡಲೇ ಸದರಿ ಜಾಗದ ಮೂಲ ದಾಖಲೆಗಳನ್ನು ಸೂಕ್ತರೀತಿಯಲ್ಲಿ ಪರಿಶೀಲಿಸಿ ಮಾನ್ಯ ಉಚ್ಚನ್ಯಾಯಾಲಯಕ್ಕೆ ತಕ್ಷಣ ವರದಿ ವಸತಿ ರಹಿತ ಬಡವರಿಗಾಗಿರುವ ಆಶ್ರಯ ಯೋಜನೆಯ ಮನೆಗಳಿಗಾಗಿ ನಗರದ ಕಡು ಬಡವರು ಸಾಲ ಮಾಡಿ ಸರ್ಕಾರಕ್ಕೆ ಹಣ ಸಂದಾಯ ಮಾಡಿ ಹಲವು ವರ್ಷಗಳು ಕಳೆದರೂ ಸಹಾ ಇನ್ನೂ ಮನೆಗಳ ನಿರ್ಮಾಣ ಪೂರ್ಣಗೊಂಡಿಲ್ಲ. ತನ್ನ ಪಾಲಿನ ಅನುದಾನವನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ್ದರೂ ರಾಜ್ಯ ಸರ್ಕಾರ ತನ್ನ ಪಾಲಿನ ಹಣ ಬಿಡುಗಡೆ ಮಾಡದಿರುವುದರಿಂದ ಮನೆಯೂ ಸಿಗದೆ ಹಣವೂ ಇಲ್ಲದೆ ಬಡವರು ಕಂಗಾಲಾಗಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ವಸತಿ ಸಚಿವರು ಮನೆಗಳನ್ನು ಪೂರ್ಣಗೊಳಿಸುವ ಬರವಸೆಯನ್ನು ನೀಡಿದ್ದರೂ ಅದು ಈಡೇರಿಲ್ಲ ಎಂದರು.
ನಗರದ ರಸ್ತೆಗಳೆಲ್ಲಾ ಗುಂಡಿ ಬಿದ್ದು ಸಾರ್ವಜನಿಕರಿಗೆ ತೀವ್ರ ತೊಂದರೆಯಾಗುತ್ತಿದೆ. ವಾಹನ ಸವಾರರು ನಗರದ ರಸ್ತೆಯಲ್ಲಿ ಸಂಚರಿಸಲು ಹರ ಸಾಹಸ ಪಡುವಂತಾಗಿದೆ. ಹಲವು ಬಡಾವಣೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರಿದ್ದು, 24/7 ಕುಡಿಯುವ ನೀರಿನ ವ್ಯವಸ್ಥೆ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ. ಹಳೆಯ ಪಾಲಿಕೆ ನೀರೂ ಇಲ್ಲದೆ ಈಗಿನ 24/7 ನೀರಿನ ಸರಬರಾಜುದಾರರೂ ಇಲ್ಲದೆ ಜನರು ತೊಂದರೆಗೊಳಗಾಗಿದ್ದಾರೆ. ಬೀದಿ ನಾಯಿಗಳ ಕಾಟ, ಬೀದಿ ದೀಪದ ತೊಂದರೆ, ಸ್ವಚ್ಛತೆ ಹೀಗೆ ಹತ್ತು ಹಲವು ಸಮಸ್ಯೆಗಳಿಂದ ಶಿವಮೊಗ್ಗದ ಜನತೆ ಪರಿತಪಿಸುತ್ತಿದ್ದಾರೆ ಎಂದರು.
ಈ ಎಲ್ಲಾ ಸಮಸ್ಯೆಗಳನ್ನು ಅರಿಯಲು ಸ್ವತಃ ರಾಷ್ಟ್ರಭಕ್ತರ ಬಳಗದ ಕಾರ್ಯಕರ್ತರು ನಗರದ ಎಲ್ಲಾ ವಾರ್ಡ್ಗಳಲ್ಲಿ ತಲಾ 20 ಸದಸ್ಯರ ತಂಡವನ್ನು ರಚಿಸಿಕೊಂಡು ಪ್ರತಿ ವಾರ್ಡ್ ಗಳಲ್ಲೂ ಸಂಚರಿಸಿ ಸಾರ್ವಜನಿಕರನ್ನು ಸಂಪರ್ಕಿಸಿ ಅವರ ಸಮಸ್ಯೆಗಳನ್ನು ಆಲಿಸಿ ಸೂಕ್ತ ಪರಿಹಾರಕ್ಕಾಗಿ ಮಹಾನಗರ ಪಾಲಿಕೆಯ ಅಧಿಕಾರಿಗಳ ಗಮನಕ್ಕೆ ತರಲಿದ್ದಾರೆ. ಈ ಎಲ್ಲಾ ಸಮಸ್ಯೆಗಳಿಗೆ ಪಾಲಿಕೆ ಅಧಿಕಾರಿಗಳು ತಕ್ಷಣ ಸ್ಪಂದಿಸಿ ಸಮಸ್ಯೆಗಳನ್ನು ಪರಿಹರಿಸದಿದ್ದರೆ ಡಿಸೆಂಬರ್ ತಿಂಗಳ ಕೊನೆಯವರೆಗೂ ಕಾಲಾವಕಾಶ ನೀಡಿ ನಂತರ ಜನವರಿ ತಿಂಗಳ 2ನೇ ತಾರೀಖಿನಿಂದ “ರಾಷ್ಟ್ರಭಕ್ತರ ಬಳಗದಿಂದ ಮಹಾನಗರ ಪಾಲಿಕೆಗೆ ಮುತ್ತಿಗೆ ಹಾಕುವುದಲ್ಲದೇ ಅಹೋರಾತ್ರಿ ಧರಣಿ ಸತ್ಯಾಗ್ರಹದಂತಹ ಉಗ್ರ ಹೋರಾಟವನ್ನು ಕೈಗೊಳ್ಳಲಿದ್ದೇವೆ ಎಂದು ಎಚ್ಚರಿಸಿದರು.


