*ಪೋಲೀಸ್ ಅಧಿಕಾರಿಯಿಂದ ಹೋಟೆಲ್ ಕಾರ್ಮಿಕನ ಮೇಲೆ ಹಲ್ಲೆಗೆ ಖಂಡನೆ – ಇಸ್ಪೀಟ್ ಅಡ್ಡೆಗಳಿಗೆ ಕಡಿವಾಣ ಹಾಕಲು ಯುವ ಕಾಂಗ್ರೆಸ್ ನಿಂದ ಅಗ್ರಹ*

*ಪೋಲೀಸ್ ಅಧಿಕಾರಿಯಿಂದ ಹೋಟೆಲ್ ಕಾರ್ಮಿಕನ ಮೇಲೆ ಹಲ್ಲೆಗೆ ಖಂಡನೆ – ಇಸ್ಪೀಟ್ ಅಡ್ಡೆಗಳಿಗೆ ಕಡಿವಾಣ ಹಾಕಲು ಯುವ ಕಾಂಗ್ರೆಸ್ ನಿಂದ ಅಗ್ರಹ*

*ಹೊರ ಊರುಗಳಿಂದ ಬಂದು, ತುತ್ತು ಅನ್ನಕ್ಕಾಗಿ ಹೋಟೆಲ್‌ಗಳಲ್ಲಿ ಕ್ಲೀನರ್‌ಗಳಾಗಿ ಕೆಲಸ ಮಾಡುವ ಕಾರ್ಮಿಕನ ಮೇಲೆ ಮೊನ್ನೆ ರಾತ್ರಿ ಏಕಾಏಕಿ ಹಲ್ಲೆ ಮಾಡಿದ ದೊಡ್ಡಪೇಟೆ ಪೋಲೀಸ್ ಠಾಣೆಯ ಪೋಲೀಸ್ ಅಧಿಕಾರಿಯ ವರ್ತನೆ ನಾಗರೀಕ ಸಮಾಜ ತಲೆತಗ್ಗಿಸುವಂಥದ್ದು. ಸಮಯ ಮೀರಿ ಹೋಟೆಲ್ ವ್ಯಾಪಾರವನ್ನು ನಡೆಸುತ್ತಿರುವ ಹೋಟೆಲ್ ಮಾಲೀಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳದೆ, ಹೋಟೆಲ್‌ಗಳಲ್ಲಿ ಕೆಲಸ ಮಾಡುವ ಕಾರ್ಮಿಕರ ಮೇಲೆ ಹಲ್ಲೆ ಮಾಡುವುದು ಎಷ್ಟರಮಟ್ಟಿಗೆ ಸರಿ ಎಂಬುದನ್ನು ಸಾರ್ವಜನಿಕರ ವಲಯದ ಪ್ರಶ್ನೆಯಾಗಿದೆ ಎಂದು ಜಿಲ್ಲಾಧಿಕಾರಿಗಳಿಗೆ ಯುವ ಕಾಂಗ್ರೆಸ್ ಸಮಿತಿ ಪದಾಧಿಕಾರಿಗಳು ಖಂಡಿಸಿ ಮನವಿಪತ್ರ ಸಲ್ಲಿಸಿದರು.

*ನಗರದಲ್ಲಿ ಯುವಕರು ಗಾಂಜಾ ವ್ಯಸನಿಗಳಾಗಿ ಸಾರ್ವಜನಿಕ ವಲಯದಲ್ಲಿ ಕಿರಿಕಿರಿ ಉಂಟು ಮಾಡುತ್ತಾ ಭಯದ ವಾತಾವರಣ ಸೃಷ್ಟಿಸಿದ್ದು, ಜೊತೆಗೆ ಶಿವಮೊಗ್ಗ ನಗರ ಸೇರಿದಂತೆ ಹೊರವಲಯ, ಗ್ರಾಮೀಣ ಪ್ರದೇಶದ ಗಡಿ ಭಾಗದಲ್ಲಿ ಅಕ್ರಮವಾಗಿ ಎಗ್ಗಿಲ್ಲದೆ ಯಾವುದೇ ಕಾನೂನಿನ ಭಯವಿಲ್ಲದೆ ಕಾನೂನುಬಾಹಿರ ಇಸ್ಪೀಟ್ ಆಟಗಳ ಚಟುವಟಿಕೆ ಸರಾಗವಾಗಿ ನಡೆಯುತ್ತಿದ್ದು, ಇದನ್ನು ನಿಯಂತ್ರಿಸಬೇಕಾದ ಪೋಲೀಸ್ ಇಲಾಖೆಯ ಕೆಲವು ಅಧಿಕಾರಿಗಳು ಮತ್ತು ಸಿಬ್ಬಂದಿಗಳೇ ಇಸ್ಪೀಟ್ ಅಡ್ಡೆಗಳಿಗೆ ರಕ್ಷಣಾ ಕವಚದಂತೆ ರಕ್ಷಣೆ ನೀಡುತ್ತಿದ್ದಾರೆಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ*.

*ಇಸ್ಪೀಟು ಅಡ್ಡೆಗಳಿಂದ ಹಲವು ಕುಟುಂಬಗಳು ಮನೆ-ಮಠಗಳನ್ನು ಕಳೆದುಕೊಂಡು ಬೀದಿಗೆ ಬಂದಿದ್ದು, ತಂದೆ-ತಾಯಿ, ಹೆಂಡತಿ-ಮಕ್ಕಳು ಕಣ್ಣೀರಿಡುತ್ತಾ ಸರ್ಕಾರ ಮತ್ತು ಪೋಲೀಸ್ ಇಲಾಖೆಗೆ ಶಾಪ ಹಾಕುತ್ತಿದ್ದು, ಕೆಲವು ಯುವಕರು ಇಸ್ಪೀಟ್ ಆಟದಲ್ಲಿ ತೊಡಗಿಸಿಕೊಂಡು ನಷ್ಟ ಅನುಭವಿಸಿ, ನಂತರ ಅಪರಾಧ ಕೃತ್ಯಗಳಲ್ಲಿ ಭಾಗವಹಿಸುತ್ತಿರುವುದು ಅತ್ಯಂತ ಕಳವಳದ ಸಂಗತಿ. ಇಂತಹ ಹಲವು ಕಾನೂನುಬಾಹಿರ ಚಟುವಟಿಕೆಗಳಿಗೆ ಕಡಿವಾಣ ಹಾಕಬೇಕಾದ ಪೋಲೀಸ್ ಇಲಾಖೆಯ ಕೆಲವೇ ಅಧಿಕಾರಿಗಳು, ತುತ್ತು ಅನ್ನಕ್ಕಾಗಿ ಕೆಲಸ ಮಾಡುವ ಹೋಟೆಲ್ ಕಾರ್ಮಿಕರ ಮೇಲೆ ಹಲ್ಲೆ ನಡೆಸುವುದು ಎಷ್ಟರಮಟ್ಟಿಗೆ ಸರಿ. ಕೂಡಲೇ ಮಾನ್ಯ ಜಿಲ್ಲಾ ರಕ್ಷಣಾಧಿಕಾರಿಗಳು ಹೋಟೆಲ್ ಕಾರ್ಮಿಕನ ಮೇಲೆ ಹಲ್ಲೆ ಮಾಡಿದ ಪೋಲೀಸ್ ಅಧಿಕಾರಿ ವಿರುದ್ಧ ಕಾನೂನುಕ್ರಮ ಕೈಗೊಳ್ಳಬೇಕು*,

*ಶಿವಮೊಗ್ಗ ನಗರ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ಎಗ್ಗಿಲ್ಲದೆ ನಡೆಯುತ್ತಿರುವ ಇಸ್ಪೀಟು ಅಡ್ಡೆಗಳ ಮೇಲೆ ದಾಳಿ ನಡೆಸಿ ಸಂಪೂರ್ಣ ಬಂದ್ ಮಾಡಿಸಬೇಕು. ಇನ್ನು ಹತ್ತು ದಿನಗಳಲ್ಲಿ ಕ್ರಮ ತೆಗೆದುಕೊಳ್ಳದೇ ಹೋದಲ್ಲಿ, ಶಿವಮೊಗ್ಗ ಯುವ ಕಾಂಗ್ರೆಸ್‌ನಿಂದ ಸ್ಥಳೀಯ ನಾಗರೀಕರೊಂದಿಗೆ ನಾವುಗಳೇ ಮುತ್ತಿಗೆ ಹಾಕಲಾಗುವುದು. ಮುಂದಾಗುವ ಎಲ್ಲಾ ಅನಾಹುತಗಳಿಗೆ ಜಿಲ್ಲಾಡಳಿತವೇ ನೇರ ಹೊಣೆಯಾಗುವುದೆಂದು ಎಚ್ಚರಿಸುತ್ತಿದ್ದೇವೆ*

*ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ ರಂಗನಾಥ್, ಜಿಲ್ಲಾ ಯುವ ಕಾಂಗ್ರೆಸ್ ನ ಹೆಚ್ ಪಿ ಗಿರೀಶ್, ಹಾಪ್ ಕಾಮ್ಸ್ ನಿರ್ದೇಶಕ ಎಸ್ ಎಮ್ ಶರತ್ ಮರಿಯಪ್ಪ, ಗ್ಯಾರಂಟಿ ಪ್ರಾಧಿಕಾರದ ಸದಸ್ಯರಾದ ಎಸ್ ಕುಮಾರೇಶ್,ಎಸ್ ಬಸವರಾಜ್, ಯುವ ಕಾಂಗ್ರೆಸ್ ನ ಪದಾಧಿಕಾರಿಗಳಾದ ಪುಷ್ಪಕ್ ಕುಮಾರ್, ಎಂ ರಾಕೇಶ್, ಮೋಹನ್ ಸೋಮಿನಕೊಪ್ಪ, ರಾಹುಲ್ ಸಿಗೆಹಟ್ಟಿ, ಸಚಿನ್, ರಾಜೇಶ್ ಮಂದಾರ, ಅಧ್ಯಾನ್ ಪಾಷಾ, ಎಸ್ ಜೆ, ಮಿಥುನ್ , ಸಂಜಯ್, ಪ್ರಜ್ವಲ್, ಕಿರಣ್ ರಂಗೇಗೌಡ, ವೆಂಕಟೇಶ್ ಕಲ್ಲೂರು, ನಿತಿನ್ ಇತರರು ಇದ್ದರು*