*ವಿವಿಧ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಜ.3 ರಂದು ನಗರಪಾಲಿಕೆ ವಿರುದ್ಧ ರಾಷ್ಟ್ರಭಕ್ತರ ಬೃಹತ್ ಪ್ರತಿಭಟನಾ ಮೆರವಣಿಗೆ* *ಎಚ್ಚರಿಕೆ ನೀಡಿದ ಕೆ.ಇ.ಕಾಂತೇಶ್*

*ವಿವಿಧ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಜ.3 ರಂದು ನಗರಪಾಲಿಕೆ ವಿರುದ್ಧ ರಾಷ್ಟ್ರಭಕ್ತರ ಬೃಹತ್ ಪ್ರತಿಭಟನಾ ಮೆರವಣಿಗೆ*

*ಎಚ್ಚರಿಕೆ ನೀಡಿದ ಕೆ.ಇ.ಕಾಂತೇಶ್*

ಶಿವಮೊಗ್ಗ ಮಹಾನಗರ ಪಾಲಿಕೆಯು ಜನಪ್ರತಿನಿಧಿಗಳಿಲ್ಲದೆ ಆಡಳಿತ ವೈಫಲ್ಯ ಮತ್ತು ಅಧಿಕಾರಿಗಳ ದುರಾಡಳಿತದಿಂದ ನಾಗರಿಕರಿಗೆ ಆಗುತ್ತಿರುವ ತೊಂದರೆಗಳು ಮತ್ತು ಸಾರ್ವಜನಿಕರ ಹಣ ವ್ಯರ್ಥವಾಗುತ್ತಿರುವ ಬಗ್ಗೆ ಈ ಹಿಂದೆ ‘ರಾಷ್ಟ್ರಭಕ್ತರ ಬಳಗ” ಹಲವು ಹೋರಾಟಗಳನ್ನು ಮಾಡಿದೆ. ಆದರೂ ಪಾಲಿಕೆ ಆಡಳಿತ ಎಚ್ಚೆತ್ತುಕೊಂಡಿಲ್ಲವಾದ್ದರಿಂದ ಜ.3ರ ಶನಿವಾರ ಕೆ.ಎಸ್.ಈಶ್ವರಪ್ಪ ಮತ್ತು ಕೆ.ಈ.ಕಾಂತೇಶ್ ಅವರ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ.

ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದನಿಕಟಪೂರ್ವ ಜಿಲ್ಲಾಪಂಚಾಯತ್ ಸದಸ್ಯರು, ರಾಷ್ಟ್ರಭಕ್ತರ ಬಳಗದ ಪ್ರಮುಖರಾದ ಕೆ.ಇ.ಕಾಂತೇಶ್, ಅಂದು ಬೆಳಿಗ್ಗೆ 10 ಗಂಟೆಗೆ ನಗರದ ರಾಮಣ್ಣ ಶೆಟ್ಟಿ ಪಾರ್ಕ್ ಅವರಣದಿಂದ ಸಾವಿರಾರು ಕಾರ್ಯಕರ್ತರು ಮತ್ತು ಸಾರ್ವಜನಿಕರು ಮೆರವಣಿಗೆಯ ಮೂಲಕ ಆಗಮಿಸಿ ಮಹಾನಗರ ಪಾಲಿಕೆಯ ಆವರಣದಲ್ಲಿ ಪ್ರತಿಭಟನೆಯನ್ನು ನಡೆಸಲಿದ್ದಾರೆ ಎಂದರು.

ಸಂಪೂರ್ಣವಾಗಿ ನಿರ್ಮಾಣಗೊಂಡು ಮಹಾನಗರ ಪಾಲಿಕೆಗೆ ಹಸ್ತಾಂತರವಾಗಿರುವ ವಾಣಿಜ್ಯ ಸಂಕೀರ್ಣಗಳಾದ ಶಿವಪ್ಪ ನಾಯಕ ಹೂವಿನ ಮಾರುಕಟ್ಟೆಯ 110 ಮಳಿಗೆಗಳು, ಗಾರ್ಡನ್ ಏರಿಯಾ ವಾಣಿಜ್ಯ ಸಂಕಿರ್ಣದ 20 ಮಳಿಗೆಗಳು ಮತ್ತು ಗಾಂಧಿ ನಗರ ವಾಣಿಜ್ಯ ಸಂಕಿರ್ಣದ 10 ಮಳಿಗೆಗಳನ್ನು ಫಲಾನುಭವಿಗಳಿಗೆ ವಿತರಿಸಿ, ಪಾಲಿಕೆಗೆ ಬಾಡಿಗೆ ರೂಪದಲ್ಲಿ ಬರಬೇಕಾದ ಹಣದ ನಷ್ಟವನ್ನು ತಪ್ಪಿಸಬೇಕು. (ಇದುವರೆಗೆ ಅಂದಾಜು 11,51,80,000-00/ಹನ್ನೊಂದು ಕೋಟಿ ಐವತ್ತೊಂದು ಲಕ್ಷದ ಎಂಬತ್ತು ಸಾವಿರ ರೂಪಾಯಿ ನಷ್ಟ ಸಂಭವಿಸಿದೆ).

ಜಿಲ್ಲಾಧಿಕಾರಿ ಕಛೇರಿ ಎದುರುಗಡೆಯ ಆಟದ ಮೈದಾನದ ವಿವಾದದ ವಿಷಯವಾಗಿ ಮಾನ್ಯ ಉಚ್ಚ ನ್ಯಾಯಾಲಯದ ಆದೇಶದ ಅವಧಿ ಮುಗಿದು 5 ತಿಂಗಳಾದರೂ (17-07-2025 ಕೊನೆಯ ದಿನ) ಮಹಾನಗರ ಪಾಲಿಕೆ ಆಯುಕ್ತರು ನ್ಯಾಯಾಲಯಕ್ಕೆ ವರದಿ ಸಲ್ಲಿಸಿಲ್ಲ, ಆದ್ದರಿಂದ ಕೂಡಲೇ ಈ ಜಾಗದ ಮೂಲ ದಾಖಲೆಗಳನ್ನು ಪರಿಶೀಲಿಸಿ ತಕ್ಷಣ ವರದಿ ಸಲ್ಲಿಸಬೇಕು.

ಆಶ್ರಯ ಯೋಜನೆಯ ಮನೆಗಳಿಗಾಗಿ ಬಡವರು ಮುಂಗಡ ಹಣ ಪಾವತಿಸಿ ಹಲವು ವರ್ಷಗಳು ಕಳೆದರು ಅವರಿಗೆ ಮನೆ ಹಂಚಿಕೆಯಾಗಿಲ್ಲ, ಅಪೂರ್ಣಗೊಂಡ ಮನೆಗಳನ್ನು ಪೂರ್ಣಗೊಳಿಸಿ ಕೂಡಲೆ ಫಲಾನುಭವಿಗಳಿಗೆ ವಿತರಿಸಬೇಕು.

ಇ-ಸ್ವತ್ತು ನೋಂದಣಿಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರವನ್ನು ನಿಯಂತ್ರಿಸಿ ನಗರದ ಜನತೆಗೆ ಆಗುತ್ತಿರುವ ತೊಂದರೆಯನ್ನು ತಪ್ಪಿಸಬೇಕು, ಗುಂಡಿ ಬಿದ್ದಿರುವ ರಸ್ತೆಗಳ ದುರಸ್ಥಿ, 24/7 ನೀರಿನ ಸರಬರಾಜಿನಲ್ಲಿ ಆಗುತ್ತಿರುವ ವ್ಯತ್ಯಯದಿಂದ ತಲೆದೋರಿರುವ ಕುಡಿಯುವ ನೀರಿನ ಸಮಸ್ಯೆ ನಿವಾರಣೆ, ಬೀದಿ ದೀಪಗಳ ಸಮರ್ಪಕ ನಿರ್ವಹಣೆ ಮತ್ತು ನಗರದ ಸ್ವಚ್ಛತೆಗೆ ಹೆಚ್ಚಿನ ಗಮನ ಕೊಡಬೇಕು.

ಕೋಟ್ಯಾಂತರ ರೂಪಾಯಿ ವ್ಯಯಿಸಿ ನಿರ್ಮಿಸಿರುವ ರೋಟರಿ ಅನಿಲ ಚಿತಾಗಾರವನ್ನು ದುರಸ್ತಿ ಮಾಡಬೇಕು, ಪಶುವೈದ್ಯಕೀಯ ಅಂಬುಲೆನ್ಸ್ ಸೇವೆಯು ಸಾರ್ವಜನಿಕರಿಗೆ ಉಪಯೋಗವಾಗುವಂತೆ ಸಮರ್ಪಕ ನಿರ್ವಹಣೆ ಮಾಡಬೇಕು, ನಗರದ ಕೊಳಚೆ ಪ್ರದೇಶದ ನಿವಾಸಿಗಳಿಗೆ ಮೂಲ ಸೌಕರ್ಯಗಳನ್ನು ಕಲ್ಪಿಸಿಕೊಡಬೇಕು, 2013ರಲ್ಲಿ ಜಾರಿಗೆ ಬಂದಿರುವ ಪೌರಕಾರ್ಮಿಕರ ಗೃಹ ಭಾಗ್ಯ ಯೋಜನೆಯ ಸೌಲಭ್ಯವನ್ನು ಪೌರಕಾರ್ಮಿಕರಿಗೆ ಸಿಗುವಂತೆ ಕ್ರಮಕೈಗೊಳ್ಳಬೇಕು ಮತ್ತು ಸಿದ್ದೇಶ್ವರ ನಗರದಲ್ಲಿ ಪಾಲಿಕೆ ಪೌರಕಾರ್ಮಿಕರ ಭವನವನ್ನು ನಿರ್ಮಿಸಲು ತಕ್ಷಣ ಗಮನಹರಿಸಬೇಕು ಎಂಬ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಈ ಪ್ರತಿಭಟನೆ ನಡೆಯಲಿದೆ ಎಂದು ವಿವರಿಸಿದರು.

ಈ ಎಲ್ಲಾ ಸಮಸ್ಯೆಗಳಿಗೂ ಪಾಲಿಕೆ ಆಡಳಿತ ತುರ್ತಾಗಿ ಸ್ಪಂದಿಸಿ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಯನ್ನು ಕಾಲಮಿತಿಯೊಳಗೆ ಪರಿಹರಿಸದಿದ್ದರೆ ರಾಷ್ಟ್ರಭಕ್ತರ ಬಳಗದಿಂದ ಮುಂದೆ ಮಹಾನಗರ ಪಾಲಿಕೆಗೆ ಮುತ್ತಿಗೆ ಹಾಕುವುದಲ್ಲದೇ ಅಹೋರಾತ್ರಿ ಧರಣಿ ಸತ್ಯಾಗ್ರಹದಂತಹ ಉಗ್ರ ಹೋರಾಟವನ್ನು ಕೈಗೊಳ್ಳಲಿದ್ದೇವೆ ಎಂದರು.