*ಕೆರೆಯಲ್ಲಿ ಮುಳುಗಿಸಿ ಸ್ನೇಹಿತನನ್ನೇ ಭೀಕರವಾಗಿ ಕೊಂದರು!* *ಮರಹತ್ತಿಸಿ ಬೀಳಿಸಿ ಬೆನ್ನು ಮೂಳೆ ಮುರಿದರು- ಚಿಕಿತ್ಸೆಗೆ ಹಣ ಖರ್ಚಾಗುತ್ತದೆಂದು ಕೊಲೆ ಮಾಡಿದರು!*
*ಕೆರೆಯಲ್ಲಿ ಮುಳುಗಿಸಿ ಸ್ನೇಹಿತನನ್ನೇ ಭೀಕರವಾಗಿ ಕೊಂದರು!*
*ಮರಹತ್ತಿಸಿ ಬೀಳಿಸಿ ಬೆನ್ನು ಮೂಳೆ ಮುರಿದರು- ಚಿಕಿತ್ಸೆಗೆ ಹಣ ಖರ್ಚಾಗುತ್ತದೆಂದು ಕೊಲೆ ಮಾಡಿದರು!*

ಸ್ನೇಹಿತನನ್ನು ತೆಂಗಿನ ಮರ ಹತ್ತಿಸಿ ಆತ ಬಿದ್ದು ಬೆನ್ನು ಮೂಳೆಗೆ ಏಟು ಮಾಡಿಕೊಂಡಾಗ ಚಿಕಿತ್ಸಗೆ ಹತ್ತಾರು ಲಕ್ಷ ರೂ. ಖರ್ಚಾಗುತ್ತದೆಂದು ಸ್ನೇಹಿತರೇ ಆತನನ್ನು ಕೊಲೆ ಮಾಡಿದ ದಾರುಣ ಘಟನೆಗೆ ಬೆಂಗಳೂರು ದಕ್ಷಿಣ ಜಿಲ್ಲೆ ರಾಮನಗರದ (Ramanagara) ಮಾಗಡಿ (Magadi) ತಾಲೂಕಿನ ವಾಜರಹಳ್ಳಿ ಗ್ರಾಮ ಸಾಕ್ಷಿಯಾಗಿದೆ.
ನ್ಯೂ ಇಯರ್ ಪಾರ್ಟಿ ಮಾಡಲು ತೆರಳಿದ್ದ ಗೆಳೆಯರ ಗುಂಪೇ, ತಮ್ಮ ಜೊತೆಯಲ್ಲಿದ್ದ ಯುವಕನನ್ನು ನಿರ್ದಯವಾಗಿ ಕೆರೆಯಲ್ಲಿ ಮುಳುಗಿಸಿ ಹತ್ಯೆ ಮಾಡಿದ ಅಮಾನವೀಯ ಘಟನೆ ಇದೀಗ ಬಯಲಾಗಿದೆ.
ಕೊಲೆಯಾದ ಯುವಕ ವಿನೋದ್ ಕುಮಾರ್ (26) ಹಾಗೂ ಆರೋಪಿಗಳಾದ ಸುದೀಪ್ ಮತ್ತು ಪ್ರಜ್ವಲ್ ಮೂವರೂ ಮಾಗಡಿ ತಾಲೂಕಿನ ಕಲ್ಯಾಣಪುರ ಗ್ರಾಮದ ನಿವಾಸಿಗಳಾಗಿದ್ದಾರೆ. ಜನವರಿ 1ರಂದು ಹೊಸವರ್ಷ ಆಚರಣೆಗಾಗಿ ಐವರು ಸ್ನೇಹಿತರು ಒಟ್ಟಾಗಿ ಪಾರ್ಟಿಗೆ ತೆರಳಿದ್ದರು.
ಈ ವೇಳೆ ಮದ್ಯಕ್ಕೆ ಎಳನೀರು ಬೆರೆಸಲು ತೀರ್ಮಾನಿಸಿದ ಅವರು, ವಿನೋದ್ ಕುಮಾರ್ನನ್ನು ತೆಂಗಿನ ಮರ ಹತ್ತುವಂತೆ ಮಾಡಿದ್ದರು ಎನ್ನಲಾಗಿದೆ.
ಆ ಸಂದರ್ಭದಲ್ಲಿ ವಿನೋದ್ ಕುಮಾರ್ ಮರದಿಂದ ಕೆಳಗೆ ಬಿದ್ದಿದ್ದ. ಪರಿಣಾಮವಾಗಿ ಆತನ ಬೆನ್ನುಮೂಳೆ ಮುರಿದು ಗಂಭೀರವಾಗಿ ಗಾಯಗೊಂಡಿದ್ದ. ಚಿಕಿತ್ಸೆಗೆ ಹತ್ತಾರು ಲಕ್ಷ ರೂಪಾಯಿ ಖರ್ಚಾಗಬಹುದು ಎಂಬ ಆತಂಕದಿಂದ ಆರೋಪಿಗಳು ಭೀತಿಗೊಂಡಿದ್ದಾರೆ. ಇದರಿಂದ ತಪ್ಪಿಸಿಕೊಳ್ಳಲು ವಿನೋದ್ನನ್ನು ಮನೆಗೆ ಬಿಡುತ್ತೇವೆ ಎಂದು ನಂಬಿಸಿ, ಮಾರ್ಗಮಧ್ಯೆ ವಾಜರಹಳ್ಳಿ ಸಮೀಪದ ಕೆರೆಯಲ್ಲಿ ಮುಳುಗಿಸಿ ಹತ್ಯೆ ಮಾಡಿದ್ದಾರೆ ಎಂಬುದು ಇದೀಗ ಪೊಲೀಸ್ ತನಿಖೆಯಿಂದ ತಿಳಿದು ಬಂದಿದೆ.


