*ಭದ್ರಾವತಿ ದಂಪತಿ ಮರ್ಡರ್* *ಪ್ರೀ ಪ್ಲಾನ್ ಕೋಲ್ಡ್ ಬ್ಲಡೆಡ್ ಮರ್ಡರ್ ಇದು* *ಆಯುರ್ವೇದಿಕ್ ವೈದ್ಯನೇ ಕೊಲೆಗಾರ!!* *ಎಸ್ ಪಿ ನಿಖಿಲ್ ಬಿ. ಮತ್ತೆಲ್ಲ ಏನಂದ್ರು?*

*ಭದ್ರಾವತಿ ದಂಪತಿ ಮರ್ಡರ್*

*ಪ್ರೀ ಪ್ಲಾನ್ ಕೋಲ್ಡ್ ಬ್ಲಡೆಡ್ ಮರ್ಡರ್ ಇದು*

*ಆಯುರ್ವೇದಿಕ್ ವೈದ್ಯನೇ ಕೊಲೆಗಾರ!!*

*ಎಸ್ ಪಿ ನಿಖಿಲ್ ಬಿ. ಮತ್ತೆಲ್ಲ ಏನಂದ್ರು?*

ಭದ್ರಾವತಿ ದಂಪತಿ ಡಬಲ್ ಮರ್ಡರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಆಯುರ್ವೇದಿಕ್ ವೈದ್ಯ ಮಲ್ಲೇಶ್ ಎಂಬಾತನನ್ನು ಬಂಧಿಸಿದ್ದು, ಈತ ಮೃತನ ತಮ್ಮನ ಮಗ ಎಂದು ಎಸ್ ಪಿ ನಿಖಿಲ್ ಹೇಳಿದರು.

ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, 15 ಲಕ್ಷ ಸಾಲ ಕೇಳಿದ್ದ. ಅವರು ಕೊಟ್ಟಿರಲಿಲ್ಲ. ಮಂಡಿನೋವಿದ್ದ ದೊಡ್ಡಪ್ಪ ಮತ್ತು ದೊಡ್ಡಮ್ಮರಿಗೆ ಇಂಜೆಕ್ಷನ್ ನೀಡಿದರೆ ಕಡಿಮೆಯಾಗುತ್ತೆ ಎಂದು ನಂಬಿಸಿ ಚುಚ್ಚುಮದ್ದು ನೀಡಿದ್ದಾನೆ. ಇದು ಕೋಲ್ಡ್ ಬ್ಲಡೆಡ್ ಮರ್ಡರ್ ಎಂದರು.

ತಲಾ 50 ಎಂಜಿ ಅನಸ್ತೇಷಿಯಾ ನೀಡಿದ ಮಲ್ಲೇಶ್, ಅವರು ನಿಧನರಾದ ಕೂಡಲೇ ಮೈಮೇಲಿದ್ದ ಸುಮಾರು 60 ಗ್ರಾಂ ಚಿನ್ನದಾಭರಣಗಳನ್ನು ಒಯ್ದಿದ್ದ ಎಂದರು.

ಕದ್ದ ಚಿನ್ನ ಮಾರಿ ತನ್ನೆಲ್ಲಾ ಸಾಲಗಳನ್ನು ತೀರಿಸಿಕೊಂಡು, ಉಳಿದ ಹಣವನ್ನು ತನ್ನ ಖಾತೆಯಲ್ಲಿಟ್ಟುಕೊಂಡಿದ್ದ. ಪೂರ್ವ ನಿಯೋಜಿತ ಕೃತ್ಯ ಇದಾಗಿದೆ. ವೈದ್ಯರಿಗೆ ಸಹಜವಾಗಿ ಅನಸ್ತೇಷಿಯಾ ಔಷಧಿ ಸಿಗುತ್ತದೆ. ಆದರೂ ತನಿಖೆ ನಡೆಸಲಾಗುತ್ತಿದೆ ಎಂದರು.

ಚಿನ್ನಾಭರಣ ಕುರಿತ ಹೆಚ್ಚಿನ ಮಾಹಿತಿ ಸಂಗ್ರಹಿಸಲಾಗುತ್ತಿದೆ.ಕೊನೆಗೆ ಮನೆಗೆ ಬಂದಿದ್ದು ವೈದ್ಯ ಮಲ್ಲೇಶ್ ಎಂಬ ಮಾಹಿತಿ ಕಲೆ ಹಾಕಲಾಗಿತ್ತು. ಈ ವೈದ್ಯ ಖಾಸಗಿ ಆಸ್ಪತ್ರೆಗಳಲ್ಲಿ ಕೆಲಸ ನಿರ್ವಹಿಸಿದ್ದ ಎಂದರು.

ಭದ್ರಾವತಿ ಪೊಲೀಸರಿಗೆ ನಗದು ಬಹುಮಾನ ನೀಡಿ ಅಭಿನಂದಿಸಲಾಗುವುದು ಎಂದರು.

ಜಿಲ್ಲೆಯ ಭದ್ರಾವತಿ ಪಟ್ಟಣದ ಭೂತನಗುಡಿ ನಿವಾಸಿಗಳಾದ ಚಂದ್ರಪ್ಪ(80) ಹಾಗೂ ಪತ್ನಿ ಜಯಮ್ಮ(70) ದಂಪತಿಗಳಿಬ್ಬರು ಮನೆಯಲ್ಲಿಯೇ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ. ಚಂದ್ರಪ್ಪ‌ ಮನೆಯ ಬೆಡ್ ರೂಂನಲ್ಲಿ ಮಂಚದ ಮೇಲೆ ಹಾಗೂ ಜಯಮ್ಮ ಅವರು ಹಾಲ್​ನ ಮಂಚದ ಮೇಲೆ ಮಲಗಿದ ಸ್ಥಿತಿಯಲ್ಲಿಯೇ ಸಾವನ್ನಪ್ಪಿದವರು.

ಈ ದಂಪತಿ ಅನ್ಯೋನ್ಯವಾಗಿದ್ದರು, ಇಬ್ಬರು ಒಟ್ಟಿಗೆ ಸಾವನ್ನಪ್ಪಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಈ ಕುರಿತು ಭದ್ರಾವತಿಯ ಹಳೇನಗರ ಪೊಲೀಸರು ಅನುಮಾನಾಸ್ಪದ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವೃದ್ಧ ದಂಪತಿಗೆ ಮೂವರು ಗಂಡುಮಕ್ಕಳು: ಮೃತ ದಂಪತಿಗೆ ಮೂವರು ಗಂಡು ಮಕ್ಕಳಿದ್ದಾರೆ. ಈ ಪೈಕಿ ಒಬ್ಬರು ಶಿಕ್ಷಕರಾಗಿದ್ದರೆ, ಮತ್ತೋರ್ವ ದಾವಣಗೆರೆಯ ಶಾಮನೂರು ಶಿವಶಂಕರಪ್ಪ ಅವರ ಸಂಸ್ಥೆಯಲ್ಲಿ ನೌಕರರಾಗಿದ್ದಾರೆ. ಇನ್ನೊಬ್ಬರು ಶಿವಮೊಗ್ಗದ ಚೀಲೂರು ಶಾಲೆಯಲ್ಲಿ‌ ಪ್ರಾಂಶುಪಾಲರಾಗಿದ್ದಾರೆ.

ಸೋಮವಾರ ರಾತ್ರಿ ಊಟ ಮಾಡಿ ಮಲಗಿದ್ದವರು ಮೇಲೇಳಲಿಲ್ಲ: ನಿನ್ನೆ ಸೋಮವಾರ(ಜ.19) ರಾತ್ರಿ ಊಟ ಮುಗಿಸಿ ಮಲಗಿದ್ದ ದಂಪತಿ ಮಂಗಳವಾರ ಬೆಳಗ್ಗೆ ಮಕ್ಕಳು ಕರೆ ಮಾಡಿದಾಗ ಕರೆಯನ್ನು ಸ್ವೀಕರಿಸಲಿಲ್ಲ. ಮಧ್ಯಾಹ್ನ ಸ್ಥಳೀಯರು ಮನೆಗೆ ಹೋದಾಗ ದಂಪತಿ ಮಲಗಿದ ಸ್ಥಿತಿಯಲ್ಲಿ ಕಂಡುಬಂದಿದ್ದಾರೆ. ದಂಪತಿ ಪ್ರತಿನಿತ್ಯ ಭದ್ರಾವತಿಯ ಕನಕ ಮಂಟಪದಲ್ಲಿ ವಾಕ್ ಮಾಡುತ್ತಿದ್ದರು, ಹೀಗಾಗಿ ಎಲ್ಲರಿಗೂ ಪರಿಚಿತರಾಗಿದ್ದರು.‌ ಅಕ್ಕಪಕ್ಕದಲ್ಲಿ ಎಲ್ಲರ ಜೊತೆ ಚೆನ್ನಾಗಿದ್ದರು. ವೃದ್ಧ ದಂಪತಿಯ ಸಾವು ಸಾಕಷ್ಟು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ಮೃತ ದಂಪತಿಯ ಶವಗಳನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ತರಲಾಗಿದೆ. ಮನೆಯ ಮುಂದೆ ಸಾರ್ವಜನಿಕರು ಹಾಗೂ ಸಂಬಂಧಿಕರು ಹೆಚ್ಚಿನ ಸಂಖ್ಯೆಯಲ್ಲಿ ಜಮಾವಣೆಗೊಂಡಿದ್ದಾರೆ.

ಮೃತ ದಂಪತಿಯ ಪುತ್ರ ವಿಶ್ವನಾಥ್ ದೂರವಾಣಿಯಲ್ಲಿ ಮಾತನಾಡಿ, ನಾನು ಹಾಗೂ ನಮ್ಮ ಸಹೋದರರು ಪ್ರತಿನಿತ್ಯ ಬೆಳಗ್ಗೆ ಮತ್ತು ಸಂಜೆ ಫೋನ್ ಮಾಡಿ ಆರೋಗ್ಯ ವಿಚಾರಿಸುತ್ತಿದ್ದೆವು. ಇಂದು ಬೆಳಗ್ಗೆ ನಮ್ಮ ಅಣ್ಣ ಫೋನ್ ಮಾಡಿದಾಗ ಅವರು ಫೋನ್ ರಿಸಿವ್ ಮಾಡಿರಲಿಲ್ಲ. ಅವರು ವಾಕಿಂಗ್ ಗೆ ಹೋಗಿರಬಹುದೆಂದು ಸುಮ್ಮನಾಗಿದ್ದರು. ನಾನು ಮಧ್ಯಾಹ್ನ ಫೋನ್ ಮಾಡಿದಾಗ ಅವರು ಫೋನ್ ರಿಸಿವ್ ಮಾಡದೆ ಇದ್ದಾಗ ಅನುಮಾನಗೊಂಡು ಪಕ್ಕದ ಮನೆಯವರಿಗೆ ವಿಚಾರಿಸಲು ಹೇಳಿದೆ. ಆಗ ಅವರು ಮನೆಗೆ ಹೋಗಿ ನೋಡಿದಾಗ ನಮ್ಮ ತಂದೆ-ತಾಯಿ ಇಬ್ಬರೂ ಸಾವನ್ನಪ್ಪಿದ್ದು ಕಂಡುಬಂದಿದೆ. ನಮ್ಮ ತಂದೆ ಅವರ ಕೊರಳಲ್ಲಿ ಬಂಗಾರದ ಚೈನು, ಕೈಯಲ್ಲಿ ಉಂಗುರ, ನಮ್ಮ ತಾಯಿ ಕೊರಳಲ್ಲಿ ಮಾಂಗಲ್ಯ ಸರ, ಬೀರುವಿನಲ್ಲಿದ್ದ ಬಂಗಾರದ ಆಭರಣಗಳು ಕಳ್ಳತನವಾಗಿವೆ. ಇದು ಯಾರೋ ಚಿರಪರಿಚಿತರು ಮಾಡಿರುವ ಕೆಲಸವಾಗಿದೆ‌‌‌. ಅವರೇ ನಮ್ಮ ತಂದೆ ತಾಯಿಯನ್ನು ಕೊಂದಿರಬಹುದೆಂಬ ಅನುಮಾನವನ್ನು ವ್ಯಕ್ತಪಡಿಸಿದ್ದಾರೆ.