*ಮರ್ಮಾಂಗಕ್ಕೆ ಒದ್ದು ಕೊಲೆ ಮಾಡಲೆತ್ನಿಸಿದ್ದ ಇಬ್ಬರು ಮಹಿಳೆಯರೂ ಸೇರಿದಂತೆ ಮೂವರಿಗೆ ಕಠಿಣ ಜೈಲು ಶಿಕ್ಷೆ ನೀಡಿದ ಭದ್ರಾವತಿ ಕೋರ್ಟ್*

*ಮರ್ಮಾಂಗಕ್ಕೆ ಒದ್ದು ಕೊಲೆ ಮಾಡಲೆತ್ನಿಸಿದ್ದ ಇಬ್ಬರು ಮಹಿಳೆಯರೂ ಸೇರಿದಂತೆ ಮೂವರಿಗೆ ಕಠಿಣ ಜೈಲು ಶಿಕ್ಷೆ ನೀಡಿದ ಭದ್ರಾವತಿ ಕೋರ್ಟ್*

ಮಗಳ ಕೌಟುಂಬಿಕ ವಿಚಾರದಲ್ಲಿ ಪಂಚಾಯ್ತಿ ಸೇರಿದಾಗ ಅವಾಚ್ಯವಾಗಿ ವೆಂಕಟೇಶ ಗೌಡರಿಗೆ ಬೈದು, ಕಬ್ಬಿಣದ ಪಂಚಿನಿಂದ ಹಲ್ಲೆ ಮಾಡಿ ಕೊಲೆ ಮಾಡಲೆತ್ನಿಸಿದ ಪ್ರಕರಣದ ಮೂವರು ಆರೋಪಿಗಳಿಗೆ ಭದ್ರಾವತಿಯ ನ್ಯಾಯಾಲಯ ಕಠಿಣ ಜೈಲು ಶಿಕ್ಷೆ ವಿಧಿಸಿ ಆದೇಶಿಸಿದೆ.

2021ರ ಮೇ 1 ರಂದು ವೆಂಕಟೇಶ ಗೌಡ ರವರ ಮಗಳ ಕೌಟುಂಬಿಕ ವಿಚಾರವಾಗಿ ಪಂಚಾಯಿತಿ ಮಾಡಲು ಸೇರಿಕೊಂಡಿರುವಾಗ, ಆರೋಪಿಗಳು ಅವಾಚ್ಯವಾಗಿ ಬೈದು, ಕೊಲೆ ಮಾಡುವ ಉದ್ದೇಶದಿಂದ ಕಬ್ಬಿಣದ ಪಂಚಿನಿಂದ ಕೆನ್ನೆ ಕಣ್ಣಿನ ಹತ್ತಿರ ಹೊಡೆದು, ಕಾಲಿನಿಂದ ಮರ್ಮಾಂಗಕ್ಕೆ ಒದ್ದು, ಜೀವಬೆದರಿಕೆ ಹಾಕಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಹಳೇನಗರ ಪೊಲೀಸ್ ಠಾಣೆ ಭದ್ರಾವತಿ ಗುನ್ನೆ ನಂ 0051/2021 ಕಲಂ 114, 323, 324, 307, 504, 506 ಸಹಿತ 34 ಐಪಿಸಿ ಕಾಯ್ದೆ ರೀತ್ಯಾ ಪ್ರಕರಣ ದಾಖಲಾಗಿತ್ತು.

ಪ್ರಕರಣದ ಆಗಿನ ತನಿಖಾಧಿಕಾರಿಗಳಾದ ಶ್ರೀನಿವಾಸ್ ಪಿ.ಎಸ್.ಐ ರವರು ಪ್ರಕರಣದ ತನಿಖೆ ಪೂರೈಸಿ, ಘನ ನ್ಯಾಯಾಲಯಕ್ಕೆ ಆರೋಪಿತರ ವಿರುದ್ಧ ದೋಷಾರೋಪಣ ಪತ್ರವನ್ನು ಸಲ್ಲಿಸಿದ್ದರು.

ಘನ ನ್ಯಾಯಾಲಯದಲ್ಲಿ ಸರ್ಕಾರದ ಪರವಾಗಿ ಶ್ರೀಮತಿ ರತ್ನಮ್ಮ ಪಿ. ಸರ್ಕಾರಿ ಅಭಿಯೋಜಕರವರು ವಾದ ಮಂಡಿಸಿದ್ದು, ಘನ 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಭದ್ರಾವತಿಯಲ್ಲಿ ಪ್ರಕರಣದ ವಿಚಾರಣೆ ನಡೆಯಿತು.

ಆರೋಪಿತರ ವಿರುದ್ಧ ಆರೋಪ ದೃಢಪಟ್ಟ ಹಿನ್ನೆಲೆಯಲ್ಲಿ ನ್ಯಾಯಾಧೀಶರಾದ ಶ್ರೀಮತಿ ಇಂದಿರಾ ಮೈಲಸ್ವಾಮಿ ಚೆಟ್ಟಿಯಾರ್ ರವರು ಜ.24 ರಂದು ಎ1 ಆರೋಪಿ ಕಿರಣ್ ಗೌಡ ಬಿನ್ ಕೃಷ್ಣಪ್ಪ, (30 ವರ್ಷ, ವಾಸ ಮಾರುತಿ ನಗರ, ಸುಣ್ಣದಹಳ್ಳಿ ಭದ್ರಾವತಿ) ಈತನಿಗೆ 3 ವರ್ಷ ಕಠಿಣ ಕಾರಾವಾಸ ಮತ್ತು 36,000/- ರೂ ದಂಡವನ್ನು ವಿಧಿಸಿದ್ದು, ಎ2 ಆರೋಪಿ ಮೀನಾಕ್ಷಿ ಕೋಂ ಕೃಷ್ಣಪ್ಪ, (48 ವರ್ಷ, ವಾಸ ಮಾರುತಿ ನಗರ, ಸುಣ್ಣದಹಳ್ಳಿ ಭದ್ರಾವತಿ) ಈಕೆಗೆ 2 ವರ್ಷ ಕಠಿಣ ಕಾರಾವಾಸ ಹಾಗೂ 25000/- ರೂ ದಂಡವನ್ನು ವಿಧಿಸಿದ್ದು, ಎ3 ಆರೋಪಿ ಕಲಾವತಿ ಕೋಂ ಚಂದ್ರು, (57 ವರ್ಷ, ವಾಸ # ಲಗ್ಗೆರೆ, ಹಳೆ ಲಗ್ಗೆರೆ, ಪಿಣ್ಯಾ, ಬೆಂಗಳೂರು) ಈಕೆಗೆ 2 ವರ್ಷ ಕಠಿಣ ಕಾರಾವಾಸ ಮತ್ತು 15,000/- ರೂ ದಂಡವನ್ನು* ವಿಧಿಸಿದ್ದು ಮತ್ತು ಪಿರ್ಯಾದುದಾರರಿಗೆ 25,000/- ರೂ ಪರಿಹಾರವನ್ನು ಆದೇಶಿಸಿತು.