ಶಿವಮೊಗ್ಗದಲ್ಲಿ ಮತ್ತೆ ಮಾರ್ಚ್ 2ರಿಂದ ಸಂದೀಪನ ಓಸಿ ಸಾಮ್ರಾಜ್ಯ ಆರಂಭ?*
*ಶಿವಮೊಗ್ಗದಲ್ಲಿ ಮತ್ತೆ ಮಾರ್ಚ್ 2ರಿಂದ ಸಂದೀಪನ ಓಸಿ ಸಾಮ್ರಾಜ್ಯ ಆರಂಭ?*
ಓಸಿ ಗೋಪಿಯ ನಂತರದಲ್ಲಿ ಶಿವಮೊಗ್ಗವೂ ಸೇರಿದಂತೆ ಕಾಲು ಕರ್ನಾಟಕದ ಜಿಲ್ಲೆಗಳಲ್ಲಿ ಓಸಿ ಡಾನ್ ಆಗಿ ಮೆರೆಯುತ್ತಿದ್ದ ಯುವ ಮೀಸೆಯ ಹುಡುಗ ಸಂದೀಪ ಮತ್ತೆ ಓಸಿ ಫೀಲ್ಡಿಗಿಳಿಯಲಿದ್ದು, ಇದೇ ಮಾರ್ಚ್ 2 ಕ್ಕೆ ಕುಂಬಳಕಾಯಿ ಒಡೆಯುವ ಮೂಲಕ ಓಸಿ ದಂಧೆ ಆರಂಭಿಸಲಿದ್ದಾನೆಂಬ ಮಾಹಿತಿಗಳು ಹೊರಬಿದ್ದಿವೆ!
ಸಾಕಾಗಿ ಹೋಗಿದೆ, ರೋಸಿ ಹೋಗಿದ್ದೇನೆಂದಲ್ಲ ಹೇಳುತ್ತಲೇ ವ್ಯವಸ್ಥಿತವಾಗಿ ಓಸಿ ಮಾಫಿಯಾವನ್ನು ನಡೆಸುತ್ತಾ, ಬಹಳಷ್ಟು ಕೇಸುಗಳನ್ನು ಪೊಲೀಸರಿಂದ ಜಡಿಸಿಕೊಳ್ಳುತ್ತಾ, ಮತ್ತೊಂದು ಕಡೆ ಅಕ್ರಮವಾಗಿ ಆಸ್ತಿಯನ್ನೂ ಮಾಡುತ್ತಾ ನರ ಮನುಷ್ಯನ ಹಣದ ರುಚಿ ಕಂಡುಕೊಂಡ ಸಂದೀಪನೆಂಬ ಓಸಿ ಹುಲಿ ಇದ್ದಕ್ಕಿದ್ದ ಹಾಗೆ ಕಳೆದ ವರ್ಷದ ದೀಪಾವಳಿಯ ಹೊತ್ತಿಗೆ ಸನ್ಯಾಸತ್ವ ಘೋಷಿಸಿತ್ತು!
ಹೀಗೆ ಸನ್ಯಾಸತ್ವ ಘೋಷಿಸಿ ಮೊದಲು ದೀಪಾವಳಿಯನ್ನು ಧಾಂ ಧೂಂ ಆಗಿ ಆಚರಿಸಬೇಕೆಂದಿದ್ದ ತನ್ನ ಏಜೆಂಟರನ್ನೇ ವಂಚಿಸಿದ್ದ ಸಂದೀಪ ಅವರಿಗೆ ಕೊಡಲೇಬೇಕಿದ್ದ ಹಣ ಉಳಿಸಿಕೊಂಡಿದ್ದು ಅರ್ಧ ಕೋಟಿಯಷ್ಟು ಎಂದೇ ಹೇಳುತ್ತಾರೆ ವಂಚಿತ ಏಜೆಂಟರು.
ಓಸಿ ವ್ಯವಹಾರ ತ್ಯಜಿಸಿದ್ದೇನೆಂದು ಘೋಷಿಸಿಕೊಂಡು ಏಜೆಂಟರ ದೀಪಾವಳಿಯನ್ನು ದುಃಖಕ್ಕೆ ತಳ್ಳಿ ಠುಸ್ ಪಟಾಕಿಯಾಗಿಸಿದ್ದ ಸಂದೀಪ ಕಳೆದ ಡಿಸೆಂಬರ್ ನಿಂದಲೂ ತೆರೆಮರೆಯಲ್ಲೇ ಓಸಿ ದಂಧೆ ನಡೆಸುತ್ತಿರುವ ಸುದ್ದಿಗಳಿವೆ! ಆತನ ಕೆಲ ಆತ್ಮೀಯ ಚೇಲಾಗಳೇ ಮಾರ್ಕೆಟ್ ನಿಂದ ಈಗಲೂ ಸಾರ್ವಜನಿಕರಿಂದ ಓಸಿ ಹಣ ಎತ್ತುತ್ತಿರುವುದು ಪೊಲೀಸ್ ಇಲಾಖೆಗೂ ಗೊತ್ತಿರದ ಸತ್ಯವೇನಲ್ಲ…
ಸನ್ಯಾಸತ್ವ ಘೋಷಿಸಿದ್ದ ನರಮನುಷ್ಯನ ರಕ್ತದ ರುಚಿ ನೋಡಿ, ಮಾಂಸ ತಿಂದ ವ್ಯಾಘ್ರ ಮತ್ತೆ ಮತ್ತೆ ಮನುಷ್ಯರನ್ನೇ ಹುಡುಕಿ ಬೇಟೆಯಾಡುವಂತೆ ಸಂದೀಪನಿಗೂ ಸನ್ಯಾಸತ್ವ ಸಾಕಾದಂತಿದೆ…
ಇದೇ ಮುಂದಿನ ಮಾರ್ಚ್ 2ರಿಂದ ಮತ್ತೆ ಓಸಿ ಸಂದೀಪನ ಸಾಮ್ರಾಜ್ಯ ಮತ್ತೆ ಯಥಾಸ್ಥಿತಿ ಆರಂಭವಾಗಲಿದೆ! ಹಾಗಂತ, ಅವನ ಓಸಿ ಸಹಚರರೇ ಹೇಳುತ್ತಿದ್ದಾರೆ…ಏಜೆಂಟರಲ್ಲಿ ಬೀಜ ಬಿತ್ತುತ್ತಿದ್ದಾರೆ…ಓಸಿ ಬೆಳೆ ಸಮೃದ್ಧವಾಗಿ ತೆಗೆಯಲು!