*ಶಿವಮೊಗ್ಗದಲ್ಲಿ ಕಬ್ಬಿಣದ ಪೆಟ್ಟಿಗೆ ಅಂಗಡಿ ಮಾಫಿಯಾ* *ದಿನನಿತ್ಯದ ಅಕ್ರಮ ಬಾಡಿಗೆಯೇ ಲಕ್ಷ ಲಕ್ಷ ವಸೂಲು* *ಸರ್ಕಾರಿ ಜಾಗದಲ್ಲಿ ಇದೇನಿದು ಖಾಸಗಿ ಸಾಮ್ರಾಜ್ಯ?!*
*ಶಿವಮೊಗ್ಗದಲ್ಲಿ ಕಬ್ಬಿಣದ ಪೆಟ್ಟಿಗೆ ಅಂಗಡಿ ಮಾಫಿಯಾ*
*ದಿನನಿತ್ಯದ ಅಕ್ರಮ ಬಾಡಿಗೆಯೇ ಲಕ್ಷ ಲಕ್ಷ ವಸೂಲು*
*ಸರ್ಕಾರಿ ಜಾಗದಲ್ಲಿ ಇದೇನಿದು ಖಾಸಗಿ ಸಾಮ್ರಾಜ್ಯ?!*

ಬೀದಿ ಬದಿಯಲ್ಲಿ ಕಬ್ಬಿಣದ ಪೆಟ್ಟಿಗೆ ಅಂಗಡಿಗಳ ಮಾಫಿಯಾ ಶಿವಮೊಗ್ಗದಲ್ಲಿ ಬೃಹತ್ತಾಗಿ ಬೆಳೆಯುತ್ತಿದ್ದು, ಅಂಥ ಮಾಫಿಯಾದ ವಿರುದ್ಧ ಶಿವಮೊಗ್ಗದ ಮಹಾನಗರ ಪಾಲಿಕೆಯು ಸ್ಥಳೀಯ ಪೊಲೀಸರ ಸಹಕಾರದೊಂದಿಗೆ ತೊಡೆತಟ್ಟಿ ಪೆಟ್ಟು ನೀಡಿದ್ದಾರೆ.
ಶಿವಮೊಗ್ಗ ನಗರದ ಸರ್ಕಾರಿ, ಪಾಲಿಕೆಯ ಆಯಕಟ್ಟಿನ ಜಾಗಗಳನ್ನು ಹುಡುಕಿ ಅಲ್ಲಿ ಕಬ್ಬಿಣದ ಪೆಟ್ಟಿಗೆಗಳನ್ನು ರಾತ್ರೋರಾತ್ರಿ ಸ್ಥಾಪಿಸಿಬಿಡುವ ಗುಪ್ತ ವ್ಯವಹಾರಿಗಳು ಅಲ್ಲಿ ಬಾಡಿಗೆದಾರರನ್ನು ಹುಡುಕಿ ತಂದು ಕ್ಯಾಂಟೀನ್, ಬೀಡಾ ಅಂಗಡಿಗಳು ಆರಂಭವಾಗುವಂತೆ ನೋಡಿಕೊಳ್ಳುತ್ತಾರೆ. ಇಂಥ ಬೀದಿಬದಿ ವ್ಯಾಪಾರಸ್ಥರಿಂದ ದಿನವೊಂದಕ್ಕೆ 400₹ ಗಳಿಂದ 2000₹ ಗಳ ವರೆಗೆ ಬಾಡಿಗೆ ರೂಪದಲ್ಲಿ ವಸೂಲು ಮಾಡುತ್ತಿದ್ದಾರೆ.
ಒಮ್ಮೆ ಕಬ್ಬಿಣದ ಪೆಟ್ಟಿಗೆಗೆ ಹಣ ಹೂಡಿ ಬಾಡಿಗೆದಾರರನ್ನು ಪ್ರತಿಷ್ಠಾಪಿಸುವ ಈ ಗುಪ್ತ ವ್ಯವಹಾರಸ್ಥರ ದೊಡ್ಡ ಸಂಖ್ಯೆಯೇ ಶಿವಮೊಗ್ಗದಲ್ಲಿದೆ.
ಪ್ರತಿದಿನ ಸಾವಿರಾರು ರೂ.,ಗಳ ಅನಧಿಕೃತ ವ್ಯವಹಾರ ನಡೆಯುತ್ತಿದ್ದರೂ ಯಾರ ಗಮನಕ್ಕೂ ಇದು ಬರುತ್ತಿಲ್ಲವೆಂಬುದೇ ವಿಶೇಷ. ಏನೋ, ಬಡವರು ಪೆಟ್ಟಿಗೆ ಅಂಗಡಿ ಇಟ್ಟುಕೊಂಡು ವ್ಯವಹಾರ ಮಾಡುತ್ತಿದ್ದಾರೆ ಅಂದುಕೊಂಡರೆ ಅದು ನಮ್ಮ ಭ್ರಮೆಯಷ್ಟೇ. ಆ ಪೆಟ್ಟಿಗೆ ಅಂಗಡಿಯ ಮಾಲೀಕರು ಬೇರೆಯವರೇ ಆಗಿರುತ್ತಾರೆಂಬ ಮಾಹಿತಿ ಬಹಳ ಜನರಿಗಿಲ್ಲ.
ಈ ಪೆಟ್ಟಿಗೆ ಅಂಗಡಿಗಳ ಮೂಲಕ ಬೀದಿ ಬದಿ ವ್ಯಾಪಾರಸ್ಥರನ್ನು ಕೂಡ ಬಾಡಿಗೆ ಹೇರಿ ಲೂಟಿ ಮಾಡುತ್ತಿರುವ ಕಬ್ಬಿಣದ ಪೆಟ್ಟಿಗೆ ಅಂಗಡಿಗಳ ಓನರ್ ಗಳಿಗೆ ಇದೀಗ ಪಾಲಿಕೆ ಪೆಟ್ಟು ನೀಡಿದೆ.
ಇಂದು ಬೆಳ್ಳಂಬೆಳಿಗ್ಗೆಯಿಂದಲೇ ಪಾಲಿಕೆಯ ಸಿಬ್ಬಂದಿ ಪೊಲೀಸರ ಸಹಕಾರದೊಂದಿಗೆ ಮೆಗ್ಗಾನ್ ಆಸ್ಪತ್ರೆಯ ಗೋಡೆಗೆ ಅಂಟಿಕೊಂಡಿರುವ ವ್ಯವಹಾರ ಮಾಡದೇ ಪಾಳು ಸ್ಥಿತಿಯಲ್ಲಿದ್ದ ಪೆಟ್ಟಿಗೆ ಅಂಗಡಿಗಳನ್ನೆಲ್ಲ ತೆರವುಗೊಳಿಸಿದೆ.
ಇದರ ಜೊತೆಗೆ, ವ್ಯವಹಾರ ಮಾಡುತ್ತಿರುವ ಪೆಟ್ಟಿಗೆ ಅಂಗಡಿಗಳ ಮೇಲೂ ನಿಗಾವಿಟ್ಟು, ಬಾಡಿಗೆ ವಸೂಲು ಮಾಡುತ್ತಿರುವವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕಾದ ಅವಶ್ಯಕತೆಯೂ ಇದೆ.


