ಗ್ರಾಪಂಗಳಿಗೆ ಗಾಂಧಿ ಹೆಸರು: ವೈ.ಹೆಚ್. ನಾಗರಾಜ್ ಸ್ವಾಗತ

ಗ್ರಾಪಂಗಳಿಗೆ ಗಾಂಧಿ ಹೆಸರು: ವೈ.ಹೆಚ್. ನಾಗರಾಜ್ ಸ್ವಾಗತ

ಶಿವಮೊಗ್ಗ:

ರಾಜ್ಯದ ಎಲ್ಲಾ ಗ್ರಾಮ ಪಂಚಾಯಿತಿಗಳಿಗೆ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹೆಸರನ್ನು ಸರ್ಕಾರ ಇಡಲು ನಿರ್ಧರಿಸಿರುವುದು ಸ್ವಾಗತದ ವಿಷಯ ಎಂದು ಕೆಪಿಸಿಸಿ ಸದಸ್ಯ ವೈ.ಹೆಚ್. ನಾಗರಾರಾಜ್ ತಿಳಿಸಿದ್ದಾರೆ.

ಮುಖ್ಯಮಂತ್ರಿ ಸಿದ್ಧರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸರ್ಕಾರದ ಪರವಾಗಿ ಈ ನಿರ್ಧಾರ ತೆಗೆದುಕೊಂಡಿದ್ದು, ಅತ್ಯಂತ ಸಮಯೋಚಿತವಾಗಿದೆ. ಪ್ರಸ್ತುತ ಕಾಲದ ಚಕ್ರಕ್ಕೆ, ಹಲವರ ಸ್ವಾರ್ಥಕ್ಕೆ ವಿಕೃತ ರಾಜಕಾರಣಕ್ಕೆ ಗಾಂಧೀಜಿ ಅವರ ಹೆಸರನ್ನೇ ಇತಿಹಾಸದ ಪುಟಗಳಿಂದ ತೆಗೆದು ಹಾಕುವ ಸಂಚು ನಡೆಯುತ್ತಿರುವ ಈ ಹೊತ್ತಿನಲ್ಲಿ ಸಿಎಂ ಮತ್ತು ಡಿಸಿಎಂ ಅವರ ಈ ನಿರ್ಧಾರ ಗಾಂಧೀಜಿ ಅವರ ಹೆಸರನ್ನು ಶಾಶ್ವತವಾಗಿ ಉಳಿಸುವ ನಿಟ್ಟಿನಲ್ಲಿ ಮಹತ್ವದ ಪಾತ್ರ ವಹಿಸಲಿದೆ ಎಂದಿದ್ದಾರೆ.

ಕೇಂದ್ರ ಸರ್ಕಾರ ಮನರೇಗಾ ಯೋಜನೆಗೆ ವಿಬಿ ಜಿ ರಾಮ್ ಜಿ ಎಂದು ಹೆಸರು ಬದಲಾಯಿಸಿರುವ ಒಂದೇ ಕಾರಣಕ್ಕಾಗಿ ಗ್ರಾಪಂಗಳಿಗೆ ಈ ಹೆಸರು ಇಡಬೇಕಾಗಿಲ್ಲ. ಆದರೆ ಇಂದು ಗಾಂಧೀಜಿ ಅವರ ಹೆಸರನ್ನು ಟೀಕೆಯ ಅಸ್ತ್ರವನ್ನಾಗಿ ಬಳಸಿಕೊಳ್ಳುತ್ತಿರುವುದು ಅತ್ಯಂತ ವಿಷಾದವಾಗಿದೆ. ಗಾಂಧಿ ಸಿನಿಮಾ ಬಂದ ಮೇಲೆ ಗಾಂಧಿ ಹೆಸರು ಗೊತ್ತಾಯಿತು ಎನ್ನುವ ಮಹಾನುಭಾವರು ಕೂಡ ನಮ್ಮಲ್ಲಿದ್ದಾರೆ ಎಂದು ಅವರು ವ್ಯಂಗ್ಯವಾಡಿದ್ದಾರೆ.

ನರೇಗಾ ಯೋಜನೆಯಿಂದ ಗಾಂಧಿ ಹೆಸರನ್ನು ತೆಗೆದಿರುವುದು ಒಂದು ಅವಮಾನವೇ ಸರಿ. ನಾಥೂರಾಮ್ ಗೂಡ್ಸೆ ಒಮ್ಮೆ ಗಾಂಧೀಜಿ ಅವರನ್ನು ಕೊಂದರೆ ಈಗ ಕೆಲವರು ಪ್ರತಿದಿನ ಗಾಂಧೀಜಿ ಕೊಲ್ಲುತ್ತಿದ್ದಾರೆ. ಇದು ನವ್ಯ, ಭವ್ಯ ಭಾರತದ ದುರಂತ ಮತ್ತು ಅಪಾಯಕಾರಿ ಬೆಳವಣಿಗೆಯಾಗಿದೆ ಎಂದು ಅವರು ತಿಳಿಸಿದ್ದಾರೆ.

ಹಾಗಾಗಿ ರಾಜ್ಯ ಸರ್ಕಾರ ಈ ಎಲ್ಲಾ ಆತಂಕಗಳು ಕೊನೆಯಾಗುವಂತೆ ಗಾಂಧೀಜಿ ಅವರ ಹೆಸರನ್ನು ಶಾಶ್ವತವಾಗಿ ಉಳಿಸುವ ನಿಟ್ಟಿನಲ್ಲಿ ಗ್ರಾಪಂಗಳಿಗೆ ಗಾಂಧೀಜಿ ಹೆಸರು ಇಡಲು ನಿರ್ಧರಿಸಿರುವುದು ಸಂದರ್ಭೋಚಿತ ಮತ್ತು ಸ್ವಾಗತ ಎಂದು ವೈ.ಹೆಚ್. ನಾಗರಾಜ್ ತಿಳಿಸಿದ್ದಾರೆ.