ಚಾಲಕರು-ಪ್ರಯಾಣಿಕರ ಅನುಕೂಲಕ್ಕಾಗಿ ಆಟೋ ನಿಲ್ದಾಣಗಳ ನಿರ್ಮಾಣ; ಸೂಡಾ ಅಧ್ಯಕ್ಷ ಹೆಚ್.ಎಸ್. ಸುಂದರೇಶ್*
*ಚಾಲಕರು-ಪ್ರಯಾಣಿಕರ ಅನುಕೂಲಕ್ಕಾಗಿ ಆಟೋ ನಿಲ್ದಾಣಗಳ ನಿರ್ಮಾಣ; ಸೂಡಾ ಅಧ್ಯಕ್ಷ ಹೆಚ್.ಎಸ್. ಸುಂದರೇಶ್*


ಶಿವಮೊಗ್ಗ
ಆಟೋ ಚಾಲಕರು ಮತ್ತು ಪ್ರಯಾಣಿಕರ ಹಿತದೃಷ್ಟಿಯಿಂದ ನಗರದಲ್ಲಿ ಹಲವಾರು ಕಡೆಗಳಲ್ಲಿ ಸೂಡಾ ವತಿಯಿಂದ ಆಟೋ ನಿಲ್ದಾಣಗಳನ್ನು ನಿರ್ಮಿಸಲಾಗುತ್ತಿದೆ ಎಂದು ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಾದ ಹೆಚ್ ಎಸ್ ಸುಂದರೇಶ್ ತಿಳಿಸಿದರು.
ಶುಕ್ರವಾರ ನಗರದ ತುಂಗಾನಗರ ಪ್ರಾ.ಆ.ಕೇಂದ್ರ, ಎನ್‌ಹೆಚ್ ಆಸ್ಪತ್ರೆ ಮತ್ತು ಶಂಕರ ಕಣ್ಣಿನ ಆಸ್ಪತ್ರೆ ಎದುರಿನಲ್ಲಿ ನೂತನವಾಗಿ ಆಟೋ ನಿಲ್ದಾಣ ಹಾಗೂ ಗಾಡಿಕೊಪ್ಪದ ಸಿದ್ದಪ್ಪ ಬಡಾವಣೆಯಲ್ಲಿ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ತುಂಗಾನಗರದ ಪ್ರಾ.ಆರೋಗ್ಯ ಕೇಂದ್ರದ ಬಳಿ, ಹರಕೆರೆಯ ಶಂಕರ ಕಣ್ಣಿನ ಆಸ್ಪತ್ರೆ ಮತ್ತು ಎನ್ ಹೆಚ್ ಆಸ್ಪತ್ರೆ ಎದುರು ಆಟೋ ನಿಲ್ದಾಣ ಅತ್ಯವಶ್ಯಕವಾಗಿ ಬೇಕಾಗಿತ್ತು. ಬಿಸಿಲಿನ ಬೇಗೆಗೆ ಚಾಲಕರಿಗೆ ಹಾಗೂ ಪ್ರಯಾಣಿಕರಿಗೆ ತುಂಬಾ ತೊಂದರೆಯಾಗುತ್ತಿದ್ದು, ಆಟೋ ನಿಲ್ದಾಣದಿಂದ ಅನುಕೂಲವಾಗಲಿದ್ದು ಈ ಮೂರು ಸ್ಥಳಗಳಲ್ಲಿ ತಲಾ ರೂ.25 ಲಕ್ಷ ವೆಚ್ಚದಲ್ಲಿ ಆಟೋ ನಿಲ್ದಾಣ ನಿರ್ಮಿಸಲಾಗುವುದು ಎಂದರು.
ಗಾಡಿಕೊಪ್ಪದಲ್ಲಿರುವ ಸಿದ್ದಪ್ಪ ಬಡಾವಣೆಯಲ್ಲಿ ರೂ.25 ಕೋಟಿ ವೆಚ್ಚದಲ್ಲಿ ನಿವಾಸಿಗಳ ಮನೆ ಬಳಿ ರಸ್ತೆ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಲಾಗಿದ್ದು, ಜನರಿಗೆ ಅನುಕೂಲವಾಗುವ ದೃಷ್ಟಿಯಿಂದ ನಗರದಲ್ಲಿ ಮೂಲಭೂತ ಸೌಕರ್ಯಗಳನ್ನು ಅಭಿವೃದ್ದಿಪಡಿಸಲಾಗುತ್ತಿದೆ ಎಂದರು
ಇತ್ತೀಚೆಗೆ ಮಲೆನಾಡಿನಲ್ಲಿ ಉಷ್ಣಾಂಶ ಹೆಚ್ಚುತ್ತಿದೆ. ಆದ್ದರಿಂದ ನಗರದಲ್ಲಿ ಗಿಡಗಳನ್ನು ನೆಡುವುದು, ಪಾರ್ಕ್ ಅಭಿವೃದ್ದಿ ಪಡಿಸುವುದು ಅತ್ಯವಶ್ಯಕವಾಗಿದೆ. ನಗರನ್ನು ಹಸಿರಾಗಿಡಲು ಮತ್ತು ಜನರ ಆರೋಗ್ಯ ದೃಷ್ಟಿಯಿಂದ ಈಗಾಗಲೇ 50 ಪಾರ್ಕ್ ನಿರ್ಮಾಣ ಮಾಡಲಾಗಿದೆ. ಪ್ರಸ್ತುತ 50 ಪಾರ್ಕ್ಗಳನ್ನು ಅಭಿವೃದ್ದಿಪಡಿಸಿ, ಉದ್ಘಾಟನೆ ಮಾಡಲಾಗುತ್ತಿದೆ. ನಮ್ಮ ನಗರವನ್ನು ನಾವು ಸುಂದರವಾಗಿ ಮತ್ತು ಹಸಿರಾಗಿ ಇಟ್ಟುಕೊಳ್ಳಬೇಕು. ನಿವಾಸಿಗಳು ತಮ್ಮ ಮನೆ ಸುತ್ತಮುತ್ತ ಗಿಡಗಳನ್ನು ನೆಡಬೇಕು ಎಂದರು.
ಶಿವಮೊಗ್ಗ-ಭದ್ರಾವತಿ ವ್ಯಾಪ್ತಿಯಲ್ಲಿ ರೂ.50 ಕೋಟಿ ವೆಚ್ಚದಲ್ಲಿ 22 ಕೆರೆಗಳನ್ನು ಹೈಟೆಕ್ ಆಗಿ ಅಭಿವೃದ್ದಿಪಡಿಸಲಾಗುವುದು. 12 ಕೆರೆ ಅಭಿವೃದ್ದಿಗೆ ಈಗಾಗಲೇ ಟೆಂಡರ್ ಆಗಿದೆ. ವಾಕಿಂಗ್ ಪಾಥ್, ಮಕ್ಕಳ ಆಟಿಕೆಗಳು, ಫೆನ್ಸ್, ಲೈಟ್, ಐಲ್ಯಾಂಡ್ ನಿರ್ಮಾಣ ಸೇರಿದಂತೆ ಅತ್ಯಂತ ಸುಂದರವಾಗಿ ಕೆರೆಗಳನ್ನು ಅಭಿವೃದ್ದಿಸಲು ಯೋಜನೆ ರೂಪಿಸಲಾಗಿದೆ. ನಗರ ವ್ಯಾಪ್ತಿಯಲ್ಲಿ ಸುಮಾರು 1000 ಅಪಾರ್ಟ್ಮೆಂಟ್ ನಿರ್ಮಾಣ ಮಾಡಿ ಜನರಿಗೆ ನೀಡಲು ಈಗಾಗಲೇ ಅಂದಾಜು ಪಟ್ಟಿ ತಯಾರಿಸಿ ಸರ್ಕಾರಕ್ಕೆ ಕಳುಹಿಸಲಾಗಿದೆ. ಹಾಗೂ ಗೋಪಿಶೆಟ್ಟಿಕೊಪ್ಪದಲ್ಲಿ ನಿವೇಶನ ಮಾಡಲು ಕ್ರಮ ವಹಿಸಲಾಗುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಸೂಡಾ ಆಯುಕ್ತರಾದ ವಿಶ್ವನಾಥ ಮುದಜ್ಜಿ, ಎಇಇ ಬಸವರಾಪ್ಪ, ಎಇಇ ಗಂಗಾಧರಸ್ವಾಮಿ, ಬಡಾವಣೆ ನಿವಾಸಿಗಳು, ಆಟೋ ಚಾಲಕರು ಹಾಜರಿದ್ದರು.


