ಸಂಗೀತ ರವಿರಾಜ್ ಅಂಕಣ;ಒಲೆ ಉರಿಸುವ ಕಲೆಯ – ಲಯ , ರಾಗ, ತಾಳ…

    ಒಲೆ ಉರಿಸುವ ಕಲೆಯ – ಲಯ , ರಾಗ, ತಾಳ.

ಕಾಲ  ಯಾವುದಾದರೇನು ಒಲೆ ಉರಿಯಲೇ  ಬೇಕು ತಾನೆ? ಅದೇ ಉರಿಯಲ್ಲಿ ನಾವೂ ಬೇಯುತ್ತ ಅಡುಗೆ  ಮಾಡಲೇಬೇಕಾದ ಅನಿವಾರ್ಯತೆ.  ಮಳೆಗಾಲಕ್ಕೆಂದು ಸೌದೆ , ಕಾಯಿ ಚೆಪ್ಪು , ತೆಂಗಿನ ಗರಿಗಳನ್ನೆಲ್ಲ ಸಂಗ್ರಹಿಸಿ ಇಟ್ಟದ್ದು ಆಯ್ತು , ಅದು ಅದರಷ್ಟಕ್ಕೆ ಅತಿಯಾದ ಗಾಳಿ ಮಳೆಗೆ ಥಂಡಿ ಹಿಡಿದದ್ದು ಆಯ್ತು ! ಅದನ್ನುರಿಸಿ ಅಡುಗೆ ಮಾಡುವ ಮಹಿಳೆಯರ ಪಾಡು , ಅವಳಿಗಷ್ಟೇ ತಿಳಿದ ಹಾಡು. ಮಳೆಗಾಲದ ಸುಂದರವಾದ , ಹಿತವಾದ  ಬೆಳಗನ್ನು ಆಸ್ವಾದಿಸುತ್ತಾ ಒಂದು ಕ್ಷಣ ನಿಲ್ಲೋಣವೆಂದರೆ ಒಲೆಗೆ ಬೆಂಕಿ ಹಿಡಿಸುವ ತಾದ್ಯಾತ್ಮಿಕತೆಯ ಜವಾಬ್ದಾರಿ ನಮ್ಮನ್ನು ಸೆಳೆದು ಬಿಡುತ್ತದೆ. ಹೌದು , ಬೆಂಕಿ ಮಾಡುವುದು  ಸಹ ತಾದ್ಯಾತ್ಮಿಕತೆ ಜೊತೆಗೆ ತುಂಬಾ ತಲ್ಲೀನತೆ ಬೇಡುವ ಕೆಲಸ. ತುಂಬಾ ನಿಧಾನ ವಿಧಾನದಲ್ಲಿ ಚಾಕ ಚಕ್ಯತೆಯಿಂದ ಒಲೆ ಉರಿಸುವ ಕಲೆ ತಿಳಿದಿರಬೇಕು . ಇಲ್ಲವೆಂದರೆ ಒಂದೇ ಸಮನೆ ಹೊಗೆ ಹೊರಗೆ ಬಂದು ಅವಾಂತರ ಆಗಿ ಬಿಡುತ್ತದೆ. ಮತ್ತೆ ತಿರುಗಿ ಉರುಗಿ ಹೊತ್ತಿಸುವ ಹೊತ್ತಿಗೆ ಸಾಕಾಗಿ ಬಿಡುತ್ತದೆ. ಒಬ್ಬೊಬ್ಬರು ಒಂದೊಂದು ತೆರನಾದ ವಿಧಾನದಲ್ಲಿ ಒಲೆ ಉರಿಸುವ ಕಲೆಯನ್ನು ತಿಳಿದಿರುತ್ತಾರೆ.
ಜಗದ ಮೂಲೆ ಮೂಲೆಯಲ್ಲಿರುವ ಅದೆಷ್ಟೋ ಗೃಹಿಣಿಯರು ಶತ ಶತಮಾನಗಳಿಂದ ಹಳ್ಳಿ ಮನೆಯಲ್ಲಿರುವ ತಮ್ಮ ಒಲೆ ಉರಿಸುವ ಕಾಯಕವನ್ನು ತಪಸ್ಸಿನಂತೆ ನಿರ್ವಹಿಸುತ್ತಾ ಬಂದಿದ್ದಾರೆ. ಅಡುಗೆಯ ವಿಚಾರದಲ್ಲಿ ವಿದ್ಯುತ್ ಓವೆನ್ ವರೆಗೂ  ಅಲ್ಲದೆ, ಅದಕ್ಕೂ ಮೀರಿ ಆಧುನಿಕತೆ ಧಾವಿಸಿದರು ನಮ್ಮ ಮನೆಯ ಅಜ್ಜಿಯೋ,  ಅಮ್ಮನೋ ಪ್ರತಿ ದಿನ ರೊಟ್ಟಿ ಮಾಡುವುದು ಬೆಂಕಿ ಒಲೆಯಲ್ಲಿ ಮಾತ್ರ. ಹೀಗೆ ಬೆಳಗಾಗೆದ್ದು ಮಾಡಿದ ಒಲೆಯಲ್ಲಿ ಮತ್ತೆ ಅಡುಗೆ ಕೆಲಸ ಬಿಗಡಾಯಿಸುತ್ತಲೇ ಹೋಗುತ್ತದೆ. ಕೆಲವೊಮ್ಮೆ ಸಂಜೆವರೆಗೂ ಒಲೆ ಉರಿಯುತ್ತಲೇ ಇರುತ್ತದೆ. ಕೊಡಗಿನಂತಹ ಚಳಿ ಜಾಸ್ತಿ ಇರುವ ಪ್ರದೇಶದಲ್ಲಿ ಒಲೆಯೊಂದು ಸಂತ. ಒಲೆ ಬುಡದಲ್ಲಿ ಚುಕ್ಕರ ಕುಳಿತು ಕಾಫೀ ಹೀರುವುದರಲ್ಲಿಯೆ ಬದುಕಿನ  ಸರ್ವಸುಖ ಅಡಗಿದೆ ಎಂಬ ಭಾವನೆ ಆ   ಕ್ಷಣಕ್ಕೆ ಹುಟ್ಟುವುದು ಸುಳ್ಳಲ್ಲ.  ನಮ್ಮಂತಹ ಕೃಷಿಕರಿಗೆ ಇದೆಲ್ಲ ಸಾಮಾನ್ಯ ವಿಚಾರ.  ಬೆಳ್ಳಂಬೆಳಗ್ಗೆ ಉರಿಸಿದ ಒಲೆಯಲ್ಲಿ ರೊಟ್ಟಿ , ಗಂಜಿಯಿಂದ  ಶುರುಹಚ್ಚಿ , ಇನ್ನು ಪ್ರಾಣಿಗಳನ್ನು ಸಾಕಿದವರಿಗೆ ಅದಕ್ಕಿರುವ ಆಹಾರ ಬೆಂದಾಗುವ ಹೊತ್ತಿಗೆ   ಮದ್ಯಾಹ್ನ ಕಂತಿರುತ್ತದೆ.   ನಮ್ಮ ಒಲೆ ಉರಿಸುವ ಅಡುಗೆ ಮನೆಯಲ್ಲಿ ನಾಲ್ಕು ಒಲೆಗಳಿವೆ. ಒಂದಂತೂ ಪ್ರತಿದಿನ ಉರಿಯುತ್ತದೆ. ಅಡಿಕೆ ಕೊಯ್ಲು, ಗೊಬ್ಬರ ಹೊರುವ ಕೆಲಸ ಹೀಗೆ ತೋಟದ ಕೆಲಸಕ್ಕೆ ಜನ ಜಾಸ್ತಿ ಇದ್ದ ದಿನ ಎರಡೆರಡು ಒಲೆ ಉರಿಯಲೇಬೇಕು. ತಂಬಿಲ ಮತ್ತಿತರ ಇದ್ದಾಗ ನಾಲ್ಕು ಒಲೆ ಉರಿಯುತ್ತದೆ.
‌         ಮಾಡಿದ ಬೆಂಕಿಯನ್ನು ಆಗಾಗ್ಗೆ ಮುಂದಕ್ಕೆ ದೂಡಿ ಸರಿಪಡಿಸುತ್ತಲೆ  ಇರಬೇಕು . ತಪ್ಪಿಯೂ ಕಾಲಲ್ಲಿ ದೂಡಬಾರದು ಅಂತ ಹಿರಿಯರು ಹೇಳುತ್ತಾರೆ. ನಾಗರಿಕತೆಗಳಿಂದಲೂ ಅಗ್ನಿಯನ್ನು ದೇವರು ಎಂದು ಪೂಜಿಸುತ್ತಿದ್ದರು. ಈಗಲೂ  ಅದು ಹಾಗೆಯೇ ಇದೆ.  ಈ ಕಾರಣಕ್ಕೆ ಸೀಮೆಎಣ್ಣೆ ಬಳಸಿ ಬೆಂಕಿ ಮಾಡಬಾರದು ಎನ್ನುತ್ತಾರೆ. ಒಲೆ ಹತ್ತಿರವೇ ಇದ್ದು ಮಾಡುವ ಅಡುಗೆ ಗೃಹಿಣಿಗೆ ತುಂಬಾ ತೊಂದರೆಯನ್ನುಂಟು ಮಾಡುತ್ತದೆ.  ಎಂಬುದು ಸುಳ್ಳಲ್ಲ. ಹೊಗೆಯಿಂದ ಆಕೆ ತನ್ನನ್ನು ತಾನು ರಕ್ಷಿಸಿ ಕೊಳ್ಳುವುದೇ ಜಾಣತನ. ಊದು ಕೊಳವೆಯಿಂದ ಊದುವಾಗ ತುಂಬಾ ನೈಪುಣ್ಯತೆ ಬೇಕಾಗುತ್ತದೆ. ನನ್ನ ಮದುವೆಯಾದಾಗ ತಂದೆ ಹೇಳಿದ ಮಾತು ದಿನನಿತ್ಯ ಬೆಳಗ್ಗೆ ಒಲೆ ಉರಿಸುವಾಗ ನೆನಪಾಗದೆ ಇರುವುದಿಲ್ಲ. ತಪ್ಪಿಯು ಕೊಳವೆಯಲ್ಲಿ ಊದುವಾಗ ಹಿಂದಕ್ಕೆ ಎಳೆದುಕೊಳ್ಳಬೇಡ ಕೆಮ್ಮುಬರುತ್ತದೆ , ದಮ್ಮು ಕಟ್ಟುತ್ತದೆ ಎಂದಿದ್ದರು. ಅವರಿಗೆ ನಾನು ಪ್ರತಿದಿನ ಒಲೆ ಉರಿಸುವ ಬಗ್ಗೆ ಅತೀವ ಕಾಳಜಿ ಇತ್ತು. ಏಕೆಂದರೆ ಅಲ್ಲಿವರೆಗೆ ನನಗೆ ಒಲೆ ಉರಿಸುವ ಬಗ್ಗೆ ಕೆಲಸವೇ ತಿಳಿದಿರಲಿಲ್ಲ .  ಹೊಸ ಕೆಲಸ  ಕಲಿತ ಮೇಲೆ ಈಗ ನನಗಿದು ತುಂಬಾ ಸಲೀಸು. ಸಂಜೆಯಾದಾಗ ಮೀಯುವ   ಒಲೆಗೆ ಬೆಂಕಿ ಹಾಕುವ ಕೆಲಸ ಹಳ್ಳಿಯ  ಮಹಿಳೆಯರಿಗಿರುತ್ತದೆ. ಕೆಲಸಗಳು ಒಗ್ಗುವರೆಗೆ ಮಾತ್ರ ನಮ್ಮನ್ನು ಸತಾಯಿಸುತ್ತವೆ ಎಂಬುದು ನಾನು ಕಂಡುಕೊಂಡ ಸತ್ಯ. ಅಥವಾ ಮನಸ್ಸೇ ಒಗ್ಗಿಹೋಗುವುದೋ ನಾ ಕಾಣೆ.  ಅದೇನೇ ಇರಲಿ ಮಹಿಳೆಯರು ಬೆಂಕಿಯ ವಿಚಾರದಲ್ಲಿ ಇನ್ನೂ ತುಂಬಾ ಜಾಗರೂಕತೆ ಮಾಡುವ ಎರಡು ಅತಿಮುಖ್ಯ ವಿಚಾರಗಳಿವೆ. ಸೀರೆ ಅಥವಾ ತೊಟ್ಟ ಯಾವುದೇ ಬಟ್ಟೆಗಳನ್ನು ಒಲೆ ಬುಡದಲ್ಲಿ ಇದ್ದಾಗ ಆದಷ್ಟು ಜಾಗ್ರತೆ  ವಹಿಸಬೇಕು. ಬೆಂಕಿ ತಗುಲಿ ಬಿಡುವ ಸಾಧ್ಯತೆ ತುಂಬಾ ಹೆಚ್ಚಿರುತ್ತದೆ. ಹೀಗೆ ಬೆಂಕಿ ತಗುಲಿ ಜೀವಕ್ಕೆ ಹಾನಿಯಾದ ಹಲವಾರು ಪ್ರಸಂಗಗಳು ನಮ್ಮ ಕಣ್ಣ ಮುಂದಿದೆ. ಇನ್ನೊಂದು ವಿಚಾರವೆಂದರೆ ಚಿಕ್ಕ ಮಕ್ಕಳನ್ನು ಒಲೆ ಹತ್ತಿರ ಸುಧಾರಿಸಿಕೊಳ್ಳುವ ವಿಚಾರ ತುಂಬಾ ಮುಖ್ಯವಾಗುತ್ತದೆ. ನಮ್ಮ ಕಾಲಬುಡದಲ್ಲಿ ಸುಳಿದಾಡುವ ಅವರನ್ನು ಎಷ್ಟು ನೋಡಿಕೊಂಡರು ಸಾಲದು. ಇವೆರಡೂ ವಿಚಾರಗಳು ನನ್ನದೇ ಅನುಭವದಲ್ಲಿ ಹೇಳಿದರು ಸಾರ್ವಕಾಲಿಕ ಸತ್ಯವೆಂಬುದು ದಿಟ.
ಹೀಗೆ ತಮ್ಮ ನೂರಾರು ಕೆಲಸಕಾರ್ಯಗಳ ನಡುವೆ ಒಲೆ ಉರಿಸುವುದನ್ನು  ಚಿಟಿಕೆ ಕೆಲಸ ಮಾಡಿಕೊಂಡು , ಕಲ್ಲಿನಂತಾದ ಕೈಗಳಿಂದ ಹಾಗೆಯೇ  ಒಲೆಯಿಂದ ಚಟ್ಟಿಗಳನ್ನು  ಇಳಿಸುವ ಕೃಷಿ ಮಹಿಳೆಯರ  ನಿತ್ಯಗಾಥೆ ಹೇಳ ಹೊರಟರೆ  ಯಶೋಗಾಥೆ .  ಆದರೆ ಪ್ರಸ್ತುತ  ಈಗ ಕೃಷಿಯಲ್ಲಿಯು ಸಾಕಷ್ಟು ಸುಧಾರಣೆ ಕಂಡು ನಾವು ಕೃಷಿ ಮಹಿಳೆಯರು ಮನೆಯೊಳಗೆ ಬಹಳಷ್ಟು ಸುಧಾರಿಸಿದ್ದೇವೆ ಎಂದರು ತಪ್ಪಲ್ಲ. ಕುಕ್ಕರಗಾಲಲ್ಲಿ ಕುಳಿತು ಬೆಂಕಿ ಮಾಡುತಿದ್ದ ಕಾಲ ಬದಲಾಗಿ ತಮ್ಮ ಆಧುನಿಕ ಅಡುಗೆ ಮನೆಯ ಮೂಲೆಯಲ್ಲಿ  ಅಸ್ತ್ರ ಒಲೆ ಅಥವಾ ಸಾಮಾನ್ಯ ಒಲೆಯಾದರು ಎಲ್ಲ ಅನುಕೂಲತೆಗಳನ್ನು ಮಾಡಿ ನಿಂತೆ ಅಡುಗೆ ಮಾಡಿ ಬಿಡುತ್ತಾರೆ .ಪ್ರತಿ ಹಳ್ಳಿ ಮನೆಯಲ್ಲೂ ಗ್ಯಾಸ್ ಸೌಲಭ್ಯವಿದ್ದರು , ತೋಟದಲ್ಲಿ ಬೇಕಾದಷ್ಟು ಸೌದೆ ಸಿಗುವಾಗ ಇದೆ ಉತ್ತಮವೆಂಬ ಅನಿಸಿಕೆ ಹಳ್ಳಿ ಹೆಣ್ಮಕ್ಕಳಲ್ಲಿ ಇದೆ.
ಕೃಷಿಯಲ್ಲಿ ಸಿಗುವ ಅಲ್ಪ ಲಾಭವನ್ನು ದುಬಾರಿ ಒಲೆಗೆ ತೆತ್ತು ಬಿಡುವ  ಜಾಯಮಾನ ನಮ್ಮ ಹೆಣ್ಮಕ್ಕಳಿಗೆ ಇಲ್ಲ. ಹಾಗಾಗಿ ಒಲೆ ಉರಿಸುವುದಕ್ಕೆ ಎಲ್ಲರೂ ಎಗ್ಗಿಲ್ಲದೆ ಒಗ್ಗಿ ಹೋಗಿದ್ದಾರೆ. ಪಟ್ಟಣದಿಂದ ವರುಷಕ್ಕೊಮ್ಮೆ ಬರುವ ಅಕ್ಕನಿಗು ತವರಿನಲ್ಲಿ ಕೆಂಡದಲ್ಲಿ ಸುಟ್ಟ ಗೇರುಬೀಜ ತಿನ್ನಲೇಬೇಕು . ಮಹಾನಗರಗಳಿಂದ ಬರುವ ಎಲ್ಲರಿಗೂ ಕಲ್ತಪ್ಪ,
ಬಡ್ರೊಟ್ಟಿ, ಪೊಕ್ಲ ರೊಟ್ಟಿ  ಬೇಕೆ ಬೇಕು. ಧಾವಂತದ ಬದುಕಿನ  ಸದ್ಯದಲ್ಲಿ  ಒಲೆಯಲ್ಲಿ ಅಡುಗೆ ಮಾಡುವುದನ್ನು ಎಲ್ಲರೂ ಮರೆತರೂ  , ಅದರಲ್ಲಿ ಮಾಡಿದ ತಿಂಡಿಂತಿನಿಸುಗಳ ರುಚಿಯನ್ನು ಮಾತ್ರ ಯಾರು ಮರೆತಿರಲ್ಲಿಕ್ಕಿಲ್ಲ .ಮಣ್ಣಿನ ಪಾತ್ರೆಗಳಲ್ಲಿ , ಬಳಪದ ಕಾವಲಿಗಳಲ್ಲಿ  ಮಾಡಿದ ತಿಂಡಿಯ ರುಚಿಯೇ ಹೆಚ್ಚು.  ಕೆಲವು ಅಡಿಮೇಲುನಂತಹ ಆಹಾರ ತಯಾರಿಕೆಗಳು ಒಲೆಯಲ್ಲಿಯೆ ಕಡ್ಡಾಯವಾಗಿ ಮಾಡುವಂಥದ್ದು. ಏನೇ ಇರಲಿ ಬದಲಾದ ಜಮಾನದಲ್ಲಿ ಇದನ್ನೆಲ್ಲ ಒಲೆಯಲ್ಲಿ ಮಾಡಿ ಕೊಟ್ಟರೆ ತಿಂದೇನು, ಮಾಡಿ ತಿನ್ನಲಾರೆನು ಎನ್ನುವವರೇ ಜಾಸ್ತಿ.  ಹಳ್ಳಿಯ ಕೃಷಿಕರನ್ನು ಮದುವೆಯಾಗಲು ಯಾರು ತಯಾರಿಲ್ಲದ ಈ ಕಾಲದಲ್ಲಿ, ಒಲೆಯಲ್ಲಿ ಅಡುಗೆ ಮಾಡಲು ತಯಾರಿರುವರೆ? ಒಮ್ಮೆ ಹೀಗೆ ಆಗಿತ್ತು,  ನಾನು ಕೃಷಿ ಮನೆಗೆ ಹೋದೆನು, ಆದರೆ ಬೆಂಕಿ ಒಲೆಯಲ್ಲಿ ಮಾತ್ರ ಅಡುಗೆ ಮಾಡಲಾರೆ ಎಂದು ಪಟ್ಟು ಹಿಡಿದು ಕುಳಿತಿದ್ದಳು ಹುಡುಗಿ. ಕೊನೆಗೂ ಪಟ್ಟಣದ ಪುಟ್ಟ ಸಿಗಲಿಲ್ಲ. ಹಳ್ಳಿ ಹೈದನನ್ನೆ ಕೈ ಹಿಡಿದು ಹೋದಾಗ ಅಲ್ಲಿ ಸೌದೆ ಒಲೆ ಉರಿಸಲು ಇತ್ತೆನ್ನಿ.  ಏನೇ ಆದರೂ ಹಠ ಬಿಡಲೊಲ್ಲದ  ನೈಲ್ ಪಾಲಿಶ್ ಹುಡುಗಿ ಗ್ಯಾಸ್ ಮತ್ತು ಮೈಕ್ರೋ ಓವೆನ್ ನಲ್ಲಿಯೇ ಮಶ್ರೂಮ್ ಮಾಡುತ್ತಾಳಂತೆ. ಒಲೆಯ ಅಡುಗೆಗಳೆಲ್ಲ ಅತ್ತೆಯ ಪಾಲಿಗೆ   ಎನ್ನುತ್ತಾಳೆ. ಇಷ್ಟಾದರೂ ಮಾಡುತ್ತಾಳಲ್ಲ  ಅಂತ ಅತ್ತೆ ಬಹುಶಃ ಸುಮ್ಮನಿರಬೇಕು. ಆಧುನಿಕತೆ ಬಂದರು ಕೆಲವು ವಿಷಯಗಳಿಗೆ ಹಳ್ಳಿಯ ಕೃಷಿಕ ಮಹಿಳೆಯರು ರಾಜಿಯಾಬೇಕಾಗುತ್ತದೆ. ಇದು ಜಿಪುಣತನ ದ  ವಿಚಾರ ಖಂಡಿತ ಅಲ್ಲ ಬದಲಾಗಿ ವಿವೇಚನೆ.  ಛೀ , ಛೀ ಒಲೆ ಉರಿಸಿ ಅಡುಗೆ ಮಾಡುವುದನ್ನು ನಾನು ಕಣ್ಣಾರೆ ನೋಡಲಿಲ್ಲ , ಮಸಿ ತಾಗಿದರೆ ನನಗಾಗಲ್ಲ ಎಂದ ಆಧುನಿಕ ಮಹಿಳೆಗೆ ನಾನೊಂದು ಪ್ರಶ್ನೆ ಹಾಕಿದೆ. ರಸ್ತೆಯಲ್ಲಿ ಸಾಗುವಾಗ , ನಿರ್ಗತಿಕರು ರಸ್ತೆ ಬದಿಯಲ್ಲಿ ಕಲ್ಲನಿಟ್ಟು ಒಲೆಯಲ್ಲಿ ಅನ್ನಕ್ಕಿಟ್ಟದನ್ನು ನೋಡಿಲ್ಲವೆ ಎಂದು ಕೇಳಿದೆ?  ಅದು ನೋಡಿರುವೆ ಎಂದು ತಲೆ ಕೆಳಗೆ ಹಾಕಿದಳು ! ಇಂತಹ ವಾಸ್ತವವನ್ನು ಒಪ್ಪುವುದೇ ಜೀವನ . ಈಗ ಲೋಕದಲ್ಲಿ ಅಕ್ಕಿ ಬೆಳೆಯುವರೇ ಕಡಿಮೆಯಾಗುತಿದ್ದಾರಂತೆ .  ಆಧುನಿಕ  ಜಗತ್ತಿಗೆ ಇನ್ನು  ಮುಂದಕ್ಕೆ ಅನ್ನ ಮಾಡುವ ಕೆಲಸವೇ ಇಲ್ಲ ಎನ್ನಬಹುದೇ ?
ನಾವು ಮಹಿಳೆಯರು ಹೇಗಿದ್ದೇವೆ ಅಂದರೆ , ಒಲೆಬುಡದಲ್ಲಿ ಕುಳಿತು  ಮನೆಮಂದಿಗೆಲ್ಲ ರೊಟ್ಟಿ ತಟ್ಟಿ , ಇಡೀ ಜಗತ್ತಿಗೆ ಅನ್ನ ನೀಡುವ ಕೃಷಿಕ ಕುಟುಂಬ ಒಂದು ತಕ್ಕಡಿಯಲ್ಲಾದರೆ , ಪ್ಲಾಟ್ ನಲ್ಲಿರುವ ಗಂಡ ಹೆಂಡತಿ ರೆಡಿಮೇಡ್ ರೊಟ್ಟಿ ತಂದು ತಿನ್ನುವ ಕುಟುಂಬ ಇನ್ನೊಂದು ತಕ್ಕಡಿಯಲ್ಲಿ ಇದೆ. ಇವೆರಡೂ ಸಮತೋಲನಕ್ಕೆ ಬಂದರೆ ಸಮಾಜದಲ್ಲಿ ಮಹಿಳೆ   ಗೃಹಿಣಿಯಾಗಿ,    ಸಾಮಾಜಿಕವಾಗಿ    ತಕ್ಕ ಮಟ್ಟಿಗೆ ಸಮತೋಲನ ಕಾಯ್ದುಕೊಳ್ಳುಹುದು.        ಬೆಳೆದ ಬತ್ತ ಅಕ್ಕಿಯಾಗಿ , ಅನ್ನವಾಗುವ ಅಮೃತ ಘಳಿಗೆಯ ಮದ್ಯದಲ್ಲಿ ಎಷ್ಟೊಂದು ವಿಚಾರಗಳಿವೆ. ಹಾಗಾಗಿ ಒಲೆಯೂದುವ ಕಿರಿಕಿರಿಗೂ ಅರ್ಥವಿದೆ.  ನಮ್ಮ ಕನಸು ,ಕನವರಿಕೆಗಳನ್ನು ಮಾಡುವ ಬೆಂಕಿಯೊಂದಿಗೆ  ಉರಿದು ಬೂದಿಯಾಗಲು ಬಿಡದೆ , ತಮ್ಮ ಅಸ್ಮಿತೆಯನ್ನು ಉಳಿಸಿಕೊಳ್ಳುವ ಸಲುವಾಗಿ ಮಹಿಳೆಯರು ಯೋಚಿಸಬೇಕು ಅಷ್ಟೇ…

– ಸಂಗೀತ ರವಿರಾಜ್
ಚೆಂಬು