ಶಿವಮೊಗ್ಗದಲ್ಲಿ ಹೈಕೋರ್ಟ್ ಸಂಚಾರಿ ಪೀಠ ಸ್ಥಾಪನೆಗೆ ಆಗ್ರಹ; ಸಚಿವ ಎಸ್. ಮಧು ಬಂಗಾರಪ್ಪ ನೇತೃತ್ವದಲ್ಲಿ ಸಿಎಂಗೆ ಮನವಿ*
ಶಿವಮೊಗ್ಗದಲ್ಲಿ ಹೈಕೋರ್ಟ್ ಸಂಚಾರಿ ಪೀಠ ಸ್ಥಾಪನೆಗೆ ಆಗ್ರಹ; ಸಚಿವ ಎಸ್. ಮಧು ಬಂಗಾರಪ್ಪ ನೇತೃತ್ವದಲ್ಲಿ ಸಿಎಂಗೆ ಮನವಿ*
*ಬೆಂಗಳೂರು* : ಮಧ್ಯ ಕರ್ನಾಟಕದ ಜನರ ಬಹುಕಾಲದ ಬೇಡಿಕೆಯಾಗಿರುವ ‘ಹೈಕೋರ್ಟ್ ಸಂಚಾರಿ ಪೀಠ’ವನ್ನು ಶಿವಮೊಗ್ಗದಲ್ಲಿ ಸ್ಥಾಪಿಸುವಂತೆ ಆಗ್ರಹಿಸಿ, ಶಿವಮೊಗ್ಗದ ಹಿರಿಯ ವಕೀಲರ ನಿಯೋಗವು ಬುಧವಾರದಂದು ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿತು.
ಬೆಂಗಳೂರಿನ ಮುಖ್ಯಮಂತ್ರಿಗಳ ಅಧಿಕೃತ ನಿವಾಸ ‘ಕೃಷ್ಣಾ’ದಲ್ಲಿ ಈ ಭೇಟಿ ನಡೆಯಿತು. ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರು ಹಾಗೂ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್. ಮಧು ಬಂಗಾರಪ್ಪ ಅವರ ನೇತೃತ್ವದಲ್ಲಿ ನಿಯೋಗವು ಮುಖ್ಯಮಂತ್ರಿಗಳನ್ನು ಭೇಟಿಯಾಗಿ, ಸಂಚಾರಿ ಪೀಠದ ಅಗತ್ಯತೆಯ ಕುರಿತು ಸುದೀರ್ಘವಾಗಿ ಚರ್ಚಿಸಿ ಮನವಿ ಪತ್ರವನ್ನು ಹಸ್ತಾಂತರಿಸಿತು.
ಮನವಿ ಪತ್ರದಲ್ಲಿರುವ ಪ್ರಮುಖ ಅಂಶಗಳು:
*ಕೈಗೆಟುಕುವ ನ್ಯಾಯ* : ಬೆಂಗಳೂರಿನಿಂದ ಸುಮಾರು 250 ರಿಂದ 300 ಕಿ.ಮೀ ದೂರದಲ್ಲಿರುವ ಶಿವಮೊಗ್ಗ, ದಾವಣಗೆರೆ, ಚಿಕ್ಕಮಗಳೂರು ಮತ್ತು ಚಿತ್ರದುರ್ಗ ಜಿಲ್ಲೆಗಳ ಲಕ್ಷಾಂತರ ಜನರಿಗೆ ಸುಲಭವಾಗಿ, ಶೀಘ್ರವಾಗಿ ಮತ್ತು ಕೈಗೆಟುಕುವ ವೆಚ್ಚದಲ್ಲಿ ನ್ಯಾಯಾಲಯದ ಸೌಲಭ್ಯ ಒದಗಿಸಲು ಶಿವಮೊಗ್ಗದಲ್ಲಿ ಸಂಚಾರಿ ಪೀಠದ ಸ್ಥಾಪನೆ ಅತ್ಯಗತ್ಯವಾಗಿದೆ.
*ಸಮಿತಿಯ ಮಾರ್ಗಸೂಚಿ ಪಾಲನೆ* : ನ್ಯಾಯಮೂರ್ತಿ ಜಸ್ವಂತ್ ಸಿಂಗ್ ಸಮಿತಿಯ ಮಾರ್ಗಸೂಚಿಗಳ ಅನ್ವಯ ಸಂಚಾರಿ ಪೀಠದ ಸ್ಥಾಪನೆಗೆ ಅಗತ್ಯವಿರುವ ಎಲ್ಲಾ ಅರ್ಹತೆಗಳನ್ನು ಮಧ್ಯ ಕರ್ನಾಟಕ ಭಾಗವು ಸಂಪೂರ್ಣವಾಗಿ ಹೊಂದಿದೆ.
*ಸಮರ್ಥ ವಕೀಲರ ಬೆಂಬಲ* : ಶಿವಮೊಗ್ಗ ಜಿಲ್ಲೆಯಲ್ಲೇ 18 ಜನ ಹಿರಿಯ ವಕೀಲರನ್ನೊಳಗೊಂಡ ಸಮರ್ಥ ವಕೀಲರ ತಂಡವಿದ್ದು, ಈ ಭಾಗದ ಎಲ್ಲಾ ಚುನಾಯಿತ ಜನಪ್ರತಿನಿಧಿಗಳು ಮತ್ತು ಸಾರ್ವಜನಿಕ ಸಂಘ-ಸಂಸ್ಥೆಗಳ ಒಮ್ಮತದ ಬೆಂಬಲ ಈ ಬೇಡಿಕೆಗಿದೆ.
ಹೈದರಾಬಾದ್ ಕರ್ನಾಟಕ ಹಾಗೂ ಉತ್ತರ ಕರ್ನಾಟಕದ ಜನರಿಗಾಗಿ ಕಲಬುರಗಿ ಮತ್ತು ಧಾರವಾಡಗಳಲ್ಲಿ ಸಂಚಾರಿ ಪೀಠಗಳನ್ನು ಯಶಸ್ವಿಯಾಗಿ ಸ್ಥಾಪಿಸಿರುವ ಮಾದರಿಯಲ್ಲೇ, ಸಾರ್ವಜನಿಕರ ಹಿತದೃಷ್ಟಿಯಿಂದ ಮಧ್ಯ ಕರ್ನಾಟಕ ಭಾಗದ ಕೇಂದ್ರಸ್ಥಾನವಾದ ಶಿವಮೊಗ್ಗದಲ್ಲೂ ಉಚ್ಚ ನ್ಯಾಯಾಲಯದ ಸಂಚಾರಿ ಪೀಠವನ್ನು ಸ್ಥಾಪಿಸುವಂತೆ ಕೋರಲಾಯಿತು.
ಈ ಮಹತ್ವದ ಸಂದರ್ಭದಲ್ಲಿ ವಿರಾಜಪೇಟೆ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಎ.ಎಸ್. ಪೊನ್ನಣ್ಣ ಹಾಗೂ ಶಿವಮೊಗ್ಗದ ಹಿರಿಯ ವಕೀಲರುಗಳು ಉಪಸ್ಥಿತರಿದ್ದರು.


