ಶಿವಮೊಗ್ಗ ನಗರದಲ್ಲಿ ಸಂಚಾರ ನಿಯಮಗಳ ಪರಿಣಾಮಕಾರಿ ಅನುಷ್ಠಾನ ಹಾಗೂ ಸಾರ್ವಜನಿಕ ಸುರಕ್ಷತೆ ಕುರಿತು ಪ್ರಜಾ ಜಾಗೃತಿ ವೇದಿಕೆಯ ರಾಜ್ಯಾಧ್ಯಕ್ಷ ವಿನ್ಸೆಂಟ್ ರೋಡ್ರಿಗಸ್ ಬಹಿರಂಗ ಪತ್ರ

ಶಿವಮೊಗ್ಗ ನಗರದಲ್ಲಿ ಸಂಚಾರ ನಿಯಮಗಳ ಪರಿಣಾಮಕಾರಿ ಅನುಷ್ಠಾನ ಹಾಗೂ ಸಾರ್ವಜನಿಕ ಸುರಕ್ಷತೆ ಕುರಿತು ಪ್ರಜಾ ಜಾಗೃತಿ ವೇದಿಕೆಯ ರಾಜ್ಯಾಧ್ಯಕ್ಷ
ವಿನ್ಸೆಂಟ್ ರೋಡ್ರಿಗಸ್ ಬಹಿರಂಗ ಪತ್ರ ಬರೆದಿದ್ದಾರೆ.

ಅವರ ಪತ್ರದ ಪೂರ್ಣ ಪಾಠ ಇಲ್ಲಿದೆ👇

*ಆತ್ಮೀಯ ಜಿಲ್ಲೆಯ ಎಲ್ಲಾ ಹಿರಿಯ ಹಾಗೂ ಕಿರಿಯ ಪೊಲೀಸ್ ಅಧಿಕಾರಿಗಳೇ,*

ಇಂದು ಶಿವಮೊಗ್ಗ ನಗರದ ಟ್ರಾಫಿಕ್ ಪೊಲೀಸ್ ಇಲಾಖೆಯು ಶಾಲಾ ಮಕ್ಕಳನ್ನು ಸಾಗಿಸುವ ವಾಹನಗಳ ತಪಾಸಣೆ ನಡೆಸಿದ ಸಂದರ್ಭದಲ್ಲಿ ಕೆಲವು ವಾಹನ ಚಾಲಕರು ಮದ್ಯಪಾನ ಮಾಡಿ ವಾಹನ ಚಲಾಯಿಸುತ್ತಿದ್ದ ಪ್ರಕರಣಗಳನ್ನು ಪತ್ತೆಹಚ್ಚಿರುವುದು ತಿಳಿದುಬಂದಿದೆ. ನಿಮ್ಮ ಈ ಕಾರ್ಯ ಕೇವಲ ಜನಮೆಚ್ಚುಗೆಯ ಕಾರ್ಯವಲ್ಲ, ಮಕ್ಕಳ ಸುರಕ್ಷತೆಯನ್ನು ಕಾಪಾಡುವ ಮಹತ್ವದ ಸೇವೆಯಾಗಿದೆ. ಭವ್ಯ ಭಾರತದ ಭವಿಷ್ಯವನ್ನು ರೂಪಿಸಬೇಕಾದ ಮಕ್ಕಳನ್ನು ಶಾಲೆಗೆ ಕರೆದುಕೊಂಡು ಹೋಗುವ ವಾಹನಗಳ ಚಾಲಕರು ಹಗಲಲ್ಲೇ ಮದ್ಯಪಾನ ಮಾಡಿ ವಾಹನ ಚಲಾಯಿಸುವುದು ಅತ್ಯಂತ ಆತಂಕಕಾರಿ ಸಂಗತಿಯಾಗಿದೆ. ಇಂತಹವರ ವಿರುದ್ಧ ಕಠಿಣ ಕ್ರಮ ಕೈಗೊಂಡಿರುವುದಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಸೇರಿದಂತೆ ಪೊಲೀಸ್ ಇಲಾಖೆಯ ಎಲ್ಲಾ ಸಿಬ್ಬಂದಿಯನ್ನು ಹೃತ್ಪೂರ್ವಕವಾಗಿ ಅಭಿನಂದಿಸುತ್ತೇನೆ.
ಈ ಸಂದರ್ಭದಲ್ಲಿ ಶಿವಮೊಗ್ಗ ನಗರದ ಸಂಚಾರ ವ್ಯವಸ್ಥೆಗೆ ಸಂಬಂಧಿಸಿದಂತೆ ಕೆಲವು ಸಾರ್ವಜನಿಕ ಸಮಸ್ಯೆಗಳನ್ನು ತಮ್ಮ ಗಮನಕ್ಕೆ ತರಲು ಬಯಸುತ್ತೇನೆ.
ಹಾಲುಕೊಳ ಸರ್ಕಲ್‌ನಲ್ಲಿ ಬಸ್‌ಗಳನ್ನು ಮಧ್ಯ ರಸ್ತೆಯಲ್ಲೇ ನಿಲ್ಲಿಸಲಾಗುತ್ತಿದೆ.
ಸರ್ಕಿಟ್ ಹೌಸ್ ಸರ್ಕಲ್ ಬಳಿ ವಾಹನಗಳನ್ನು ಮಧ್ಯ ರಸ್ತೆಯಲ್ಲಿ ನಿಲ್ಲಿಸಲಾಗುತ್ತಿದೆ.
ಮೆಗ್ಗಾನ್ ಆಸ್ಪತ್ರೆ ಸುತ್ತಮುತ್ತ ವಾಹನಗಳನ್ನು ರಸ್ತೆ ಮಧ್ಯಭಾಗದಲ್ಲೇ ನಿಲ್ಲಿಸುವುದರಿಂದ ಸಂಚಾರ ದಟ್ಟಣೆ ಉಂಟಾಗುತ್ತಿದೆ.
ಅನೇಕ ಸಿಟಿ ಬಸ್ ಚಾಲಕರು ನಿಗದಿತ ಬಸ್ ನಿಲ್ದಾಣಗಳಲ್ಲಿ ವಾಹನ ನಿಲ್ಲಿಸದೇ ಮಧ್ಯ ರಸ್ತೆಯಲ್ಲೇ ಪ್ರಯಾಣಿಕರನ್ನು ಇಳಿಸಿ-ಏರಿಸುತ್ತಿದ್ದಾರೆ.
ಹೊನ್ನಾಳಿ, ಹರಿಹರ ಹಾಗೂ ದಾವಣಗೆರೆ ಕಡೆಯಿಂದ ಬರುವ ಬಸ್‌ಗಳು ಕೋರ್ಟ್ ಸರ್ಕಲ್ ಸಿಗ್ನಲ್ ಸಮೀಪ ವಾಹನಗಳನ್ನು ಅಸ್ತವ್ಯಸ್ತವಾಗಿ ನಿಲ್ಲಿಸುತ್ತಿವೆ.
ಕರ್ನಾಟಕ ಸಂಘದ ಸಿಗ್ನಲ್ ಬಳಿ ವಾಹನಗಳನ್ನು ಮಧ್ಯ ರಸ್ತೆಯಲ್ಲೇ ನಿಲ್ಲಿಸಲಾಗುತ್ತಿದೆ.
ಹೊಳೆಹೊನ್ನೂರು ಮಾರ್ಗದ ರೈಲ್ವೆ ಗೇಟ್ ಸಮೀಪ ವಾಹನಗಳನ್ನು ಮಧ್ಯ ರಸ್ತೆಯಲ್ಲಿ ನಿಲ್ಲಿಸುವುದರಿಂದ ಅಪಘಾತದ ಸಾಧ್ಯತೆ ಹೆಚ್ಚಾಗಿದೆ.
ದುರ್ಗಿಗುಡಿಯಲ್ಲಿ ಏಕಮುಖ ಸಂಚಾರ ವ್ಯವಸ್ಥೆ ಜಾರಿಯಲ್ಲಿದ್ದರೂ ಬಹುತೇಕ ವಾಹನ ಸವಾರರು ನಿಯಮ ಪಾಲಿಸುತ್ತಿಲ್ಲ.
ಸೆಕ್ರೆಡ್ ಹಾರ್ಟ್ ಚರ್ಚ್‌ನಿಂದ ಡಿ.ವಿ.ಎಸ್. ಸರ್ಕಲ್ ವರೆಗೆ ಏಕಮುಖ ಸಂಚಾರವಿದ್ದರೂ ಪ್ರತಿದಿನ ಸಾವಿರಾರು ವಾಹನಗಳು ವಿರುದ್ಧ ದಿಕ್ಕಿನಲ್ಲಿ ಸಂಚರಿಸುತ್ತಿವೆ.
ಕಾಂಗ್ರೆಸ್ ಭವನ ರಸ್ತೆಯಲ್ಲಿಯೂ ಏಕಮುಖ ಸಂಚಾರ ನಿಯಮವನ್ನು ವ್ಯಾಪಕವಾಗಿ ಉಲ್ಲಂಘಿಸಲಾಗುತ್ತಿದೆ.
ದುರ್ಗಿಗುಡಿ ಪ್ರದೇಶದಲ್ಲಿ ಅನೇಕ ಆಸ್ಪತ್ರೆಗಳು ಕಾರ್ಯನಿರ್ವಹಿಸುತ್ತಿದ್ದು, ವಾಹನ ನಿಲುಗಡೆ ವ್ಯವಸ್ಥೆಯನ್ನು ವಿವಿಧ ದಿನಗಳಲ್ಲಿ ವಿವಿಧ ಸ್ಥಳಗಳಲ್ಲಿ ಅನುಮತಿಸಲಾಗಿದೆ. ಆದರೆ ಈ ವ್ಯವಸ್ಥೆ ಅಷ್ಟಾಗಿ ವೈಜ್ಞಾನಿಕವಾಗಿ ಕಾಣುತ್ತಿಲ್ಲ. ಸಾಧ್ಯವಾದಲ್ಲಿ ರಸ್ತೆ ಅಗಲ ಹಾಗೂ ಸಂಚಾರ ಸಾಂದ್ರತೆಯನ್ನು ಪರಿಗಣಿಸಿ ಎರಡೂ ಬದಿಗಳಲ್ಲಿ ಸೂಕ್ತ ವಾಹನ ನಿಲುಗಡೆ ವ್ಯವಸ್ಥೆ ಕಲ್ಪಿಸಿದರೆ ಸಾರ್ವಜನಿಕರಿಗೆ ಹೆಚ್ಚಿನ ಅನುಕೂಲವಾಗುತ್ತದೆ.
ಮೇಲಿನ ವಿಷಯಗಳನ್ನು ತಮ್ಮ ಗಮನಕ್ಕೆ ಸಲ್ಲಿಸುತ್ತಾ, ಸಾರ್ವಜನಿಕರ ಹಿತದೃಷ್ಟಿಯಿಂದ ಸೂಕ್ತ ಕ್ರಮ ಕೈಗೊಳ್ಳುವಂತೆ ವಿನಮ್ರವಾಗಿ ಮನವಿ ಮಾಡುತ್ತೇನೆ.
ಮತ್ತೊಮ್ಮೆ ಶಾಲಾ ಮಕ್ಕಳ ಸುರಕ್ಷತೆಗಾಗಿ ಕೈಗೊಂಡಿರುವ ಕ್ರಮಗಳಿಗೆ ಹಾಗೂ ಸಾರ್ವಜನಿಕ ಹಿತಕ್ಕಾಗಿ ಪೊಲೀಸ್ ಇಲಾಖೆ ಮಾಡುತ್ತಿರುವ ಸೇವೆಗಳಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.