*ಬಿ.ಝಡ್. ಜಮೀರ್ ಅಹಮದ್ ಖಾನ್ ರನ್ನು ಉಪಮುಖ್ಯಮಂತ್ರಿಯನ್ನಾಗಿ ನೇಮಿಸಲು ಒತ್ತಾಯಿಸಿ ಮುಸ್ಲಿಂ ಸಮುದಾಯದ ಭಾರಿ ಪ್ರತಿಭಟನೆ*
*ಬಿ.ಝಡ್. ಜಮೀರ್ ಅಹಮದ್ ಖಾನ್ ರನ್ನು ಉಪಮುಖ್ಯಮಂತ್ರಿಯನ್ನಾಗಿ ನೇಮಿಸಲು ಒತ್ತಾಯಿಸಿ ಮುಸ್ಲಿಂ ಸಮುದಾಯದ ಭಾರಿ ಪ್ರತಿಭಟನೆ*
ರಾಜ್ಯದ ಹಿರಿಯ ಸಚಿವರು ಹಾಗೂ ಜನಪ್ರಿಯ ರಾಜಕಾರಣಿಯಾದ ಬಿ.ಝಡ್. ಜಮೀರ್ ಅಹಮದ್ ಖಾನ್ ಅವರನ್ನು ಕರ್ನಾಟಕ ಸರ್ಕಾರದ ಉಪಮುಖ್ಯಮಂತ್ರಿಯಾಗಿ ನೇಮಿಸಬೇಕು ಎಂದು ಆಗ್ರಹಿಸಿ ಶಿವಮೊಗ್ಗ ಜಿಲ್ಲೆಯ ಮುಸ್ಲಿಂ ಸಮುದಾಯದ ವತಿಯಿಂದ ಭಾರಿ ಪ್ರತಿಭಟನೆ ನಡೆಸಲಾಯಿತು.
ಬಿ.ಝಡ್. ಜಮೀರ್ ಅಹಮದ್ ಖಾನ್ ರವರು ಕ್ರಿಯಾಶೀಲ, ಜನಪರ ಹಾಗೂ ಜಾತ್ಯಾತೀತ ಮೌಲ್ಯಗಳನ್ನು ಅಳವಡಿಸಿಕೊಂಡಿರುವ ಪ್ರಭಾವಿ ನಾಯಕರಾಗಿದ್ದಾರೆ. ಅವರು ಎಲ್ಲಾ ಸಮುದಾಯಗಳ ಜನರೊಂದಿಗೆ ಆತ್ಮೀಯ ಬಾಂಧವ್ಯ ಹೊಂದಿದ್ದು, ಸಾಮಾಜಿಕ ನ್ಯಾಯ ಮತ್ತು ಸಮಾನತೆಯ ತತ್ವಗಳನ್ನು ನಂಬಿ ಕಾರ್ಯನಿರ್ವಹಿಸುತ್ತಿರುವ ಅಹಿಂದ ವರ್ಗಗಳ ಪ್ರಮುಖ ಪ್ರತಿನಿಧಿಗಳಾಗಿದ್ದಾರೆ. ಅಲ್ಪಸಂಖ್ಯಾತ ಸಮುದಾಯವು ಇವರನ್ನು ಪ್ರಶ್ನಾತೀತ ನಾಯಕರೆಂದು ಗೌರವಿಸುತ್ತದೆ.
ಜಮೀರ್ ಅಹಮದ್ ಖಾನ್ ಅವರು ಕಾಂಗ್ರೆಸ್ ಪಕ್ಷದ ಸಂಘಟನೆ ಬಲವರ್ಧನೆಗಾಗಿ ಬಹಳಷ್ಟು ಶ್ರಮಿಸಿದ್ದು, ಕರ್ನಾಟಕ ಮಾತ್ರವಲ್ಲದೆ ದೇಶದ ವಿವಿಧ ರಾಜ್ಯಗಳಲ್ಲಿಯೂ ಪಕ್ಷದ ಪರವಾಗಿ ಸಕ್ರಿಯವಾಗಿ ಕಾರ್ಯನಿರ್ವಹಿಸಿದ್ದಾರೆ.
ಶಾಸಕರಾಗಿ ಹಾಗೂ ಸಚಿವರಾಗಿ ಜನಮನ್ನಣೆ ಪಡೆದಿದ್ದು, ಅಭಿವೃದ್ಧಿ ಕಾರ್ಯಗಳು ಮತ್ತು ಜನಪರ ಯೋಜನೆಗಳ ಮೂಲಕ ಜನಸಾಮಾನ್ಯರ ವಿಶ್ವಾಸವನ್ನು ಗಳಿಸಿದ್ದಾರೆ.
ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡಿರುವ ಅವರು ಬಡವರು, ನಿರ್ಗತಿಕರು, ಅಲ್ಪಸಂಖ್ಯಾತರು ಹಾಗೂ ಶೋಷಿತ ವರ್ಗಗಳ ಪರವಾಗಿ ನಿರಂತರವಾಗಿ ಧ್ವನಿಯೆತ್ತಿದ್ದಾರೆ. ವೈಯಕ್ತಿಕ ಮಟ್ಟದಲ್ಲಿಯೂ ಸಾವಿರಾರು ಜನರಿಗೆ ನೆರವು ನೀಡಿರುವ ಅವರು ದಾನಶೀಲತೆ ಮತ್ತು ಸಾಮಾಜಿಕ ಬದ್ಧತೆಯ ಮೂಲಕ ಜನರ ಮನಸ್ಸಿನಲ್ಲಿ ವಿಶೇಷ ಸ್ಥಾನವನ್ನು ಪಡೆದಿದ್ದಾರೆ.
ಮುಸ್ಲಿಂ ಸಮುದಾಯದಲ್ಲಿ ಅನೇಕ ನಾಯಕರು ಇದ್ದರೂ ಸಹ, ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಅಪಾರ ಅಭಿಮಾನಿ ಬಳಗವನ್ನು ಹೊಂದಿರುವ ಜಮೀರ್ ಅಹಮದ್ ಖಾನ್ ರವರು ಇಡೀ ಮುಸ್ಲಿಂ ಸಮುದಾಯವು ಒಪ್ಪಿಕೊಳ್ಳುವ ನಾಯಕರಲ್ಲಿಮೊದಲನೆಯವರಾಗಿದ್ದಾರೆ. ಅವರ ರಾಜಕೀಯ ಅನುಭವ, ಆಡಳಿತಾತ್ಮಕ ಸಾಮರ್ಥ್ಯ ಮತ್ತು ಸವುದಾಯದ ಬಾವನೆಗಳನ್ನು ಪರಿಗಣಿಸಿ ಇವರಿಗೆ ಉಪಮುಖ್ಯಮಂತ್ರಿಯ ಹುದ್ದೆ ನೀಡುವುದು ನ್ಯಾಯಸಮ್ಮತವಾಗಿರುತ್ತದೆ ಎಂಬುದು ಸಮುದಾಯದ ಅಭಿಪ್ರಾಯವಾಗಿದೆ.
ಕಾಂಗ್ರೆಸ್ ಪಕ್ಷಕ್ಕೆ ದಶಕಗಳಿಂದ ರಾಜಕೀಯವಾಗಿ ಬೆಂಬಲ ನೀಡುತ್ತಾ ಬಂದಿರುವ ಮುಸ್ಲಿಂ ಸಮುದಾಯವು, ರಾಜ್ಯ ಸರ್ಕಾರ ರಚನೆಯಾದ ಸಂದರ್ಭದಲ್ಲಿಯೇ ಜಮೀರ್ ಅಹಮದ್ ಖಾನ್ ಅವರಿಗೆ ಉಪಮುಖ್ಯಮಂತ್ರಿಯ ಸ್ಥಾನ ದೊರೆಯಲಿದೆ ಎಂಬ ನಿರೀಕ್ಷೆಯನ್ನು ಹೊಂದಿತ್ತು. ಆದರೆ ಆ ನಿರೀಕ್ಷೆ ಈಡೇರದಿರುವುದು ಸಮುದಾಯದಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ.
ಆದ್ದರಿಂದ, ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಹಾಗೂ ರಾಜ್ಯ ಸರ್ಕಾರವು ತಕ್ಷಣವೇ ಬಿ.ಝಡ್. ಜಮೀರ್ ಅಹಮದ್ ಖಾನ್ ಅವರನ್ನು ಉಪಮುಖ್ಯಮಂತ್ರಿಯನ್ನಾಗಿ ನೇಮಿಸಿ, ಅವರಿಗೆ ಪ್ರಮುಖ ಖಾತೆಯನ್ನು ನೀಡುವ ಮೂಲಕ ಗೌರವಿಸಬೇಕು ಎಂದು ಸಮುದಾಯದವರು ಒತ್ತಾಯಿಸಿದರು.
ಜೊತೆಗೆ ಮುಸ್ಲಿಂ ಸಮುದಾಯದ ಇನ್ನೂ ಹೆಚ್ಚಿನ ಅರ್ಹ ಶಾಸಕರಿಗೆ ಸಚಿವ ಸಂಪುಟದಲ್ಲಿ ಸೂಕ್ತ ಪ್ರಾತಿನಿಧ್ಯ ನೀಡುವ ಮೂಲಕ ಸಮುದಾಯದ ಭಾವನೆಗಳನ್ನು ಗೌರವಿಸಬೇಕೆಂದು ಆಗ್ರಹಿಸಿದರು.
ಮುಸ್ಲಿಂ ಸಮುದಾಯವು ಕಾಂಗ್ರೆಸ್ ಪಕ್ಷಕ್ಕೆ ನೀಡಿರುವ ನಿರಂತರ ಬೆಂಬಲವನ್ನು ಪಕ್ಷವು ಗೌರವಿಸಬೇಕು. ಈ ಹಿನ್ನೆಲೆಯಲ್ಲಿ ಶಿವಮೊಗ್ಗ ಜಿಲ್ಲೆಯ ಸಮಸ್ತ ಮುಸ್ಲಿಂ ಸಮುದಾಯವು ಒಕ್ಕೊರಲಿನಿಂದ ಈ ಪ್ರತಿಭಟನೆಯ ಮೂಲಕ ತನ್ನ ಬೇಡಿಕೆಯನ್ನು ಸರ್ಕಾರದ ಮುಂದಿಡುತ್ತಿದೆ.
ಜಮೀರ್ ಅಹಮದ್ ಖಾನ್ ಅವರಿಗೆ ಉಪಮುಖ್ಯಮಂತ್ರಿಯ ಸ್ಥಾನ ನೀಡುವ ಕುರಿತು ಶೀಘ್ರ ಕ್ರಮ ಕೈಗೊಳ್ಳದಿದ್ದಲ್ಲಿ, ರಾಜ್ಯಾದ್ಯಂತ ಹೋರಾಟವನ್ನು ತೀವ್ರಗೊಳಿಸಿ ಮುಂದಿನ ದಿನಗಳಲ್ಲಿ ವ್ಯಾಪಕ ಪ್ರತಿಭಟನೆಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಮುಸ್ಲಿಂ ಹಕ್ಕುಗಳ ವೇದಿಕೆ ಎಚ್ಚರಿಕೆ ನೀಡಿತು.
ಈ ಪ್ರತಿಭಟನೆಯ ನೇತೃತ್ವವನ್ನು ಸಂಘಟನೆಯ ಅಧ್ಯಕ್ಷರಾದ ಮುನವರ್ ಪಾಷಾ(ಮುನ್ನು), ಉಪಾಧ್ಯಕ್ಷರಾದ ಮೊಹಮ್ಮದ್ ಸಾದಾತ್ ಉಲ್ಲಾ,ಕಾರ್ಯದರ್ಶಿ ಸೈಯದ್ ಮುಜಿಬುಲ್ಲಾ, ಸಮಾಜದ ಮುಖಂಡರುಗಳಾದ ಇಮ್ರಾನ್,ಸೈಪುಲ್ಲಾ,ಶಫಿವುಲ್ಲಾಸಾಬ್,ಯಹ್ಯಾ,
ಹಾಗೂ ಸಮಾಜದ ನೂರಾರು ಮುಖಂಡರುಗಳು ಈ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.


