*27 ಪಡಿತರ ಗೋದಾಮುಗಳ ಮೇಲೆ ಲೋಕಾಯುಕ್ತ ದಾಳಿ!* *ಶಿವಮೊಗ್ಗದ ಪಡಿತರ ಗೋದಾಮುಗಳ ಮೇಲೆ ದಾಳಿ ಯಾವಾಗ ಲೋಕಾಯುಕ್ತ ಪೊಲೀಸರೇ?…*
*27 ಪಡಿತರ ಗೋದಾಮುಗಳ ಮೇಲೆ ಲೋಕಾಯುಕ್ತ ದಾಳಿ!*
*ಶಿವಮೊಗ್ಗದ ಪಡಿತರ ಗೋದಾಮುಗಳ ಮೇಲೆ ದಾಳಿ ಯಾವಾಗ ಲೋಕಾಯುಕ್ತ ಪೊಲೀಸರೇ?…*
ವಿವಿಧ ಗೋದಾಮುಗಳಿಂದ ರಾಜ್ಯಾದ್ಯಂತ ನ್ಯಾಯಬೆಲೆ ಅಂಗಡಿಗಳಿಗೆ ಆಹಾರ ಧಾನ್ಯಗಳನ್ನು ಪೂರೈಸುವ ಪ್ರಕ್ರಿಯೆಯಲ್ಲಿ ಅಕ್ರಮಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಶುಕ್ರವಾರ ಬೆಂಗಳೂರು ನಗರ ಜಿಲ್ಲೆಯ 22 ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 5 ಕಡೆ ಸೇರಿ ಒಟ್ಟು 27 ಕಡೆ ಲೋಕಾಯುಕ್ತ ಪೊಲೀಸರು ಹಾಗೂ ಅಧಿಕಾರಿಗಳು ಏಕಕಾಲಕ್ಕೆ ದಾಳಿ ನಡೆಸಿದ್ದಾರೆ.
ಈ ಅಕ್ರಮಗಳ ಸಂಬಂಧ ಹಲವು ದೂರುಗಳು ಬಂದ ಹಿನ್ನೆಲೆಯಲ್ಲಿ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ್ ಅವರು ಈ ಸಂಬಂಧ ಗೌಪ್ಯ ತನಿಖೆ ನಡೆಸಿ ವರದಿ ಸಲ್ಲಿಸಲು ಲೋಕಾಯುಕ್ತ ಎಸ್ಪಿಗೆ ಸೂಚಿಸಿದ್ದರು. ಅದರಂತೆ ಸಲ್ಲಿಕೆಯಾದ ಗೌಪ್ಯ ವರದಿ ಆಧರಿಸಿ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ಸರ್ಕಾರಿ ಹಾಗೂ ಖಾಸಗಿ ಗೋದಾಮುಗಳ ಮೇಲೆ ಈ ದಾಳಿ ನಡೆಸಲಾಗಿದೆ. ಪರಿಶೀಲನೆ ವೇಳೆ ಹಲವು ಅಕ್ರಮಗಳು ಬೆಳಕಿಗೆ ಬಂದಿವೆ.
ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ್ ಅವರು ಯಶವಂತಪುರ ಯಾರ್ಡ್‌ನ ಮೂರು ಗೋದಾಮುಗಳಿಗೆ ಖದ್ದು ಭೇಟಿ ನೀಡಿ ಪರಿಶೀಲಿಸಿದರು. ಈ ವೇಳೆ ಯಶವಂತಪುರ ಯಾರ್ಡ್‌ನ ವಿಜಯನಗರ-1ರ ಕೆಎಫ್‌ಸಿಎಸ್‌ಸಿ ಗೋದಾಮಿನ ಗೇಟ್ ಬಳಿ ಒಂದು ಖಾಸಗಿ ಕ್ಯಾಂಟರ್ ವಾಹನಕ್ಕೆ ಯಾವುದೇ ಬಿಲ್ ತಯಾರಿಸದೆ 120 ಕ್ವಿಂಟಾಲ್ ಅಕ್ಕಿ (240 ಚೀಲ) ತುಂಬಿರುವುದು ಕಂಡು ಬಂದಿದೆ. ಸ್ಥಳದಲ್ಲಿ ಹಾಜರಿದ್ದ ಗೋದಾಮಿನ ಮ್ಯಾನೇಜರ್ ನರಸಿಂಹಗೌಡ ಅವರನ್ನು ಪ್ರಶ್ನಿಸಿದಾಗ ಈ ಅಕ್ಕಿ ಚೀಲಗಳನ್ನು ಮೈಸೂರು ರಸ್ತೆಯ ಅಕ್ರಮ ಪಾಷಾ ಎಂಬುವವರ ನ್ಯಾಯಬೆಲೆ ಅಂಗಡಿಗೆ ಕಳುಹಿಸಲಾಗುತ್ತಿದೆ. ಬಿಲ್ ತಯಾರಿಸುವುದಾಗಿ ತಡೆವಾಗಿದೆ ಎಂದು ಉತ್ತರಿಸಿದ್ದಾರೆ.
120 ಕ್ವಿಂಟಾಲ್ ಅಕ್ಕಿ ಜಪ್ತಿ
ಈ ವೇಳೆ ಅಲ್ಲೇ ಇದ್ದ ಅಕ್ರಮ್ ಪಾಷಾನನ್ನು ಪ್ರಶ್ನಿಸಿದಾಗ ಆರಂಭದಲ್ಲಿ ನನ್ನ ನ್ಯಾಯಬೆಲೆ ಅಂಗಡಿಗೆ ತೆಗೆದುಕೊಂಡು ಹೋಗುತ್ತಿರುವುದಾಗಿ ಹೇಳಿದ್ದಾನೆ. ಬಿಲ್ ಹಾಗೂ ಇತರೆ ವಿವರ ಕೇಳಿದಾಗ ಈ ಅಕ್ಕಿಗೂ ನನಗೂ ಸಂಬಂಧವಿಲ್ಲ ಎಂದು ಹೇಳಿದ್ದಾನೆ. ಈ ಸಂಬಂಧ ಗೋದಾಮಿನ ಮ್ಯಾನೇಜರ್ ಮತ್ತು ಇತರೆ ಸಿಬ್ಬಂದಿಗಳ ವಿರುದ್ಧ ದೂರು ನೀಡಿ ಆ ಕ್ಯಾಂಟರ್ ವಾಹನದಲ್ಲಿ ಅಕ್ರಮವಾಗಿ ತುಂಬಿದ್ದ ಅಕ್ಕಿಯನ್ನು ವಶಪಡಿಸಿಕೊಳ್ಳಲು ಲೋಕಾಯುಕ್ತ ನ್ಯಾಯಮೂರ್ತಿ ಸೂಚಿಸಿದ್ದಾರೆ.
*100 ಕ್ವಿಂಟಾಲ್ ಅಕ್ಕಿಗೆ ಲೆಕ್ಕವೇ ಇಲ್ಲ:*
ಯಶವಂತಪುರ ಯಾರ್ಡ್‌ನ ಎನ್‌ಜಿಜಿ-1 ಗೋದಾಮಿಗೆ ಭೇಟಿ ನೀಡಿದಾಗ ಆ ಗೋದಾಮಿಗೆ ಬಂದಿರು ದಾಸ್ತಾನು ಮತ್ತು ಗೋದಾಮಿನಿಂದ ನ್ಯಾಯಬೆಲೆ ಅಂಗಡಿಗಳಿಗೆ ಕಳುಹಿಸಿರುವ ಆಹಾರ ಧಾನ್ಯಗಳ ಕಡತ ಪರಿಶೀಲಿಸಿದಾಗ, ಬಿಲ್ ಇಲ್ಲದೆ 100 ಕ್ವಿಂಟಲ್ ಕಳುಹಿಸಿರುವುದು ಬೆಳಕಿಗೆ ಬಂದಿದೆ. ಈ ಸಂಬಂಧ ಗೋದಾಮಿನ ಮ್ಯಾನೇಜರ್ ನಾರಾಯಣ್ ಮತ್ತು ಕಂಪ್ಯೂಟರ್ ಆಪರೇಟರ್ ಶಂಕರ್ ಅವರನ್ನು ಪ್ರಶ್ನಿಸಿದಾಗ, ಕನ್ನಡ ಗೆಳೆಯ ಬಳಗ ನ್ಯಾಯಬೆಲೆ ಅಂಗಡಿಗೆ ಈ ನೂರು ಕ್ವಿಂಟಾಲ್ ಕಳುಹಿಸಲಾಗಿದೆ ಎಂದು ಹೇಳಿದ್ದಾರೆ.
*ಇಬ್ಬರು ಪೊಲೀಸರ ವಶಕ್ಕೆ:*
ಈ ನ್ಯಾಯಬೆಲೆ ಅಂಗಡಿ ಮಾಲೀಕರಾದ ರಾಧಾ ಅವರಿಗೆ ಲೋಕಾಯುಕ್ತ ಪೊಲೀಸರು ಕರೆ ಮಾಡಿ ವಿಚಾರಿಸಿದಾಗ, ನಮಗೆ ಯಾವುದೇ ಅಕ್ಕಿ ಚೀಲ ಬಂದಿಲ್ಲ. ನಾವು ಇಂಡೆಂಟ್ ಹಾಕಿಲ್ಲ ಎಂದಿದ್ದಾರೆ. ಈ ವೇಳೆ ಮ್ಯಾನೇಜರ್ ನಾರಾಯಣ ಮತ್ತು ಕಂಪ್ಯೂಟರ್ ಆಪರೇಟರ್ ಶಂಕರ್ ಸಮರ್ಪಕ ಉತ್ತರ ನೀಡಲು ತಡಬಡಾಯಿಸಿದ್ದಾರೆ. ಬಳಿಕ ಸ್ಥಳಕ್ಕೆ ಬಂದ ಯಶವಂತಪುರ ಪೊಲೀಸರಿಗೆ ಈ ಇಬ್ಬರನ್ನು ಒಪ್ಪಿಸಿ, ಈ 100 ಕ್ವಿಂಟಾಲ್ ಅಕ್ಕಿ ಅಕ್ರಮ ಸಾಗಣೆಯ ಜಾಲ ಪತ್ತೆ ಹಚ್ಚಿ ಕ್ರಮ ಕೈಗೊಳ್ಳುವಂತೆ ಲೋಕಾಯುಕ್ತ ಬಿ.ಎಸ್.ಪಾಟೀಲ್ ಸೂಚಿಸಿದ್ದಾರೆ.


