ಕನ್ನಡದ ಅತ್ಯುತ್ತಮ ಕಥೆಗಾರ್ತಿ ಜಾಹ್ನವಿ; ಡಾ.ರಾಜೇಂದ್ರ ಚೆನ್ನಿ

ಮಿಲಿಂದ ಸಂಸ್ಥೆ ಆಯೋಜಿಸಿದ್ದ ಕನ್ನಡದ ಖ್ಯಾತ ಕತೆಗಾರ್ತಿ ಬಿ.ಟಿ. ಜಾಹ್ನವಿ ಅವರ ಪುಸ್ತಕ ಬಿಡುಗಡೆ ಮತ್ತು ಅಭಿನಂದನಾ ಸಮಾರಂಭ…ಮಿಲಿಂದ ಸಂಸ್ಥೆ ಆಯೋಜಿಸಿದ್ದ ಕನ್ನಡದ ಖ್ಯಾತ ಕತೆಗಾರ್ತಿ ಬಿ.ಟಿ. ಜಾಹ್ನವಿ ಅವರ ಪುಸ್ತಕ ಬಿಡುಗಡೆ ಮತ್ತು ಅಭಿನಂದನಾ ಸಮಾರಂಭ...

*ಕನ್ನಡದ ಅತ್ಯುತ್ತಮ ಕಥೆಗಾರ್ತಿ ಜಾಹ್ನವಿ; ಡಾ.ರಾಜೇಂದ್ರ ಚೆನ್ನಿ*

ಶಿವಮೊಗ್ಗ: ಬಿ.ಟಿ. ಜಾಹ್ನವಿ ಅವರ ಕತೆಗಳಲ್ಲಿ ಡಿಸ್ಟರ್ಬ್ ಮಾಡುವ ಗುಣವಿದ್ದು, ಆ ಗೊಂದಲಗಳಿಗೆ ಪರಿಹಾರವನ್ನೂ ಸೂಚಿಸುತ್ತವೆ ಎಂದು ಚಿಂತಕ, ವಿಮರ್ಶಕ ಡಾ. ರಾಜೇಂದ್ರ ಚೆನ್ನಿ ಹೇಳಿದರು.

ಅವರು ಗುರುವಾರ ಸಂಜೆ ಪ್ರೆಸ್ ಟ್ರಸ್ಟ್ ಭವನದಲ್ಲಿ ಮಿಲಿಂದ ಸಂಸ್ಥೆ(ಶೈಕ್ಷಣಿಕ, ಸಾಮಾಜಿಕ, ಸಾಂಸ್ಕೃತಿಕ ಮತ್ತು ಸಾಹಿತ್ಯ ತರಬೇತಿ ಮತ್ತು ಅಭಿವೃದ್ಧಿ ಸಂಸ್ಥೆ) ವತಿಯಿಂದ ಆಯೋಜಿಸಿದ್ದ ಕನ್ನಡದ ಖ್ಯಾತ ಕತೆಗಾರ್ತಿ ಬಿ.ಟಿ. ಜಾಹ್ನವಿ ಅವರ ಪುಸ್ತಕ ಬಿಡುಗಡೆ ಮತ್ತು ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು.

ಜಾಹ್ನವಿ ಅವರು ಕನ್ನಡದ ಅತ್ಯುತ್ತಮ ಲೇಖಕಿಯರಲ್ಲಿ ಒಬ್ಬರು. ಅವರು ಬರೆದ ಕತೆಗಳನ್ನು ಅವರು ಮಾತ್ರ ಬರೆಯಲು ಸಾಧ್ಯ. ಅವರ ಕತೆಗಳಲ್ಲಿ ನಿಷ್ಠುರತೆ, ಜೀವ ಪರತೆ, ಶ್ರದ್ಧೆ ಕಾಣುತ್ತದೆ ಎಂದರು.

ಬಹಮುಖ್ಯವಾಗಿ ಅವರ ಕತೆಗಳು ಓದುಗರನ್ನು ಗೊಂದಲಕ್ಕೆ ಈಡು ಮಾಡುತ್ತವೆ. ತಲ್ಲಣಗಳನ್ನು ಸೃಷ್ಠಿಸಿ ಪ್ರಶ್ನೆ ಮಾಡುವಂತೆ ಮತ್ತೆ ಉತ್ತರ ಹುಡುಕುವ ದಾರಿ ತೋರಿಸುತ್ತವೆ. ಒಬ್ಬ ಶ್ರೇಷ್ಟ ಲೇಖಕನ ಗುಣವೇ ಡಿಸ್ಟರ್ಬ್ ಮಾಡುವಂತಹುದ್ದು ಎಂದರು.

ನಂಬಿಕೆಗಳನ್ನು ಸ್ಪೋಟಗೊಳಿಸುವ, ಲೋಕ ವಿರೋಧಿತನ ತೋರುವ, ಸ್ತ್ರೀಯರ ತಲ್ಲಣಗಳನ್ನು ಕಟ್ಟಿಕೊಡುವ ಒಂದು ಸ್ತ್ರೀ ಮೀಮಾಂಸೆಯನ್ನೇ ಸೃಷ್ಟಿಸುವ ಅವರ ಬರಹಗಳು ನಿಜಕ್ಕೂ ಸೋಜಿಗವನ್ನು ಉಂಟು ಮಾಡಿವೆ. ಒಂದು ಸುರಕ್ಷಿತ ಸ್ಥಳದಿಂದ ಆಚೆ ಬಂದು ಭಾಷೆಗೊಂದು ಆಯಾಮ ಕೊಟ್ಟು ನೋವುಗಳನ್ನು ಅನುಭವಿಸುತ್ತಲೇ ಅದನ್ನು ಎದುರಿಸುವ ಪಾಠ ಕಲಿಸುವ ಅವರ ಕತೆಗಳು ಸದಾ ವರ್ತಮಾನದಲ್ಲಿರುತ್ತವೆ. ಧೈರ್ಯವನ್ನು ಕಲಿಸುತ್ತಾ, ನಂಬಿಕೆಗಳಿಗೆ ತಿಲಾಂಜಲಿ ಇಟ್ಟು ಜೀವಪರತೆಯನ್ನು ತುಂಬುತ್ತವೆ ಎಂದರು.

ಪ್ರಾಧ್ಯಾಪಕ ಮತ್ತು ಸಾಹಿತಿ ಡಾ. ದಾದಾಪೀರ್ ನವಿಲೇಹಾಳ್ ಅವರು, ಬಿ.ಟಿ. ಜಾಹ್ನವಿ ಅವರ ‘ಒಬ್ರು ಸುದ್ಯಾಕೆ ಒಬ್ರು ಗದ್ಲ್ಯಾಕೆ’ ಕೃತಿ ಬಿಡುಗಡೆ ಮಾಡಿ ಮಾತನಾಡಿ, ಜಾಹ್ನವಿ ಅವರು ಲಂಕೇಶರ ಬಯಲಲ್ಲಿ ಬೆಳಗಿದವರು. ಅವರ ಕುಲುಮೆಯಿಂದ ಎದ್ದು ಬಂದಂತೆ ಕತೆಗಳನ್ನು ಬರೆದ ಅವರು ಸ್ತ್ರೀ ಸ್ಪಂದನೆಗೆ ಒತ್ತು ಕೊಟ್ಟು ವಿಭಿನ್ನವಾಗಿ ಕನ್ನಡ ಸಾರಸ್ವತ ಲೋಕದಲ್ಲಿ ಗುರುತಿಸಿಕೊಂಡವರು. ಎರಡು ದಶಕಗಳ ಕಾಲ ಬರೆದಿರುವ ಅವರು ಒಬ್ಬ ಅಪರೂಪದ ಬರಹಗಾರ್ತಿ. ಅವರ ಬರವಣಿಗೆಯಲ್ಲಿ ಅವಸರವಿದೆ. ಸಂಪ್ರದಾಯಕ್ಕೆ ಹೊಡೆತವಿದೆ. ರೂಢಿಗತ ಮೌಲ್ಯಗಳನ್ನು ಧಿಕ್ಕರಿಸಿ ಮಾನವೀಯತೆಗಳು ಅವರ ಕೃತಿಯಲ್ಲಿ ಅಡಗಿವೆ ಎಂದರು.

ಅಧಿಪತ್ಯಕ್ಕಾಗಿ ಗಂಡು ಹೆಣ್ಣನ್ನು ಬಳಸಿಕೊಳ್ಳುವ ಮತ್ತು ಮಹಿಳೆಯ ಸಂಕೀರ್ಣಗಳನ್ನು ಹೊರ ಜಗತ್ತಿಗೆ ತೋರಿಸುವ ಅಸಲಿತನ ಬಿಚ್ಚಿಡುವ ಗಂಡಿನ ಅಹಂಕಾರ ಮೆಟ್ಟಿ ಶೀಲ ಎಂಬ ಚೌಕಟ್ಟನ್ನೇ ಒಡೆಯುವ ಅವರ ಕೃತಿಗಳು ಮಹಿಳಾ ಲೋಕಕ್ಕೆ ಒಂದು ಸವಾಲಾಗಿವೆ,ರೂಢಿಗತ ಸಂಪ್ರಾದಾಯಗಳನ್ನು ವಿರೋಧಿಸಿ ಚರ್ಚೆಗೆ ಒಡ್ಡುತ್ತವೆ ಎಂದರು.

ಸುಳ್ಳನ್ನೂ ಸಂಭ್ರಮಿಸುವ ಕಾಲವಿದು. ಸಂವೇದನೆಗಳು ಸತ್ತು ಹೋಗುತ್ತಿವೆ. ರೈತರ ಹೋರಾಟಗಳಿಗೂ ಮೊಳೆ ಹೊಡೆಯುವ ಇಂದಿನ ಪರಿಸ್ಥಿತಿಯಲ್ಲಿ ಹೆಣ್ಣನ್ನು ಯಾವ ದೃಷ್ಟಿಯಿಂದ ನೋಡುತ್ತೇವೆ ಎಂಬುದನ್ನು ನಾವು ಗಮನಿಸಬೇಕಾಗುತ್ತದೆ. ಅತ್ಯಾಚಾರದಂತಹ ಘಟನೆಗಳು ಹೆಚ್ಚುತ್ತಾ ಹೋಗುತ್ತಿವೆ. ಯಾವುದೇ ವಿಷಯ ಮಾತನಾಡುವಾಗ ನಮಗೆ ಸಿಟ್ಟು ಬರುತ್ತಿಲ್ಲ. ಅಥವಾ ಭಯಪಡುವ ಸ್ಥಿತಿಯಲ್ಲಿದ್ದೇವೆ. ಇಂತಹ ಸ್ಥಿತಿಗಳ ನಡುವೆ ಅದು 25 ವರ್ಷಗಳ ಹಿಂದೆಯೇ ಜಾಹ್ನವಿ ಅವರು ಅದನ್ನು ಎದುರಿಸಿ ನೈತಿಕ ಪ್ರಜ್ಞೆಯನ್ನು ಮೆರೆದವರು. ಜಾಹ್ನವಿ ಅವರು ದಲಿತತ್ವ ಮತ್ತು ಸ್ತ್ರೀ ತತ್ವಗಳನ್ನು ಹೆಣೆದು ಒಂದು ದಲಿತ ಮೀಮಾಂಸೆಯನ್ನೇ ಕತೆಗಳಲ್ಲಿ ಕಟ್ಟಿಕೊಟ್ಟವರು ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಪ್ರಾಧ್ಯಾಪಕ ಮತ್ತು ಮಿಲಿಂದ ಸಂಸ್ಥೆಯ ಮುಖ್ಯಸ್ಥ ಬಿ.ಎಲ್. ರಾಜು, ಜಾಹ್ನವಿ ಅವರು ಮಹಿಳೆಯರ ಸಂವೇದನೆಗಳನ್ನು, ಸಂಕಟಗಳನ್ನು, ಬೆರುಗುಗಳನ್ನು ಕನ್ನಡ ಸಾಹಿತ್ಯ ಲೋಕದ ಮುಂದೆ ತೆರೆದಿಟ್ಟವರು. ಒಂದು ಅಲಕ್ಷಿತ ಕುಟುಂಬದಿಂದ ಬಂದ ಅವರು ವಿಮರ್ಶಾ ಕ್ಷೇತ್ರದಲ್ಲಿ ಹೆಸರು ಮಾಡಿದವರು. ವಿಮರ್ಶಾ ಕ್ಷೇತ್ರ ಎಂಬುದು ಒಂದು ರಾಜಕಾರಣವಾಗಿ ಹಲವರನ್ನು ಹೊರಗೆ ದೂಡುವ ಕೆಲವರನ್ನೇ ಮಾತ್ರ ಒಳಗೆ ಕರೆಸಿಕೊಳ್ಳುವ ರಾಜಕಾರಣದ ನಡುವೆ ಇವರ ಕತೆಗಳಿಗೆ ದೊಡ್ಡ ಓದುಗ ಬಳಗವೇ ಇದೆ. ಹಾಗಾಗಿಯೇ ಇವರಿಗೆ ಅನೇಕ ಪ್ರಶಸ್ತಿಗಳು ಬಂದಿವೆ ಎಂದರು.
ಕಾರ್ಯಕ್ರಮದಲ್ಲಿ ಬಿ.ಟಿ. ಜಾಹ್ನವಿ ಅವರನ್ನು ಅಭಿನಂದಿಸಲಾಯಿತು. ಮಿಲಿಂದ ಸಂಸ್ಥೆಯ ಗೌರವಾಧ್ಯಕ್ಷ ಎ.ಕೆ. ಅಣ್ಣಪ್ಪ, ಪ್ರಮುಖರಾದ ರಾಮಚಂದ್ರಪ್ಪ ಎ.ಬಿ., ಪ್ರೊ. ರಾಚಪ್ಪ, ಡಿ.ಬಿ.ರಝಿಯಾ ಮುಂತಾದವರು ಇದ್ದರು.