*ವಿವಾದದ ಕೇಂದ್ರಬಿಂದುವಾದ ಶಿವಮೊಗ್ಗದ ಡಿ.ದೇವರಾಜ್ ಅರಸು ಅಭಿವೃದ್ಧಿ ನಿಗಮ…* *ರೈತರಿಗೆ ಬೈದು ಅವಮಾನಿಸಿದರೂ, ರಶೀದಿ ಕೊಟ್ಟು ಗಂಗಾ ಕಲ್ಯಾಣ ನೆಪದಲ್ಲಿ ಹಣ ವಸೂಲು ಮಾಡಿದರೂ ಕ್ರಮವಿಲ್ಲ!* *ಎಂ.ಡಿ ನಟರಾಜ್- ಜಿಲ್ಲಾ ವ್ಯವಸ್ಥಾಪಕ ಕುಸಾಲ್ ಎಫ್ ಡಿ ಎ ಪ್ರದೀಪ್ ಕುಮಾರ್ ವಿರುದ್ಧ ಕ್ರಮ ಕೈಗೊಳ್ಳುವರೇ?!*
*ವಿವಾದದ ಕೇಂದ್ರಬಿಂದುವಾದ ಶಿವಮೊಗ್ಗದ ಡಿ.ದೇವರಾಜ್ ಅರಸು ಅಭಿವೃದ್ಧಿ ನಿಗಮ…*
*ರೈತರಿಗೆ ಬೈದು ಅವಮಾನಿಸಿದರೂ, ರಶೀದಿ ಕೊಟ್ಟು ಗಂಗಾ ಕಲ್ಯಾಣ ನೆಪದಲ್ಲಿ ಹಣ ವಸೂಲು ಮಾಡಿದರೂ ಕ್ರಮವಿಲ್ಲ!*
*ಎಂ.ಡಿ ನಟರಾಜ್- ಜಿಲ್ಲಾ ವ್ಯವಸ್ಥಾಪಕ ಕುಸಾಲ್ ಎಫ್ ಡಿ ಎ ಪ್ರದೀಪ್ ಕುಮಾರ್ ವಿರುದ್ಧ ಕ್ರಮ ಕೈಗೊಳ್ಳುವರೇ?!*

ಶಿವಮೊಗ್ಗದ ಡಿ.ದೇವರಾಜ್ ಅರಸು ಅಭಿವೃದ್ಧಿ ನಿಗಮ ಒಂದಿಲ್ಲೊಂದು ಕಾರಣದಿಂದ ಚರ್ಚೆಗೆ ಗ್ರಾಸವಾಗುತ್ತಿದೆ. ಸಾಗರ ಮೂಲದ ರೈತರೊಬ್ಬರ ಜೊತೆಗಿನ ಅನುಚಿತ ವರ್ತನೆಯ ಸುದ್ದಿ ಬೆನ್ನಲ್ಲೇ ಗಂಗಾ ಕಲ್ಯಾಣ ಯೋಜನೆಯ ಹೆಸರಲ್ಲಿ ರಶೀದಿಗಳ ಮೂಲಕ ಹಣ ವಸೂಲು ಮಾಡುತ್ತಿರುವ ದೂರುಗಳಿದ್ದರೂ ನಿಗಮ ಎಂ.ಡಿ.ಯಾಗಲೀ, ಶಿವಮೊಗ್ಗ ಜಿಲ್ಲಾ ಮ್ಯಾನೇಜರ್ ಆಗಲಿ ಮೌನಕ್ಕೆ ಜಾರಿರುವುದು ಸಾಕಷ್ಟು ಅನುಮಾನಗಳಿಗೆ ಎಡೆ ಮಾಡಿಕೊಡುತ್ತಿದೆ.
ಡಿ.ದೇವರಾಜ್ ಅರಸು ಅಭಿವೃದ್ಧಿ ನಿಗಮಕ್ಕೆ ಮ್ಯಾನೇಜಿಂಗ್ ಡೈರೆಕ್ಟರ್ ಆಗಿರುವ ನಟರಾಜ್ ಹಾಗೂ ಶಿವಮೊಗ್ಗ ಜಿಲ್ಲಾ ನಿಗಮಕ್ಕೆ ಜಿಲ್ಲಾ ವ್ಯವಸ್ಥಾಪಕರಾಗಿ ಬಂದಿರುವ ಕುಸಾಲ್ ರವರಿಗೆ ಗಂಗಾ ಕಲ್ಯಾಣದ ಫಲಾನುಭವಿಗಳಿಗೆ ಆಗುತ್ತಿರುವ ಅವಮಾನ, ಅವರಿಂದ ಹಣ ವಸೂಲಿ ಮಾಡುವ ರಶೀದಿಗಳ ವಿವರ ನೀಡಿ ಕ್ರಮ ಕೈಗೊಳ್ಳಿ ಎಂದರೆ ಇವರಿಬ್ಬರೂ ದಿವ್ಯ ಮೌನ ವಹಿಸಿರುವುದು ಅನುಮಾನಗಳಿಗೆ ಕಾರಣವಾಗುತ್ತಿದೆ.
2021-22 ನೇ ಸಾಲಿನಲ್ಲಿ ಗಂಗಾ ಕಲ್ಯಾಣ ಯೋಜನೆಯಡಿಯಲ್ಲಿ ಸಾಗರದ ಸೂರನಗದ್ದೆಯ ರೈತ ಮಹಿಳೆ ರೇಣುಕಮ್ಮರಿಗೆ ಉಚಿತ ಬೋರ್ ವೆಲ್ ಕೊರೆಯಲಾಗಿತ್ತು. ಆದರೆ, ಆ ಬೋರ್ ವೆಲ್ ಈವರೆಗೂ ಕೆಲಸಕ್ಕೆ ಬಾರದಂತೆ ಅಧಿಕಾರಿಗಳು ನೋಡಿಕೊಂಡಿದ್ದಾರೆ. ಫಲಾನುಭವಿ ರೇಣುಕಮ್ಮರ ಮಗ ಮಂಜುನಾಥ್ ಈ ಸಂಬಂಧ ಎಡಿಓ ಕೂಡ ಆಗಿರುವ ಎಫ್ ಡಿ ಎ ಕೇಡರಿನ ಅಧಿಕಾರಿ ಕೆ.ಪಿ.ಪ್ರದೀಪ್ ಕುಮಾರ್ ರವರಿಗೆ ವಿಚಾರಿಸಿದ್ದಾರೆ. ಇವರಿಗೇ ವಿಚಾರಿಸಲು ಕಾರಣ ಪ್ರದೀಪ್ ಕುಮಾರ್ ಮೊನ್ನೆ ಮೊನ್ನೆ ವರೆಗೂ ನಿಗಮದ ಪ್ರಭಾರ ಜಿಲ್ಲಾ ವ್ಯವಸ್ಥಾಪಕರಾಗಿದ್ದುದು.
ಆದರೆ, ಪ್ರದೀಪ್ ಕುಮಾರ್ ರೈತ ಮಂಜುನಾಥ್ ರೊಂದಿಗೆ ಜಗಳಕ್ಕಿಳಿದು ಅವಮಾನಿಸಿದ ಆಡಿಯೋ ವೀಡಿಯೋಗಳು ಹರಿದಾಡತೊಡಗಿದ್ದವು. ಈ ಸಂಬಂಧ ಇತ್ತೀಚೆಗೆ ಸುದ್ದಿ ಕೂಡ ಮಾಡಲಾಗಿತ್ತು. ರೈತರಿಗೆ ಅವಮಾನಿಸುತ್ತಿರುವ ಆಡಿಯೋ ವೀಡಿಯೋ ಪಡೆದುಕೊಂಡರೂ ನಿಗಮದ ಎಂ ಡಿ ನಟರಾಜ್, ಜಿಲ್ಲಾ ವ್ಯವಸ್ಥಾಪಕ ಕುಸಾಲ್ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂಬುದು ಆಶ್ಚರ್ಯದ ಸಂಗತಿ.
ಅಲ್ಲದೇ, ರೇಣುಕಮ್ಮರ ಗಂಗಾ ಕಲ್ಯಾಣ ಯೋಜನೆಯ ಬೋರ್ ವೆಲ್ಲಿಗೆ ಕೇಂದ್ರ ಕಚೇರಿಗೆ ನಾನು ಹಣ ಕಟ್ಟಿದ್ದೇನೆ. 24,271₹ ಕಟ್ಟಿದ್ದು, ಅದರ ಬಿಲ್ ಇದೆ ನೋಡಿ ಎಂದು ಅಧಿಕಾರಿ ಪ್ರದೀಪ್ ಕುಮಾರ್ ತೋರಿಸುತ್ತಿದ್ದಾರೆ. ಆಶ್ಚರ್ಯವೆಂದರೆ, ಈ ಬಿಲ್ ಗಮನಿಸಿದ ಎಂ.ಡಿ.ನಟರಾಜ್ ರವರು ಇಂಥ ರಶೀದಿಗೂ ನಮ್ಮ ಇಲಾಖೆಗೂ ಸಂಬಂಧವಿಲ್ಲ ಎಂದು ಸ್ಪಷ್ಟೀಕರಿಸುತ್ತಿದ್ದಾರೆ.
ಹಾಗಾದರೆ, ಪ್ರದೀಪ್ ಕುಮಾರ್ ಗಂಗಾ ಕಲ್ಯಾಣ ರೈತರಿಗೆ ತಾನು ಹಣ ಕಟ್ಟಿದ್ದೇನೆಂದು ತೋರಿಸುತ್ತಿರುವ ಇಲಾಖೆಯ ರಶೀದಿ ನಕಲಿಯೇ? ನಕಲಿಯಾಗಿದ್ದರೆ ಈ ವರೆಗೆ ಯಾಕೆ ಕ್ರಮ ಕೈಗೊಂಡಿಲ್ಲ? ಆ ರಶೀದಿಯಲ್ಲಿ ಹಣ ಪಡೆದವರ ಪದನಾಮವೂ ಇಲ್ಲ…ಮತ್ತಿತರೆ ಅನುಮಾನಗಳಿಂದಲೂ ಈ ರಶೀದಿ ತುಂಬಿಕೊಂಡಿದೆ! ಇಂಥ ರಶೀದಿಗಳನ್ನು ಇನ್ನೆಷ್ಟು ಗಂಗಾಕಲ್ಯಾಣ ಫಲಾನುಭವಿಗಳಿಗೆ ನೀಡಲಾಗಿದೆಯೋ? ತನಿಖೆ ಮಾಡುವವರು ಯಾರು? ಎಂ ಡಿ ನಟರಾಜ್? ಜಿಲ್ಲಾ ವ್ಯವಸ್ಥಾಪಕ ಕುಸಾಲ್? ಅಥವಾ ಲೋಕಾಯುಕ್ತ?


