ಅಮ್ಮ; ನಿನ್ನದೇ ಜೀವದ ಜೀವ ಆದ ನಾನು- ಕವಿತಾ ಜೋಯ್ಸ್ ರವರ ಮಮತಾಮಯಿ ಬರವಣಿಗೆ…
ಅಮ್ಮ; ನಿನ್ನದೇ ಜೀವದ ಜೀವ ಆದ ನಾನು- ಕವಿತಾ ಜೋಯ್ಸ್ ರವರ ಮಮತಾಮಯಿ ಬರವಣಿಗೆ…
ಅಮ್ಮ ಎಂದರೆ ಕೇವಲ ಪದವಲ್ಲ ಈ ಜಗತ್ತಿನಲ್ಲಿ ಪ್ರತಿಫಲ ನಿರೀಕ್ಷಿಸದೆ ಪ್ರೀತಿಸುವ ಏಕೈಕ ಜೀವ ಎಂದರೆ ಅದು ಅಮ್ಮ ಮಾತ್ರ👩❤️👩.
ದೇವರು ಎಲ್ಲೆಡೆಯೂ ಇರಲು ಸಾಧ್ಯವಿಲ್ಲ, ಅದಕ್ಕಾಗಿಯೇ ಆತ ಅಮ್ಮನನ್ನು ಸೃಷ್ಟಿಸಿದ್ದಾರೆ.
🏡ಮನೆಯೇ ಮೊದಲ ಪಾಠಶಾಲೆ, ತಾಯಿಯೇ ಮೊದಲ ಗುರು. ನನ್ನ ಜೀವನದಲ್ಲಿ ನನಗೆ ಅತ್ಯಂತ ಪ್ರಿಯವಾದ ಹಾಗೂ ಅಮೂಲ್ಯವಾದ ಶ್ರೇಷ್ಠವಾದ ಸಂಪತ್ತು ಅಂದರೆ ಅದು ನನ್ನ ಅಮ್ಮ. ❤️ ಜೀವನದಲ್ಲಿ ನನ್ನ ಅಮ್ಮ ನನಗೆ ಕೇವಲ ಪ್ರೀತಿ ನೀಡಿದವರಲ್ಲ, ಬದಲಾಗಿ ಬದುಕುವ ಸರಿಯಾದ ಹಾದಿಯನ್ನು ತರಿಸಿಕೊಟ್ಟ ಮಹಾನ್ ಮಾರ್ಗದರ್ಶಿ.
ಅಮ್ಮನಿಂದ ನಾನು ಕಲಿತ ಮೊದಲ ಮತ್ತು ಮುಖ್ಯ ಪಾಠವೆಂದರೆ ಸಹನೆ ಮತ್ತು ತಾಳ್ಮೆ. ಎಷ್ಟೇ ಕಷ್ಟದ ಪರಿಸ್ಥಿತಿ ಬಂದರೂ ಧೈರ್ಯಗೆಡದೆ, ಮುಗುಳ್ನಗುತ್ತಲೇ ಎಲ್ಲವನ್ನೂ ನಿಭಾಯಿಸುವ ಅವರ ಗುಣ ನನಗೆ ಪ್ರೇರಣೆ. ಜೀವನದಲ್ಲಿ ಸೋಲು-ಗೆಲುವುಗಳು ಸಹಜ, ಆದರೆ ಯಾವುದಕ್ಕೂ ಎದೆಗುಂದದೆ ಮುನ್ನಡೆಯಬೇಕು ಎಂಬುದನ್ನು ಅಮ್ಮ ತಮ್ಮ ನಡೆ-ನುಡಿಯಿಂದ ತೋರಿಸಿಕೊಟ್ಟಿದ್ದಾರೆ.
ಅವರ ನಿಸ್ವಾರ್ಥ ಪ್ರೀತಿ ಮತ್ತು ತ್ಯಾಗ ನನಗೆ ಪ್ರತಿಯೊಬ್ಬರನ್ನೂ ಗೌರವಿಸುವುದನ್ನು ಕಲಿಸಿದೆ. ತಮ್ಮ ಇಷ್ಟಕಷ್ಟಗಳನ್ನು ಬದಿಗಿಟ್ಟು ಕುಟುಂಬದ ಸಂತೋಷಕ್ಕಾಗಿ ಶ್ರಮಿಸುವ ಅವರ ಗುಣ, ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಸಹಾಯ ಮಾಡುವುದರ ಮಹತ್ವವನ್ನು ತಿಳಿಸಿಕೊಟ್ಟಿದೆ. ಜೊತೆಗೆ, ಶ್ರಮ ಮತ್ತು ಶಿಸ್ತಿನಿಂದ ಕೆಲಸ ಮಾಡಿದರೆ ಯಶಸ್ಸು ಖಂಡಿತ ಸಿಗುತ್ತದೆ ಎಂಬುದನ್ನು ಅಮ್ಮನ ದಿನನಿತ್ಯದ ಶ್ರದ್ಧೆಯಿಂದ ನಾನು ಕಲಿತ್ತಿದ್ದೇನೆ.
ಸತ್ಯ, ಪ್ರಾಮಾಣಿಕತೆ ಮತ್ತು ದಯಾಗುಣವೇ ಒಬ್ಬ ವ್ಯಕ್ತಿಯ ನಿಜವಾದ ಆಸ್ತಿ ಎಂಬುದನ್ನು ಅಮ್ಮ ಯಾವಾಗಲೂ ಹೇಳುತ್ತಿದ್ದರು. ನಾವು ಇತರರೊಂದಿಗೆ ಹೇಗೆ ನಡೆದುಕೊಳ್ಳುತ್ತೇವೆ ಎಂಬುದರ ಮೇಲೆ ನಮ್ಮ ವ್ಯಕ್ತಿತ್ವ ರೂಪುಗೊಳ್ಳುತ್ತದೆ. ಅಮ್ಮ ಕಲಿಸಿದ ಈ ಮೌಲ್ಯಗಳು ನನ್ನ ಜೀವನದ ಪ್ರತಿ ಹಂತದಲ್ಲೂ ನನಗೆ ದಾರಿದೀಪವಾಗಿವೆ. ಅಮ್ಮನ ಪ್ರೀತಿ ಮತ್ತು ಅವರು ನೀಡಿದ ಜೀವನದ ಪಾಠಗಳು ನನ್ನ ಬದುಕಿನ ಅತ್ಯಂತ ದೊಡ್ಡ ಆಸ್ತಿಯಾಗಿವೆ.
ಅಮ್ಮ ನನಗೆ ಪ್ರಾಮಾಣಿಕತೆ, ಶಿಸ್ತು, ಸಹನೆ ಮತ್ತು ಕರುಣೆಯ ಮಹತ್ವವನ್ನು ಕಲಿಸಿದ್ದಾರೆ. ಯಾವುದೇ ಪರಿಸ್ಥಿತಿ ಎದುರಾದರೂ ಧೈರ್ಯ ಕಳೆದುಕೊಳ್ಳದೆ, ಆತ್ಮವಿಶ್ವಾಸದಿಂದ ಮುನ್ನಡೆಯಬೇಕು ಎಂದು ಅವರು ಸದಾ ಹೇಳುತ್ತಿದ್ದರು. ಕಷ್ಟಗಳು ಜೀವನದ ಒಂದು ಭಾಗ; ಅವುಗಳಿಂದ ಹೆದರದೆ, ಅವುಗಳನ್ನು ಎದುರಿಸಿ ಮುಂದೆ ಸಾಗಬೇಕು ಎಂಬ ಪಾಠವನ್ನು ಅವರ ಜೀವನದಿಂದಲೇ ಕಲಿತಿದ್ದೇನೆ.
ಇತರರಿಗೆ ಸಹಾಯ ಮಾಡುವ ಮನೋಭಾವವನ್ನು ಅಮ್ಮ ನನ್ನಲ್ಲಿ ಬೆಳೆಸಿದ್ದಾರೆ. ನಮ್ಮ ಬಳಿ ಇರುವುದನ್ನು ಹಂಚಿಕೊಂಡಾಗ ಸಿಗುವ ಸಂತೋಷವೇ ನಿಜವಾದ ಸಂತೋಷ ಎಂದು ಅವರು ತಿಳಿಸಿಕೊಟ್ಟಿದ್ದಾರೆ. ಹಿರಿಯರನ್ನು ಗೌರವಿಸುವುದು, ಕಿರಿಯರನ್ನು ಪ್ರೀತಿಯಿಂದ ಕಾಣುವುದು ಮತ್ತು ಎಲ್ಲರೊಂದಿಗೆ ಸೌಜನ್ಯದಿಂದ ವರ್ತಿಸುವುದನ್ನು ಅವರು ಕಲಿಸಿದ್ದಾರೆ.
ಅಮ್ಮ ತಮ್ಮ ಜೀವನದಲ್ಲಿ ಅನೇಕ ಕಷ್ಟಗಳನ್ನು ಎದುರಿಸಿದರೂ, ಸದಾ ನಗುತ್ತಾ ಕುಟುಂಬವನ್ನು ಪ್ರೀತಿಯಿಂದ ನೋಡಿಕೊಂಡಿದ್ದಾರೆ. ಅವರ ತಾಳ್ಮೆ ಮತ್ತು ತ್ಯಾಗ ನನಗೆ ದೊಡ್ಡ ಪ್ರೇರಣೆ.
“ಒಳ್ಳೆಯ ಮನುಷ್ಯನಾಗುವುದು ಜೀವನದ ದೊಡ್ಡ ಸಾಧನೆ” ಎಂಬುದನ್ನು ಅಮ್ಮನಿಂದ ಕಲಿತಿದ್ದೇನೆ. ನನ್ನ ಜೀವನದಲ್ಲಿ ಎಷ್ಟೇ ಯಶಸ್ಸು ಬಂದರೂ, ಅಮ್ಮ ಕಲಿಸಿದ ಮೌಲ್ಯಗಳನ್ನು ಎಂದಿಗೂ ಮರೆಯುವುದಿಲ್ಲ. ಅವರ ಆಶೀರ್ವಾದ ಮತ್ತು ಮಾರ್ಗದರ್ಶನವೇ ನನ್ನ ಜೀವನದ ದೊಡ್ಡ ಶಕ್ತಿ.💐🙏
ಅಮ್ಮ ನಿನಗಾಗಿ..
*ಅಮ್ಮ ಕಲಿಸಿದ ಪಾಠ*
ಹೇಳಿ ಕೊಡಲಿಲ್ಲ ಅಮ್ಮ ಪಾಠವ
ಬದುಕಿ ತೋರಿಸಿದಳು ಜೀವನ
ಪ್ರೀತಿ ಅಂದರೆ ಮಾತಲ್ಲವೆಂದು
ಬೆಳಗಿನ ತಿಂಡಿಯಲ್ಲೇ ತೋರಿದಳು
ನಿದ್ದೆಯಿರದ ರಾತ್ರಿಯಲ್ಲೇ
ಎದೆಯೊಳಗೆ ಬರೆದಿಟ್ಟಳು
ಇಲ್ಲದರಲ್ಲೇ ಇರುವ ಖುಷಿಯ
ಒಲೆಯ ಮುಂದೆ ಕಲಿಸಿದಳು
ಬರಿದಾದ ಅಡುಗೆಯ ಮನೆಯಲ್ಲೂ
ಹಬ್ಬವನ್ನೇ ಮಾಡಿದಳು
ನಾವು ನೋಯಿಸಿದರೂ ಕ್ಷಣದಲಿ
ಮರೆತು ಕರೆಯುವ ಮನಸು ಅವಳದು
ಕ್ಷಮೆಯೆ ದೊಡ್ಡ ಬಲವೆಂದು
ಕಣ್ಣೀರಲ್ಲೇ ಕಲಿಸಿದಳು
ನೋವನು ನುಂಗಿ ನಗುವಿನಲ್ಲಿ
ಮನೆ ನಡೆಸಿದ ಗಟ್ಟಿತನ
ಬಿದ್ದರೂ ಮತ್ತೆ ಏಳಬೇಕು
ಎಂಬುದೇ ಅವಳ ಧೈರ್ಯ
ತನಗೆ ತುತ್ತು ಕಡಿಮೆಯಾದರೂ
ನಮಗೆ ತುತ್ತು ಹೆಚ್ಚಿಸಿದಳು
ಹಂಚಿ ತಿಂದರೆ ಹೆಚ್ಚಾಗುವುದೆಂಬ
ಜೀವನದ ರುಚಿ ತೋರಿದಳು
ಯಾರಿಗೂ ಕೆಡಕು ಬಯಸದಿರು
ಒಳಿತೇ ನಿನ್ನ ಕಾಯುವುದು
ದೇವರಿಗಿಂತ ದೊಡ್ಡದಲ್ಲ
ನಿನ್ನ ಒಳ್ಳೆಯ ಮನಸು
ಗೋಡೆಗಳಿಂದ ಮನೆ ಆಗದು
ಮನಸಿನಿಂದ ಮನೆ ಆಗುವುದೆಂದು
ಅಮ್ಮ ಸುಮ್ಮನೆ ಬದುಕುತ್ತಲೇ
ಜೀವನವೆಲ್ಲ ಕಲಿಸಿದಳು.
ನಿನ್ನದೇ ಜೀವದ ಜೀವ ಆದ ನಾನು
– *ಕವಿತಾ ಜೋಯ್ಸ್*
IWC ಶಿವಮೊಗ್ಗ ರಿವರ್ ಸೈಡ್


