ಡಾ.ಸಿ.ಎನ್.ಮಂಜುನಾಥ್ ಅವರಿಗೊಂದು ಬಹಿರಂಗ ಪತ್ರ – ಜಗದೀಶ್ ಕೊಪ್ಪ
ಡಾ.ಸಿ.ಎನ್.ಮಂಜುನಾಥ್ ಅವರಿಗೊಂದು ಬಹಿರಂಗ ಪತ್ರ
– ಜಗದೀಶ್ ಕೊಪ್ಪ
ಪ್ರಿಯ ಡಾಕ್ಟ್ರೇ, ಹೇಗಿದ್ದೀರಿ?
ಈ ದಿನ ಪತ್ರಿಕೆಗಳಲ್ಲಿ ನೀವು ಬಿ.ಜೆ.ಪಿ. ಅಭ್ಯರ್ಥಿಯಾಗಿ ಲೋಕಸಭಾ ಚುನಾವಣೆಗೆ ಕಣಕ್ಕಿಳಿಯುವ ಸುದ್ದಿಯನ್ನು ಓದಿ ನನಗೆ ಅಚ್ಚರಿ ಮಾತ್ರವಲ್ಲ, ಅಘಾತವಾಯಿತು. ನೀವು ಯಾವುದೇ ಪಕ್ಷದಿಂದ ರಾಜಕಾರಣಕ್ಕೆ ಇಳಿಯುವುದು ನನಗೆ ಮಾತ್ರವಲ್ಲ, ಈ ನೆಲದ ಸಾವಿರಾರು ಕನ್ನಡಿಗರಿಗೆ ಬೇಡವಾದ ಸಂಗತಿಯಾಗಿದೆ. ಏಕೆಂದರೆ, ನಿಮ್ಮದು ಎಲ್ಲವನ್ನು ಮತ್ತು ಎಲ್ಲರನ್ನೂ ಮೀರಿದ ವ್ಯಕ್ತಿತ್ವ.
ಉತ್ತರಕರ್ನಾಟಕದ ಜನತೆ ದಿವಂಗತ ಡಾ.ನಾಗಲೋಟಿ ಮಠ ಅವರನ್ನು ಇಂದಿಗೂ ತಮ್ಮ ಎದೆಯಲ್ಲಿಟ್ಟುಕೊಂಡು ಪೂಜಿಸುತ್ತಾರೆ. ಅದೇ ಸ್ಥಾನಮಾನವನ್ನು ಕರ್ನಾಟಕದ ಬಡ ಜನತೆ ನಿಮಗೆ ನೀಡಿದ್ದಾರೆ. ಈ ಸತ್ಯ ನಿಮಗೆ ಗೊತ್ತಿರಲಿ ಮಿತ್ರರೇ.
ಡಾಕ್ಟ್ರೇ, ನೀವು ಜಯದೇವ ಆಸ್ಪತ್ರೆಗೆ ಸೇರುವ ಮುನ್ನ ನಡೆದ ಘಟನೆಯನ್ನು ಇಲ್ಲಿ ಪ್ರಸ್ತಾಪಿಸಬಯಸುತ್ತೇನೆ. 1980 ರ ದಶಕದಲ್ಲಿ ಜಯದೇವ ಹೃದ್ರೋಗ ಆಸ್ಪತ್ರೆಯು ಬೆಂಗಳೂರು ವಿಕ್ಟೋರಿಯಾ ಆಸ್ಪತ್ರೆಯ ಆವರಣದಲ್ಲಿತ್ತು. ಆ ಕಾಲದಲ್ಲಿ ಏಷ್ಯಾದ ನಾಲ್ಕನೇ ಅತ್ಯುತ್ತಮ ಹೃದಯ ತಜ್ಞ ಎಂದು ಹೆಸರಾಗಿದ್ದ ಡಾ.ಪ್ರಬುಧೇವ ಅಲ್ಲಿದ್ದರು. ನಾನು ಬಲ್ಲಂತೆ ಆಂಧ್ರ ಮೂಲದ ಡಾ. ಪ್ರಭುದೇವ ಅವರ ವ್ಯಕ್ತಿತ್ವ ಮತ್ತು ಹೃದಯವಂತಿಕೆ ಬಣ್ಣಿಸಲು ಅಸಾಧ್ಯ. ಒಮ್ಮೆ ಅವರ ಬಗ್ಗೆ ಭ್ರಷ್ಟಾಚಾರದ ಆರೋಪಗಳ ಸುರಿಮಳೆಯಾದಾಗ, ನಾವೆಲ್ಲಾ ಪತ್ರಕರ್ತರು ಅವರ ಬೆಂಬಲಕ್ಕೆ ನಿಂತು ಅವರ ಪ್ರಾಮಾಣಿಕತೆಯನ್ನು ಸಾಬೀತು ಪಡಿಸಿದೆವು.
ನಮ್ಮ ನಿರೀಕ್ಷೆ ಉಸಿಯಾಗದಂತೆ ಅವರು ಬನ್ನೇರುಘಟ್ಟ ರಸ್ತೆಯಲ್ಲಿ ಜಯದೇವ ಆಸ್ಪತ್ರೆಯನ್ನು ನಿರ್ಮಾಣ ಮಾಡಿ ನಾಡಿನ ಅತ್ಯತ್ತಮ ಹೃದಯ ಚಿಕಿತ್ಸೆಯ ಆಸ್ಪತ್ರೆಯನ್ನಾಗಿ ಮಾಡುವುದರ ಮೂಲಕ, ಬಡವರಿಗೆ ಕೈಗೆಟುಕುವ ಚಿಕಿತ್ಸೆ ನೀಡಲು ಆರಂಭಿಸಿದರು. ಅವರು ನೆಟ್ಟ ಆಲದ ಸಸಿಯನ್ನು ನೀವು ಇಂದು ಹೆಮ್ಮರವಾಗಿ ಬೆಳೆಸಿದ್ದೀರಿ. ನಿಮ್ಮ ಸೇವೆ ಅನನ್ಯವಾದುದು. ಈ ಬಗ್ಗೆ ಎರಡು ಮಾತಿಲ್ಲ.
ನಾನು ಡಾ.ಪ್ರಭುದೇವ ಅರನ್ನು ಭೇಟಿ ಮಾಡಲು ಜಯದೇವಕ್ಕೆ ಬರುತ್ತಿದ್ದಾಗ, ನೀವು ಅಲ್ಲಿ ಸೇವೆಯಲ್ಲಿ ಇದ್ದರೂ ಕೂಡ ನಿಮ್ಮನ್ನು ಭೇಟಿ ಮಾಡಲು ಇಷ್ಟಪಡಲಿಲ್ಲ. ಏಕೆಂದರೆ, ನೀವು ದೇವೇಗೌಡರ ಅಳಿಯ ಎಂದು ಗೊತ್ತಿದ್ದ ಕಾರಣ, ರಾಜಕಾರಣದ ಪ್ರಭಾವ ಬಳಸಿ ಬಂದಿರಬಹುದಾದ ವೈದ್ಯ ಎಂಬ ಕಲ್ಪನೆ ನನ್ನಲ್ಲಿತ್ತು. ನನ್ನೊಳಗಿನ ಆ ತಪ್ಪು ಕಲ್ಪನೆಯನ್ನು ಅಳಿಸಿಹಾಕಿದ ಪ್ರತಿಭಾವಂತರು ನೀವು.
ಡಾಕ್ಟ್ರೇ, ನಿಮಗೆ ನೆನಪಿಲ್ಲದೆ ಇರಬಹುದು. ಆದರೆ, ನಿಮ್ಮ ಆ ಹೃದಯವಂತಿಕೆಯ ಕ್ಷಣವನ್ನು ಇಂದಿಗೂ ನಾನು ಕೃತಜ್ಞತೆಯಿಂದ ಸ್ಮರಿಸುತ್ತೇನೆ. ಬಾಗಲಕೋಟೆ ಸಮೀಪದ ಕೆರೂರು ಎಂಬ ಗ್ರಾಮದ ಒಬ್ಬ ಟೈಲರ್ ನ ಇಬ್ಬರು ಮಕ್ಕಳಿಗೆ ಹೃದಯ ನಾಳದಲ್ಲಿ ರಂಧ್ರದ ಸಮಸ್ಯೆ ಇತ್ತು. ಚಿಕಿತ್ಸೆಗಾಗಿ ಹಣವಿಲ್ಲದೆ ಪರದಾಡುತ್ತಿದ್ದ ಆತನ ಬಗ್ಗೆ ಸ್ಥಳಿಯ ಪತ್ರಿಕೆಗಳಲ್ಲಿ ವರದಿ ಪ್ರಕಟವಾದಾಗ, ನಾನು ಕೂಡಲೇ ನಿಮಗೆ ವರದಿಯ ತುಣುಕುಗಳೊಂದಿಗೆ ಇ-ಮೈಲ್ ಹಾಕಿದೆ. ಆ ತಂದೆಯನ್ನು ಮಕ್ಕಳೊಂದಿಗೆ ನಿಮ್ಮಲ್ಲಿಗೆ ಕಳಿಸಿಕೊಡುತ್ತೀನಿ ಉಚಿತ ಚಿಕಿತ್ಸೆ ಮಾಡಿಕೊಡಲು ಸಾಧ್ಯವೆ? ಎಂದು ನಿಮ್ಮನ್ನು ಕೇಳಿದ್ದೆ. ನೀವು ಕೂಡಲೇ ಉತ್ತರಿಸುವುದರ ಜೊತೆಗೆ ದೂರವಾಣಿ ಕರೆ ಮಾಡಿ ಕಳಿಸಿಕೊಡಿ ಜಗದೀಶ್ ಎಂದು ಹೇಳುವುದರ ಮೂಲಕ ನನ್ನ ಕಣ್ಣು ತೆರೆಸಿದ್ದಿರಿ.
ಗೆಳೆಯರಿಂದ ಇಪ್ಪತ್ತು ಸಾವಿರ ಹಣ ಸಂಗ್ರಹಿಸಿ ಅವರನ್ನು ನಿಮ್ಮ ಬಳಿ ಕಳಿಸಿಕೊಟ್ಟಿದ್ದೆ. ನೀವು ನೀಡಿದ ವಾಗ್ದಾನದಂತೆ ನಡೆದುಕೊಂಡಿರಿ. ಅಂದಿನಿಂದ ನೀವು ಕೇವಲ ಹೃದಯ ತಜ್ಞರು ಮಾತ್ರವಲ್ಲ, ಹೃದಯವಂತರು ಎಂದು ಎಲ್ಲಾ ಕಡೆ ಹೇಳಿಕೊಂಡು ಬಂದಿದ್ದೀನಿ.
ನಾನು ನಿಮಗೆ ಕೃತಜ್ಞತೆ ಸಲ್ಲಿಸಲು ಬಂದಾಗ ಜಯದೇವ ಆಸ್ಪತ್ರೆಯ ಬೋರ್ಡ್ ಮೀಟಿಂಗ್ ನಲ್ಲಿ ನೀವು ತಲ್ಲೀನರಾಗಿದ್ದೀರಿ. ನನ್ನ ವಿಸಿಟಿಂಗ್ ಕಾರ್ಡ್ ನೋಡಿದಾಕ್ಷಣ ತಕ್ಷಣ ಒಳಕ್ಕೆ ಕರೆಸಿಕೊಂಡು ಮಾತನಾಡುವ ಸೌಜನ್ಯವನ್ನು ತೋರಿದಿರಿ.
ಪ್ರಿಯ ಡಾಕ್ಟ್ರೇ, ನಿಮ್ಮ ವ್ಯಕ್ತಿತ್ವ ಮತ್ತು ಜನಪ್ರಿಯತೆ ಮತ್ತು ಈ ನಾಡಿನ ಜನರಿಗೆ ನಿಮ್ಮ ಬಗ್ಗೆ ಇರುವ ಗೌರವವನ್ನು ನೀವು ಅರಿತಿಲ್ಲ. ನೀವು ಈನಾಡಿನ ಮುಖ್ಯಮಂತ್ರಿಗೆ ಇರುವ ಜನಪ್ರಿಯತೆ ಮತ್ತು ಗೌರವವನ್ನು ನೀವು ಸಂಪಾದಿಸಿದ್ದೀರಿ. ಈ ನಾಡಿನ ಬಡವರಿಗೆ ನಿಮ್ಮ ಸೇವೆ ಮತ್ತು ಹೃದಯ ರೋಗ ಕುರಿತಂತೆ ಮಾರ್ಗದರ್ಶನ ಬೇಕಿದೆ. ದಯವಿಟ್ಟು ಈ ರಾಜಕೀಯದಿಂದ ದೂರವಿರಿ ಎಂದು ಒಬ್ಬ ಸ್ನೇಹಿತನಾಗಿ ಮತ್ತು ನಿಮ್ಮ ಹಿರಿಯ ಸಹೋದರನಾಗಿ ನಿಮ್ಮಲ್ಲಿ ಕಳ ಕಳಿಯಿಂದ ಪ್ರಾರ್ಥಿಸಿಕೊಳ್ಳುತ್ತೇನೆ.
ಇಂತಿ ಪ್ರೀತಿಯಿಂದ
ಜಗದೀಶ್ ಕೊಪ್ಪ
ಚಿತ್ರ ಸೌಜನ್ಯ- ವಿಜಯವಾಣಿ