ರಂಗ್ ಬಿರಂಗಿ ಕವಿತೆಗಳು ಮತ್ತು ಸಾಸ್ವೆಹಳ್ಳಿ ರಂಗರಾಜ್*

ಕರ್ತವ್ಯವೇ ಪ್ರೀತಿ
***************
ಗೆಳತಿ,
ಪ್ರೀತಿಯ
ನಿಭಾವಣೆ
ಭಾರವು
ಕಳಚಿದ
ಕ್ಷಣದಿಂದ
ಎದೆಯು
ಹಗುರ
ಎನಿಸಿದೆ..,

ಕಣ್ಣು ನಿನ್ನ
ಹುಡುಕಾಟ
ನಿಲ್ಲಿಸಿವೆ,
ಉಸಿರು
ವಾಸನೆ
ಮರೆತಿದೆ,
ಅಧರಗಳು
ಹೆಸರನೇ
ಮರೆತಿವೆ,

ಮಾತುಗಳು
ಬರಿದಾಗಿವೆ,
ಇನಿ ದನಿಯ
ಸುಳಿವಿಲ್ಲದೆ
ಶೂನ್ಯವಾಗಿದೆ,
ಹೃದಯವೀಗ
ಖಾಲಿ ಖಾಲಿ !
ಮನಸು ತುಂಬಾ
ನಿರಾಳವಾಗಿದೆ..,

ದೇವರಾಣೆ
ಇದು ಸತ್ಯ,
ಕರ್ಮಭೂಮಿ
ನನ್ನ ದೇಗುಲ,
ಕರ್ತವ್ಯ
ದೇವರು,
ಸಮರ್ಪಣೆ
ಸುಂದರ,
ಶಾಶ್ವತ ಪ್ರೀತಿ.!

# ಸಾಸ್ವೆಹಳ್ಳಿ ರಂಗರಾಜ್

 

*ರಂಗ್ ಬಿರಂಗಿ ಕವಿತೆಗಳು ಮತ್ತು ಸಾಸ್ವೆಹಳ್ಳಿ ರಂಗರಾಜ್*

ಶಿವಮೊಗ್ಗದಲ್ಲಿ ಬೆಳೆದರೂ ಸಾಸ್ವೆಹಳ್ಳಿಯ ಮಾತೃಬೇರು ಮರೆತವರಲ್ಲ. ಹೆಸರಿನ ಜೊತೆಗೇ ರಂಗರಾಜ್ ರವರು ಸಾಸ್ವೆಹಳ್ಳಿಯನ್ನು ಸೇರಿಸಿಕೊಂಡು ಬೆಳೆದವರು.
ಶಿವಮೊಗ್ಗದಲ್ಲಿ ಪತ್ರಿಕಾರಂಗದ ನಂಟಿನ ಜೊತೆ ಜೊತೆಗೆ ರಂಗಭೂಮಿಯ ಗೀಳೂ ಅಂಟಿಸಿಕೊಂಡವರು. ಪತ್ರಕರ್ತರಾಗಿದ್ದಾಗ ಅತ್ಯುತ್ತಮ ಮಾನವೀಯ ವರದಿಗಾಗಿ ಪ್ರೆಸ್ ಗಿಲ್ಡ್ ಪ್ರಶಸ್ತಿ ಪಡೆದವರು. ಯುವಪತ್ರಕರ್ತರ ತಂಡ ‘ನಮ್ ಟೀಮ್?!’ ನ ಸ್ಥಾಪಕರಲ್ಲಿ ಒಬ್ಬರು. ನಮ್ ಟೀಮ್?! ತಂಡದ ಮೊದಲ ನಾಟಕ ‘ಮಣ್ಣಿನ ಕಣ್ಣು’ ನ ನಿರ್ದೇಶಕರೂ ಆಗಿ ಆಗ ಗಮನ ಸೆಳೆದವರು.
ಈಗ ಶಿರಾಳಕೊಪ್ಪದಲ್ಲಿ ಪ್ರೌಢಶಾಲಾ ಶಿಕ್ಷಕರು. ಪ್ರಶಸ್ತಿಗಳ ಬೆನ್ನು ಹತ್ತದ ಇವರಿಗೆ ‘ನಮ್ ಮೇಷ್ಟ್ರು ನಮ್ ಹೆಮ್ಮೆ’ ಪ್ರಶಸ್ತಿ ಬೆನ್ನಿಗೆ ಬಿದ್ದು ಬಂತು.
ಈಗ ಕವಿತೆಗಳಿಗಾಗಿ ಹೃದಯ ತೆರೆದಿಟ್ಟು ಬರೆಯುತ್ತಿದ್ದಾರೆ.ಹಾಗಾಗಿ, ಇವರ ಕವಿತೆಗಳಲ್ಲಿ ಹೃದಯದ ಮಿಡಿತ, ರಕ್ತದ ಸಂಚಾರದಂತೆ ಪ್ರೀತಿ, ಉಸಿರಾಟದಂತೆ ಬದುಕು ಕಾಣುತ್ತದೆ. ಇವರ ಕವಿತೆಯ ಸೊಬಗನ್ನು ಆಗಾಗ್ಗೆ ಇಲ್ಲಿ ಸವಿಯುತ್ತಾ ಸ್ಪಂದಿಸುತ್ತಿರೆಂದು ಆಶಿಸುತ್ತಾ…