ಅಶ್ವತ್ಥ ಅಂಕಣ- ಜಂಗ್ಲಿಯ ಚುನಾವಣಾ ಕಾವು…

ಹಳ್ಳಿಯಲ್ಲೂ ಚುನಾವಣಾ ಕಾವು ಏರಿತ್ತು. ಸುಡು ಸುಡು ಮದ್ಯಾನ ಚವಳ್ಳಿಯ ಪೆಟ್ಟಿಗೆ ಅಂಗಡಿಯ ಕಲ್ಲು ಹಾಸಿನ ಮೇಲೆ ಜಂಗ್ಲಿ ಕೂತಿದ್ದ. ಕಲ್ಲು ಬೆಂಚು ಎಷ್ಟು ಕಾದಿತ್ತೆಂದರೆ ಪಟ್ಟಪಟ್ಟಿ ನಿಕ್ಕರನ್ನೂ ದಾಟಿ ಆ ಕಾವು ಕುಂಡಿಗೆ ತಾಗಿತ್ತು. ಒಂದು ಸಲ ಎದ್ದು ಕುಂಡಿಯನ್ನು ಸವರಿಕೊಂಡು ಮತ್ತೆ ಕೂತ. ಲ್ಯೇ ಚವಳ್ಳಿ ಈ ಬಿಸಿಲು ಕಾಲದಲ್ಲಿ ಅಂಗಡಿ ಮುಂದೆ ಒಂದು ಟಾರ್ಪಲ್ನಾದ್ರು  ಇಳಿಬಿಡದಲ್ವ. ನಾಲ್ಕು ಜನ ಕೂತ್ಕೊಂಡ್ರೆ ತಾನೇ ನಿಂಗು ನಾಕ್ಕಾಸು ಸಂಪಾದನೆ ಆಗೋದು ಅಂದ.

ಜಂಗ್ಲಿಯ ಮಾತು ಉರಿಯೋ ಬೆಂಕಿಗೆ ತುಪ್ಪ ಸುರಿದಂಗಾಯ್ತು. ಹೌದಪ್ಪ ಇದೊಂದು ಕ್ಯಾಮೆ ಬಾಕಿ ಇತ್ತು ನಂಗೆ. ಕಾಫಿ ಕುಡಿದು ಸಾಲ ಹೇಳೋರೆ ಜಾಸ್ತಿ ಅಂತದ್ರಲ್ಲಿ ನಾನಿಲ್ಲಿ ಟಾರ್ಪಲ್ ಕಟ್ಟಿ ಟೇಬಲ್ ಇಟ್ಟು ಎಸಿ ರೂಮ್ ಮಾಡಿಕೊಟ್ಟರೆ ಮೂರೇ ದಿನದಲ್ಲಿ ನನ್ನ ಅಂಗಡಿ ಮಕಾಡೆ ಮಲಗುತ್ತೆ. ಸಾಕಪ್ಪ ಈಗಿರೋ ಜನಾನೇ ಸಾಕು ಹೆಂಗೋ ನಾ ಕಾಸು ಸಂಪಾದನೆ ಆಗುತ್ತೆ ಅದಕ್ಕೂ ಕಲ್ ಹಾಕೋ ಐಡಿಯಾ ಬೇಡ ಅಂದ.
ಲೇಯ್ ಮಂಗ್ಯಾ, ಇದಕ್ಕೆ ನಿನಗೆ ಬುದ್ದಿ ಕಮ್ಮಿ ಅನ್ನೋದು ಇದು ಚುನಾವಣೆ ಟೈಮ್ ಕಣ್ಲಾ ಈಗ ಸಂಪಾದನೆ ಮಾಡೋ ದುಡ್ಡು ವರ್ಷ ಪೂರ್ತಿ ತಲೆ ಕೆಳಗೆ ಮಾಡಿದರು ಸಂಪಾದನೆ ಮಾಡಕ್ಕಾಗಲ್ಲ ತಿಳ್ಕೋ. ಏನೋ ಪರಿಚಯಸ್ಥ ನಾಕಾಸು ಸಂಪಾದನೆ ಮಾಡ್ಕೊಳ್ಳಿ ಅಂತ ಐಡಿಯಾ ಕೊಟ್ರೆ ನನ್ನನ್ನೇ ಪೆದ್ದಂತರ ಮಾಡ್ತೀಯಾ. ಹೋಗು ನಿನ್ನ ಹಣೆಬರ ಹಿಂಗೆ ಇದ್ರೆ ನಾನ್ ತಾನೇ ಏನ್ ಮಾಡಕ್ ಆಯ್ತದೆ ಒಂದು ಟೀ ಕೊಡಿಲ್ಲಿ ಅಂದ.
ಜಂಗ್ಲಿಯ ಈ ಮಾತು ಚವಳ್ಳಿಗೆ ಎಲ್ಲೋ ಒಂದು ಕಡೆ ಟಚ್ ಆಯ್ತು. ಅಭೆಯಾಡುತ್ತಿದ್ದ ಟೀಯನ್ನು ಪಾತ್ರೆಗೆ ಸುರುವಿ ಎರೆಡು ಕಪ್ಪಿಗೆ ಸೋಸಿ ಮೇಲೆ ಕೆಳಗೆ ಸುರಿದು ಜಾಂಗ್ಲಿಗೆ ಕೊಟ್ಟ.
ಯಾವಾಗ್ಲಾ ಎಲೆಕ್ಷನ್ ? ಚವಳ್ಳಿಯ ಪ್ರಶ್ನೆ
ಮುಂದಿನ ತಿಂಗಳು ಅಂದ ಜಂಗ್ಲಿ.
ಕ್ಯಾಂಡಿಡೇಟ್ ಯಾರು ? ಚವಳಿಗೆ ಕುತೂಹಲ ಜಾಸ್ತಿ ಆಯ್ತು
ನಮ್ಮ ಯವರಪ್ಪ ಇಲ್ವಾ ಅವರ ದೂರದ ಸಂಬಂಧಿಯಂತೆ.!
ಹೌದಾ..!  ಈ ಸಲ ಒಳ್ಳೆ ದುಡ್ಡು ಯವರಪ್ಪಂಗೆ !!
ಮತ್ತೇನು ಸಂಬಂಧಿಕ ಅಂದ್ಮೇಲೆ ಯವರಪ್ಪ ಬಿಡ್ತಾನ ಲಕ್ಷ ಲಕ್ಷ ಬಾಚ್ಬಿಡ್ತಾನೆ ಅಂದು ಕಿಚಾಯಿಸಿ ನಕ್ಕ ಜಂಗ್ಲಿ.
ಈ ಮಾತು ಚವಳ್ಳಿಗೆ ಒಳಗೊಳಗೆ ಚೇಳು ಕುಟುಕಿದಂತಾಯ್ತು. ಎಲಾ ಇವನ ! ಬೆಳಗ್ಗೆ ತಾನೇ ಯವರಪ್ಪ ಇಲ್ ಬಂದು ಟೀ ಕುಡಿದು ಹೋದ. ನಂಗೆ ಒಂಚೂರು ವಿಷಯ ಹೇಳ್ಳೆ ಇಲ್ವಲ್ಲ ಅನ್ನುವ ಅನುಮಾನ ಹೊರಗೆ ಹಾಕಿದ. ಜಂಗ್ಲಿಗೆ ಚವಳ್ಳಿಯ ಮುಖದ ಬದಲಾವಣೆ ಅರ್ಥವಾಯಿತು. ಚವಳಿ ಯವರಪ್ಪ ನಿಂಗೆ ಈ ವಿಷಯ ಹೇಳಿಲ್ಲವೇ ಅಂತ ಮತ್ತೆ ಗಾಯಕ್ಕೆ ಉಪ್ಪು ಸುರಿದ. ಇಲ್ಲ ಕಣೋ ಬೆಳಿಗ್ಗೆ ಈ ಮ್ಯಾಟರ್ ಹೊರಗೆ ಬಂದಿಲ್ಲ ಅಂದ ಮುಖ ಸಣ್ಣದು ಮಾಡಿ.
ನೋಡ್ದ್ಯಾ ಚವಳ್ಳಿ ಯವರಪ್ಪ ಒಳಗೊಳಗೆ ಇದ್ದುಕೊಂಡು ನಮಗೆ ವಿಷಯ ಮುಚ್ಚಿಟ್ಟವ್ನೆ ಅಂದ್ರೆ ದುಡ್ಡು ಈಗಾಗಲೇ ಅವನ ತಿಜೋರಿ ಒಳಗಡೆ ದುಡ್ಡು ಬಂದು ಕೂತಿದೆ ಅಂತ ಅರ್ಥ ತಿಳಿತಾ? ಒಗ್ಗರಣೆ ಹಾಕಿ ಹೇಳಿದ ಜಂಗ್ಲಿ. ರಾಜಕೀಯ ಕಣ್ಲಾ ರಾಜಕೀಯ ಎಂತವರನ್ನು ದೂರ ಮಾಡಿ ಬಿಡುತ್ತೆ ಫ್ರೆಂಡ್ಸ್ ರಿಲೇಷನ್ನು ಫ್ಯಾಮಿಲಿ ಇವೆಲ್ಲ ಮ್ಯಾಟರ್ ಆಗಲ್ಲ ಗೊತ್ತಾಯ್ತಾ ? ಅದಕ್ಕೆ ನಾನು ಹೇಳಿದ್ದು ನೀನು ಒಂಚೂರು ಬುದ್ಧಿವಂತ ಆಗಿ ಅಂಗಡಿನಾ ಬಿಜಿನೆಸ್ ಜಾಸ್ತಿ ಆಗೋತರ ಪ್ಲಾನ್ ಮಾಡ್ಕೋ, ಎಲೆಕ್ಷನ್ ಮುಗಿವವರೆಗೂ ವೆರೈಟಿ ವೆರೈಟಿ ಸ್ನಾಕ್ಸ್ ತಿಂಡಿ ಊಟ ರೆಡಿ ಮಾಡ್ಕೋ. ಸಾಧ್ಯವಾದರೆ ಪಾಕೆಟ್ಗಳು ಜಾಸ್ತಿ ದುಡ್ಡು ಮಾಡ್ತವೆ ಸದ್ದು ಮಾಡ್ತವೆ. ಎಣ್ಣೆಗೆ ತಾನೇ ವೋಟು ಬೀಳೋದು ಆಗ ನೋಡು ಲಕ್ಷ್ಮಿ ನಿನ್ನ ಅಂಗಡಿ ಬಿಟ್ಟು ಆಚೆ ಹೋಗೋದೇ ಇಲ್ಲ. ಬುಸಿನೆಸ್ ಟ್ರಿಕ್ಸ್ ಹೇಳಿಕೊಟ್ಟ ಜಂಗ್ಲಿ.
ಹೌದು ಕಣ್ಲಾ ನೀನ್ ಹೇಳೋದು ಸತ್ಯ ಈ ಚುನಾವಣೆಗಳು ಗೆಲ್ಲೋದೇ ಎಣ್ಣೆ ಮಾಂಸ ಮೋಸ ವಂಚನೆ ಸುಳ್ಳು ಇಂಥವುಗಳಿಂದ ನಾವು ಇಂಥ ಸಮಯದಲ್ಲಿ ನಿಯತ್ತು ಅಂತ ಕೂತ್ರೆ ಹೊಟ್ಟೆಗೆ ತಣ್ಣೀರು ಬಟ್ಟೆನೇ ಗತಿ ಯಾರ್ಯಾರೋ ದುಡ್ಡು ಮಾಡಿಕೊಂಡು ಓಡಾಡುವಾಗ ದಿನವಿಡೀ ಹಗಲು-ರಾತ್ರಿ ಬೆವರು ಸುರಿಸಿ ದುಡಿಯೋ ನನ್ನಂತ ಕೂಲಿ ಮಾಡೋನಿಗೆ ಪಾಪ ಕರ್ಮ ಉಪಯೋಗಕ್ಕೆ ಬರಲ್ಲ. ಸಾಂತ್ವಾನ ಸಹಾಯ ಕೆಲಸಕ್ಕೆ ಬರಲ್ಲ. ಬದುಕೋ ರೀತಿನ ಕಲಿಬೇಕು. ಅಂತಃಕರಣ ಮಾನವೀಯತೆ ಕೇಳೋಕೆ ಓದೋಕೆ ಚೆಂದ…ವ್ಯವಹಾರದಲ್ಲಿ ಅಲ್ಲ.
* ಅಶ್ವತ್ಥ ಕಲ್ಲೇದೇವರಹಳ್ಳಿ