ಸಂಗೀತ ರವಿರಾಜ್ ರ ಮನಮಿಡಿಯುವ ಅಂಕಣ;  ಸಂಪಾಜೆಯ ಸಂಜೆಗಳು

             ಸಂಪಾಜೆಯ  ಸಂಜೆಗಳು

ಬಾಲ್ಯವೇ ಹೀಗೆ, ಅನುಭವಗಳ ಸಕ್ಕರೆ ಮತ್ತು ಉಪ್ಪಿನ ಮೂಟೆ. ಹಾಗೆ ನೋಡಿದರೆ ಬದುಕು ಪೂರ್ತಿ ಅನುಭವಗಳೇ  ಆಗಿವೆ.  ಆ ಕ್ಷಣಕ್ಕೆ ಅದು ಜೀವನದ ಸತ್ಯವಾದರೂ ನಂತರಕ್ಕೆ ಅನುಭವದ ಮೂಟೆಯೊಳಗೆ ನುಸುಳಿಬಿಡುತ್ತದೆ. ಆದರೆ ಈ ಬಾಲ್ಯದಲ್ಲಿ ತಾಪತ್ರಯಗಳು ಇಲ್ಲದೆ ನಮ್ಮಷ್ಟಕ್ಕೆ ನಾವನುಭವಿಸುವ ದಿನಗಳು ಇವೆಯಲ್ಲ, ಈಗ ಆಲೋಚಿಸಿದರೆ ಅದೊಂದು ಸಿಹಿಯಾದ ಅಚ್ಚರಿ.

ಹಾಗೆ ನೋಡಿದರೆ ಪ್ರತಿಯೊಬ್ಬರ ಬಾಲ್ಯ ಅತಿಯಾದ ಸಿಹಿಯಿಂದ ಕೂಡಿರುವುದಿಲ್ಲ ಎಂಬುದಂತು  ನಿಜ .ಹೆತ್ತವರು ಜಗಳವಾಡಿಕೊಂಡಿದ್ದರೆ , ಮಕ್ಕಳಿಗೆ ಅದಕ್ಕಿಂತ ಮಾನಸಿಕ  ನೋವು ಬೇರೊಂದು ಇರುವುದಿಲ್ಲ. ಇಲ್ಲವೆಂದರೆ ಯಾವುದೋ ಕಾರಣಕ್ಕೆ ಮಕ್ಕಳು ಬೇರೆ ಮನೆಯಲ್ಲಿದ್ದರೆ ಅಪ್ಪ ಅಮ್ಮ ಜೊತೆಯಲ್ಲಿಲ್ಲದ ಒಳಗಿನ ನೋವು ಇರುತ್ತದೆ. ಅದು ಬಿಟ್ಟರೆ ಏನಾದರೂ ಕಿರುಕುಳಗಳು ಯಾರಿಗೂ ತಿಳಿಯದಂತೆ  ಮಗುವಿಗೆ ಆಗುತ್ತ ಇದ್ದರೆ ಇದು ಕೂಡ ಮಾನಸಿಕ ವೇದನೆ.  ಮಾನಸಿಕ ನೋವುಗಳು ಸಿಗದೆ ಇರುವ ಮಕ್ಕಳ ಬಾಲ್ಯ ಅದ್ಭುತವಾಗಿರುತ್ತದೆ. ಇಂಥ ನೋವುಗಳು ಇದ್ದರೂ ಸಹ ನೆರೆಕರೆಯ ಮಕ್ಕಳೊಂದಿಗೆ ಎಲ್ಲವನ್ನೂ ಮರೆತು ಸಂತಸದ
ಕ್ಷಣಗಳನ್ನು ಯಾವುದೋ ಮಾಯಕದಲ್ಲಿ ಕಳೆದಂತೆ ಕಳೆಯುತ್ತಾರೆ. ಅತೀ ಬಡತನವಿದ್ದರೂ ಬಾಲ್ಯದ ಸಂತೋಷಕ್ಕೇನು  ಬಡತನದ ಕೊರತೆ ಇರುವುದಿಲ್ಲ . ಹಾಗೆಯೇ ಶ್ರೀಮಂತಿಕೆ ಇದ್ದರು ಸಹ ಬಾಲ್ಯ ಬಾಲ್ಯವೇ ಆಗಿದೆ.  ಆದರೆ ಈಗಿನ ಕಾಲಕ್ಕೆ ಮಾತ್ರ ನಮ್ಮ ಬಾಲ್ಯವನ್ನು ಹೋಲಿಕೆ ಮಾಡುವುದು ಬೇಡ. ಅಂದರೆ ಇಲ್ಲಿಂದ ಹದಿನೈದು ವರ್ಷದ ಹಿಂದಿನವರೆಗಿನ ಬಾಲ್ಯದಲ್ಲಿ ರಸ ಜಿನುಗುತಿತ್ತು ಎನ್ನಬಹುದು.  ಮುಖ್ಯವಾಗಿ ಬಾಲ್ಯದ ರಸಾನುಭವ ಸಿಗುವುದು ಒಂದೆರಡು ಕಿಲೋಮೀಟರ್ ಶಾಲೆಗೆ ನಡೆದು ಹೋಗುವ ಸಮಯದಲ್ಲಿಯೇ ಹೆಚ್ಚಾಗಿ ಆಗಿರುತ್ತದೆ. ಆಗ ಸಿಗುವ ಖುಷಿಯಲ್ಲಿ ಬಾಲ್ಯದೆಲ್ಲ ಅಗಾಧ ಜೀವನ ಅಡಗಿ ಬಿಟ್ಟಿರುತ್ತದೆ. ಇಂದಿನಿಂದಲೇ ಒಬ್ಬೊಬ್ಬರೊಂದಿಗೆ  ಕೇಳಿ ನೋಡಿ ಆ ದಿನಗಳಲ್ಲಿ ಸವಿದ ರಸಾನುಭವಗಳಿಗೆ ಕೊನೆ ಇರುವುದಿಲ್ಲ. ಇದೊಂದು ಸಿಹಿಯಾದ ಸಕ್ಕರೆ ಮೂಟೆ. ಬೇಕೆಂದರೂ ಮತ್ತೆ ಸಿಗದೊಂದಿದೆಯಾದರೆ  ಅದು ಬಾಲ್ಯ ಮಾತ್ರ.
ಶಿಕ್ಷಕರ ಕ್ವಾಟರ್ಸ್ ಎದುರುಗಡೆ  ಇರುವ, ಸಂಪಾಜೆ ಪ್ರಾಥಮಿಕ  ಶಾಲೆಯ ದೊಡ್ಡ ಮೈದಾನ ಮಕ್ಕಳಾದ ನಮಗೆಲ್ಲ ವರದಾನ . ಅದೇ ಮೈದಾನದಲ್ಲಿ ಆಡಿ ಬೆಳೆದು ದೊಡ್ಡದಾದ ಈ ಪಾದದ ಪ್ರತಿ ಹೆಜ್ಜೆಯು ಸಂಪೂರ್ಣ ಆ ನೆಲಕ್ಕೆ ತಗುಲಿದೆ ಎಂದರೆ ಹಿತ ನನಗೆ.  ಆ  ನೆಲದಲ್ಲಿ ಅಷ್ಟೊಂದು ಆಡಿದ್ದಿದೆ, ಕುಣಿದಿದ್ದಿದೆ , ನೆಗೆತವಾಗಿದೆ.  ಸಂಜೆ ಶಾಲೆಯಿಂದ ಬಂದು ಏನಾದರು ತಿಂದು ಮತ್ತೆ ಓಡಿದರೆ , ಅದೇ ಮೈದಾನಕ್ಕೆ ನಮ್ಮ ಕಾಲಿನ ಸೆಳೆತ.  ಅಲ್ಲಿ ಪ್ರತಿದಿನ ಸಂಜೆ  ನಾವು ಆಡುತ್ತಿದ್ದ ಗೋಧೂಳಿ ಸಮಯದಲ್ಲಿ ಆರೆಸ್ಸೆಸ್ ನವರ ತಂಡ ಬಂದು ನಮಗೆ ಏನಾದರು ಹೇಳಿ ಕೊಡುತ್ತಿದ್ದರು. ಆಡಲು ಬರುವ ಮಕ್ಕಳನ್ನೆಲ್ಲ ಕರೆದು ಶಿಸ್ತಿನಿಂದ ಸಾಲಾಗಿ
ಕುಳ್ಳಿರಿಸುತಿದ್ದರು. ” ನಮಸ್ತೆ ಸದಾ ವತ್ಸಲೆ  ಮಾತೃಭೂಮಿ”  ಎಂಬ ಹಾಡನ್ನು ಎದೆಗೆ ಅಡ್ಡಲಾಗಿ ಕೈ ಇಟ್ಟು ಅವರು ಹೇಳಿದಂತೆ ರಾಗವಾಗಿ ಹಾಡುತ್ತಿದ್ದೆವು. ಈಗಲೂ ಆ  ಹಾಡು ನನಗೆ ಬಾಯಿಪಾಠ . ಆ ಬಾಲ್ಯದಲ್ಲಿ ಈ  ಶಿಸ್ತಿಗೆ ಒಂದೆರಡು ಘಳಿಗೆ ನಮ್ಮನ್ನು ನಾವೇ ಒಡ್ಡಿಕೊಂಡದ್ದೇ ವಿಶೇಷವಾಗಿತ್ತು.  ಆಟ ತಪ್ಪಿದರು ಇದು ನಮಗೆ ಖುಷಿ ಕೊಡುತ್ತಿತ್ತು.  ಆ ಮೈದಾನದಲ್ಲಿ ನನ್ನೆಲ್ಲಾ ಬಾಲ್ಯದ ಕನವರಿಕೆಗಳು ಹಾಗೆ ಅಡಗಿದೆ. ಸೈಕಲ್ ತುಳಿದದ್ದು , ಬಿದ್ದದು, ಎದ್ದದ್ದು ,  ಕೋಕೋ, ಲಗೋರಿ ಆಡಿದ್ದು , ಜಗಳ , ಮುನಿಸು , ಕೋಪ,  ತಾಪ, ಪ್ರೀತಿ ಇನ್ನು ಹಲವಾರು ಮೊದಲುಗಳ ಸ್ಪರ್ಶದ ಧೂಳು ಆ ಮೈದಾನದಲ್ಲಿದೆ.
ಬೆಳಗಾದರೆ ಕಾಡು ಮಾವಿನ ಹಣ್ಣು ಹೆಕ್ಕುವುದಕ್ಕೆ ಹೋಗುವ ಪೈಪೋಟಿ ಇದೆಯಲ್ಲಾ, ಅದು ನನಗೆ ಬಾಲ್ಯದ ಬಲು ಸುಂದರ ಸಂಪಾಜೆಯ ನೆನಪು . ಆ ಮುರುಟಿ ,  ಗುಡಿ ಹೊದ್ದು ಮಲಗುವ ಸುಖದ ಬೆಳ್ಳಂ ಬೆಳಗ್ಗೆ , ಅದೂ ನಾಲ್ಕು ಅಥವಾ ಐದು ಗಂಟೆಯ ಮುಂಜಾನೆಯ ರಾತ್ರಿಯಲ್ಲಿ ಗುಡ್ಡೆ ಹತ್ತಿ ಕಾಡು ಮಾವಿನ ಹಣ್ಣು ಹೆಕ್ಕಲು ಹೋಗುತ್ತಿದ್ದೆವು.  ನನ್ನೊಂದಿಗೆ ಬರುತ್ತಿದ್ದ ನೆರೆಯ ಗೆಳತಿಯರೊಂದಿಗೆ ಪೈಪೋಟಿಯಲ್ಲಿ ಆದರೂ ಜೊತೆಗೆ ಸಾಗುತ್ತಿದ್ದವು.  ನಮ್ಮಿಂದ ಮುಂದೆ ಯಾರೂ ಹೋಗಬಾರದು ಎಂಬ ಕಾರಣಕ್ಕೆ ಅಷ್ಟು ಬೆಳಗ್ಗೆ ಏಳುತಿದ್ದದ್ದನ್ನು ನೆನೆದರೆ ಈಗ ನಗು ಬರುತ್ತದೆ. ಟಾರ್ಚ್ ಬೆಳಕಿನಲ್ಲಿ ನಾನು ನನ್ನ ತಮ್ಮ ಸೇರಿಂದಂತೆ ಇನ್ನು ಒಂದಿಬ್ಬರು ಮಕ್ಕಳು ಹೋಗಿ ಆ ರಾತ್ರಿಯಲ್ಲಿ ಸಣ್ಣ ಬೆಳಕು ಹಾಕಿ ಮಾವಿನ ಹಣ್ಣು ಹುಡುಕುತ್ತಿದ್ದೆವು.  ಬೆಳಗಾದ ಮೇಲೆ ಉಳಿದ ಮಕ್ಕಳೊಂದಿಗೆ ಯಾರಿಗೆ ಹೆಚ್ಚು ಸಿಕ್ಕಿದೆ ಎಂಬ ತರ್ಕ ಬೇರೆ ಇರುತಿತ್ತು. ನಮ್ಮನ್ನು ಬೆಳಗ್ಗೆ ಏಳಿಸಲೇಬೇಕೆಂದು ತಂದೆಗೆ ಹಠ ಮಾಡಿ ತಾಕೀತು ಮಾಡುತ್ತಿದ್ದೆವು. ಪರೀಕ್ಷೆ ಇರುವಾಗಲೂ ಹೀಗೆ ಏಳುತ್ತಿದ್ದೆವು ಎಂದು ದಯವಿಟ್ಟು ಅಂದುಕೊಳ್ಳಬೇಡಿ. ಅಂದು ಕುಂಭಕರ್ಣ ತಲೆ ಮೇಲೆ ಕೈ ಇಟ್ಟಂತೆ ನಿದ್ದೆ ಹೊಡೆಯುತ್ತಿದ್ದೆವು . ಬೆಳಗಾದ ಮೇಲೆ ಆ ಹಣ್ಣನ್ನು ತೊಳೆದು ಸಣ್ಣ ತೂತು ಮಾಡಿ ರಸ ಹೀರುತ್ತಾ ಆಹಾ ರುಚಿಯ ಸ್ವರ್ಗ ಸುಖ ಅನುಭವಿಸುತ್ತಿದ್ದೆವು. ಆ ಬಾಲ್ಯದಲ್ಲಿ ಹೀಗೆ ಹಣ್ಣು, ಹೂವು,  ಕಾಯಿ, ಅಂತ ಪ್ರಕೃತಿಯ ಮಡಿಲು ನೀಡಿದ್ದನ್ನೆಲ್ಲ ತಿನ್ನುತ್ತಿದ್ದೆವು.  ಮನೆ ಎದುರಿನ ಪೇರಳೆ ಮರದ ಹಣ್ಣನ್ನು ಬಲಿಯುವ ಮೊದಲೇ ಕಿತ್ತಾಗುತ್ತಿತ್ತು. ವಿಶೇಷವೆಂದರೆ ಆ ಮರದ ಒಂದೇ  ಒಂದು ಕಾಯಿ ವ್ಯರ್ಥವಾಗಿರಿಲಿಕ್ಕಿಲ್ಲ. ಒಂದೇ ಒಂದು ಹಣ್ಣು ಯಾವ ಹಕ್ಕಿಗೂ ಸಿಕ್ಕಿರಲಿಕ್ಕಿಲ್ಲ.  ಹಕ್ಕಿಗಳೆಲ್ಲ ನಮಗೆಷ್ಟು ಶಾಪವಿಟ್ಟಿದ್ದಾವೋ ಗೊತ್ತಿಲ್ಲ. ಆ ಐದನೇ ತರಗತಿಯ ನನ್ನ ಬಾಲ್ಯದಲ್ಲಿ ಪೇರಳೆ ಕೊಯ್ಯಲೆಂದು ಅಭ್ಯಾಸವಾಗಿ ಚೆನ್ನಾಗಿ ಮರ ಹತ್ತಲು ಕಲಿತಿದ್ದೆ. ಮನೆ ಎದುರಿನ ಗೇರು ಮರಕ್ಕು ಸರಸರನೆ ಕೋತಿಯಂತೆ ನಾವೆಲ್ಲ ಮಕ್ಕಳು ಹತ್ತಿ ಬಿಡುತ್ತಿದ್ದೆವು.
ಮೈದಾನದ ಮೂಲೆಯಲ್ಲೊಂದು ಅಂದದ ಸಂಪಿಗೆ ಮರವಿತ್ತು. ಹತ್ತಲು ಖುಷಿಯಾಗುವ ಆ  ಮರ ಹತ್ತಿ , ಹೂವು ಕೊಯ್ದು ಮೂಸಿ ನೋಡಿ ಆನಂದ ಪಡುತ್ತಿದ್ದೆವು.  ಹಾಗೆ ಕೆಮ್ಮಣ್ಣಿನ ಶಾಲೆ ದಾರಿಯಲ್ಲಿ ಮೇಲೆ ನಡೆದು ಕೊಂಡು ಹೋದಾಗ ತೋಟದಲ್ಲೊಂದು ಅಂಜೂರ ಮರವಿತ್ತು.  ಅದನ್ನು ನೋಡಲೆಂದೇ ಅಲ್ಲಿಗೆ ಹೋಗುತ್ತಿದ್ದೆವು. ನಾನು ಮೊದಲು ನೋಡಿದ ಅಂಜೂರ ಮರವದು. ಮತ್ತೆ ನನ್ನ ಜೀವನದಲ್ಲಿ ಅಂಜೂರ ಮರ ನೋಡಿದ್ದೆ ಇತ್ತೀಚೆಗೆ ಒಮ್ಮೆ. ಅದರ ತುಂಬ ಕೆಳಗೆ ನೆಲಕ್ಕೆ ತಾಕುವಂತೆ ಹಣ್ಣು ನೋಡಿ ಆಶ್ಚರ್ಯಪಟ್ಟ ನೆನಪು ಇನ್ನೂ ಹಸಿರಾಗಿದೆ. ಅದರ ಮರ ಹತ್ತಲು ಅವಕಾಶವಿಲ್ಲ ಎಂಬ ಬೇಸರವೂ ಆಗಿತ್ತು. ಒಟ್ಟಿನಲ್ಲಿ ಅಂದು ಕಲಿತ ಮರ ಹತ್ತುವ ವಿದ್ಯೆಯನ್ನು ನಾನೀಗಲು ಬಿಟ್ಟಿಲ್ಲ. ಕಲಿತು ಮೂರು ದಶಕವಾದರು ಈಗಲೂ  ಒಮ್ಮೊಮ್ಮೆ ಕ್ಕೊಕ್ಕೋ ಕೊಯ್ಯುವಾಗ ಗಳೆಗೆ ಸಿಗದ್ದನ್ನು ಅಥವಾ ಕೊಯ್ಯಲು ಕಷ್ಟವಾಗುವ ಕೊಕ್ಕೋವಿದ್ದರೆ ಮರ ಹತ್ತಿಯೆ ಕೊಯ್ಯುತ್ತೇನೆ.  ಈ ಪೇರಳೆ, ಮಾವು,ಗೇರು , ಸಂಪಿಗೆ ಇದ್ಯಾವುದು ನಮ್ಮದಲ್ಲ. ಎಲ್ಲ ಶಾಲೆಯ ಆಡಳಿತಕ್ಕೆ ಸೇರಿದ್ದು . ಅಸಲಿಗೆ ನಮ್ಮ ಮನೆಯು ಹೇಗಿದ್ದರೂ ನಮ್ಮದಲ್ಲ. ಟೀಚರ್ಸ್  ಕ್ವಾಟರ್ಸ್  ಎಂದ ಮೇಲೆ ಸರಕಾರಕ್ಕೆ ಇಂತಿಷ್ಟು ಅಂತ ನೀಡಿ ಇರುವ  ಅವಕಾಶ ಅಷ್ಟೇ. ನಮ್ಮದು ಅಂತ ಸರಕಾರದ ಹಿತ್ತಲಲ್ಲಿ  ಅಪ್ಪ ನೆಟ್ಟ ನೆಟ್ಟ ಒಂದು ಪಪ್ಪಾಯಿ ಮರವಿತ್ತು. ಅದರಿಂದ ಕೂಡ ಪ್ರತಿ ಹಣ್ಣನ್ನು ಕರಾರುವಕ್ಕಾಗಿ ಒಂದನ್ನು ಕಾಗೆಗೆ ಸಿಗದಂತೆ ಬಿಡದೆ ಕೊಯ್ಯುತಿದ್ದೆವು.
ಪಪ್ಪಾಯಿ ಮರ ಮೇಲಕ್ಕೆ ಹೋದಂತೆ ತಂದೆ ದೊಡ್ಡ ಮರದ ಕುರ್ಚಿ ಇಟ್ಟು ಗಳೆಯಲ್ಲಿ ಎಳೆದು ಹಾಕುತ್ತಿದ್ದರು. ನಾನು,  ತಮ್ಮ ನೆಲಕ್ಕೆ ಬೀಳದಂತೆ ಆಚೀಚೆ ಗೋಣಿ ಹಿಡಿಯುತ್ತಿದ್ದೆವು . ಮರ ಇನ್ನೂ ಎತ್ತರಕ್ಕೆ ಹೋದಂತೆ ಕುರ್ಚಿ ಮೇಲೆ ಮರದ ಸ್ಟೂಲ್ ಇಟ್ಟು ಹತ್ತುತ್ತಿದ್ದರು. ನಾವು ಭಯವಾದರು ಅಲುಗಾಡದಂತೆ ಹಿಡಿದು ಕೊಳ್ಳುತಿದ್ದೆವು , ಜೊತೆಗೆ ಅಮ್ಮನೂ ಸೇರಿಕೊಳ್ಳುತ್ತಿದ್ದರು. ಆಗೆಲ್ಲ ಕಾಗೆಗಳು ನಮ್ಮನ್ನೇ ಗುರಾಯಿಸಿ ನೋಡಿ ಹಾರಿಹೋದಂತೆ ಭಾಸವಾದದ್ದು ಸುಳ್ಳಲ್ಲ!  ಕಷ್ಟವಾದರೂ , ಒಳ್ಳೆದು  ಎಂದು ಕೊಯ್ದು  ಹಣ್ಣು ತಿನ್ನಿಸುವ ಅಪ್ಪನ  ವಿಚಾರಧಾರೆಯೆ ಮತ್ತೆ ನಮಗೆಲ್ಲ ಬಂದಿದೆ.
ಇದೆಲ್ಲದರ ನಡುವೆ ಶಾಲೆಯ ಬಾವಿಯಿಂದ ನಮ್ಮ ಕ್ವಾಟರ್ಸ್  ಮನೆಗೆ ನೀರು ಹೊತ್ತು ತರಬೇಕಿತ್ತು . ಐದರಿಂದ ಏಳನೇ ತರಗತಿವರೆಗೆ ಮೂರು ವರ್ಷ ಅಪ್ಪ ಅಮ್ಮನೊಂದಿಗೆ ಹೋಗಿ ಅದೆಷ್ಟು ಕೊಡ ನೀರು ಹೊತ್ತಿರುವೆ ಲೆಕ್ಕ ಇಟ್ಟಿಲ್ಲ. ಅಪ್ಪನೊಂದಿಗೆ ಜಗಳವಾಡಿ ಸ್ವತಃ ನಾನೇ ಬಾವಿಯಿಂದ ನೀರು ಸೇದುತ್ತಿದ್ದೆ . ಬಾವಿಗೆ ಹೋಗಿ ಬರುವ ದಾರಿಯೇನು ಹತ್ತಿರವಿರಲಿಲ್ಲ . ಮೈದಾನದ ಬದಿಯಿಂದ ಶಾಲೆಯನ್ನು ಬಳಸಿಯೇ ಹೋಗಿ ಬರಬೇಕಾಗಿತ್ತು.   ಬೃಹತ್ ನೆಕ್ಕರೆ ಮಾವಿನ ಮರದ ಬೇರುಗಳ ಮೇಲೆ ಆ ಪುಟ್ಟ ಸೊಂಟದಲ್ಲಿ ಅಥವಾ ತಲೆಯಲ್ಲಿ ಪ್ಲಾಸ್ಟಿಕ್ ಬಿಂದಿಗೆ ಹೊತ್ತು ಏನೇನೋ ಕಲ್ಪನೆಯಲ್ಲಿ ತೇಲಾಡುತ್ತಾ, ಬಳುಕುತ್ತಾ ಬರುವಾಗ ಭಾರವೇ ತಿಳಿಯುತ್ತಿರಲಿಲ್ಲ ಅಥವಾ ಭಾರವೇ ಭಾವನೆಯಾಗುತಿತ್ತಾ  ಗೊತ್ತಿಲ್ಲ!  ಪಕ್ಕದ ಕ್ವಾಟ್ರಸ್ ಶಿಕ್ಷಕಿಯೊಬ್ಬರು ಚಂದನೆಯ ಕಶಿ ಗುಲಾಬಿ ಗಿಡ ನೆಟ್ಟಿದ್ದರು. ತೆಳು ಕೇಸರಿ ಬಣ್ಣದ  ಆ ಗುಲಾಬಿಯ ಅಂದ ನನ್ನ ಮನಸ್ಸಿನಲ್ಲಿ ಇನ್ನು ಅಚ್ಚಳಿಯದೆ ಉಳಿದಿದೆ . ಆ ಗಿಡ ದಾಟಿ ಬರುವಾಗ ಕೊಡಪಾನ ಹೊತ್ತುಕೊಂಡು ಕೈ ನೋಯುತಿದ್ದರು , ಅರೆಕ್ಷಣ ನಿಂತು  ಗುಲಾಬಿ ನೋಡಿಯೇ ಬರುತ್ತಿದ್ದೆ. ಅದಾಗಿ ಮೂರನೆಯ ಮನೆ ನಮ್ಮದು. ಹೀಗೆ ಶಾಲೆಯಿಂದ ಬಂದು ಎಲ್ಲದಕ್ಕೂ ನೀರು ತುಂಬಿಸಿ ಮತ್ತೆ ಮೈದಾನಕ್ಕೆ ಓಟ ಕಿತ್ತರೆ ಮನತಣಿಯುವಷ್ಟು  ಮತ್ತು  ಮೈ  ದಣಿಯುವಷ್ಟು ಆಟವಾಡಿ , ದಾರಿ ಅಲ್ಪ ಸ್ವಲ್ಪ ಕಾಣುವಷ್ಟು ಕತ್ತಲೆಯಾಗುತ್ತ ಬಂದಾಗ ಮನೆಗೆ ಹೋಗುತ್ತಿದ್ದೆವು. ಸಂಪೂರ್ಣ ಓಟದಲ್ಲೆ ನಮ್ಮ ಕಾಲು ಇರುತಿತ್ತು. ಇಷ್ಟೊಂದು ಆಟ ಓಟದ ಪರಿಣಾಮವೋ ಏನೋ ಪ್ರೈಮರಿಯ ಅದೇ ಶಾಲೆಯಲ್ಲಿ ಕ್ರೀಡೆಯಲ್ಲಿ ಗುರುತಿಸಿಕೊಂಡಿದ್ದೆ. ಪ್ರೌಢ ಶಾಲೆಗೆ ಹೋದಾಗ ಕ್ರೀಡೆಯಲ್ಲಿ ಯಾವಾಗಲೂ ಮುಂದಿದ್ದೆ . ಶಟಲ್ ಮತ್ತು ಬಾಲ್ ಬ್ಯಾಡ್ಮಿಂಟನ್, ವಾಲಿಬಾಲ್, ರಿಲೇ, ನೂರುಮೀಟರ್ ಓಟ , ಹೈಜಂಪ್ , ಹಡಲ್ಸ್ ಇಷ್ಟರಲ್ಲಿ ನಾನು  ಯಾವಾಗಲು  ಇರುತ್ತಿದ್ದೆ. ಡಿಗ್ರಿ ಮತ್ತು
ಬಿ.  ಇ ಡಿ ಮಾಡುವಾಗಲೂ ಕ್ರೀಡೆಯಲ್ಲಿ ಹಲವಾರು ಬಹುಮಾನ ಬಾಚಿಕೊಂಡಿದ್ದೆ. ಅದಕ್ಕೆಲ್ಲಾ ಮೂಲ ಕಾರಣ ಈ ನನ್ನ ಮೈದಾನ. ನನ್ನೆರಡು  ಅಂಗೈಗಳು ಅಷ್ಟೇ,  ತುಂಬಾ ಗಟ್ಟಿ  ಮತ್ತು ತೋಳುಗಳು ದಪ್ಪ ಹೆಚ್ಚು ಇವೆ. ಕೈಗಳಿಗೆ   ಹೆಚ್ಚು ಶಕ್ತಿ ಕೊಟ್ಟ ಕೆಲಸ, ನೀರೇಳೆದ  ಪರಿಣಾಮ ಕೈಗಳು ಈ ರೀತಿ ಇವೆ ಎಂದು ಅಮ್ಮ ಹೇಳುತ್ತಿದ್ದರು. ಬಾವಿಯಿಂದ ನೀರು ತರುವ ಕೆಲಸ ವಿನಃ ಬೇರೇನೂ ಕೆಲಸ ನಮಗೆ ಹೇಳುತ್ತಿರಲಿಲ್ಲ. ಈ ಕೆಲಸವನ್ನು ತುಂಬಾ ಖುಷಿಯಿಂದಲೇ ಮಾಡುತ್ತಿದ್ದೆವು.  ಏಕೆಂದರೆ ಆ ಪ್ಲಾಸ್ಟಿಕ್ ಕೊಡಪಾನವನ್ನು ಆಳದ ಬಾವಿಗೆ ಹಾಕಿ ಆಟವಾಡುತ್ತ ನೀರು ತುಂಬಿಸುವ  ಆ ಕಲೆ ನಮಗೆ ಖುಷಿ ಕೊಡುತ್ತಿತ್ತು. ಬಿಂದಿಗೆ ಅಡ್ಡಕ್ಕೆ ಬಿದ್ದು , ನಾಜೂಕಾಗಿ ಚೂರು ಚೂರೇ ನೀರು ತುಂಬುವಾಗ  ಬಾಲ್ಯದ ಮುಗ್ಧ ಮನಕ್ಕೆ ತುಂಬಾ ಖುಷಿಯಾದ ಅನುಭವ ಈಗಲೂ ಹೊಸತರಂತೆ ನೆನಪಾಗುತ್ತಿದೆ. ಮತ್ತೆ ಮುಕ್ಕಾಲು ಕೊಡಪಾನ ತುಂಬಿದ ಮೇಲೆ ಮೇಲೆಳೆದು, ನೀರೊಳಗೆ ಬಿಡುವುದು ಹೀಗೆ ತುಂಬಾ ಸಲ ಮಾಡಿ ಪೂರ್ತಿ ತುಂಬಿಸುವ ಖುಷಿಗೆ ಇನ್ಯಾವುದೂ ಸರಿಸಮ ಎಲ್ಲ ಎನ್ನುವ  ಆಗಿನ ಭಾವನೆ ಈಗ ಆಲೋಚಿಸಿದಾಗ ಆ   ಸಮಯವೇ ಚೆಂದವೆನಿಸುತ್ತದೆ. ಮತ್ತೆ ಬಾವಿಕಟ್ಟೆಯಲ್ಲಿ ಕಾಲಿಡಲು ಎಂದೇ ಇರುವ ಗುಂಡಿ ಜಾಗದಲ್ಲಿ ಬಲಗಾಲಿಟ್ಟು ಎಳೆದು ಎಳೆದು ಕೊಡಪಾನ ಮೇಲೆ ತರುವ ಸುಖದ ಮುಂದೆ ಇನ್ನೇನಿರಲು ಸಾಧ್ಯ  ಆ  ಬಾಲ್ಯದಲ್ಲಿ? ಒಮ್ಮೊಮ್ಮೆ  ಮೇಲೆ ಬಂದಾಗ ಬಿಂದಿಗೆಯ ಕುತ್ತಿಗೆಯ ಹಗ್ಗ ಸಡಿಲವಾಗಿ ಬಿಡುತ್ತಿತ್ತು. ಬಿಂದಿಗೆ ಅದೆಷ್ಟು ಸಲ ನೀರೊಳಗೆ  ಬಿದ್ದು ಬಿಡುತ್ತಿತ್ತು. ಅದನ್ನು ತೆಗಿಯುವ ಸಾಹಸಿಗಳು ನಮ್ಮ ನಡುವೆ ಇದ್ದರು. ಒಟ್ಟಿನಲ್ಲಿ ಬಾವಿಕಟ್ಟೆಯ ಬದುಕು ತುಂಬಾ ಚೆಂದವಿತ್ತು.  ಕ್ವಾಟ್ರಸ್ ನ ನಾಲ್ಕು ಮನೆಯವರು , ಪಕ್ಕದೆರಡು ಮನೆಯವರು ಅಲ್ಲಿಗೆ ನೀರಿಗೆ ಬರುತ್ತಿದ್ದರು . ಹೋಗಿ ನೀರು ಹೊಯ್ದು ಮತ್ತೆ ವಾಪಸ್ ಒಂದೇ ಉಸಿರಿಗೆ ಓಡಿಕೊಂಡೆ  ಬರುತ್ತಿದ್ದೆವು. ಬೇಗ ನೀರು ತುಂಬಿಸಿ ಆಡಲು ಓಡುವ ತವಕ. ಆ ನಮ್ಮ ಪ್ರಾಥಮಿಕ ಶಾಲೆ, ಮೈದಾನ , ಕೆಮ್ಮಣ್ಣಿನ ಗುಂಡಿ ಗುಡುಪು  ರಸ್ತೆ ಇವೆಲ್ಲವೂ ಬಲು ಸುಂದರ ವಾತಾವರಣ.  ತಗ್ಗಿನಲ್ಲಿದ್ದ ಮೈದಾನದಿಂದ ಶಾಲೆಯ ಕಡೆಗೆ  ಹತ್ತಿ ಹೋಗಲು ಮೆಟ್ಟಿಲುಗಳಿದ್ದವು . ಮುಂದೆ ಯಾವ ಶಾಲೆಯಲ್ಲಿಯೂ ಈ ರೀತಿ ನಾನು ಕಂಡಿರಲಿಲ್ಲ.  ಹದಿನೇಳು ಮೆಟ್ಟಿಲುಗಳಿದ್ದ ಶಾಲೆಯ ಆ ಭಾಗ ನನ್ನ ಬಾಲ್ಯದ ಬದುಕಿನ ಒಂದು ಅಂಗ. ಅಲ್ಲಿಯೇ ನನ್ನ ಬಾಲ್ಯದ ಅದೆಷ್ಟೋ ಸಮಯ ಕುಳಿತು,ಆಡಿ, ಕಳೆದಿರುವೆ.
ಆಗ ನಾವೊಂದು ವಿನೂತನ ಮೆಟ್ಲಾಟ ಎಂಬುದಾಗಿ ಆಡುತ್ತಿದ್ದೆವು. ಕ್ರಿಕೆಟ್ ಆಟದ ಗಾತ್ರದ ಚೆಂಡಲ್ಲಿ , ಕೆಳಗೆ ನಿಂತು ಮೆಟ್ಟಿಲಿಗೆ ಹೊಡೆದು ,ಹಿಡಿಯುವ ರೀತಿಯ ಆಟವದು. ಸುತ್ತಮುತ್ತಲಿಂದ ಸೇರುತ್ತಿದ್ದ ನಮ್ಮೆಲ್ಲ ಮಕ್ಕಳ ಅಚ್ಚುಮೆಚ್ಚಿನ ಆಟವದು. ಆ ಮೆಟ್ಟಿಲಲ್ಲಿ ಇಟ್ಟ ಹೆಜ್ಜೆಗಳಿಗೆ, ಆಡಿದ ಆಟಕ್ಕೆ , ಬಿದ್ದ ಗಾಯಕ್ಕೆ ಲೆಕ್ಕವೇ ಇಲ್ಲ. ಇದರೊಂದಿಗೆ ಅದೇ ಮೆಟ್ಟಿಲಲ್ಲಿ  ಜೊತೆಗೆ, ಶಾಲಾ ಜಗಲಿಯಲ್ಲಿ ಕೂತು ಆಡುತ್ತಿದ್ದ ಕಲ್ಲಾಟ ಮತ್ತು ಕಡ್ಡಿಯಾಟ ಜಗತ್ತಿನಲ್ಲಿಯೇ ಮುದ ಕೊಡುವ ಆಟ ಎಂಬುದಾಗಿ ಆ ಕ್ಷಣಕ್ಕೆ ಅನಿಸಿದ್ದು ಸುಳ್ಳಲ್ಲ. ನಮ್ಮ ಮಕ್ಕಳ ಬಾಲ್ಯದ ಆಟಗಳ ಮುಂದೆ ಈಗಿನ ಮಕ್ಕಳ ಮೊಬೈಲ್ ಗೇಮ್ ಏನು ಸುಖ ಕೊಡುತ್ತದೆ ಎಂಬುದು ಅವರಿಗೆ ಪ್ರೀತಿ. ಹಳ್ಳಿಯ ಈ ಆಟಗಳಿಗೆಲ್ಲ ನಮ್ಮಂತೆಯೇ ಮುದಿತನ ಆವರಿಸುತ್ತ ಬಂದಿದೆ. ಬಾಲ್ಯವೆಲ್ಲ ಕಳೆದ ಮೇಲೆ ಆಗೊಮ್ಮೆ ಈಗೊಮ್ಮೆ ಕಲ್ಲೆಲ್ಲ ಹೆಕ್ಕಿ ಸುಮ್ಮನೆ ಸವರಿ ಆಡಿದಂತೆ ಮಾಡಿದ್ದು ಸುಳ್ಳಲ್ಲ.
ಇನ್ನು ಖುಷಿ ಕೊಡುತ್ತಿದ್ದದ್ದು ಏನೆಂದರೆ ಐದನೇ ತರಗತಿಯಲ್ಲಿದ್ದಾಗ ಐದು ಪೈಸೆಯ ಶುಂಠಿ ಮಿಠಾಯಿ,  ಅಕ್ರೋಟ್ ಎನ್ನುವ  ಚಾಕ್ಲೇಟ್ ತಿನ್ನುತ್ತಿದ್ದೆವು.  ನನ್ನ ಬಾಲ್ಯದಲ್ಲಿ ಐದು ಪೈಸೆಗೆ ಚಾಕ್ಲೇಟ್ ಇತ್ತು ಎಂಬುದು ನನಗೀಗ ಅಚ್ಚರಿಯನ್ನುಂಟುಮಾಡುತ್ತದೆ. ಸಿಪ್ಪೆ ಇಲ್ಲದ ಅಚ್ಚ ಬಿಳಿ ಬಣ್ಣದ ಈಗಿನ ಒಂದು ರೂಪಾಯಿ ನಾಣ್ಯದ ಆಕಾರದ ಆ ಶುಂಠಿ ಮಿಠಾಯಿ ಆಗ ನಮಗೆಲ್ಲ ಅಚ್ಚುಮೆಚ್ಚು. ಇದು ಚೂರು ಚೂರೇ ಖಾರ ಸಿಹಿ ಇದ್ದುದರಿಂದ ಅದಕ್ಕೆ ಶುಂಠಿ ಮಿಠಾಯಿ ಅನ್ನುತಿದ್ದರೋ ಏನೋ ಗೊತ್ತಿಲ್ಲ. ಅಂಗಡಿಯವರು ಪೇಪರಲ್ಲಿ ಸುತ್ತಿ ಕೊಟ್ಟರು , ಆ ಪೇಪರ್ ಬಿಸಾಕಿ ಎಲ್ಲರ ಕೈಗೂ ಒಂದೊಂದು  ತುರುಕುತ್ತಿದ್ದೆವು .
ಆ ಪುಟ್ಟ ಕೈಯ ಕೆಂಬಣ್ಣದೊಂದಿಗೆ ಅದನ್ನು ಮುಷ್ಠಿ ಮಾಡಿ ಹಿಡಿದುಕೊಂಡು ಮಿಠಾಯಿ ಒದ್ದೆ ಆಗಿ ಬಿಳಿ ಬಣ್ಣ ಹೋಗಿ ಕೆಂಬಣ್ಣವಾಗುತ್ತಿತ್ತು. ಮತ್ತೆ ಅದನ್ನೇ ಯಾವ ಹೇಸಿಗೆ ಇಲ್ಲದೆ ಬಾಯಿಗೆ ಹಾಕಿಕೊಳ್ಳುತ್ತಿದ್ದೆವು. ಹೀಗೆ ನಮ್ಮ ರಂಗು ರಂಗಿನ ಬಾಲ್ಯವು  ಮಿಠಾಯಿಯಂತೆ ನಿಧಾನಕ್ಕೆ ಕರಗುತ್ತಾ  ಹೋಯಿತು ಎಂಬುದನ್ನು ನೆನೆದಾಗ ವಿಷಾದದ  ನಿಟ್ಟುಸಿರು ಹೊರಹೊಮ್ಮುತ್ತದೆ.  ನಮಗಾಗ ತಂದೆ  ಮಿಠಾಯಿಗೆಂದು  ಇಪ್ಪತೈದು ಪೈಸೆ ಇಲ್ಲವೇ ಐವತ್ತು ಪೈಸೆ ಕೊಡುತ್ತಿದ್ದರು .   ಐದು ಪೈಸೆಗೆಲ್ಲ ತಿಂದ ಕಾಲದಲ್ಲಿ ನನಗೆ ಇದ್ದ ಪ್ರಾಯ ಈಗ ನನ್ನ ಮಗಳಿಗಾಗಿದೆ.  ಅವಳಿಗೆ ಚಾಕ್ಲೇಟ್ ಗೆ ಐವತ್ತು  ರೂಪಾಯಿ ಕೊಡಬೇಕು. ಐದು ರೂಪಾಯಿಯ ಒಂದು ಚಾಕ್ಲೇಟ್ ಅವರೀಗ ತಿನ್ನುತ್ತಾರೆ. ನನ್ನೊಂದಿಗೆ  ಈಗಲೂ ನಾವು ಬಳಸುತ್ತಿದ್ದ ಐದು, ಹತ್ತು, ಇಪ್ಪತ್ತು, ಇಪ್ಪತೈದು , ಐವತ್ತು ಪೈಸೆಯ ನಾಣ್ಯಗಳು ತುಂಬಾ ಇವೆ. ಬಾಲ್ಯದಲ್ಲಿ ತೆರೆಯಲು ಬಾರದ ಪೌಡರ್ ಡಬ್ಬದೊಳಗೆ  ತುಂಬಿಸಿಟ್ಟ ಈ ನಾಣ್ಯಗಳನ್ನು ತುಂಬಾ ವರ್ಷದ ನಂತರ ತೆರೆದಾಗ ಉಪಯೋಗಕ್ಕೆ ಬರಲಿಲ್ಲ.
ನೆನಪಿನ ಸರಮಾಲೆ ಮಾತ್ರವಲ್ಲ ಆಗಿನ ಸಂತಸವು ಕಣ್ಮುಂದೆ ಬರುತ್ತಿದೆ.  ನಾವು ಚಿಕ್ಕವರಿರುವಾಗ ನೆಂಟರಿಷ್ಟರು ಹೇಳದೆ ಕೇಳದೆ ಮನೆಗೆ ಬಂದಾಗ  ಮನಸ್ಸಿಗೆ ಅತೀವ ಸಂತಸವಾಗುತ್ತಿತ್ತು. ಅಮ್ಮನ ಅಮ್ಮ ಮೂರ್ನಾಡವ್ವ ಬಂದು ಒಂದು ತಿಂಗಳೆಲ್ಲ ಇರುತಿದ್ದಾಗ ಮಕ್ಕಳಾದ ನಮಗೆಲ್ಲ ಏನೋ ಅನಿರ್ವಚನೀಯ ಖುಷಿ.  ಮಡಿಲಲ್ಲಿ ತಲೆಯಿಡಲು ಹೇಳಿ ಹೇನುಪುರ್ಕಿಯಾದ ನನ್ನ ತಲೆಯಿಂದ ಒಂದೊಂದೇ ಹೇನು ಹೆಕ್ಕುತ್ತಿದ್ದರು. ಚಿಕ್ಕ ಕುಂಞಿ ಕತ್ತಿಯನ್ನು ಹಿಡಿದುಕೊಂಡು ಅದರ ತುದಿಯಲ್ಲಿ ಹೇನುಗಳನ್ನು ಸಾಯಿಸಿಬಿಡುತ್ತಿದ್ದರು. ಆಗ  ಹಾಗೆ ಕಣ್ಮುಚ್ಚಿ ಸುಖದ ನಿದ್ದೆಯನ್ನು ಅನುಭವಿಸುತ್ತಿದ್ದೆ. ಅವರು ಬಂದು ಇದ್ದಾಗಲೆಲ್ಲ ಹೇನು ತೆಗೀರಿ ಎಂಬುದಾಗಿ ದುಂಬಾಲು ಬೀಳುತ್ತಿದ್ದೆ. ದೊಡ್ಡದಾಗುವವರೆಗೆ ಅವ್ವ ಬಂದಾಗ ನನಗಿದು ತುಂಬಾ ಖುಷಿ ಕೊಡುತ್ತಿತ್ತು.  ಮತ್ತೆ ಯಾರಾದರೂ ಅಮ್ಮನ ಅಕ್ಕ ತಂಗಿಯರು ಅಥವಾ ತವರಿಂದೆಲ್ಲ ಒಮ್ಮಿಂದೊಮ್ಮೆಲೆ ಬಂದಿಳಿಯುವ ಪರಿಪಾಠವಿತ್ತು. ಸಂಜೆಯ ಆಟೋ ಸರ್ವೀಸ್ , ಕೃಷ್ಣ ಬಸ್ ನಿಲ್ಲುತ್ತದೆಯೋ ಎಂದು ರಜೆ ಬಂದಾಗ ಕಿವಿಗೊಟ್ಟು ಆಲಿಸುತ್ತಿದ್ದದ್ದು ಇದೆ. ಆಗ ಫೋನ್ ಇಲ್ಲದ ನಮಗೆ  ನೆಂಟರು ಮನೆಗೆ ಬಂದಾಗಲೇ ತಿಳಿಯುತ್ತಿತ್ತು.
ರಜಾದಲ್ಲಿ  ನೆಂಟರ ಮಕ್ಕಳೆಲ್ಲ ಸೇರಿ ಒಂದೊಂದು ಮನೆಗೆ ಒಟ್ಟಿಗೆ ದಾಂಗುಡಿ ಇಡುತಿದ್ದೆವು .  ನಮ್ಮದು ತಂದೆಯ ಕಡೆ ಒಂಭತ್ತು ಜನ ಮತ್ತು ಅಮ್ಮನ ಕಡೆ ಏಳು ಜನ ಅಣ್ಣ, ತಮ್ಮ, ಅಕ್ಕ ತಂಗಿಯರು. ಬಹಳ ದೊಡ್ಡಬಳಗವಾದ್ದರಿಂದ ರಜೆಯಲ್ಲಿಯು ಆಟಕ್ಕೆ ಮಕ್ಕಳು ಬೇಕಾದಷ್ಟು ಇರುತ್ತಿದ್ದರು. ಒಂದಾದ ಮೇಲೆ ಒಂದರಂತೆ ನಮ್ಮ ಸವಾರಿ ನೆಂಟರ ಮನೆಗೆ ಹೋಗುತ್ತಿತ್ತು. ಹೆಚ್ಚಿನ ಆಟ ಮಣ್ಣನ್ನು ಕಲಸಿ ರೊಟ್ಟಿಯಂತೆ ತಟ್ಟಿ ಹೂ ಎಲೆ ಇಟ್ಟು ಅಲಂಕಾರ ಮಾಡುವುದರಲ್ಲಿಯೆ ಇರುತ್ತಿತ್ತು. ತೆಂಗಿನ ಚಿಪ್ಪಿಗಳಲ್ಲಿ ತರೇವಾರಿ ಎಲೆ, ಹೂವು , ಮಣ್ಣು ಹಾಕಿ ಕಲಸಿ ವಿವಿಧ ಭಕ್ಷ್ಯಗಳನ್ನು ಮಾಡಿ ಬಡಿಸುತಿದ್ದೆವು. ಆಟಿಕೆಗಳು ಇಲ್ಲದ ಆ ಬಾಲ್ಯದಲ್ಲಿ ನಮ್ಮ ಸೃಜನಶೀಲತೆಯ ಆಟಿಕೆಗಳು ಪುಟ ಪುಟನೆ ಪುಟಿಯುತ್ತಿದ್ದವು. ನಿಜ ಹೇಳಬೇಕೆಂದರೆ ಈಗಲೂ ನನಗೆ ಕೆಲವೊಮ್ಮೆ ಸಂಪಾಜೆ ಪರಿಸರದ ಕನಸುಗಳು ಬಿದ್ದಿವೆ.  ಎಂತ  ವಿಶೇಷ ಅಲ್ಲವೇ?
ಹೀಗೆ ನನ್ನನ್ನು ಕರಾಗಿಸಿದ್ದು , ಪಳಗಿಸಿದ್ದು, ಸಂಪಾಜೆ ಯ ಬಾಲ್ಯದ ದಿನಗಳು ಎಂಬುದನ್ನು ಹೆಮ್ಮೆಯಿಂದ ಹೇಳುವಷ್ಟು ಮುದವಾಗಿತ್ತು. ಅದರಲ್ಲೂ ಮುಖ್ಯವಾಗಿ ಶಾಲೆ ಬಿಟ್ಟ ನಂತರದ ಸಂಪಾಜೆಯ ಸಂಜೆಗಳು. ಏಳನೇ ತರಗತಿ ಮುಗಿಯುವುದರೊಳಗೆ ಮೂರು ಕಡೆ ಶಾಲೆಗಳಿಗೆ ವರ್ಗಾವಣೆ ಆಗಿ ಹೋದರು ಕೂಡ, ಕೊನೆಗೆ ನೆಲೆ ನಿತ್ತ ಮತ್ತು ಹೆಚ್ಚಿನ ವರ್ಷಗಳಿದ್ದ  ಸಂಪಾಜೆಯೆ ನನಗೆ ಆಪ್ಯಾಯಮಾನ .  ಆದರು ದೇವರಕೊಲ್ಲಿ ಮತ್ತು ಬಂಟ್ವಾಳ ಊರುಗಳು ನನ್ನೊಳಗೆ ಆತ್ಮೀಯವಾಗಿ ಇಳಿದಿತ್ತು. ನಾನೀಗಲು   ಸಂಪಾಜೆಯಿಂದಾಗಿ ದೇವರಕೊಲ್ಲಿ ದಾಟಿ ಮಡಿಕೇರಿಗೆ ಹೋಗುವಾಗಲೆಲ್ಲ ಎರಡು ಕಡೆ ನಾವಿದ್ದ ಮನೆ ರಸ್ತೆ ಬದಿಗೆ ಕಾಣಿಸುವಾಗ  ಮನದಲ್ಲಿ ಅನಿರ್ವಚನೀಯ ಸಂತೋಷ ಮತ್ತು ಧನ್ಯತಾಭಾವ ಮೂಡುತ್ತದೆ. ಮೂರು ಮತ್ತು ನಾಲ್ಕನೇ ತರಗತಿಯಲ್ಲಿ ಬಂಟ್ವಾಳದಲ್ಲಿ ಇದ್ದಾಗ ತಿಂಗಳಿಗೊಮ್ಮೆ ನಮ್ಮ ಸವಾರಿ ಅಮ್ಮನೊಂದಿಗೆ ಸಂಪಾಜೆಗೆ ಬರುತಿತ್ತು. ಬಸ್ಸಿನಲ್ಲಿ ಹೋಗಿ ಬರುವಾಗ ವಾಂತಿ ಮಾಡುತಿದ್ದ ಕಾರಣ , ತದನಂತರ ತಂದೆಯೆ ಹೆಚ್ಚಾಗಿ ಬಂಟ್ವಾಳಕ್ಕೆ ಬರಲು ಪ್ರಾರಂಭಿಸಿದರು. ಬಂಟ್ವಾಳದ ಮುಲ್ಕಾಜೆ ಮಾಡ ಎಂಬ ಊರಲ್ಲಿದ್ದ ಬಾಡಿಗೆ ಮನೆ ರಸ್ತೆ ಬದಿಯಲ್ಲಿತ್ತು .  ಹಾಗಾಗಿ ಆಟವಾಡಲು ಅಷ್ಟೊಂದು ಅವಕಾಶ ಇರಲಿಲ್ಲ. ಜೊತೆಗೆ ಶಾಲೆ ಬಿಟ್ಟ ನಂತರ ನಮಗೆ ಮಕ್ಕಳು ಯಾರು ಸಿಗುತ್ತಿರಲಿಲ್ಲ.  ಅಲ್ಲಿ ನಾನು ಸೌದೆ ಒಲೆಯಲ್ಲಿ ಅಡುಗೆ ಮಾಡುವುದನ್ನು ನೋಡುವಂತಾಯಿತು. ಮತ್ತೆ ಬಂಟ್ವಾಳ ಬಿಟ್ಟ ಮೇಲೆ ಮದುವೆಯಾಗುವರೆಗೆ ಬೆಂಕಿಯಡುಗೆ ನಮ್ಮಲಿರಲಿಲ್ಲ.  ಈಗ ಬೆಂಕಿಯಡುಗೆ ಕರಗತವಾದ ಮೇಲೆ ಬಾಲ್ಯದ ಒಂದೆರಡು ವರ್ಷದ ನೆನಪುಗಳು ಆಗಾಗ್ಗೆ ಮರುಕಳಿಸುತ್ತವೆ.   ಬಂಟ್ವಾಳದಲ್ಲಿರುವಾಗ ಹೇಗೆಂದರೆ ಊರಲ್ಲೊಬ್ಬರ ಮನೆಯಲ್ಲಿ ಟಿ.ವಿ. ಇತ್ತು. ಸಂಜೆಯಾದಾಗ ಮಕ್ಕಳು ,ಮರಿ ,ದೊಡ್ಡವರೆನ್ನದೆ
ಟಿ. ವಿ ನೋಡಲು ಆ ಮನೆಗೆ ಹೋಗುತ್ತಿದ್ದರು.  ಆ  ಮನೆಯ ಎದುರಿನ ಪ್ರಾಂಗಣವು ವಿಶಾಲವಾಗಿತ್ತು. ಆದಿತ್ಯವಾರದಂದು   ಸೆರೆ   ಇಲ್ಲದಂತೆ  ಜನ ಜಮಾಯಿಸುತ್ತಿದ್ದರು. ನಾನು ಅವರ ಮಧ್ಯೆ ನುಸುಳಿ ಕುಳಿತುಕೊಳ್ಳುತ್ತಿದ್ದೆ. ಆದರೆ ನನಗೆ ಮಾತ್ರ ಟಿ. ವಿ . ಅಷ್ಟೊಂದು ಆಕರ್ಷಣೆ  ಆಗಲೇ ಇಲ್ಲ,  ಅಂದಿನಿಂದ ಇಂದಿನವರೆಗೂ ಅಷ್ಟೇ. ಸಂಪಾಜೆಯಲ್ಲಿ ಅಪರೂಪಕ್ಕೆ ನಮ್ಮೊಡನೆ ಆಡುತ್ತಿದ್ದ ಗೆಳತಿಯ ಮನೆಗೆ ಟಿ. ವಿ. ನೋಡಲು ಹೋಗುತ್ತಿದ್ದೆವು. ಆದರೆ ಅಲ್ಲು ಸ್ವಲ್ಪ ಹೊತ್ತು ಕುಳಿತ ನಂತರ  ಮತ್ತದೇ ಮೈದಾನಕ್ಕೆ ಬರುತ್ತಿದ್ದೆವು. ಆಗ ಮೊಬೈಲ್ ಬಾರದೆ ಇದ್ದದ್ದು ಭಾರಿ ಒಳ್ಳೇದಾಯ್ತು ಎಂದು ಈಗ ನನಗನಿಸುತ್ತದೆ. ಇಲ್ಲದಿದ್ದರೆ ಸುಂದರ ಬಾಲ್ಯದಿಂದ ನಾವೆಲ್ಲ ವಂಚಿತರಾಗುತಿದ್ದೆವು.
ಸವಿ ಸವಿ ನೆನಪು ಸಾವಿರ ನೆನಪು ಎಂಬಂತೆ ಸಂಪಾಜೆಯ ರಸ್ತೆಯಲ್ಲಿ ಹೋಗುವಾಗಲೆಲ್ಲ ತುಟಿಯಂಚಲ್ಲಿ ಕಿರುನಗೆ ಮುನ್ನಲೆಗೆ ಬರುತ್ತದೆ.  ಆ ಸೈಕಲ್ ಕಲಿತ ಮೈದಾನದಲ್ಲಿ ಚಕ್ರದ ಗುರುತಿನ್ನು ಮಾಸಿಲ್ಲವೆಂಬಂತೆ ಅನಿಸಿ , ಅಚಾನಕ್ಕಾಗಿ ಹೋದಾಗ ಹುಡುಕಾಡಿ ಬಂದಿದ್ದೇನೆ . ಅದೇ ಕೆಂಬಣ್ಣದ ಹಾದಿಯ ಅಂಕು ಡೊಂಕು ನೆಲದ ಹಾದಿಯಲ್ಲೊಮ್ಮೆ ನಡೆದು, ನಾನು ಕಳೆದ ದಿನಗಳನ್ನು ಹುಡುಕಲು ಬಂದಿರುವೆ ಎಂದುಸುರಿದೆ ನನ್ನಷ್ಟಕ್ಕೆ…ನಗುತ್ತ ನಿಂತ ನೆಲಕ್ಕೆ ನನಗೆ ಉತ್ತರ ಕೊಡಬೇಕು ಎಂದೆನಿಸಲಿಲ್ಲ . ಮೌನವೇ ಅಲ್ಲಿ ಉತ್ತರವಾಗಿತ್ತು.
ಸಂಗೀತ ರವಿರಾಜ್
                                  ಚೆಂಬು
ವಿಳಾಸ:
                 ಸಂಗೀತ ರವಿರಾಜ್
                  ಬಾಲಂಬಿ ಅಂಚೆ
                  ಚೆಂಬು ಗ್ರಾಮ,
                   ಮಡಿಕೇರಿ ತಾಲ್ಲೂಕು ,
                   ಕೊಡಗು.
                    ಚಲನವಾಣಿ: 9731641886