ತಿಳಿನೀರಿನಂತೆ ಬರೆಯುವ ಅಶ್ವತ್ಥರ ಅಂಕಣ; ಸಿಂಟೆಕ್ಸ್ ಗಳು

ಸಿಂಟೆಕ್ಸ್ ಗಳು
ನಮ್ಮಲ್ಲೊಬ್ಬ ಮೇಧಾವಿ ಹೀಗೆ ನಾಲ್ಕು ವರ್ಷಗಳ ಹಿಂದೆ ಎಸಿ ರೂಮಿನ ಆಯಕಟ್ಟಿನ ಕುರ್ಚಿಗೆ ಅಂಟಿಕೊಂಡ. ಆತನಿಗೆ ಇಲ್ಲಿನ ಭಾಷೆಯ ಗಾಳಿ ಗಂಧವು ಗೊತ್ತಿಲ್ಲ ಅನ್ನುವುದು ಒಂದು ಸತ್ಯವಾದರೆ ನಾಕು ವರ್ಷಗಳಾದರೂ ಭಾಷೆಯನ್ನು ಕಲಿಯುವ ಲಕ್ಷಣಗಳೇ ಇಲ್ಲವೆನ್ನುವುದು ಮತ್ತೊಂದು ಸತ್ಯ. ಬೇರೆ ಬೇರೆ ಭಾಷಿಕರನ್ನು ಅತ್ಯಂತ ಸೌಜನ್ಯ ಮತ್ತು ಸಂಯಮದಿಂದ ಕಾಣುವ ನಮಗೆ ಕಾಲಾನುಕಾಲ ಇಂತ ದ್ರೋಹಿಗಳು ತಂದೊಡ್ಡುವ ಅವಾಂತರಗಳು ಅವಘಡಗಳು ಒಂದರ ಮೇಲೊಂದು ಉರುಳಿಕೊಂಡು ನಮ್ಮ ಬದುಕಿಗೆ ಕಂಟಕವಾಗಿ ಬಿಡುತ್ತವೆ. ಆತ ಮಾತ್ರ ತನ್ನನ್ನು ಬರಮಾಡಿಕೊಂಡ ತನ್ನ ನೆಚ್ಚಿನ ಮಾಲೀಕನಿಗೆ ಬಹುದೊಡ್ಡ ಸಿಂಟೆಕ್ಸಾಗಿ ರೂಪಾಂತರಗೊಳ್ಳುವುದೇ ಬಹು ಮುಖ್ಯ ಅಜೆಂಡ.

ಸಿಂಟೆಕ್ಸ್ ಎಂದರೆ ಎಲ್ಲರಿಗೂ ಗೊತ್ತೇ ಇದೆ. ಚಂಬು ಮುಂಚ ಬಕೇಟು ಇತ್ಯಾದಿಗಳ ಅನ್ವರ್ಥ ಹೆಸರಿನಲ್ಲಿ ತಮ್ಮ ತಮ್ಮ ಬೇಳೆ ಬೇಯಿಸಿಕೊಳ್ಳಲು ಆಡಳಿತ ಸಿಬ್ಬಂದಿಗಳ ಜೊತೆ ಅಥವಾ ಆಡಳಿತ ಮಂಡಳಿಗೆ ವಿಶ್ವಸ್ಥರೆನ್ನುವಂತೆ ನಾಟಕ ಮಾಡಿಕೊಂಡೆ ಕಾಲ ಕಳೆಯುವ ಕಸರತ್ತು ಮೈಗೂಡಿಸಿಕೊಂಡವರು. ಮತ್ತೊಂದಷ್ಟು ಸೋಗಲಾಡಿಗಳ ಜೊತೆ ಯಾವ ರೀತಿಯಲ್ಲಾದರೂ ನಂಟಸ್ತಿಕೆ ಬೆಳೆಸಿಕೊಂಡವರು. ಈ ನಂಟಸ್ತಿಕೆಯ ಮೂಲಕ ನಾನೇ ಎಲ್ಲರಿಗಿಂತ ಶ್ರೇಷ್ಠ ಅನ್ನುವಂತೆ ಬಿಲ್ಡಪ್ ಕೊಡುವವರು. ತನ್ನ ಸುತ್ತಮುತ್ತಲು ತನಗೆ ರಕ್ಷಾ ಕವಚಗಳಂತ ಬೋಪರಾಕ್ ಹೌದಪ್ಪ ಹೌದಮ್ಮಗಳಿಗೆ ಸಕಾಲಕ್ಕೆ ಸಕಲವನ್ನು ತುಂಬಿಸುತ್ತೇನೆನ್ನುತ್ತಲೆ ತನ್ನ ಬೊಕ್ಕಸ ತುಂಬಿಸಿಕೊಳ್ಳುವುದು. ತನ್ನದೇ ಜಾತಿ ಧರ್ಮ ಭಾಷಿಕರನ್ನು ಪುಸಲಾಯಿಸಿ ಗುಂಪುಗಾರಿಕೆ ಬೇಹುಗಾರಿಕೆಗಳನ್ನು ನಡೆಸುವುದು. ಇತರರನ್ನು ಮಾನಸಿಕ ದೌರ್ಜನ್ಯ ಮಾಡುವುದು. ಹಿಟ್ಲರ್ ಆಡಳಿತ ನಡೆಸುವುದು. ತನ್ನ ಕುರ್ಚಿಯ ನಾಲ್ಕು ಕಾಲುಗಳನ್ನು ಗಟ್ಟಿಗೊಳಿಸಿಕೊಳ್ಳುವುದು. ಇಂಥವುಗಳನ್ನು ಅಕಾಡೆಮಿಕ್ ಸಿಂಟೆಕ್ಸುಗಳೆಂದರೆ ತಪ್ಪೇನು ?
ನಾನಿರುವುದು ಶಿಕ್ಷಣದ ಕಾಂಪೌಂಡಿನಲ್ಲಿರುವ ಕಾರಣ ಅದರ ಕುರಿತಾಗೆ ಬರೆಯುವುದು ನನಗೊಂದಷ್ಟು ಸರಳವೂ ಹೌದು, ಸೂಕ್ತವೂ ಹೌದು. ಹೀಗಾಗಿ ಎರಡು ನಾಲಿಗೆ ಉಸರವಳ್ಳಿ ತಲೆಹಿಡುಕ ಅವಕಾಶವಾದಿ ಇಂತಹ ಸಾದಾಸೀದ ವ್ಯಕ್ತಿತ್ವಗಳು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ ಈ ಸಿಂಟೆಕ್ಸ್ ಮತ್ತೊಂದು ರೀತಿಯ ಕಾರ್ಯ ವೈಖರಿಗೆ ಹೆಸರಾದದ್ದು ಮತ್ತು ಇದರ ವಸ್ತು ವಿಭಿನ್ನವಾದದರಿಂದ ಈ ಅನ್ವರ್ಥವೇ ಮೇಲಿನ ಎಲ್ಲವುಗಳಿಗಿಂತ ಹಿರಿದು ಮತ್ತು ವೈಶಿಷ್ಟವೂ ಅನ್ನುವುದು ನನ್ನ ಅಭಿಪ್ರಾಯ. ಹಾಗಂತ ಮನೆಯ ಮೇಲಿರುವ ಸಿಂಟೆಕ್ಸ್ ಗಳನ್ನು ತಪ್ಪಾಗಿ ತಿಳಿಯುವುದು ಬೇಡ ಏಕೆಂದರೆ ಆ ಸಿಂಟೆಕ್ಸ್ ಗಳು ಚಳಿ ಮಳೆ ಗಾಳಿಗೆ ಮೈಯೊಡ್ಡಿ ಮನೆ ಮಂದಿಗೆಲ್ಲ ತಂಪಾದ ಮತ್ತು ಶುದ್ಧವಾದ ನೀರುಣಿಸುವ ಪ್ರಾಮಾಣಿಕ ಪ್ರಯತ್ನವಂತು ಮಾಡುತ್ತವೆ. ಆದರೆ ನಾನು ಹೇಳುತ್ತಿರುವ ಈ ಅನ್ವರ್ಥನಾಮದ ಸಿಂಟೆಕ್ಸ್ ಗಳು ತನ್ನ ಸುತ್ತಲಿರುವವರನ್ನೇ ಸದ್ದಿಲ್ಲದೆ ಮುಳುಗಿಸಿ ಬಿಡುತ್ತವೆ. ಮತ್ತಿವರಿಗೆ ಸಂಸ್ಥೆಯ ಎಲ್ಲಾ ಸವಲತ್ತುಗಳು ಕಾಲಕಾಲಕ್ಕೆ ಬೇಕು ಇತರರಿಗೆ ಮಾತ್ರ ಮಾನದಂಡ ಅರ್ಹತೆ ಯೋಗ್ಯತೆ  ಮುಂತಾದವುಗಳು ಬೇಕು. ಒಂದರ್ಥದಲ್ಲಿ ಮಾಲೀಕರೇನೂ ಇದರಿಂದ ಹೊರತಲ್ಲ ತಮ್ಮ ಹಿತ್ತಾಳೆ ಕಿವಿಯನ್ನು ನಾಲ್ಕು ಗೋಡೆಗಳಿಗೂ ಅಂಟಿಸಿಕೊಂಡು ಮೇಲಿನ ಸಿಂಟೆಕ್ಸ್ ಗಳು ಕೊಚ್ಚಿಕೊಳ್ಳುವ ಬಡಾಯಿಗಳಿಗೆ ತಾಳ ಹಾಕುತ್ತಾ ಕೋಟಿ ಕೋಟಿ ನೋಟುಗಳಲ್ಲಿ ಮುಳುಗಿರುತ್ತಾರೆ.
ರಾಜಕೀಯ ಎನ್ನುವುದು ಶಿಕ್ಷಣ ರಂಗದಲ್ಲೇ ಹೆಚ್ಚು. ಬಹುತೇಕ ಶಿಕ್ಷಣ ಕ್ಷೇತ್ರಗಳು ರಾಜಕಾರಣಿಗಳ ಒಡೆತನ ಇರುವುದರಿಂದಲೂ ಅಥವಾ ಗೆಳೆತನ ಇರುವುದರಿಂದಲೂ ಶೈಕ್ಷಣಿಕ ಅವಯವಗಳಲ್ಲಿ ಸರಾಗ ರಕ್ತ ಸಂಚಾರಕ್ಕೆ ಅನುವು ಮಾಡಿಕೊಂಡಿರುತ್ತವೆ. ಮಾಧ್ಯಮಗಳು ಕುಲಗೆಟ್ಟದ್ದು ಈಗಂತೂ ಜಗಜ್ಯಾಹಿರು. ರಾಜಕಾರಣ ಕೆಟ್ಟ ಕೊಲಸು. ಇನ್ನೂ ಧರ್ಮದ ಬಗ್ಗೆ ಮಾತುಗಳಿಲ್ಲ. ಶಿಕ್ಷಣವೆನ್ನುವುದು ನೋಡುವುದಕ್ಕೆ ರೆಕ್ಕೆ ಪುಕ್ಕ ಕಟ್ಟಿಕೊಂಡು ಆಗಸಕ್ಕೆ ಹಾರಿಹೋಗಿದೆ. ಆದರೆ ಅದೆತ್ತ ಕಡೆ ಸಾಗಿದೆ ಎನ್ನುವುದು ಯಾರಿಗೂ ತಿಳಿಯದು.
ಕಿಟಕಿ ಬಾಗಿಲು ನಾಲ್ಕು ಗೋಡೆಗಳು ಕುರ್ಚಿ, ಬೆಂಚು ಬೋರ್ಡು ಕಂಪ್ಯೂಟರ್ ಇಷ್ಟಿದ್ದರೆ ಒಂದು ಶಾಲೆ ಅಥವಾ ಕಾಲೇಜು ಅಂದುಕೊಳ್ಳುವುದು ಮೇಲ್ನೋಟಕ್ಕೆ ಸುಲಭ. ಆದರೆ ಒಳಗೆ..? ದೇವರಿಗೂ ಗೊತ್ತಿಲ್ಲ!
ಅಲ್ಲಿ ಜಾತಿ ಉಸಿರಾಡುತ್ತಿದೆ. ಧರ್ಮ ಆವರಿಸಿಕೊಂಡಿದೆ. ಶಿಕ್ಷಕರಿಗೆ ಸಿಗಬೇಕಾದ ಸಂಬಳ ಇನ್ಕ್ರಿಮೆಂಟು ಗ್ರಾಚುಟಿ ರಜೆಗಳು ಇಂಥವುಗಳ ಮೇಲೆ ಈ ಮೇಧಾವಿ ಸಿಂಟೆಕ್ಸ್ ಗಳು ನಿರಂತರ ಗದಾ ಪ್ರಹಾರ ಮಾಡುತ್ತವೆ. ತನ್ನ ಒಡೆಯನನ್ನು ಮೆಚ್ಚಿಸುವ ಸಲುವಾಗಿ ಇತರರ ಹೊಟ್ಟೆ ಹೊಡೆದು ಖಾತೆಯನ್ನು ಹಿಗ್ಗಿಸುತ್ತವೆ. ಡೆವಲಪ್ಮೆಂಟ್ ಕರಿಕುಲರ್ ಆಕ್ಟಿವಿಟೀಸ್ ಶೈಕ್ಷಣಿಕ ಸವಲತ್ತುಗಳು ಒತ್ತಟ್ಟಿಗಿರಲಿ.. ಕನಿಷ್ಠಪಕ್ಷ ಟಾಯ್ಲೆಟ್ಟು ನೀರು ಗಾಳಿ ಇಂತವುಗಳಿಗೂ ಬರ ತಂದು ವಾತಾವರಣವನ್ನು ಕುಲಗೆಡಿಸುತ್ತವೆ.
ಎಂತೆಂಥವೋ ಅಧಿಕಾರಿಗಳು ಕಮಿಟಿಗಳು ಸಂಘ ಸಂಸ್ಥೆಗಳು ಸೂಟ್ಕೇಸ್ ಸಂಸ್ಕೃತಿಗೆ ಮುಗಿಬಿದ್ದು ಇಲ್ಲದ್ದನ್ನೇ ಇದೆ ಎಂದು ತೋರಿಸುವ ಕಾಗದದ ಚೂರುಗಳ ಮೇಲೆ ಸಹಿ ಬರೆದು ಮುದ್ರೆ ಒತ್ತಿ ಅಸ್ತು ಅನ್ನುತ್ತವೆ. ಪಾಪ ಬಡಪಾಯಿ ಶಿಕ್ಷಕ  ಲಕ್ಷ ಲಕ್ಷ ಸುರಿವ ನತದೃಷ್ಟ ವಿದ್ಯಾರ್ಥಿ ಒಬ್ಬರನ್ನೊಬ್ಬರು ಎದುರಾಗುವ ಸನ್ನಿವೇಶಗಳು ಮಾತ್ರ ಬೆಳಿಗ್ಗೆ 9:00 ರಿಂದ ಸಂಜೆ 4ರವರೆಗೆ ನಡೆದೇ ಇರುತ್ತದೆ.
ಎಲ್ಲೆಡೆಯೂ ಕಂಪ್ಯೂಟರ್ ಸ್ಕ್ರೀನ್ ಕಾಣುತ್ತದೆ ಅದರೊಳಗಡೆ ಮತ್ತೇನು ಇರುವುದಿಲ್ಲ. ಇದು ಇಂದಿನ ನಾಲ್ಕು ಗೋಡೆಗಳ ಒಳಗಿನ ಕಥೆಗಳು. ಒಮ್ಮೆ ಯೋಚಿಸಿ ನೋಡಿ ಸಿಕ್ಕಸಿಕ್ಕ ಕುರ್ಚಿಗೆ ಅಂಟಿಕೊಂಡು ಕೂರಲು ಆ ತೊರೆಯುವ ಸಿಂಟೆಕ್ಸ್ ಗಳು ದೊಡ್ಡ ದೊಡ್ಡ ವಿಶ್ವವಿದ್ಯಾಲಯಗಳಲ್ಲಿ ಪಿಎಚ್ಡಿ ಡಬಲ್ ಡಿಗ್ರಿ ಕರತಲಾಮಲಕ ಅರೆದು ಕುಡಿಯುತ್ತವಂತೆ. ಆದರೆ ಈ ಅಧಿಕಾರ ಹಣಕ್ಕಾಗಿ ವಿನಯ ವಿವೇಕ ಅಂತಃಕರಣ ಪ್ರಾಮಾಣಿಕತೆಗಳನ್ನು ಕುಂಡಿಕೆಳಗೆ ಇರಿಸಿಕೊಂಡು ಶಿಕ್ಷಣವನ್ನು ನಾವು ಉತ್ತುಂಗಕ್ಕೆ ಏರಿಸಿ ಬಿಡುತ್ತೇವೆ ಅನ್ನುತ್ತಲೇ ಮೌಲ್ಯಗಳನ್ನು ಪಾತಾಳಕ್ಕೆ ತುಳಿಯುತ್ತಿವೆ. ಇಂಥ ಅಯೋಗ್ಯರು ಶಾಲಾ-ಕಾಲೇಜುಗಳಲ್ಲಿ ಅದರಲ್ಲೂ ಖಾಸಗಿ ಸಂಸ್ಥೆಗಳಲ್ಲಿ ಇಲಿ ಹೆಗ್ಗಣಗಳಂತೆ ನೆಲದೊಗುರುತ್ತಿವೆ. ಕಾಲಕ್ರಮೇಣ ಕಟ್ಟಡವನ್ನೇ ನೆಲಸಮ ಮಾಡಿಬಿಡುತ್ತವೆ. ಇವುಗಳಿಗೆ ಮದ್ದು ಕೊಡುವುದು ಯಾರು?
* ಅಶ್ವತ್ಥ ಕಲ್ಲೇದೇವರಹಳ್ಳಿ.