ಆರ್ ಟಿ ವಿಠ್ಠಲಮೂರ್ತಿ; ಯತ್ನಾಳ್ ಬಗ್ಗುತ್ತಿಲ್ಲ ವಿಜಯೇಂದ್ರ ಬಿಡುತ್ತಿಲ್ಲ
ಯತ್ನಾಳ್ ಬಗ್ಗುತ್ತಿಲ್ಲ
ವಿಜಯೇಂದ್ರ ಬಿಡುತ್ತಿಲ್ಲ
ಕಳೆದ ವಾರ ದಿಲ್ಲಿಗೆ ಹೋದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಪಕ್ಷದ ವರಿಷ್ಟರಾದ ಅಮಿತ್ ಷಾ ಮತ್ತು ಜಗತ್ ಪ್ರಕಾಶ್ ನಡ್ಡಾ ಅವರನ್ನು ಭೇಟಿ ಮಾಡಿದ್ದಾರೆ.ಈ ಭೇಟಿಯ ಸಂದರ್ಭದಲ್ಲಿ ತಮಗೆ ಕಿರಿಕಿರಿಯಾಗುತ್ತಿದ್ದ ಎರಡು ವಿಷಯಗಳ ಬಗ್ಗೆ ಪ್ರಸ್ತಾಪಿಸಿದ ಅವರು,ಈ ಸಮಸ್ಯೆಗೆ ಪರಿಹಾರ ನೀಡದೆ ಹೋದರೆ ಕರ್ನಾಟಕದಲ್ಲಿ ಪಕ್ಷ ಕಟ್ಟುವ ಕೆಲಸಕ್ಕೆ ಹಿನ್ನಡೆಯಾಗುತ್ತದೆ ಎಂದು ವಿವರಿಸಿದ್ದಾರೆ.
ಅಂದ ಹಾಗೆ ವಿಜಯೇಂದ್ರ ಅವರು ಪ್ರಸ್ತಾಪಿಸಿದ ವಿಷಯ ಅಮಿತ್ ಷಾ ಅವರಿಗಾಗಲೀ,ಜಗತ್ ಪ್ರಕಾಶ್ ನಡ್ಡಾ ಅವರಿಗಾಗಲೀ ಹೊಸತೇನಲ್ಲ.ಆದರೆ ಹಲ ದಿನ ಕಳೆದರೂ ಹಳೆಯ ಸಂಗತಿಗಳಿಗೆ ಪರಿಹಾರ ನೀಡದೆ ಹೋದರೆ ತಾವು ಕೆಲಸ ಮಾಡುವುದಾದರೂ ಹೇಗೆ?ಎಂಬುದು ವಿಜಯೇಂದ್ರ ಅವರ ನೋವು.
ಹಾಗಂತಲೇ ಅಮಿತ್ ಷಾ ಹಾಗೂ ನಡ್ಡಾ ಅವರಿಗೆ ಪ್ರತ್ಯೇಕವಾಗಿ ಈ ಮಾತನಾಡಿದ ವಿಜಯೇಂದ್ರ ಅವರು,ಸಾರ್,ಬಸವನಗೌಡ ಪಾಟೀಲ್ ಯತ್ನಾಳ್ ಅವರ ಬಗ್ಗೆ ಈಗಾಗಲೇ ನಿಮ್ಮ ಗಮನಕ್ಕೆ ತಂದಿದ್ದೇನೆ.ಸಿಕ್ಕ ಸಿಕ್ಕಲ್ಲೆಲ್ಲ ಅವರು ಯಡಿಯೂರಪ್ಪನವರ ಬಗ್ಗೆ,ನನ್ನ ಬಗ್ಗೆ ಆರೋಪ ಮಾಡುತ್ತಾ ತಿರುಗುತ್ತಿದ್ದಾರೆ.ಆದರೆ ಅವರು ಏನೇ ಮಾತನಾಡಿದರೂ ಪಕ್ಷ ಕ್ರಮ ಕೈಗೊಳ್ಳುತ್ತಿಲ್ಲ ಎಂಬ ಬಗ್ಗೆ ಹಲವರಿಗೆ ಅಸಮಾಧಾನವಿದೆ.ಹೀಗಾಗಿ ಮೊದಲು ಯತ್ನಾಳ್ ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಿ ಎಂದು ಒತ್ತಾಯಿಸಿದ್ದಾರೆ.
ಹಾಗೆಯೇ ಮುಂದುವರಿದು:ಇವತ್ತು ಯತ್ನಾಳ್ ಅವರ ವಿಷಯದಲ್ಲಿ ಪಕ್ಷ ಕಠಿಣ ನಿರ್ಧಾರ ತೆಗೆದುಕೊಳ್ಳದೆ ಹೋದರೆ ಪಕ್ಷದ ಯಾವ ನಾಯಕರನ್ನಾದರೂ ಟೀಕಿಸಿ,ಅವರ ಮೇಲೆ ಆರೋಪ ಹೊರಿಸಿ ಬಚಾವಾಗಬಹುದು ಎಂಬ ಭಾವನೆ ಬರುತ್ತದೆ.ಹೀಗಾಗಿ ಅದಕ್ಕೆ ಅವಕಾಶ ನೀಡದೆ ಯತ್ನಾಳ್ ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಿ.
ಎರಡನೆಯದಾಗಿ,ಯತ್ನಾಳ್,ರಮೇಶ್ ಜಾರಕಿಹೊಳಿ ಸೇರಿದಂತೆ ಕೆಲ ಮಂದಿ ನಾಯಕರು ಸೇರಿ,ರಾಜ್ಯ ಸರ್ಕಾರದ ವಿರುದ್ಧ ಪ್ರತ್ಯೇಕ ಪಾದಯಾತ್ರೆ ಮಾಡುವುದಾಗಿ ಘೋಷಿಸಿದ್ದಾರೆ.ಈಗಾಗಲೇ ಮೂಡಾ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ರಾಜೀನಾಮೆಗೆ ಒತ್ತಾಯಿಸಿ ನಾವು ಮೈಸೂರು ಚಲೋ ಯಾತ್ರೆ ಮಾಡಿದ್ದೇವೆ.ಮತ್ತು ಈ ಯಾತ್ರೆ ಕೂಡಾ ದೊಡ್ಡ ಮಟ್ಟದ ಯಶಸ್ಸು ಕಂಡಿದೆ.
ಹೀಗಿರುವಾಗ ನಮ್ಮ ಪಕ್ಷದ ಕೆಲವೇ ನಾಯಕರು,ಸರ್ಕಾರದ ವಿರುದ್ಧ ನಾವು ಪ್ರತ್ಯೇಕ ಪಾದಯಾತ್ರೆ ಮಾಡುತ್ತೇವೆ ಎಂದು ಹೊರಟರೆ ರಾಜ್ಯದ ಜನರಿಗೆ ರವಾನೆಯಾಗುವ ಸಂದೇಶವೇನು?ರಾಜ್ಯ ಬಿಜೆಪಿಯಲ್ಲೇ ಒಗ್ಗಟ್ಟಿಲ್ಲ.ಹೀಗಿರುವಾಗ ಇವರು ಸರ್ಕಾರದ ವಿರುದ್ಧ ಏನು ಹೋರಾಡುತ್ತಾರೆ?ಎಂದು ಜನ ಯೋಚಿಸುವುದಿಲ್ಲವೇ?
ಆದ್ದರಿಂದ ಪಕ್ಷದಲ್ಲಿ ಯಾವುದೇ ಅಪಸವ್ಯಗಳಾಗದಂತೆ ನೋಡಿಕೊಳ್ಳಬೇಕೆಂದರೆ ಮೊದಲನೆಯದಾಗಿ ಯತ್ನಾಳ್ ಅವರನ್ನು ಪಕ್ಷದಿಂದ ಉಚ್ಚಾಟಿಸಿ,ಎರಡನೆಯದಾಗಿ,ಪ್ರತ್ಯೇಕ ಪಾದಯಾತ್ರೆ ನಡೆಸುವ ಅಗತ್ಯವಿಲ್ಲ ಎಂದು ರಾಜ್ಯ ಬಿಜೆಪಿಯ ಭಿನ್ನರಿಗೆ ಸ್ಪಷ್ಟವಾಗಿ ಹೇಳಿ ಎಂದು ವಿಜಯೇಂದ್ರ ವಿವರಿಸಿದ್ದಾರೆ.
ಯಾವಾಗ ವಿಜಯೇಂದ್ರ ಈ ವಿಷಯಗಳನ್ನು ಪ್ರಸ್ತಾಪಿಸಿದರೋ?ಆಗ ಪಕ್ಷದ ವರಿಷ್ಟರು:ನೋ,ನೋ ಯಾರೂ ಪ್ರತ್ಯೇಕ ಪಾದಯಾತ್ರೆ ಮಾಡುವ ಅಗತ್ಯವಿಲ್ಲ ಅಂತ ತಕ್ಷಣ ಮೆಸೇಜು ಕೊಡುತ್ತೇವೆ.ಅದಕ್ಕಾಗಿ ನೀವು ಯೋಚಿಸಬೇಡಿ ಎಂದಿದ್ದಾರೆ.
ಆದರೆ ಬಸವನಗೌಡ ಪಾಟೀಲ್ ಯತ್ನಾಳ್ ಅವರ ವಿಷಯ ಬಂದಾಗ:ಈ ವಿಷಯವನ್ನು ನಮಗೆ ಬಿಡಿ.ಸಧ್ಯಕ್ಕೆ ನೀವು ಮತ್ತು ಯತ್ನಾಳ್ ಪರಸ್ಪರ ಒಗ್ಗಟ್ಟಿನಿಂದ ಮುಂದುವರಿಯಿರಿ.ಯಾಕೆಂದರೆ ಇವತ್ತು ಅವರನ್ನು ಪಕ್ಷದಿಂದ ಉಚ್ಚಾಟಿಸಿದರೆ ರಾಂಗ್ ಮೆಸೇಜು ಹೋಗುತ್ತದೆ.ಅದೇ ರೀತಿ ಕರ್ನಾಟಕ ಬಿಜೆಪಿಯಲ್ಲಿ ಎಲ್ಲವೂ ಸರಿಯಿಲ್ಲ ಅಂತ ನಾವೇ ಒಪ್ಪಿಕೊಂಡಂತಾಗುತ್ತದೆ ಎಂದು ಹೇಳಿದ್ದಾರೆ.
ಆದರೆ ಇದನ್ನೊಪ್ಪದ ವಿಜಯೇಂದ್ರ:ಅಲ್ಲ ಸಾರ್,ಪದೇ ಪದೇ ಯತ್ನಾಳ್ ಅವರು ನಮ್ಮ ಮೇಲೆ ಆರೋಪ ಮಾಡುತ್ತಾ ತಿರುಗುತ್ತಿದ್ದರೆ ಮತ್ತು ಅವರು ಹೀಗೆ ಆರೋಪಿಸಿದರೂ ಅವರ ಮೇಲೆ ಕ್ರಮವಾಗುತ್ತಿಲ್ಲ ಎಂದರೆ ಏನರ್ಥ?ಹೀಗಾಗಿ ಮೊದಲು ಯತ್ನಾಳ್ ಅವರನ್ನು ಪಕ್ಷದಿಂದ ಉಚ್ಚಾಟಿಸಿ,ಅಷ್ಟು ಮಾಡಿದರೆ ಉಳಿದವರಿಗೂ ಎಚ್ಚರಿಕೆಯ ಸಂದೇಶ ರವಾನೆಯಾಗುತ್ತದೆ ಎಂದು ಒತ್ತಾಯಿಸಿದ್ದಾರೆ.
ಡೋಂಟ್ ವರಿ ವಿಜೇಂದ್ರಾಜೀ.ಇನ್ನು ಮುಂದೆ ಯಾವ ಕಾರಣಕ್ಕೂ ನಿಮ್ಮನ್ನು ಮತ್ತು ಯಡಿಯೂರಪ್ಪ ಅವರನ್ನು ಬೈದುಕೊಂಡು ಓಡಾಡಬೇಡಿ ಎಂದು ನಾವು ಇವತ್ತೇ ಅವರಿಗೆ ಸೂಚನೆ ನೀಡುತ್ತೇವೆ.ಹೀಗಾಗಿ ತಕ್ಷಣ ಅವರನ್ನು ಉಚ್ಚಾಟನೆ ಮಾಡಬೇಕು ಎಂಬ ಹಠವನ್ನು ಕೈಬಿಡಿ.ನಿಜ,ನಿಮಗೆ ಕಷ್ಟವಾಗುತ್ತದೆ.ಆದರೆ ಪಕ್ಷದ ಹಿತದೃಷ್ಟಿಯಿಂದ ನೀವು ಮತ್ತು ಯತ್ನಾಳ್ ಪರಸ್ಪರ ಕೈಗೂಡಿಸುವುದು ಒಳ್ಳೆಯದು ಎಂದು ಅಮಿತ್ ಷಾ ಮತ್ತು ನಡ್ಡಾ ಅವರು ವಿಜಯೇಂದ್ರ ಅವರಿಗೆ ವಿವರಿಸಿದ್ದಾರೆ.
ಅಲ್ಲಿಗೆ ವಿಜಯೇಂದ್ರ ಅವರ ದಿಲ್ಲಿ ಭೇಟಿ ಫಿಫ್ಟಿ ಫಿಫ್ಟಿ ಸಕ್ಸಸ್ ಎಂಬಂತಾಗಿದೆಯಷ್ಟೇ ಅಲ್ಲ,ರಾಜ್ಯ ಬಿಜೆಪಿಯಲ್ಲಿನ್ನು ಭಿನ್ನರ ಧ್ವನಿ ಕೇಳಿಸುವುದಿಲ್ಲ ಎಂಬ ಲೆಕ್ಕಾಚಾರ ವಿಜಯೇಂದ್ರ ಅವರ ಕ್ಯಾಂಪಿನಲ್ಲಿ ಕಾಣಿಸಿಕೊಂಡಿದೆ.ಗಮನಿಸಬೇಕಾದ ಸಂಗತಿ ಎಂದರೆ ವಿಜಯೇಂದ್ರ ಅವರ ದಿಲ್ಲಿ ಭೇಟಿಯ ನಂತರ ರಾಜ್ಯ ಬಿಜೆಪಿಯ ಭಿನ್ನರ ಸೌಂಡು ಕಡಿಮೆಯೇನೋ ಆಗಿದೆ.ಆದರೆ ಇದು ಎಷ್ಟು ಕಾಲ ಎಂಬ ವಿಷಯದಲ್ಲಿ ಯಾರಿಗೂ ಸ್ಪಷ್ಟತೆಯಿಲ್ಲ.
ಯಾಕೆಂದರೆ ಹಿಂದೆ ಮೌನವಾಗಿರಲು ಸೂಚಿಸಿದರೂ ಯತ್ನಾಳ್ ಮಾತ್ರ ಟೈಮು ನೋಡಿ ಗರ್ನಲ್ಲು ಸಿಡಿಸಿದ್ದಾರೆ.ಹೀಗಾಗಿ ಸಧ್ಯಕ್ಕೆ ಮೌನವಾಗಿರುವಂತೆ ಯತ್ನಾಳ್ ಅವರಿಗೆ,ಪ್ರತ್ಯೇಕ ಪಾದಯಾತ್ರೆ ನಡೆಸದಂತೆ ಭಿನ್ನರಿಗೆ ಸೂಚನೆ ನೀಡಿದ್ದರೂ ಯಾವಾಗ ಅವರು ಯಡಿಯೂರಪ್ಪ ಕ್ಯಾಂಪಿನ ವಿರುದ್ಧ ವೀರಗಾಸೆ ಶುರು ಮಾಡುತ್ತಾರೋ ಗೊತ್ತಿಲ್ಲ ಎಂಬುದು
ಹಲವರ ಅನುಮಾನ.
ಯೋಗಿಗೆ ಮಿತ್ರಕೂಟದ
ಟಿಕೆಟ್ ಕಷ್ಟ?
———————
ಈ ಮಧ್ಯೆ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಿಂದ ಸಿ.ಪಿ.ಯೋಗೇಶ್ವರ್ ಮಿತ್ರಕೂಟದ ಅಭ್ಯರ್ಥಿಯಾಗುವ ಸಾಧ್ಯತೆ ಕ್ಷೀಣವಾಗಿದೆ.ಕಾರಣ?ಕಳೆದ ಚುನಾವಣೆಯಲ್ಲಿ ತಮ್ಮ ಪಕ್ಷ ಗೆದ್ದಿರುವ ಕ್ಷೇತ್ರವನ್ನು ಬಿಟ್ಟುಕೊಡಲು ಕೇಂದ್ರ ಸಚಿವ ಕುಮಾರಸ್ವಾಮಿ ತಯಾರಿಲ್ಲ.
ಕಳೆದ ಗುರುವಾರ ಬಿಜೆಪಿ ನಾಯಕ,ಕೇಂದ್ರ ಸಚಿವ ಪ್ರಲ್ಹಾದ್ ಜೋಷಿ ಮನೆಯಲ್ಲಿ ಸಭೆ ನಡೆದಾಗ ಕುಮಾರಸ್ವಾಮಿ ಇದನ್ನು ಸ್ಪಷ್ಟವಾಗಿ ಹೇಳಿದ್ದಾರೆ.
ಅಂದ ಹಾಗೆ ಈ ವಿಷಯದಲ್ಲಿ ಕುಮಾರಸ್ವಾಮಿ ಬಿಗಿಯಾಗಲು ಹಲವು ಕಾರಣಗಳಿವೆ.ಮೊದಲನೆಯದಾಗಿ ಯೋಗೇಶ್ವರ್ ಅವರು ಮಿತ್ರಕೂಟದ ಕ್ಯಾಂಡಿಡೇಟ್ ಆಗಿ ಗೆದ್ದರೆ ಚನ್ನಪಟ್ಟಣದಲ್ಲಿ ಜೆಡಿಎಸ್ ಗೆ ಕುತ್ತು ಗ್ಯಾರಂಟಿ ಎಂಬುದು ಕುಮಾರಸ್ವಾಮಿ ಅವರ ಆತಂಕ. ಹೀಗಾಗಿಯೆ ಮಿತ್ರಕೂಟದ ಟಿಕೆಟ್ ಸಿಕ್ಕರೆ ಓಕೆ,ಇಲ್ಲದಿದ್ದರೆ ಬಂಡಾಯ ಅಭ್ಯರ್ಥಿಯಾಗುತ್ತೇನೆ ಎನ್ನುತ್ತಿರುವ ಯೋಗೇಶ್ವರ್ ಅವರನ್ನು ನಂಬುವುದು ಹೇಗೆ?ಅಂತ ಮೊನ್ನಿನ ಸಭೆಯಲ್ಲಿ ಕೇಳಿದ ಕುಮಾರಸ್ವಾಮಿ ಇನ್ನೂ ಹಲವು ವಿಷಯಗಳಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
‘ಅಲ್ಲ ಸಾರ್,ಕರ್ನಾಟಕದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಗೆ ನಾನೇ ಕಾರಣ ಅಂತ ಇವರು ಹೇಳಿಕೊಂಡು ಓಡಾಡುತ್ತಿದ್ದಾರಲ್ಲ?ಅದು ಸಾಧ್ಯವಾ?ವಸ್ತುಸ್ಥಿತಿ ಎಂದರೆ ಮೈತ್ರಿಗೆ ಕಾರಣರಾದವರು ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್.ಅವರು ಪಟ್ಟು ಹಿಡಿದ ಕಾರಣಕ್ಕೆ ಇದು ಸಾಧ್ಯವಾಯಿತು.
ಇದೇ ರೀತಿ ಲೋಕಸಭಾ ಚುನಾವಣೆಯಲ್ಲಿ ಡಾ.ಮಂಜುನಾಥ್ ಅವರಿಗೆ ಬಿಜೆಪಿ ಟಿಕೆಟ್ ಸಿಕ್ಕಲು ನಾನು ಕಾರಣ ಅಂತ ಯೋಗೇಶ್ವರ್ ಹೇಳಿಕೊಳ್ಳುತ್ತಿದ್ದಾರೆ.ಆದರೆ ಅದಕ್ಕೂ ಮುನ್ನ ನೀವೇ ಕ್ಯಾಂಡಿಡೇಟ್ ಆಗಿ ಅಂತ ಯೋಗೇಶ್ವರ್ ಅವರಿಗೆ ನಾನು ಹೇಳಿದ್ದೆನಲ್ಲ?ಅವರೇಕೆ ಹಿಂದೆ ಸರಿದರು?ಇದೆಲ್ಲ ಆದ ಮೇಲೆ ಅಮಿತ್ ಷಾ ಅವರು ಬಯಸಿದ ಒಂದೇ ಕಾರಣಕ್ಕೆ ಮಂಜುನಾಥ್ ಅವರಿಗೆ ಟಿಕೆಟ್ ಸಿಕ್ಕಿತು.
ಹೋಗಲಿ,ಮಂಜುನಾಥ್ ಅವರು ಗೆದ್ದರಲ್ಲ?ಅದರಲ್ಲಿ ಯೋಗೇಶ್ವರ್ ಪಾತ್ರ ಏನು?ಚನ್ನಪಟ್ಟಣದಲ್ಲಿ ನಮಗೆ ಸಿಕ್ಕಿದ್ದು ಕೇವಲ ಇಪ್ಪತ್ತು ಸಾವಿರ ಪ್ಲಸ್ ಲೀಡು.ಉಳಿದಂತೆ ಯೋಗೇಶ್ವರ್ ಕ್ಯಾಂಪಿನ ಮತಗಳೆಲ್ಲ ಕಾಂಗ್ರೆಸ್ಸಿಗೆ ಹೋದವು.ಹೀಗೇಕೆ ಆಯಿತು ಅಂತ ಯೋಚಿಸುವುದಕ್ಕಿಂತ ಆ ಮತಗಳನ್ನು ತಂದುಕೊಡಲು ಯೋಗೇಶ್ವರ್ ಅವರಿಗೆ ಆಗಲಿಲ್ಲ ಎಂಬುದಷ್ಟೇ ಸತ್ಯ ಅಲ್ಲವಾ?
ಇರಲಿ,ಅದೆಲ್ಲ ಒಂದು ಕಡೆಗಿರಲಿ,ಮೊನ್ನೆ ಪಾರ್ಲಿಮೆಂಟ್ ಹೌಸಿನಲ್ಲಿ ನಿಮ್ಮ ಮತ್ತು ವಿಜಯೇಂದ್ರ ಅವರ ಜತೆ ಇದ್ದ ರಾಜ್ಯ ಬಿಜೆಪಿ ಉಸ್ತುವಾರಿ ರಾಧಾ ಮೋಹನದಾಸ್ ಅಗರ್ವಾಲ್ ಏನು ಹೇಳಿದರು?ಕುಮಾರಸ್ವಾಮಿಯವ್ರೇ,ಚನ್ನಪಟ್ಟಣ ಕ್ಷೇತ್ರ ನಿಮ್ಮದು.ಅಲ್ಲಿ ಯಾರು ಕ್ಯಾಂಡಿಡೇಟ್ ಆಗಬೇಕು ಅಂತ ನೀವು ನಿರ್ಧರಿಸಿ ಅಂತ ತಾನೇ?ಹಾಗಿದ್ದ ಮೇಲೆ ಮತ್ತೆ ಮತ್ತೆ ಈ ವಿಷಯವನ್ನೇಕೆ ಚರ್ಚಿಸಬೇಕು?ಅಂತ ಕುಮಾರಸ್ವಾಮಿ ನೇರವಾಗಿ ಪ್ರಲ್ಹಾದ ಜೋಷಿ ಅವರಿಗೇ ಕೇಳಿದ್ದಾರೆ.
ಆಗೆಲ್ಲ ಅಲ್ಲಿದ್ದ ನಾಯಕರೊಬ್ಬರು,ಛೇ ಛೇ ಹಾಗಲ್ಲ ಕುಮಾರಣ್ಣ,ಬೇಕಿದ್ದರೆ ಯೋಗೇಶ್ವರ್ ಅವರನ್ನು ನಿಮ್ಮ ಪಾರ್ಟಿಗೆ ಸೇರಿಸಿಕೊಂಡು ಟಿಕೆಟ್ ಕೊಡಬಹುದಲ್ಲ ಎಂಬುದು ನಮ್ಮ ಪ್ರಪೋಸಲ್ಲು ಅಷ್ಟೇ ಎಂದಿದ್ದಾರೆ.
ಆದರೆ ಅದನ್ನು ಬಿಲ್ ಕುಲ್ ಒಪ್ಪದ ಕುಮಾರಸ್ವಾಮಿ,ಈ ವಿಷಯದಲ್ಲಿ ಸೆಂಟ್ರಲ್ ಹೋಂ ಮಿನಿಸ್ಟರ್ ಏನು ಹೇಳುತ್ತಾರೋ ಅದೇ ಫೈನಲ್.ಹೀಗಾಗಿ ಹೆಚ್ಚು ಚರ್ಚೆಯೇ ಬೇಡ ಎಂದಿದ್ದಾರೆ.
ಅಂದ ಹಾಗೆ ಚನ್ನಪಟ್ಟಣ ಕ್ಷೇತ್ರದಲ್ಲಿ ಪಕ್ಷದ ಒಬ್ಬ ಕಾರ್ಯಕರ್ತನನ್ನು ನಿಲ್ಲಿಸುವುದು ಕುಮಾರಸ್ವಾಮಿ ಅವರ ಸಧ್ಯದ ಯೋಚನೆ.ಅದರ ಪ್ರಕಾರ ಲೋಕಲ್ ಲೀಡರು ಜಯಮುತ್ತು ಅವರು ಕ್ಯಾಂಡಿಡೇಟ್ ಆಗುವ ಸಾಧ್ಯತೆ ಜಾಸ್ತಿ.ಒಂದು ವೇಳೆ ಅವರು ಒಪ್ಪದಿದ್ದರೆಮತ್ಯೊಬ್ಬ ಲೀಡರ್ ದೇವರಾಜು ಅವರನ್ನು ಕಣಕ್ಕಿಳಿಸುವುದು ಅವರ ತಿಂಕಿಂಗು.
ಆದರೆ ಇದು ಕಾಂಗ್ರೆಸ್ಸಿನಿಂದ ಕಾರ್ಯಕರ್ತರೊಬ್ಬರು ಕ್ಯಾಂಡಿಡೇಟ್ ಆದರೆ ಮಾತ್ರ ಇಂಪ್ಲಿಮೆಂಟ್ ಆಗುವ ‘ಎ’ ಪ್ಲಾನು.ಒಂದು ವೇಳೆ ಡಿಸಿಎಂ ಇಲ್ಲವೇ ಅವರ ಸಹೋದರ ಕಣಕ್ಕಿಳಿದರೆ ಆಗ ‘ಬಿ’ ಪ್ಲಾನು ಇಂಪ್ಲಿಮೆಂಟ್ ಮಾಡುವುದು ಕುಮಾರಸ್ವಾಮಿ ಯೋಚನೆ.ಆದರೆ ಬಿ ಪ್ಲಾನಿನ ವಿವರ ಏನೋ ಗೊತ್ತಿಲ್ಲ.
ನಿಖಿಲ್ ಸ್ಪರ್ಧೆ ನಿಕ್ಕಿಯಾಯಿತು
———————–
ಇನ್ನು ಮಾಜಿ ಪ್ರಧಾನಿ ದೇವೇಗೌಡರ ಮೊಮ್ಮಗ ನಿಖಿಲ್ ಕಮಾರಸ್ವಾಮಿ ಅವರ ಸ್ಪರ್ಧೆ ಬಹುತೇಕ ನಿಕ್ಕಿಯಾಗಿದೆ.
ಅಂದ ಹಾಗೆ ಮೊನ್ನೆ ಮೊನ್ನೆಯ ತನಕ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ನಿಖಿಲ್ ಕುಮಾರಸ್ವಾಮಿ ಸ್ಪರ್ಧಿಸಲಿ ಎಂಬ ಒತ್ತಾಯ ಇತ್ತಾದರೂ ದೊಡ್ಡ ಗೌಡರಾಗಲಿ,ಕುಮಾರಸ್ವಾಮಿ ಅವರಾಗಲೀ ಅದನ್ನು ಒಪ್ಪಿಲ್ಲ.ಹೀಗಾಗಿ ಚನ್ನಪಟ್ಟಣದಿಂದ ನಿಖಿಲ್ ಕುಮಾರಸ್ವಾಮಿ ಸ್ಪರ್ಧಿಸುವುದಿಲ್ಲ.ಆದರೆ ಈಗ ಬಂದಿರುವ ಮಾಹಿತಿಯ ಪ್ರಕಾರ,ಅವರಿಗೆ ಹೊಸ ಕ್ಷೇತ್ರವನ್ನು ಹುಡುಕಲಾಗಿದ್ದು 2028 ಚುನಾವಣೆಯಲ್ಲಿ ಅವರು ಯಶವಂತಪುರ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ.
ಇದುವರೆಗೆ ಈ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗುತ್ತಿದ್ದ ಜವರಾಯಿಗೌಡ ಅವರೀಗ ವಿಧಾನಪರಿಷತ್ತಿನಲ್ಲಿ ಸೆಟ್ಲ್ ಆಗಿರುವುದರಿಂದ ಯಶವಂತಪುರದ ಕಣಕ್ಕೆ ಪ್ರಾಮಿಸಿಂಗ್ ಕ್ಯಾಂಡಿಡೇಟು ಬೇಕು.
ಈ ಮಧ್ಯೆ ಚುನಾವಣೆಗೂ ಮುನ್ನ ಕ್ಷೇತ್ರ ಪುನರ್ ವಿಂಗಡಣೆ ಆಗಲಿದ್ದು,ಯಶವಂತಪುರ ಕ್ಷೇತ್ರ ಎರಡು ಅಥವಾ ಮೂರು ಹೋಳಾಗಲಿದೆ.
ಈ ಪೈಕಿ ಕ್ಷೇತ್ರದ ಎಂಟನೇ ಮೈಲಿಗಲ್ಲು ಮತ್ತದರ ಸುತ್ತ ಮುತ್ತಲ ಪ್ರದೇಶಗಳಲ್ಲಿ ಹಾಸನ,ಮಾಗಡಿ,ಚನ್ನರಾಯಪಟ್ಟಣ,ಕುಣಿಗಲ್ ಕಡೆಯ ಜನ ಹೆಚ್ಚಾಗಿ ನೆಲೆಸಿದ್ದು,ಈ ಪಾಕೀಟಿನಲ್ಲಿ ಸ್ಪರ್ಧಿಸಿದರೆ ನಿಖಿಲ್ ಕುಮಾರಸ್ವಾಮಿ ಗೆಲ್ಲುವುದು ಸುಲಭ ಎಂಬುದು ಕುಮಾರಸ್ವಾಮಿ ಅವರ ಕೈಲಿರುವ ರಿಪೋರ್ಟು.
ಆರ್.ಟಿ.ವಿಠ್ಠಲಮೂರ್ತಿ