ಜಿಲ್ಲಾ ಒಕ್ಕಲಿಗರ ಮಹಿಳಾ ಸಂಘದ ಮಹಿಳಾ ದಿನಾಚರಣೆ   ಹೆಣ್ತನವೇ ಈ ಪ್ರಕೃತಿಯ ಅಂತಿಮ ಸತ್ಯ; ಡಾ.ಶುಭ ಮರವಂತೆ

ಶಿವಮೊಗ್ಗ: ಹೆಣ್ತನವೇ ಈ ಪ್ರಕೃತಿಯ ಅಂತಿಮ ಸತ್ಯ. ಅದೇ ಈ ಜಗತ್ತನ್ನು ಕಾಪಾಡುವ ಶಕ್ತಿ ಎಂದು ಸಹ್ಯಾದ್ರಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಡಾ. ಶುಭಾ ಮರವಂತೆ ಹೇಳಿದರು.
ಅವರು ಶನಿವಾರ ಸಂಜೆ ಜಿಲ್ಲಾ ಒಕ್ಕಲಿಗರ ಮಹಿಳಾ ಸಂಘದಿಂದ ಆದಿ ಚುಂಚನಗಿರಿ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಇಂದು ನಮ್ಮ ಮುಂದೆ ಇರುವುದು ಪ್ರಬುದ್ಧ ಮಹಿಳೆಯ ಚಿಂತನೆಯಾಗಿದೆ. ಮಹಿಳೆಯರು ತಮಗಿರುವ ಅಡೆ ತಡೆಗಳ ಬಗ್ಗೆ ಯೋಚಿಸದೇ ಅವುಗಳನ್ನು ಮೀರಿ ಚಿಂತಿಸಬೇಕಾಗಿದೆ. ಮಹಿಳೆಯರಿಗೆ ಕೌಟುಂಬಿಕ ವ್ಯಕ್ತಿತ್ವ ಎಷ್ಟು ಮುಖ್ಯವೋ ಸಾಮಾಜಿಕ, ರಾಜಕೀಯ ಮತ್ತು ಆರ್ಥಿಕತೆಯ ವ್ಯಕ್ತಿತ್ವವು ಅಷ್ಟೇ ಮುಖ್ಯವಾಗಿದೆ ಎಂದರು.
ಮನೋ ವೈದ್ಯೆ ಡಾ. ಶುಭ್ರತಾ ಕೆ.ಎಸ್. ಮಾತನಾಡಿ, ಮಹಿಳೆಯರು ತಮ್ಮ ಅಸ್ಮಿತೆಯನ್ನು ಕಂಡುಕೊಳ್ಳಬೇಕಾಗಿದೆ. ತನ್ನ ವ್ಯಕ್ತಿತ್ವಕ್ಕೆ ಒಂದು ಹೆಸರೇ ಇಲ್ಲದಂತೆ ಬದುಕುತ್ತಿರುವ ಅನೇಕ ಮಹಿಳೆಯರು ನಮ್ಮ ಮುಂದಿದ್ದಾರೆ. ಅವರು ತಮ್ಮ ಸ್ವಸಾಮಾರ್ಥ್ಯವನ್ನು ತಿಳಿದುಕೊಳ್ಳಬೇಕಾಗಿದೆ ಎಂದರು.
ಜಿಲ್ಲಾ ಒಕ್ಕಲಿಗರ ಮಹಿಳಾ ಸಂಘದ ಅಧ್ಯಕ್ಷೆ ಭಾರತಿ ರಾಮಕೃಷ್ಣ ಮಾತನಾಡಿ, ಇಂದು ಮಹಿಳೆಯರು ಪುರುಷನಷ್ಟೇ ಅಥವಾ ಅದಕ್ಕೂ ಹೆಚ್ಚು ಸಮಾನಾರಾಗಿದ್ದಾರೆ. ಆದರೂ, ಅನೇಕ ಸಂಕುಲಗಳ ಮಧ್ಯೆ ಬದುಕುತ್ತಿದ್ದಾರೆ. ಅವರಲ್ಲಿ ಆತ್ಮ ವಿಶ್ವಾಸ ಹೆಚ್ಚಿಸುವ ಕೆಲಸವನ್ನು ನಮ್ಮ ಮಹಿಳಾ ಸಂಘಟನೆ ಮಾಡುತ್ತಿದೆ ಎಂದರು.
ವಕೀಲೆ ಸರೋಜ ಚಂಗೊಳ್ಳಿ ಮಾತನಾಡಿ, ಕಾನೂನಿನ ಮಾಹಿತಿಯನ್ನು ಮಹಿಳೆಯರು ತಿಳಿದುಕೊಳ್ಳಬೇಕು. ತನ್ನ ಎಲ್ಲಾ ಕೆಲಸಗಳ ನಡುವೆ ಹೆಣ್ಣಿಗೂ ಸ್ವಾತಂತ್ರ್ಯವಿರುತ್ತದೆ. ಮಹಿಳೆಯರ ರಕ್ಷಣೆಗಾಗಿಯೇ ಅನೇಕ ಕಾಯ್ದೆಗಳಿವೆ. ಆದರೆ, ಅವರಿಗೆ ಅರಿವಿನ ಕೊರತೆ ಇದೆ ಎಂದರು.
ಸಂಘದ ಕಾರ್ಯದರ್ಶಿ ಡಾ.ಟಿ ನೇತ್ರಾವತಿ ಮಾತನಾಡಿ, ಸಹನೆ ಹೆಣ್ಣಿನ ಬಹುದೊಡ್ಡ ಕಾಣಿಕೆ. ಸಮಸ್ಯೆಗಳನ್ನು ಸವಾಲಾಗಿ ಅವರು ಸ್ವೀಕರಿಸಬೇಕು. ಸಾಧನೆಗೆ ಯಾವ ಬಡತನವೂ ಅಡ್ಡಿಯಾಗುವುದಿಲ್ಲ. ಸಂಘ, ಸಮಾಜ, ಸರ್ಕಾರ ಅವರಲ್ಲಿ ಉತ್ಸಾಹ ಮೂಡಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಎಎಸ್ಐ ಹೇಮಲತಾ, ಮಹಾನಗರ ಪಾಲಿಕೆ ಮಾಜಿ ಮೇಯರ್ ಸುವರ್ಣಾ ಶಂಕರ್, ಮಾಜಿ ಸದಸ್ಯೆ ಸುರೇಖಾ ಮುರಳೀಧರ್, ಸಂಘದ ಪದಾಧಿಕಾರಿಗಳು ಸೇರಿದಂತೆ ಮೊದಲಾದವರಿದ್ದರು.
ಇದೇ ಸಂದರ್ಭದಲ್ಲಿ ಮಕ್ಕಳು ಮತ್ತು ಮಹಿಳೆಯರಿಗೆ ನೃತ್ಯ, ರಸಪ್ರಶ್ನೆ, ಸಂಗೀತ, ಲಕ್ಕಿ ಡಿಪ್ ಮುಂತಾದ ಸಾಂಸ್ಕೃತಿಕ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ವಿಜೇತರಿಗೆ ಬಹುಮಾನ ನೀಡಲಾಯಿತು.