ಐಪಿಎಲ್ 2024 ರ ಸಂಪೂರ್ಣ ವೇಳಾಪಟ್ಟಿ ಪ್ರಕಟ

IPL 2024 Full Schedule: ಐಪಿಎಲ್ 2024 ರ ಸಂಪೂರ್ಣ ವೇಳಾಪಟ್ಟಿ ಪ್ರಕಟ

2024 ರ ಲೋಕಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಮೊದಲಾರ್ಧದ ಐಪಿಎಲ್​ನ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದ್ದ ಬಿಸಿಸಿಐ (BCCI) ಇದೀಗ ಐಪಿಎಲ್​ನ ಎರಡನೇ ಹಂತದ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಅಂದರೆ ಇದೀಗ 17ನೇ ಆವೃತ್ತಿಯ ಐಪಿಎಲ್​ನ (IPL 2024) ಪೂರ್ಣ ವೇಳಾಪಟ್ಟಿ ಬಿಡುಗಡೆಯಾದ್ದಂತ್ತಾಗಿದೆ. ಮೇಲೆ ಹೇಳಿದಂತೆ ಇದಕ್ಕೂ ಮುನ್ನ ಬಿಸಿಸಿಐ ಮೊದಲ 21 ಪಂದ್ಯಗಳ ವೇಳಾಪಟ್ಟಿಯನ್ನು ಪ್ರಕಟಿಸಿತ್ತು. ಇದೀಗ ಲೋಕಸಭಾ ಚುನಾವಣಾ ವೇಳಾಪಟ್ಟಿ ಬಿಡುಗಡೆಯಾದ ಬಳಿಕ ಬಿಸಿಸಿಐ ಕೂಡ ಪೂರ್ಣ ವೇಳಾಪಟ್ಟಿಯನ್ನು ಬಿಡುಗಡೆಗೊಳಿಸಿದೆ. ಅದರಂತೆ ಐಪಿಎಲ್ 2024 ರ ಕ್ವಾಲಿಫೈಯರ್ 1 ಮೇ 21 ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದರೆ, ಎಲಿಮಿನೇಟರ್ ಪಂದ್ಯ ಕೂಡ ಮೇ 22 ರಂದು ಇದೇ ಮೈದಾನದಲ್ಲಿ ಅಂದರೆ ಅಹಮದಾಬಾದ್‌ನಲ್ಲಿ ನಡೆಯಲಿದೆ. ಎರಡನೇ ಕ್ವಾಲಿಫೈಯರ್ ಪಂದ್ಯ ಮೇ 24 ರಂದು ಚೆನ್ನೈನಲ್ಲಿ ನಡೆಯಲಿದ್ದು, ಫೈನಲ್ ಪಂದ್ಯಕ್ಕೂ ಇದೇ ಮೈದಾನ ಅಂದರೆ ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣ ಮೇ 26 ರ ಭಾನುವಾರದಂದು ಆತಿಥ್ಯವಹಿಸಲಿದೆ.

ಎರಡನೇ ಹಂತ ಏಪ್ರಿಲ್ 8 ರಿಂದ ಪ್ರಾರಂಭ

ಮೊದಲ ಹಂತದ ಐಪಿಎಲ್​ನ ವೇಳಾಪಟ್ಟಿಯ ಪ್ರಕಾರ ಮಾರ್ಚ್​ 22 ರಿಂದ ಆರಂಭವಾಗುವ ಲೀಗ್ ಪಂದ್ಯಗಳು ಏಪ್ರಿಲ್ 7 ರವರೆಗೆ ನಡೆಯುತ್ತಿದ್ದವು. ಇದೀಗ ದ್ವಿತೀಯಾರ್ಧದ ವೇಳಾಪಟ್ಟಿಯ ಪ್ರಕಾರ, ಮುಂದುವರೆದ ಭಾಗದಂತೆ ಲೀಗ್​ನ ಉಳಿದ ಪಂದ್ಯಗಳು ಏಪ್ರಿಲ್ 8 ರಿಂದ ಆರಂಭವಾಗಲಿವೆ. ಎರಡನೇ ಹಂತದ ಮೊದಲ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಏಪ್ರಿಲ್ 8 ರಂದು ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಎದುರಿಸಲಿದೆ. ಈ ಪಂದ್ಯ ರಾತ್ರಿ 7.30ಕ್ಕೆ ಚೆಪಾಕ್‌ನಲ್ಲಿ ನಡೆಯಲ್ಲಿದೆ.

ಮೇ 19 ರಂದು ಲೀಗ್ ಸುತ್ತು ಅಂತ್ಯ

ಮೊದಲ ಹಂತದಲ್ಲಿ ಏಪ್ರಿಲ್ 7 ರವರೆಗಿನ ವೇಳಾಪಟ್ಟಿ ಬಿಡುಗಡೆಯಾಗಿದ್ದು, ಇದೀಗ ಏಪ್ರಿಲ್ 8 ರಿಂದ ಮೇ 26 ರವರೆಗಿನ ಪ್ರತಿ ಪಂದ್ಯದ ವಿವರ ಹೊರಬಿದ್ದಿದೆ. ಏಪ್ರಿಲ್ 8 ರಂದು ಚೆನ್ನೈನಲ್ಲಿ ಸಿಎಸ್‌ಕೆ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ನಡುವೆ ಹಣಾಹಣಿ ನಡೆಯಲಿದೆ. ಲೀಗ್ ಸುತ್ತು ಡಬಲ್ ಹೆಡರ್‌ನೊಂದಿಗೆ ಕೊನೆಗೊಳ್ಳಲಿದೆ. ಲೀಗ್ ಸುತ್ತಿನ ಕೊನೆಯ 2 ಪಂದ್ಯಗಳು ಮೇ 19 ರ ಭಾನುವಾರದಂದು ನಡೆಯಲಿವೆ. ಮೊದಲಿಗೆ ಸನ್‌ರೈಸರ್ಸ್ ಹೈದರಾಬಾದ್ ಮತ್ತು ಪಂಜಾಬ್ ಕಿಂಗ್ಸ್ ತಂಡಗಳು ಹೈದರಾಬಾದ್‌ನಲ್ಲಿ ಸೆಣಸಲಿವೆ. ನಂತರ ಗುವಾಹಟಿಯಲ್ಲಿ ರಾಜಸ್ಥಾನ್ ರಾಯಲ್ಸ್ ಮತ್ತು ಕೋಲ್ಕತ್ತಾ ನಡುವೆ ಕೊನೆಯ ಲೀಗ್ ಪಂದ್ಯ ನಡೆಯಲಿದೆ.

13 ನಗರಗಳಲ್ಲಿ 74 ಪಂದ್ಯಗಳು

ಈ ಬಾರಿ 13 ನಗರಗಳಲ್ಲಿ ಟೂರ್ನಿ ಆಯೋಜಿಸಲಾಗಿದೆ. ಚೆನ್ನೈ, ಬೆಂಗಳೂರು, ಮುಂಬೈ, ಹೈದರಾಬಾದ್, ಜೈಪುರ, ಕೋಲ್ಕತ್ತಾ, ದೆಹಲಿ, ಮೊಹಾಲಿ, ಅಹಮದಾಬಾದ್ ಮತ್ತು ಲಕ್ನೋ ಪ್ರಮುಖ 10 ನಗರಗಳು. ಇವುಗಳ ಜೊತೆಗೆ ವಿಶಾಖಪಟ್ಟಣಂ, ಗುವಾಹಟಿ ಮತ್ತು ಧರ್ಮಶಾಲಾದಲ್ಲಿಯೂ ಪಂದ್ಯಗಳನ್ನು ಆಯೋಜಿಸಲಾಗುವುದು. ಮೊದಲ ಕ್ವಾಲಿಫೈಯರ್ ಪಂದ್ಯವು ಮಂಗಳವಾರ ಅಹಮದಾಬಾದ್‌ನಲ್ಲಿ ಮೇ 21 ರಂದು ನಡೆಯಲಿದ್ದು, ಇದರಲ್ಲಿ ಪಾಯಿಂಟ್ ಪಟ್ಟಿಯಲ್ಲಿ ಮೊದಲ ಮತ್ತು ಎರಡನೇ ಸ್ಥಾನ ಪಡೆದ ತಂಡಗಳು ಸೆಣಸಲಿವೆ. ನಂತರ ಮೇ 22 ರಂದು ಮೂರು ಮತ್ತು ನಾಲ್ಕನೇ ಸ್ಥಾನ ಪಡೆದ ತಂಡಗಳು ಎಲಿಮಿನೇಟರ್‌ನಲ್ಲಿ ಮುಖಾಮುಖಿಯಾಗಲಿವೆ. ಎರಡನೇ ಕ್ವಾಲಿಫೈಯರ್ ಪಂದ್ಯವು ಮೇ 24 ರಂದು ನಡೆಯಲಿದೆ, ಇದರಲ್ಲಿ ಮೊದಲ ಕ್ವಾಲಿಫೈಯರ್‌ನಲ್ಲಿ ಸೋತ ತಂಡ ಮತ್ತು ಎಲಿಮಿನೇಟರ್‌ನ ವಿಜೇತ ತಂಡಗಳು ಪೈಪೋಟಿ ನಡೆಸಲಿದ್ದು,  ಮೇ 26 ರಂದು ಚೆಪಾಕ್‌ನಲ್ಲಿ ಫೈನಲ್ ಪಂದ್ಯ ನಡೆಯಲಿದೆ.